ಇಸ್ರೋ ವಿಕ್ರಮ: ಚಿತ್ರದುರ್ಗದಲ್ಲಿ ಗಗನನೌಕೆ ರನ್‌ವೇ ಲ್ಯಾಂಡಿಂಗ್‌ ಯಶಸ್ವಿ

By BK AshwinFirst Published Apr 2, 2023, 1:37 PM IST
Highlights

ಇಸ್ರೋ ಕಾರ್ಯಾಚರಣೆಯ ಉಡಾವಣಾ ವಾಹನಗಳು ಹೆಚ್ಚು ವೆಚ್ಚ-ಪರಿಣಾಮಕಾರಿಯಾಗಿದ್ದು, ಮರುಬಳಕೆ ಮಾಡಬಹುದಾದ ಉಡಾವಣಾ ವಾಹನಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಸಾಧನೆ ಮಾಡಿದೆ.

ಬೆಂಗಳೂರು (ಏಪ್ರಿಲ್‌ 2, 2023):  ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು ತೆಗೆದುಕೊಂಡು ಹೋಗಿ ಕಕ್ಷೆಗೆ ಸೇರಿಸಿ ಮರಳಿ ಬರುವ ಬಾಹ್ಯಾಕಾಶ ನೌಕೆಯ ಸ್ವತಂತ್ರ ಲ್ಯಾಂಡಿಂಗ್‌ ತಂತ್ರಜ್ಞಾನದ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿದೆ. ಅದರೊಂದಿಗೆ ಅಂತರಿಕ್ಷ ವಿಜ್ಞಾನದಲ್ಲಿ ಭಾರತ ಹೊಸ ವಿಕ್ರಮವೊಂದನ್ನು ಸಾಧಿಸಿದಂತಾಗಿದೆ.

ಇಷ್ಟು ಕಾಲ ಅಂತರಿಕ್ಷಕ್ಕೆ ಉಪಗ್ರಹಗಳನ್ನು ಕೊಂಡೊಯ್ಯುವ ರಾಕೆಟ್‌ಗಳು ತಮ್ಮ ಕಾರ್ಯ ಪೂರೈಸಿ ಮರಳಿ ಭೂಮಿಗೆ ಬರುತ್ತಿರಲಿಲ್ಲ. ಬದಲಿಗೆ ಅಲ್ಲಿಂದ ಪತನಗೊಂಡು ನಾಶವಾಗುತ್ತಿದ್ದವು. ಆದರೆ ಇದೇ ಮೊದಲ ಬಾರಿ ಮರುಬಳಕೆ ಮಾಡಬಹುದಾದ ಅಂತರಿಕ್ಷ ನೌಕೆಯ ಲ್ಯಾಂಡಿಂಗ್‌ ತಂತ್ರಜ್ಞಾನವನ್ನು ತನ್ನದಾಗಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಒಂದು ಹೆಜ್ಜೆ ಮುಂದೆ ಸಾಗಿದೆ. ಅದಕ್ಕೆ ಪೂರಕವಾಗಿ ಅಂತರಿಕ್ಷಕ್ಕೆ ಉಪಗ್ರಹಗಳನ್ನು ಕೊಂಡೊಯ್ದು ಕಕ್ಷೆಗೆ ಸೇರಿಸಿದ ಬಳಿಕ ಮರಳಿ ಭೂಮಿಗೆ ಬಂದು ಸ್ವತಂತ್ರವಾಗಿ ಲ್ಯಾಂಡ್‌ ಆಗುವ ಅಂತರಿಕ್ಷ ನೌಕೆಯನ್ನು ಭಾರತ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ.

‘ಚಿತ್ರದುರ್ಗದಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಏರೋನಾಟಿಕಲ್‌ ಟೆಸ್ಟ್‌ ರೇಂಜ್‌ (ಎಟಿಆರ್‌)ನಲ್ಲಿ ಭಾನುವಾರ ಬೆಳಿಗ್ಗೆ ರೀ-ಯೂಸೆಬಲ್‌ ವೆಹಿಕಲ್‌ ಆಟೋನಮಸ್‌ ಲ್ಯಾಂಡಿಂಗ್‌ ಮಿಷನ್‌ (ಆರ್‌ಎಲ್‌ವಿ ಎಲ್‌ಇಎಕ್ಸ್‌) ಪರೀಕ್ಷೆಯನ್ನು ನಡೆಸಲಾಯಿತು. ಅದು ಯಶಸ್ವಿಯಾಗಿದೆ. ಅದರೊಂದಿಗೆ ಭಾರತದ ಮರುಬಳಕೆ ಬಾಹ್ಯಾಕಾಶ ನೌಕೆಯ ಕನಸು ನನಸಾಗುವಲ್ಲಿ ಇನ್ನೊಂದು ಹೆಜ್ಜೆ ಮುಂದೆ ಸಾಗಿದಂತಾಗಿದೆ’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ತಿಳಿಸಿದೆ.

ಇದನ್ನು ಓದಿ: ಒನ್‌ವೆಬ್‌ ಇಂಟರ್ನೆಟ್‌ ಸೇವೆ ಭಾರತದಲ್ಲಿ ದುಬಾರಿ: ಏರ್‌ಟೆಲ್‌ ಮುಖ್ಯಸ್ಥ ಮಿತ್ತಲ್‌

RLV's autonomous approach and landing pic.twitter.com/D4tDmk5VN5

— ISRO (@isro)

ಪರೀಕ್ಷೆ ನಡೆದಿದ್ದು ಹೀಗೆ:
ಭಾನುವಾರ ಬೆಳಿಗ್ಗೆ 7.10ಕ್ಕೆ ಭಾರತೀಯ ವಾಯುಪಡೆಯ ಚಿನೂಕ್‌ ಹೆಲಿಕಾಪ್ಟರ್‌ನಲ್ಲಿ ಎರಡು ರೆಕ್ಕೆಗಳಿರುವ ಉಡ್ಡಯನ ನೌಕೆ ಮಾದರಿಯ ಆರ್‌ಎಲ್‌ವಿ ವಾಹನವನ್ನು 4.6 ಕಿ.ಮೀ. ಎತ್ತರಕ್ಕೆ ಕೊಂಡೊಯ್ದು ಬಿಡುಗಡೆ ಮಾಡಲಾಯಿತು. ಅದು ಅಲ್ಲಿಂದ ಸ್ವತಂತ್ರವಾಗಿ ತೇಲಿಕೊಂಡು ಬಂದು ನಿಗದಿತ ರನ್‌ವೇಯಲ್ಲಿ ಗಂಟೆಗೆ 350 ಕಿ.ಮೀ. ವೇಗದಲ್ಲಿ ಇಳಿಯಿತು. ಹೆಲಿಕಾಪ್ಟರ್‌ನಿಂದ ಆರ್‌ಎಲ್‌ವಿ ನೌಕೆಯನ್ನು ಬಿಡುಗಡೆ ಮಾಡುವುದು, ಅದು ಸರಿಯಾದ ದಾರಿಯಲ್ಲಿ ಸಾಗಿ ಭೂಮಿಯತ್ತ ಬರುವುದು, ನಂತರ ಪೂರ್ವನಿಗದಿತ ಸ್ಥಳದಲ್ಲೇ ಲ್ಯಾಂಡ್‌ ಆಗುವುದು ಹೀಗೆ ಪ್ರತಿಯೊಂದು ಅಂಶವೂ ಇಸ್ರೋ ವಿಜ್ಞಾನಿಗಳ ಲೆಕ್ಕಾಚಾರದಂತೆ ಕರಾರುವಾಕ್ಕಾಗಿ ನಡೆಯಿತು.

ಈ ಪ್ರಯೋಗಕ್ಕೆ ಇಂಟಿಗ್ರೇಟೆಡ್‌ ನೇವಿಗೇಶನ್‌, ಗೈಡೆನ್ಸ್‌ ಮತ್ತು ಕಂಟ್ರೋಲ್‌ ಸಿಸ್ಟಂ, ಸ್ಯೂಡೋಲೈಟ್‌ ಸಿಸ್ಟಂ, ಕೆಎ ಬ್ಯಾಂಡ್‌ ರಾಡಾರ್‌ ಆಲ್ಟಿಮೀಟರ್‌, ನೇವ್‌ಐಸಿ ರಿಸೀವರ್‌, ದೇಸಿ ಲ್ಯಾಂಡಿಂಗ್‌ ಗೇರ್‌, ಏರೋಫಾಯಿಲ್‌ ಹನಿಕೋಂಬ್‌ ಫಿನ್ಸ್‌ ಹಾಗೂ ಬ್ರೇಕ್‌ ಪ್ಯಾರಾಶೂಟ್‌ ಮುಂತಾದ ತಂತ್ರಜ್ಞಾನಗಳನ್ನು ಬಳಸಲಾಗಿತ್ತು. ಇವುಗಳ ಸಹಾಯದಿಂದ ಆರ್‌ಎಲ್‌ವಿ ನೌಕೆಯು ಥೇಟ್‌ ಬಾಹ್ಯಾಕಾಶ ನೌಕೆಯೊಂದು ಅಂತರಿಕ್ಷದಿಂದ ಭೂಮಿಯ ವಾತಾವರಣಕ್ಕೆ ಮರುಪ್ರವೇಶ ಮಾಡಿ ಅತ್ಯಂತ ವೇಗದಲ್ಲಿ, ಮನುಷ್ಯನ ಹಸ್ತಕ್ಷೇಪವಿಲ್ಲದೆ, ಸರಿಯಾದ ಜಾಗದಲ್ಲಿ, ಸ್ವತಂತ್ರವಾಗಿ ಲ್ಯಾಂಡ್‌ ಆಯಿತು.

ಇದನ್ನೂ ಓದಿ: ಒನ್ ವೆಬ್ ಸಂಸ್ಥೆಯ 36 ಉಪಗ್ರಹಗಳನ್ನು ಉಡಾವಣೆಗೊಳಿಸಲಿರುವ ಇಸ್ರೋ: ವಿಶೇಷತೆ ಹೀಗಿದೆ..

ಜಗತ್ತಿನಲ್ಲೇ ಮೊದಲು:
ಹೆಲಿಕಾಪ್ಟರ್‌ ಮೂಲಕ ಮರುಬಳಕೆ ಬಾಹ್ಯಾಕಾಶ ನೌಕೆಯನ್ನು 4.5 ಕಿ.ಮೀ.ಗಿಂತ ಎತ್ತರಕ್ಕೆ ಕೊಂಡೊಯ್ದು ಬಿಡುಗಡೆ ಮಾಡಿ ರನ್‌ವೇ ಮೇಲೆ ಲ್ಯಾಂಡಿಂಗ್‌ ಮಾಡಿಸುವ ಈ ಪ್ರಯೋಗವನ್ನು ಜಗತ್ತಿನಲ್ಲೇ ಮೊದಲ ಬಾರಿ ನಡೆಸಿದ ಹೆಗ್ಗಳಿಕೆಯನ್ನು ಇಸ್ರೋ ಪಡೆದಂತಾಗಿದೆ.

ಎಚ್‌ಇಎಕ್ಸ್‌ ನಂತರ ಎಲ್‌ಇಎಕ್ಸ್‌ ಯಶಸ್ವಿ:
ಮರುಬಳಕೆ ಮಾಡಬಹುದಾದ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿ ಭೂಮಿಗೆ ಮರುಪ್ರವೇಶ ಮಾಡಿಸುವ ಎಚ್‌ಇಎಕ್ಸ್‌ ಪ್ರಯೋಗವನ್ನು 2016ರಲ್ಲೇ ಇಸ್ರೋ ಯಶಸ್ವಿಯಾಗಿ ನಡೆಸಿತ್ತು. ಆಗ ನೌಕೆಯು ಸಮುದ್ರದ ಮೇಲೆ ಅಂದಾಜಿಗೆ ಲ್ಯಾಂಡ್‌ ಆಗಿತ್ತು. ಆಗಲೇ ಮರುಬಳಕೆ ನೌಕೆಯ ತಂತ್ರಜ್ಞಾನವನ್ನು ತನ್ನದಾಗಿಸಿಕೊಳ್ಳುವ ಭಾರತದ ಕನಸಿಗೆ ರೆಕ್ಕೆಪುಕ್ಕ ಬಂದಿತ್ತು. ಆದರೆ, ಕರಾರುವಾಕ್ಕಾಗಿ, ನಿಗದಿತ ಸ್ಥಳದಲ್ಲೇ ಬಂದಿಳಿಯುವ ಎಲ್‌ಇಎಕ್ಸ್‌ ನೌಕೆ ಪ್ರಯೋಗವನ್ನು ಈಗ ಯಶಸ್ವಿಯಾಗಿ ನಡೆಸುವುದರೊಂದಿಗೆ ಮರುಬಳಕೆ ಮಾಡಬಹುದಾದ ಉಡ್ಡಯನ ನೌಕೆಯ ತಂತ್ರಜ್ಞಾನವನ್ನು ಉಪಗ್ರಹಗಳ ಉಡಾವಣೆಯಲ್ಲಿ ಬಳಸುವ ದಿನಗಳು ಹತ್ತಿರವಾದಂತಾಗಿದೆ.

ಇದನ್ನೂ ಓದಿ: ಇಸ್ರೋ ಮತ್ತೊಂದು ಸಾಧನೆ: ನಿರುಪಯುಕ್ತ ಉಪಗ್ರಹವನ್ನು ಯಶಸ್ವಿಯಾಗಿ ಇಳಿಸಿದ ಬಾಹ್ಯಾಕಾಶ ಸಂಸ್ಥೆ

ಏನಿದು ಆರ್‌ಎಲ್‌ವಿ?
ಉಪಗ್ರಹ ಉಡ್ಡಯನಕ್ಕೆ ಇಸ್ರೋ ಈಗ ರಾಕೆಟ್‌ ಬಳಸುತ್ತಿದೆ. ಒಮ್ಮೆ ಉಡಾವಣೆ ಮಾಡಿದ ರಾಕೆಟ್‌ ಸುಟ್ಟು ಬೂದಿ ಆಗುತ್ತದೆ. ಅದರ ಬದಲಾಗಿ ಮರುಬಳಕೆ ಮಾಡಬಹುದಾದ ಗಗನನೌಕೆ (RLV - Reusable Launch Vehicle) ಅಭಿವೃದ್ಧಿಗೆ ಇಸ್ರೋ ಮುಂದಾಗಿದೆ. ಇವು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿ ಭೂಮಿಗೆ ಮರಳುತ್ತವೆ. ಮತ್ತೆ ಬಳಸಬಹುದು.

ಪ್ರಯೋಗ ಹೇಗಾಯ್ತು?
ಆರ್‌ಎಲ್‌ವಿ ನೌಕೆಯ ಕಿರಿಯ ಮಾದರಿಯನ್ನು ಚಿನೂಕ್‌ ಹೆಲಿಕಾಪ್ಟರ್‌ನಲ್ಲಿ 4.6 ಕಿ.ಮೀ. ಎತ್ತರಕ್ಕೊಯ್ದು ಬಿಡಲಾಯಿತು. ಅದು ಅಲ್ಲಿಂದ ಹಾರಿ ಬಂದು ನಿಗದಿತ ರನ್‌ವೇ ಮೇಲೆ 350 ಕಿಮೀ ವೇಗದಲ್ಲಿ ಇಳಿಯಿತು. ಎಲ್ಲವೂ ಪೂರ್ವಯೋಜಿತ ರೀತಿಯಲ್ಲೇ ನಡೆದು ಪ್ರಯೋಗ ಯಶಸ್ವಿಯಾಯಿತು.

ಇನ್ನೇನು ಆಗಬೇಕು?
ಆರ್‌ಎಲ್‌ವಿ ನೌಕೆಯನ್ನು ಭೂಮಿಯ ವಾತಾವರಣದಿಂದ ಹೊರಕ್ಕೆ, ಅಂದರೆ ಅಂತರಿಕ್ಷಕ್ಕೆ ಕಳುಹಿಸಿ ಭೂಮಿಯ ವಾತಾವರಣಕ್ಕೆ ಮರುಪ್ರವೇಶ ಮಾಡಿಸಿ ಲ್ಯಾಂಡ್‌ ಮಾಡಿಸುವ ತಂತ್ರಜ್ಞಾನ ಪರೀಕ್ಷಿಸಬೇಕು. ನಂತರ ಗಗನನೌಕೆಯ ಸ್ಕ್ರ್ಯಾಮ್‌ಜೆಟ್‌ ಎಂಜಿನ್‌ನ ಇಂಧನ ಬಳಕೆಗೆ ಚಾಲನೆ ನೀಡುವ ಪ್ರಮುಖ ಪ್ರಯೋಗ ಆಗಬೇಕು. ಅಷ್ಟಾದರೆ ಆರ್‌ಎಲ್‌ವಿ ನೌಕೆ ಬಳಕೆಗೆ ಸಿದ್ಧ.

ಏನಿದರ ಲಾಭ?
ಉಪಗ್ರಹ ಉಡಾವಣೆಯಲ್ಲಿ ಹೆಚ್ಚಿನ ವೆಚ್ಚ ರಾಕೆಟ್‌ಗಳದ್ದು. ಮರುಬಳಕೆ ವಾಹನಗಳ ಬಳಕೆಯಿಂದ ವೆಚ್ಚವನ್ನು ಶೇ.80 ಉಳಿಸಲು ಸಾಧ್ಯ. ಜೊತೆಗೆ ರಾಕೆಟ್‌ ನಿರ್ಮಾಣಕ್ಕೆ ತಗಲುವ ಸಮಯ ಉಳಿಯುತ್ತದೆ. ಇದೆಲ್ಲದರಿಂದಾಗಿ ಜಾಗತಿಕ ಉಪಗ್ರಹ ಉಡ್ಡಯನ ಉದ್ಯಮ ವಲಯದಲ್ಲಿ ಇಸ್ರೋಗೆ ಇನ್ನಷ್ಟು ಅವಕಾಶ ಸಿಗುತ್ತದೆ.

click me!