
ಹುಟ್ಟುವಾಗಲೇ ಮಕ್ಕಳು ಗಂಡೋ, ಹೆಣ್ಣೋ ಎನ್ನುವುದು ತೀರ್ಮಾನ ಆಗಿ ಬಿಡುತ್ತದೆ. ಅಮ್ಮನ ಗರ್ಭದಿಂದ ಮಗು ಹೊರಕ್ಕೆ ಬಂದಾಗಲೇ ಅದರ ಲಿಂಗವೂ ತಿಳಿಯುತ್ತದೆ. ಆದರೆ, ಇಲ್ಲೊಂದು ಊರಿನಲ್ಲಿ ಮಕ್ಕಳಿಗೆ 12 ವರ್ಷಆಗುವವರೆಗೂ ಅವರು ಗಂಡೋ, ಹೆಣ್ಣೋ ತಿಳಿಯುವುದೇ ಇಲ್ಲ. ಇಂಥದ್ದೊಂದು ವಿಚಿತ್ರ ಈ ಭೂಮಿಯ ಮೇಲೆಯೇ ಇದೆ. ಕಟ್ಟುಕಥೆಯ ಸಿನಿಮಾ ಸ್ಟೋರಿಯನ್ನೂ ಮೀರಿಸೋ ಒಂದು ಪ್ರದೇಶ ಇದಾಗಿದ್ದು, ಇಲ್ಲಿ ಹುಟ್ಟುವಾಗ ಎಲ್ಲರೂ ಹೆಣ್ಣಿನ ರೀತಿಯಲ್ಲಿಯೇ ಹುಟ್ಟುತ್ತಾರೆ, ಆದರೆ ಅವರ ಪೈಕಿ ಕೆಲವರು ಗಂಡಾಗಿರುತ್ತಾರೆ. ವೈದ್ಯಕೀಯ ಲೋಕವನ್ನೇ ಸವಾಲಾಗಿದೆ ಈ ಊರು. ಸೃಷ್ಟಿಯ ವೈಚಿತ್ರ್ಯದ ಮುಂದೆ ಮಾನವ ಎಲ್ಲಾ ಸಂಶೋಧನೆಗಳೂ ಠುಸ್ ಎನ್ನುವುದಕ್ಕೆ ಈ ಊರೇ ಸಾಕ್ಷಿಯಾಗಿದೆ
ಅಂದಹಾಗೆ, ಈ ವಿಚಿತ್ರ ಊರು ಇರುವುದು, ಕೆರಿಬಿಯನ್ ಸಮುದ್ರದಲ್ಲಿರುವ ಡೊಮಿನಿಕನ್ ರಿಪಬ್ಲಿಕ್ ದೇಶದ 'ಸಲೀನಾಸ್' ಎಂಬಲ್ಲಿ. ಇದೊಂದು ಚಿತ್ರ ಗ್ರಾಮ. ಇಲ್ಲಿ ಮಕ್ಕಳು ಹುಟ್ಟಿದಾಗ ಅವರ ಗುಪ್ತಾಂಗ ಯೋನಿಯ ರೂಪದಲ್ಲಿ ಇರುತ್ತದೆ. ಆದರೆ 12 ವರ್ಷ ಆಗುತ್ತಿದ್ದಂತೆಯೇ ಆ ಮಕ್ಕಳ ಪೈಕಿ ಕೆಲವರಿಗೆ ಗಂಡಸರ ಖಾಸಗಿ ಅಂಗವಾಗಿರುವ ಶಿಶ್ನ ಬೆಳೆಯಲು ಶುರುವಾಗುತ್ತದೆ. ಆಗ ಈ ಮಗು ಗಂಡು ಎನ್ನುವುದು ತಿಳಿಯುತ್ತದೆ. ಇದೇ ಕಾರಣಕ್ಕೆ ಅವರು ಹುಟ್ಟಿದಾಗ ಹೆಣ್ಣು ಮಕ್ಕಳ ಹೆಸರನ್ನೇ ಇಡಲಾಗುವುದುಜೊತೆಗೆ, ಹೆಣ್ಣು ಮಕ್ಕಳ ಡ್ರೆಸ್ ಹಾಕಲಾಗುವುದು. ಅವರು ಗಂಡು ಎಂದು ತಿಳಿದರೆ 12 ವರ್ಷಗಳ ಬಳಿಕ ಅವರಿಗೆ ಗಂಡಿನ ಉಡುಪು ಹಾಕಲಾಗುವುದು.
ಮಕ್ಕಳಿಗೆ ಅವರಿಗೆ 12 ವರ್ಷ ತುಂಬುತ್ತಿದ್ದಂತೆ ಅವರ ದೇಹದಲ್ಲಿ ಪುರುಷ ಹಾರ್ಮೋನ್‌ಗಳು ಬಿಡುಗಡೆಯಾಗಿ, ಗಂಡು ಜನನಾಂಗಗಳು ಬೆಳೆಯಲು ಆರಂಭಿಸುತ್ತವೆ. ಧ್ವನಿ ಗಂಭೀರವಾಗುತ್ತದೆ ಮತ್ತು ದೇಹದಲ್ಲಿ ಗಂಡು ಮಕ್ಕಳ ಲಕ್ಷಣಗಳು ಮೂಡುತ್ತವೆ. ಸ್ಥಳೀಯವಾಗಿ ಇಂತಹ ಮಕ್ಕಳನ್ನು ಗೆವೆಡೋಸಸ್ ಎಂದು ಕರೆಯಲಾಗುತ್ತದೆ. ಸ್ಪ್ಯಾನಿಷ್ ಭಾಷೆಯಲ್ಲಿ ಇದರ ಅರ್ಥ "12ನೇ ವಯಸ್ಸಿಗೆ ಪುರುಷತ್ವ ಪಡೆಯುವವರು" ಎಂದಾಗಿದೆ. ಅದರಲ್ಲೂ, ಇಲ್ಲಿ ಪ್ರತಿ 90 ಮಕ್ಕಳಲ್ಲಿ ಒಂದು ಮಗುವಿಗೆ ಈ ರೀತಿ ಆಗುತ್ತದೆ.
1970ರ ದಶಕದಲ್ಲಿ ಕಾರ್ನೆಲ್ ವಿಶ್ವವಿದ್ಯಾಲಯದ ಹಾರ್ಮೋನ್ ತಜ್ಞರಾದ ಡಾ. ಜೂಲಿಯನ್ ಇಂಪೆರಾಟೊ ಅವರು ಈ ಹಳ್ಳಿಗೆ ಭೇಟಿ ನೀಡಿ ಸಂಶೋಧನೆ ನಡೆಸಿದಾಗ ಇದರ ಅಸಲಿ ರಹಸ್ಯ ಬಯಲಾಯಿತು. ಅದುವೇ, ಇದು ಯಾವುದೇ ಪವಾಡವಲ್ಲ, ಇದೊಂದು ಅಪರೂಪದ ಜೀನ್ ದೋಷ ಅಥವಾ ತಳೀಯ ಅಸ್ವಸ್ಥತೆ. ಅಂದರೆ, ಈ ಮಕ್ಕಳು ಗಂಡು ಕ್ರೋಮೋಸೋಮ್ (XY) ಹೊಂದಿದ್ದರೂ, ತಾಯಿಯ ಗರ್ಭದಲ್ಲಿರುವಾಗ ಇವರಿಗೆ 5-ಆಲ್ಫಾ-ರಿಡಕ್ಟೇಸ್ ಎಂಬ ಎಂಜೈಮ್ ಕೊರತೆ ಇರುತ್ತದೆ. ಈ ಎಂಜೈಮ್ ಕೊರತೆಯಿಂದಾಗಿ, ಗರ್ಭದಲ್ಲಿರುವಾಗ ಗಂಡು ಹಾರ್ಮೋನ್ ಆದ ಡಿಹೈಡ್ರೋ-ಟೆಸ್ಟೋಸ್ಟೆರಾನ್ ಉತ್ಪತ್ತಿಯಾಗುವುದಿಲ್ಲ. ಇದರಿಂದಾಗಿ ಗಂಡು ಮಗುವಾಗಿದ್ದರೂ ಜನಿಸಿದಾಗ ಹೆಣ್ಣು ಮಗುವಿನಂತೆ ಕಾಣಿಸುತ್ತದೆ. ಆದರೆ ಮಗುವಿಗೆ 12 ವರ್ಷ ತುಂಬಿದಾಗ, ದೇಹದಲ್ಲಿ ಮತ್ತೊಮ್ಮೆ ಭಾರಿ ಪ್ರಮಾಣದಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಹಂತದಲ್ಲಿ ಗರ್ಭದಲ್ಲಿ ಆಗಬೇಕಿದ್ದ ದೈಹಿಕ ಬದಲಾವಣೆಗಳು 12 ವರ್ಷದ ನಂತರ ನಡೆದು, ಆ ಹುಡುಗಿ ಸಂಪೂರ್ಣ ಹುಡುಗನಾಗಿ ಬದಲಾಗುತ್ತಾಳೆ.
ಈ ಹಳ್ಳಿಯ ಜನರ ಮೇಲಿನ ಸಂಶೋಧನೆಯಿಂದಾಗಿ ವೈದ್ಯಕೀಯ ಲೋಕಕ್ಕೆ ಒಂದು ದೊಡ್ಡ ಯಶಸ್ಸು ಸಿಕ್ಕಿತು. ಅದುವೇ, ಪುರುಷರಲ್ಲಿ ಕಂಡುಬರುವ ಪ್ರೊಸ್ಟೇಟ್ ಗ್ರಂಥಿ ಹಿಗ್ಗುವಿಕೆ ಮತ್ತು ಪುರುಷರ ತಲೆ ಲೇಡಿ ಬೋಳು ಕಾಯಿಲೆಗಳಿಗೆ ಔಷಧಿ ಕಂಡುಹಿಡಿಯಲು ಈ ಸಂಶೋಧನೆ ದಾರಿಯಾಯಿತು. ಇಂದು ಜಗತ್ತಿನಾದ್ಯಂತ ಲಕ್ಷಾಂತರ ಪುರುಷರು ಬಳಸುವ ಫಿನಾಸ್ಟರೈಡ್ ಎಂಬ ಔಷಧಿಯನ್ನು ಇದೇ ಸಂಶೋಧನೆಯ ಆಧಾರದ ಮೇಲೆ ತಯಾರಿಸಲಾಗಿದೆ. ಏತನ್ಮಧ್ಯೆ, ಈ ಹಳ್ಳಿಯ ಹುಡುಗಿಯರು ದೊಡ್ಡವರಾದ ಮೇಲೆ ಗಂಡಸರಾಗಿ ಮದುವೆಯಾಗಿ ಸಾಮಾನ್ಯ ಪುರುಷರಂತೆ ಜೀವನ ನಡೆಸುತ್ತಾರೆ. ಅದರಲ್ಲೂ, ಈ ಹಳ್ಳಿ ತಲೆಮಾರುಗಳಿಂದ ಇತರೆ ಜಗತ್ತಿನಿಂದ ದೂರವೇ ಉಳಿದಿರುವುದರಿಂದ ಈ ವಂಶವಾಹಿ ದೋಷ ಇಲ್ಲಿ ಮುಂದುವರಿದುಕೊಂಡು ಬಂದಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.