ಸೌರ ಮಾರುತದ ಪ್ರಭಾವ ಕಂಡುಹಿಡಿದು ಭೂಮಿಗೆ ರವಾನಿಸಿದ ಆದಿತ್ಯ ಎಲ್‌-1, ಇಸ್ರೋ ಸ್ಪಷ್ಟನೆ

By Kannadaprabha News  |  First Published Feb 24, 2024, 7:59 AM IST

ಸೂರ್ಯನ ಅಧ್ಯಯನಕ್ಕಾಗಿ ಭಾರತ ಉಡಾವಣೆ ಮಾಡಿರುವ ಆದಿತ್ಯ ಎಲ್‌-1 ನೌಕೆ ಯಶಸ್ವಿ. ಸೌರ ಮಾರುತದ ಪ್ರಭಾವ ಕಂಡುಹಿಡಿದು ಮಾಹಿತಿ ರವಾನಿಸಿದ ನೌಕೆ. ಇಸ್ರೋದಿಂದ ಅಧಿಕೃತ ಹೇಳಿಕೆ.


ನವದೆಹಲಿ: ಸೂರ್ಯನ ಅಧ್ಯಯನಕ್ಕಾಗಿ ಭಾರತ ಉಡಾವಣೆ ಮಾಡಿರುವ ಆದಿತ್ಯ ಎಲ್‌-1 ಯೋಜನೆಯಲ್ಲಿರುವ ಪೇಲೋಡ್‌, ಸೌರ ಮಾರುತದ ಪ್ರಭಾವವನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದು ಇಸ್ರೋ ಹೇಳಿದೆ. ಫೆಬ್ರವರಿ 10-11ರ ನಡುವಿನ ಅವಧಿಯಲ್ಲಿ ಸೌರಮಾರುತದ ಪ್ರಭಾವ ಪತ್ತೆಯಾಗಿದೆ ಸಂಸ್ಥೆ ಟ್ವೀಟ್‌ ಮಾಡಿದೆ.

ಆದಿತ್ಯ ಎಲ್‌-1 ಯೋಜನೆಯಲ್ಲಿರುವ ‘ಪ್ಲಾಸ್ಮಾ ಅನಾಲೈಸರ್‌ ಪ್ಯಾಕೇಜ್‌ ಫಾರ್‌ ಆದಿತ್ಯ’ (ಪಾಪಾ) ಪೇಲೋಡ್‌ ಯಶಸ್ವಿಯಾಗಿ ಈ ಕಾರ್ಯವನ್ನು ನಿರ್ವಹಿಸಿದೆ. ಇದು 2 ಸೆನ್ಸಾರ್‌ಗಳನ್ನು ಹೊಂದಿದ್ದು, ಸೌರ ಮಾರುತದಲ್ಲಿರುವ ಎಲೆಕ್ಟ್ರಾನ್‌ ಶಕ್ತಿ ಮತ್ತು ಸೌರ ಮಾರುತದಲ್ಲಿರುವ ಅಯಾನು ಸಂಯೋಜನೆಯನ್ನು ಅಧ್ಯಯನ ಮಾಡಲಿದೆ. ಇದಲ್ಲದೇ ಸೌರ ಮಾರುತ ಚಲಿಸುವ ದಿಕ್ಕನ್ನು ಸಹ ಇದು ಅಧ್ಯಯನ ಮಾಡಲಿದೆ.

Tap to resize

Latest Videos

undefined

ಪಾಪಾ ಪೇಲೋಡ್‌ ಸಂಗ್ರಹಿಸಿರುವ ಮಾಹಿತಿಯನ್ನು ವಿಕ್ರಂ ಸಾರಾಭಾಯಿ ಸ್ಪೇಸ್‌ ಸೆಂಟರ್‌ನಲ್ಲಿ ಅಧ್ಯಯನ ಮಾಡಲಾಗುವುದು ಎಂದು ಇಸ್ರೋ ಹೇಳಿದೆ. ಸೌರ ಮಾರುತಗಳು ಭೂಮಿಯ ಮೇಲೆ ಹಾಗೂ ಉಪಗ್ರಹಗಳ ಮೇಲೆ ಬೀರಬಹುದಾದ ಪರಿಣಾಮವನ್ನು ಅಧ್ಯಯನ ಮಾಡಲು ಈ ಯೋಜನೆಯನ್ನು ಕೈಗೊಳ್ಳಲಾಗಿತ್ತು. ಇದೀಗ ಸೌರ ಮಾರುತದ ಬಗ್ಗೆ ಸಿಕ್ಕಿರುವ ಮಾಹಿತಿಯಿಂದ ಈ ಕುರಿತಾಗಿ ಹೆಚ್ಚಿನ ಅಧ್ಯಯನ ಸಾಧ್ಯವಾಗಲಿದೆ ಎಂದು ಇಸ್ರೋ ಹೇಳಿದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಶೇ. 100ರಷ್ಟು ವಿದೇಶಿ ನೇರ ಹೂಡಿಕೆಗೆ ಕೇಂದ್ರ ಅನುಮತಿ!

ಇಸ್ರೋದ 2ನೇ ಸ್ಪೇಸ್‌ಪೋರ್ಟ್‌ಗೆ ಫೆ.29ರಂದು ಮೋದಿ ಶಿಲಾನ್ಯಾಸ:
ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ 2ನೇ ಸ್ಪೇಸ್‌ಪೋರ್ಟನ್ನು ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ಕುಲಶೇಖರಪಟ್ಟಿಣಂನಲ್ಲಿ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಫೆ.28ರಂದು ಪ್ರಧಾನಿ ನರೇಂದ್ರ ಮೋದಿ ಅವರು ಇದಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಸಣ್ಣಗಾತ್ರದ ಉಪಗ್ರಹ ಉಡಾವಣಾ ವಾಹಕಗಳನ್ನು ಉಡಾವಣೆ ಮಾಡುವುದಕ್ಕಾಗಿ ಈ ಹೊಸ ಸ್ಪೇಸ್‌ಪೋರ್ಟನ್ನು ಬಳಕೆ ಮಾಡಲಾಗುತ್ತದೆ. ಇದು ಮುಂದಿನ 2 ವರ್ಷದಲ್ಲಿ ನಿರ್ಮಾಣವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೂತ್ತುಕುಡಿ ಜಿಲ್ಲೆಯ ಕುಲಶೇಖರಪಟ್ಟಿಣಂ ಮತ್ತು ಸಥಾನುಕುಲಂ ತಾಲೂಕುಗಳ ಪಡುಕಪಟ್ಟು, ಪಲ್ಲಕುರಿಚಿ ಮತ್ತು ಮಾತವಾನ್‌ ಕುರಿಚಿ ಗ್ರಾಮಗಳಿಗೆ ಸೇರಿದ 2,233 ಎಕರೆ ಪ್ರದೇಶದಲ್ಲಿ ಹೊಸ ಲಾಂಚ್‌ಪ್ಯಾಡ್‌ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೇ ಇದಕ್ಕೆ ಪೂರಕವಾಗಿ 2 ಸಾವಿರ ಎಕರೆ ಪ್ರದೇಶದಲ್ಲಿ ತಮಿಳುನಾಡು ಸರ್ಕಾರ ಸ್ಪೇಸ್ ಕೈಗಾರಿಕೆ ಮತ್ತು ಪ್ರೊಪಲ್ಲೆಂಟ್‌ ಪಾರ್ಕ್‌ ನಿರ್ಮಾಣ ಮಾಡುತ್ತಿದೆ.

ಭಾರತೀಯ ಚಾಲನಾ ಪರವಾನಗಿ ಇದ್ದರೆ ನೀವು ಈ ದೇಶಗಳಿಗೆ ಕಾರಲ್ಲೇ ಹೋಗಬಹುದು

ಇಂಧನ ಉಳಿತಾಯ:
ತಮಿಳುನಾಡಿನಲ್ಲಿ ಲಾಂಚ್‌ಪ್ಯಾಡ್‌ ನಿರ್ಮಾಣ ಮಾಡುವುದರಿಂದ ರಾಕೆಟ್‌ ಇಂಧನದಲ್ಲಿ ಭಾರಿ ಪ್ರಮಾಣದಲ್ಲಿ ಉಳಿತಾಯವಾಗಲಿದೆ. ಇಲ್ಲಿಂದ ರಾಕೆಟ್‌ ನೇರವಾಗಿ ದಕ್ಷಿಣದತ್ತ ಪ್ರಯಾಣಿಸಲಿದೆ. ಶ್ರೀಹರಿಕೋಟಾದಿಂದ ಉಡಾವಣೆಯಾದರೆ ಮೊದಲಿಗೆ ಆಗ್ನೇಯದತ್ತ ರಾಕೆಟ್‌ ಪ್ರಯಾಣಿಸಿ, ಬಳಿಕ ದಕ್ಷಿಣದತ್ತ ತಿರುಗಿಸಬೇಕಿತ್ತು. ಶ್ರೀಲಂಕಾದ ಮೇಲೆ ರಾಕೆಟ್‌ ಹಾದುಹೋಗುವುದನ್ನು ತಪ್ಪಿಸಲು ಈ ಕ್ರಮ ಅನುಸರಿಸಲಾಗುತ್ತಿತ್ತು ಎಂದು ಇಸ್ರೋದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಇಸ್ರೋ ಸ್ಪೇಸ್‌ಪೋರ್ಟ್‌ ಹೊಂದಿದ್ದು, ಇಲ್ಲಿ 2 ಲಾಂಚ್‌ಪ್ಯಾಡ್‌ಗಳಿವೆ.

click me!