ಕೀಟನಾಶಕದ ವಿರುದ್ಧ ನಿರೋಧಕ ಶಕ್ತಿ ಬೆಳೆಸಿಕೊಳ್ತಿರುವ ಡೆಂಗ್ಯೂ ಸೊಳ್ಳೆಗಳು, ದೆಹಲಿ ವಿವಿ ಅಧ್ಯಯನದ ಆತಂಕಕಾರಿ ಸತ್ಯ!

Published : Aug 18, 2026, 03:15 PM IST
Dengue

ಸಾರಾಂಶ

ದೆಹಲಿ ವಿಶ್ವವಿದ್ಯಾಲಯದ ಇತ್ತೀಚಿನ ಅಧ್ಯಯನವು, ಡೆಂಗ್ಯೂ ಹರಡುವ 'ಈಡಿಸ್ ಈಜಿಪ್ಟಿ' ಸೊಳ್ಳೆಗಳು 'ಆಲ್ಫಾ-ಸೈಪರ್ಮೆಥ್ರಿನ್' ಕೀಟನಾಶಕದ ವಿರುದ್ಧ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತಿವೆ ಎಂದು ಬಹಿರಂಗಪಡಿಸಿದೆ. ಸೊಳ್ಳೆಗಳಲ್ಲಿನ 'ಬೀಟಾ-ಎಸ್ಟರೇಸ್' ನಂತಹ ಕಿಣ್ವಗಳು ಈ ನಿರೋಧಕ ಶಕ್ತಿಗೆ ಕಾರಣವಾಗಿದ್ದು, ಇದು ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಸವಾಲನ್ನು ಒಡ್ಡಿದೆ.

ಭಾರತವು ವೈವಿಧ್ಯಮಯ ಸಾಂಪ್ರದಾಯಿಕ ಆಚರಣೆಗಳಿಂದ ಕಂಗೊಳಿಸುವ ನಾಡಾಗಿದ್ದರೂ, ಪ್ರತಿ ವರ್ಷವೂ ನಿಯಮಿತವಾಗಿ ಎದುರಾಗುವ ನೈಸರ್ಗಿಕ ವಿದ್ಯಮಾನವೆಂದರೆ ಮಾನ್ಸೂನ್ ಮಳೆ. ಮಳೆಯ ಹನಿಗಳು ಧರೆಗೆ ಅಪ್ಪಳಿಸುತ್ತಿದ್ದಂತೆ, ಮನೆಗಳ ಹಾಸಿಗೆಯ ಸುತ್ತ ಸೊಳ್ಳೆಗಳ ಝೇಂಕಾರವೂ ಶುರುವಾಗುತ್ತದೆ. ಮನೆ ಹಾಗೂ ಕಚೇರಿಗಳನ್ನು ಆವರಿಸುವ ಸೊಳ್ಳೆಗಳನ್ನು ನಿರ್ಮೂಲನೆ ಮಾಡಲು ಸಾಮಾನ್ಯವಾಗಿ 'ಆಲ್ಫಾ-ಸೈಪರ್ಮೆಥ್ರಿನ್' (α-cypermethrin) ಎಂಬ ಪೈರೆಥ್ರಾಯ್ಡ್ ಕೀಟನಾಶಕವನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ದೆಹಲಿ ವಿಶ್ವವಿದ್ಯಾಲಯದ ಇತ್ತೀಚಿನ ಅಧ್ಯಯನವೊಂದು ಕಳವಳಕಾರಿ ಸಂಗತಿಯನ್ನು ಹೊರಹಾಕಿದೆ. ಡೆಂಗ್ಯೂ ರೋಗವನ್ನು ಹರಡುವ 'ಈಡಿಸ್ ಈಜಿಪ್ಟಿ' ಸೊಳ್ಳೆಗಳ ಪ್ರಯೋಗಾಲಯದ ತಳಿಯು ಈ ಕೀಟನಾಶಕಕ್ಕೆ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತಿದ್ದು, ಅದರ ವಿರುದ್ಧದ ಪ್ರತಿರೋಧಕ ಸಾಮರ್ಥ್ಯ ಕುಸಿಯುತ್ತಿರುವ ಮುನ್ನೆಚ್ಚರಿಕೆಯನ್ನು ನೀಡಿದೆ.

ನಿಗದಿಪಡಿಸಿದ ರೋಗನಿರ್ಣಯ ಪ್ರಮಾಣದ ಕೀಟನಾಶಕ ಬಳಸಿದಾಗ ಶೇಕಡಾ 97.91 ರಷ್ಟು ಪ್ರೌಢ ಹೆಣ್ಣು ಸೊಳ್ಳೆಗಳು ಮೃತಪಟ್ಟವು. ಇದು ಮೇಲ್ನೋಟಕ್ಕೆ ಹೆಚ್ಚಿನ ಸಾವಿನ ಪ್ರಮಾಣವೆಂದು ಕಂಡರೂ, ಒಂದು ಸೊಳ್ಳೆ ತಳಿಯನ್ನು 'ಸಂಪೂರ್ಣವಾಗಿ ಕೀಟನಾಶಕಕ್ಕೆ ಒಳಗಾಗುವ ತಳಿ' ಎಂದು ಪರಿಗಣಿಸಲು ವಿಶ್ವ ಆರೋಗ್ಯ ಸಂಸ್ಥೆಯು ನಿಗದಿಪಡಿಸಿರುವ ಶೇಕಡಾ 98 ರ ಮಿತಿಗಿಂತ ಕೊಂಚ ಕಡಿಮೆಯಾಗಿದೆ. ಇದು ಸಣ್ಣ ಅಂತರವಾಗಿದ್ದರೂ ಗಂಭೀರವಾಗಿ ಪರಿಗಣಿಸಬೇಕಾದ ವಿಷಯವಾಗಿದೆ.

ಕೀಟನಾಶಕದ ವಿರುದ್ಧ ನಿರೋಧಕ ಶಕ್ತಿ ಬೆಳೆಸಿಕೊಳ್ಳುತ್ತಿರುವ ಸೊಳ್ಳೆಗಳು

'ಫ್ರಾಂಟಿಯರ್ಸ್ ಇನ್ ಟ್ರಾಪಿಕಲ್ ಡಿಸೀಸಸ್' ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನದಲ್ಲಿ, ಸಂಶೋಧಕರು ವಿಶ್ವ ಆರೋಗ್ಯ ಸಂಸ್ಥೆಯ ಬಾಟಲ್ ಬಯೋಅಸ್ಸೇ ವಿಧಾನವನ್ನು ಬಳಸಿಕೊಂಡು 12 ವಿಭಿನ್ನ ಸಾಂದ್ರತೆಯ ಆಲ್ಫಾ-ಸೈಪರ್ಮೆಥ್ರಿನ್ ಅನ್ನು ಪರೀಕ್ಷಿಸಿದರು. ಪ್ರತಿ ಡೋಸ್‌ಗೆ ನಾಲ್ಕು ಬಾಟಲಿಗಳನ್ನು ಬಳಸಿ, ಪ್ರತಿ ಬಾಟಲಿಯಲ್ಲಿ 20 ಯುವ ಹೆಣ್ಣು ಸೊಳ್ಳೆಗಳನ್ನು ಒಂದು ಗಂಟೆಯ ಕಾಲ ಇರಿಸಲಾಯಿತು. 24 ಗಂಟೆಗಳ ನಂತರ ಅವುಗಳ ಮರಣ ಪ್ರಮಾಣವನ್ನು ದಾಖಲಿಸಿದಾಗ, ಪ್ರತಿ ಬಾಟಲಿಗೆ 10 ಮೈಕ್ರೋಗ್ರಾಂ ಪ್ರಮಾಣವು ಶೇಕಡಾ 97.91 ರಷ್ಟು ಸೊಳ್ಳೆಗಳನ್ನು ಕೊಂದಿರುವುದು ಕಂಡುಬಂತು. ಈ ಪರೀಕ್ಷೆಯ ಮುಖ್ಯ ಲೇಖಕ ಡಾ. ರೋಹಿತ್ ಲಖ್ವಾನಿ ಅವರು, "ಇದು ಸೊಳ್ಳೆಗಳು ಕೀಟನಾಶಕದ ವಿರುದ್ಧ ನಿರೋಧಕ ಶಕ್ತಿ ಬೆಳೆಸಿಕೊಳ್ಳುತ್ತಿರುವುದರ ಆರಂಭಿಕ ಸೂಚನೆ" ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಬದುಕುಳಿದ ಸೊಳ್ಳೆಗಳು ಈ ನಿರೋಧಕ ಗುಣವನ್ನು ಮುಂದಿನ ಪೀಳಿಗೆಗೆ ದಾಟಿಸುತ್ತವೆಯೇ ಎಂಬುದನ್ನು ಈ ಪ್ರಯೋಗ ಪರೀಕ್ಷಿಸಿಲ್ಲ.

ಕಂಪ್ಯೂಟರ್ ಆಧಾರಿತ ಆಣ್ವಿಕ ಡಾಕಿಂಗ್ ಹಾಗೂ ಜೀವರಾಸಾಯನಿಕ ವಿಶ್ಲೇಷಣೆಯ ಮೂಲಕ ಸಂಶೋಧಕರು ಸೊಳ್ಳೆಗಳಲ್ಲಿನ ಐದು ಪ್ರಮುಖ ಕಿಣ್ವಗಳನ್ನು ಪರೀಕ್ಷಿಸಿದರು. ಈ ಪೈಕಿ 'ಬೀಟಾ-ಎಸ್ಟರೇಸ್' (β-esterase) ಕಿಣ್ವವು ಕೀಟನಾಶಕದೊಂದಿಗೆ ಪ್ರಬಲವಾಗಿ ಬಂಧಗೊಳ್ಳುವ ಸಾಮರ್ಥ್ಯವನ್ನು ತೋರಿಸಿದೆ. ಅರ್ಧದಷ್ಟು ಸೊಳ್ಳೆಗಳನ್ನು ಕೊಲ್ಲುವ ಸಾಂದ್ರತೆಯಲ್ಲಿ ಈ ಕಿಣ್ವದ ಚಟುವಟಿಕೆಯು 21.41 ಪಟ್ಟು ಹೆಚ್ಚಿದ್ದರೆ, ಶೇಕಡಾ 90 ರಷ್ಟು ಸೊಳ್ಳೆಗಳನ್ನು ಕೊಲ್ಲುವ ಸಾಂದ್ರತೆಯಲ್ಲಿ 17.46 ಪಟ್ಟು ಹೆಚ್ಚಾಗಿತ್ತು. ಈ ಕಿಣ್ವವು ಕೀಟನಾಶಕವು ಸೊಳ್ಳೆಯ ನರಮಂಡಲವನ್ನು ತಲುಪುವ ಮೊದಲೇ ಅದರ ರಾಸಾಯನಿಕ ಬಂಧಗಳನ್ನು ವಿಘಟಿಸಿ ನಿಷ್ಕ್ರಿಯಗೊಳಿಸಲು ನೆರವಾಗುತ್ತದೆ. ಇದಲ್ಲದೆ 'CYP450' ಕಿಣ್ವದ ಚಟುವಟಿಕೆಯು ದ್ವಿಗುಣಗೊಂಡರೆ, 'ಆಲ್ಫಾ-ಎಸ್ಟರೇಸ್' ಚಟುವಟಿಕೆಯು ಏಳು ಪಟ್ಟು ಹೆಚ್ಚಾಯಿತು. ಇದು ಸೊಳ್ಳೆಗಳ ನೈಸರ್ಗಿಕ ರಕ್ಷಣಾ ವ್ಯವಸ್ಥೆಯು ಕೇವಲ ಒಂದು ಜೈವಿಕ ಬದಲಾವಣೆಗೆ ಸೀಮಿತವಾಗಿರದೆ ಬಹುಸ್ತರದ ರಕ್ಷಣೆಯನ್ನು ಹೊಂದಿದೆ ಎಂಬುದನ್ನು ಸೂಚಿಸುತ್ತದೆ.

ಆದರೆ ಈ ರಕ್ಷಣಾತ್ಮಕ ಬದಲಾವಣೆಯು ಎಲ್ಲಾ ಕಿಣ್ವಗಳಲ್ಲೂ ಒಂದೇ ರೀತಿ ಕಂಡುಬರಲಿಲ್ಲ. ಕೀಟನಾಶಕಕ್ಕೆ ಒಡ್ಡಿಕೊಂಡ ನಂತರ 'ಗ್ಲುಟಾಥಿಯೋನ್ ಎಸ್-ಟ್ರಾನ್ಸ್‌ಫರೇಸ್' ಚಟುವಟಿಕೆಯು ಕುಸಿಯಿತು. ಹಾಗೆಯೇ 'ಅಸಿಟೈಲ್‌ಕೋಲಿನೆಸ್ಟರೇಸ್' ಕಿಣ್ವವು ಅತ್ಯಂತ ದುರ್ಬಲ ಬಂಧವನ್ನು ಹೊಂದಿತ್ತು. ಈ ಫಲಿತಾಂಶಗಳನ್ನು ಸರಳವಾಗಿ "ಎರಡು ಪ್ರೋಟೀನ್‌ಗಳು ಸೊಳ್ಳೆಗಳನ್ನು ಈಗಾಗಲೇ ಸಂಪೂರ್ಣ ನಿರೋಧಕವಾಗಿಸಿವೆ" ಎಂದು ವ್ಯಾಖ್ಯಾನಿಸಬಾರದು. ಬದಲಿಗೆ, ಬೀಟಾ-ಎಸ್ಟರೇಸ್ ಪ್ರಮುಖ ಪಾತ್ರ ವಹಿಸಿ CYP450 ಕಿಣ್ವದ ಬೆಂಬಲದೊಂದಿಗೆ ಸೊಳ್ಳೆಗಳಲ್ಲಿ ಕ್ಷಿಪ್ರ ನಿರ್ವಿಶೀಕರಣ ಪ್ರತಿಕ್ರಿಯೆಯನ್ನು ರೂಪಿಸುತ್ತಿದೆ ಎಂಬುದಕ್ಕೆ ಬಲವಾದ ಸಾಕ್ಷಿಯಾಗಿದೆ.

ಒಂದೇ ರೀತಿಯ ರಾಸಾಯನಿಕ ಬಳಕೆ ನಾಟವುದಿಲ್ಲ

ಆಲ್ಫಾ-ಸೈಪರ್ಮೆಥ್ರಿನ್ ಎಂಬುದು 'ಟೈಪ್-2' ಸಂಶ್ಲೇಷಿತ ಪೈರೆಥ್ರಾಯ್ಡ್ ಆಗಿದ್ದು, ಕೀಟಗಳ ನರಮಂಡಲದಲ್ಲಿರುವ ಸೋಡಿಯಂ ಕಾರ್ಯನಿರ್ವಹಣೆಯನ್ನು ತಡೆಯುತ್ತದೆ. ಸರಳವಾಗಿ ಹೇಳುವುದಾದರೆ, ಇದು ಸೊಳ್ಳೆಯ ಸಾಮಾನ್ಯ ನರಸಂಕೇತಗಳನ್ನು ಅಸ್ತವ್ಯಸ್ತಗೊಳಿಸಿ, ಮಾರುಕಟ್ಟೆಯಲ್ಲಿ ಸಿಗುವ ಅನೇಕ ಸೊಳ್ಳೆ ನಿವಾರಕಗಳಂತೆ ತಕ್ಷಣವೇ ಸೊಳ್ಳೆಗಳು ಕುಸಿದುಬೀಳುವಂತೆ ಮಾಡುತ್ತದೆ. ಆದರೆ, ಒಂದೇ ರೀತಿಯ ರಾಸಾಯನಿಕವನ್ನು ಪದೇ ಪದೇ ಬಳಸುವುದರಿಂದ ಅಂತಹ ರಸಾಯನಿಕಗಳನ್ನು ತಡೆಯಬಲ್ಲ ಗುಣವಿರುವ ಕೀಟಗಳಿಗೆ ಬದುಕಲು ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ. ಈ ಪ್ರಯೋಗಾಲಯ ವಸಾಹತಿನಲ್ಲಿ ಯಾವುದೇ ಕೀಟನಾಶಕದ ಕೃತಕ ಒತ್ತಡವಿಲ್ಲದಿದ್ದರೂ ಸೊಳ್ಳೆಗಳು ಇಂತಹ ಕಿಣ್ವ ಪ್ರತಿಕ್ರಿಯೆ ತೋರಿಸಿರುವುದು ಹೆಚ್ಚು ಗಮನಾರ್ಹವಾಗಿದೆ.

ಈ ಸಂಶೋಧನೆಯು ಡೆಂಗ್ಯೂ ನಿಯಂತ್ರಣದ ದೃಷ್ಟಿಯಿಂದ ಅತ್ಯಂತ ಮುಖ್ಯವಾಗಿದೆ. ಈಡಿಸ್ ಈಜಿಪ್ಟಿ ಸೊಳ್ಳೆಗಳು ಡೆಂಗ್ಯೂ ಮಾತ್ರವಲ್ಲದೆ ಜಿಕಾ, ಚಿಕೂನ್‌ಗುನ್ಯಾ ಮತ್ತು ಹಳದಿ ಜ್ವರವನ್ನು ಹರಡುವ ಪ್ರಮುಖ ವಾಹಕಗಳಾಗಿವೆ. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ, ಜಗತ್ತಿನ ಅರ್ಧದಷ್ಟು ಜನಸಂಖ್ಯೆಯು ಡೆಂಗ್ಯೂ ಅಪಾಯದಲ್ಲಿದ್ದು, ಪ್ರತಿ ವರ್ಷ 10 ರಿಂದ 40 ಕೋಟಿ ಸೋಂಕುಗಳು ದಾಖಲಾಗುತ್ತಿವೆ. ಡೆಂಗ್ಯೂ ತಡೆಗಟ್ಟುವಿಕೆಯು ಸಂಪೂರ್ಣವಾಗಿ ಸೊಳ್ಳೆಗಳ ನಿಯಂತ್ರಣ ಮತ್ತು ಅವುಗಳ ಕಡಿತದಿಂದ ತಪ್ಪಿಸಿಕೊಳ್ಳುವುದರ ಮೇಲೆಯೇ ಅವಲಂಬಿತವಾಗಿದೆ. ಕೀಟನಾಶಕಗಳ ಪರಿಣಾಮಕಾರಿತ್ವ ತಗ್ಗಿದರೆ ಅದು ರೋಗ ಹರಡುವಿಕೆಯನ್ನು ನಿಯಂತ್ರಿಸುವ ಕಾರ್ಯಕ್ಕೆ ಅಡೆತಡೆಯಾಗಬಹುದು. ಆದಾಗ್ಯೂ, ಈ ಒಂದೇ ಪ್ರಯೋಗಾಲಯ ಅಧ್ಯಯನವು ಭಾರತದಲ್ಲಾಗಲಿ ಅಥವಾ ಇನ್ಯಾವುದೇ ಪ್ರದೇಶದಲ್ಲಾಗಲಿ ಆಲ್ಫಾ-ಸೈಪರ್ಮೆಥ್ರಿನ್ ಸಂಪೂರ್ಣವಾಗಿ ವಿಫಲವಾಗಿದೆ ಎಂಬುದನ್ನು ಸಾಬೀತುಪಡಿಸುವುದಿಲ್ಲ.

ಕೀಟಗಳಲ್ಲಿ ನಿರೋಧಕ ಶಕ್ತಿ ಬೆಳೆಯುವುದನ್ನು ತಡೆಯಲು ಸಂಶೋಧಕರು ಕೆಲವು ಮಾರ್ಗಗಳನ್ನು ಸೂಚಿಸಿದ್ದಾರೆ. ಕೀಟನಾಶಕಗಳನ್ನು ನಿಯತಕಾಲಿಕವಾಗಿ ಬದಲಾಯಿಸುವುದು, ಕಿಣ್ವಗಳನ್ನು ಪ್ರತಿಬಂಧಿಸುವ ರಾಸಾಯನಿಕಗಳ ಬಳಕೆ, ಜೈವಿಕ ನಿಯಂತ್ರಣ ಕ್ರಮಗಳು ಹಾಗೂ ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳನ್ನು ನಾಶಪಡಿಸುವುದು ಅತ್ಯಂತ ಪರಿಣಾಮಕಾರಿ ಮಾರ್ಗಗಳಾಗಿವೆ. ಒಂದೇ ರಾಸಾಯನಿಕವನ್ನು ಮಿತಿಯಿಲ್ಲದೆ ಸಿಂಪಡಿಸುವುದು ಸೂಕ್ತ ಪರಿಹಾರವಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ವೈಯಕ್ತಿಕ ಹಂತದಲ್ಲಿ ಪ್ರತಿಯೊಬ್ಬರೂ ವಾರಕ್ಕೊಮ್ಮೆ ನೀರು ಸಂಗ್ರಹಿಸುವ ಪಾತ್ರೆಗಳನ್ನು ಖಾಲಿ ಮಾಡಿ ಚೆನ್ನಾಗಿ ತೊಳೆಯಬೇಕು, ನೀರು ಸಂಗ್ರಹಿಸುವ ತೊಟ್ಟಿಗಳನ್ನು ಮುಚ್ಚಿಡಬೇಕು, ಕಿಟಕಿ-ಬಾಗಿಲುಗಳ ಜಾಲರಿಗಳನ್ನು ದುರಸ್ತಿಗೊಳಿಸಬೇಕು ಮತ್ತು ಸ್ವಯಂ ನಿರ್ಧಾರಗಳ ಬದಲು ಕೀಟನಾಶಕಗಳ ಮೇಲಿರುವ ಸೂಚನೆಗಳನ್ನು ಸರಿಯಾಗಿ ಪಾಲಿಸಬೇಕು. ಈ ಅಧ್ಯಯನವು ಆಲ್ಫಾ-ಸೈಪರ್ಮೆಥ್ರಿನ್ ತಕ್ಷಣವೇ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದೆ ಎಂದು ಹೇಳದಿದ್ದರೂ, ಸೊಳ್ಳೆಗಳ ರಕ್ಷಣಾತ್ಮಕ ಜೈವಿಕ ವ್ಯವಸ್ಥೆಯು ಹೇಗೆ ಬದಲಾಗುತ್ತಿದೆ ಎಂಬುದನ್ನು ತೋರಿಸಿಕೊಟ್ಟಿದೆ. ಬೀಟಾ-ಎಸ್ಟರೇಸ್, CYP450 ಕಿಣ್ವಗಳು ಮತ್ತು ಸೊಳ್ಳೆಗಳ ಮರಣ ಪ್ರಮಾಣವನ್ನು ಸೂಕ್ತ ಸಮಯದಲ್ಲಿ ಗಮನಿಸುವುದರಿಂದ, ಸೊಳ್ಳೆಗಳಲ್ಲಿ ಪೂರ್ಣ ನಿರೋಧಕ ಶಕ್ತಿ ಸ್ಥಾಪನೆಯಾಗುವ ಮುನ್ನವೇ ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ತಮ್ಮ ನಿಯಂತ್ರಣ ಕಾರ್ಯತಂತ್ರಗಳನ್ನು ಬದಲಾಯಿಸಿಕೊಳ್ಳಲು ಸಕಾಲಿಕ ಅವಕಾಶ ಸಿಗುತ್ತದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ನಿಮ್ಮ ಮದುವೆ ಚಿನ್ನದ ಉಂಗುರ ಭೂಮಿಗಿಂತ ಹಳೇದು, ರೊಮ್ಯಾಂಟಿಕ್ ಮೂಡ್‌ಗೆ ಕೊಂಡೊಯ್ಯಲಿದೆ ಕಾರಣ
ವ್ಯರ್ಥ ಆಹಾರದಿಂದ ಪರಿಸರ ಹಾನಿ ತಡೆಗೆ ಇರುವೆ ಬಳಕೆ: 18 ವರ್ಷದ ವಿದ್ಯಾರ್ಥಿನಿಯ ಅದ್ಭುತ ಸಂಶೋಧನೆ