
ಬೀಜಿಂಗ್ : ಚಂದ್ರನ ಅತ್ಯಂತ ಕಠಿಣ ಹಾಗೂ ನಿಗೂಢ ಪ್ರದೇಶವಾದ ದಕ್ಷಿಣ ಧ್ರುವದ ಶಾಶ್ವತ ನೆರಳಿನ ಕುಳಿಗಳಲ್ಲಿ (Shackleton Crater) ಮಂಜುಗಡ್ಡೆ ರೂಪದಲ್ಲಿರುವ ನೀರನ್ನು ಪತ್ತೆಹಚ್ಚಲು ಚೀನಾ ಸಂಪೂರ್ಣವಾಗಿ ಸಜ್ಜಾಗಿದೆ. ತನ್ನ ಏಳನೇ ಹಾಗೂ ಅತ್ಯಂತ ಸಂಕೀರ್ಣವಾದ 'ಚಾಂಗ್‌ಇ-7' (Chang'e-7) ಮಾನವರಹಿತ ರೋಬೋಟಿಕ್ ಚಂದ್ರಯಾನ ಯೋಜನೆಯನ್ನು ಉಡಾವಣೆ ಮಾಡಲು ಚೀನಾ ದಿನಗಣನೆ ಆರಂಭಿಸಿದೆ.
ಚೀನಾದ ಈ ಮಹತ್ವಾಕಾಂಕ್ಷೆಯ ಕಾರ್ಯಾಚರಣೆಯು ಕೇವಲ ಒಂದು ಉಪಗ್ರಹಕ್ಕೆ ಸೀಮಿತವಾಗಿಲ್ಲ. ಇದು ಪ್ರಮುಖ ನಾಲ್ಕು ಭಾಗಗಳನ್ನು ಒಳಗೊಂಡಿದೆ.
ಆರ್ಬಿಟರ್: ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಾ ಇಡೀ ಮೇಲ್ಮೈಯನ್ನು ನಕ್ಷೆ ಮಾಡುತ್ತದೆ ಹಾಗೂ ಭೂಮಿಗೆ ಸಂವಹನ ಕೊಂಡಿಯಾಗಿ ಕೆಲಸ ಮಾಡುತ್ತದೆ.
ಲ್ಯಾಂಡರ್: ಚಂದ್ರನ ದಕ್ಷಿಣ ಧ್ರುವದ ಬಳಿಯ ಶ್ಯಾಕಲ್ಟನ್ ಕುಳಿಯ ಅಂಚಿನಲ್ಲಿ ಸುರಕ್ಷಿತವಾಗಿ ಇಳಿಯುವ ನೌಕೆ.
ರೋವರ್: ಚಂದ್ರನ ಮೇಲ್ಮೈಯಲ್ಲಿ ಸಂಚರಿಸಿ ಮಣ್ಣು ಮತ್ತು ಬಂಡೆಗಳ ರಾಸಾಯನಿಕ ವಿಶ್ಲೇಷಣೆ ನಡೆಸುವ ವಾಹನ.
ಹಾಪಿಂಗ್ ಪ್ರೋಬ್ (ಹಾಪರ್): ಚಂದ್ರಯಾನ ಇತಿಹಾಸದಲ್ಲೇ ಮೊದಲ ಬಾರಿಗೆ, ರಾಕೆಟ್ ಪ್ರೊಪಲ್ಷನ್ ಬಳಸಿ ಕುಳಿಗಳ ಆಳಕ್ಕೆ ಜಿಗಿದು (Hop), ನೀರಿನ ಮಾದರಿ ಸಂಗ್ರಹಿಸಿ ಮತ್ತೆ ಹೊರಬರಬಲ್ಲ ಆರು ಕಾಲುಗಳ ವಿಶೇಷ ರೋಬೋಟ್.
ಚಂದ್ರನ ಮೇಲೆ ನೀರಿದೆ ಎಂಬುದು ಈಗಾಗಲೇ ಭಾರತದ ಚಂದ್ರಯಾನ-1 ಮತ್ತು ನಾಸಾದ ಶೋಧಗಳಿಂದ ಸಾಬೀತಾಗಿದೆ. ಆದರೆ ದಕ್ಷಿಣ ಧ್ರುವದಲ್ಲಿ ಎಷ್ಟು ಪ್ರಮಾಣದ ನೀರಿದೆ? ಅದನ್ನು ಬಳಸಿಕೊಳ್ಳುವುದು ಹೇಗೆ? ಎಂಬ ಪ್ರಶ್ನೆಗಳಿಗೆ ಚಾಂಗ್‌ಇ-7 ಉತ್ತರ ಹುಡುಕಲಿದೆ.
ಚಂದ್ರನ ಮೇಲೆ ಮಾನವನ ಶಾಶ್ವತ ನೆಲೆ ನಿರ್ಮಿಸಲು, ಕುಡಿಯುವ ನೀರು, ಆಮ್ಲಜನಕ ಮತ್ತು ರಾಕೆಟ್ ಇಂಧನ ತಯಾರಿಕೆಗೆ ನೀರು ಅತ್ಯಗತ್ಯ. ಈ ಕಾರಣಕ್ಕಾಗಿಯೇ ಅಮೆರಿಕದ ನಾಸಾ (NASA) ಮತ್ತು ಚೀನಾ ನಡುವೆ ಹೊಸ 'ಬಾಹ್ಯಾಕಾಶ ಸ್ಪರ್ಧೆ' ಆರಂಭವಾಗಿದೆ. ನಾಸಾ ಆಡಳಿತಾಧಿಕಾರಿ ಜೇರೆಡ್ ಐಸಾಕ್‌ಮನ್ ಪ್ರಕಾರ, ನಾವು ಪ್ರಸ್ತುತ ತೀವ್ರ ಬಾಹ್ಯಾಕಾಶ ಸ್ಪರ್ಧೆಯಲ್ಲಿದ್ದೇವೆ. ಚೀನಾ ಅತ್ಯಂತ ವೇಗವಾಗಿ ಹೆಜ್ಜೆ ಇಡುತ್ತಿದೆ ಎಂದಿದ್ದಾರೆ.
ಚಂದ್ರನ ದಕ್ಷಿಣ ಧ್ರುವವು ಕಂದಕಗಳು ಮತ್ತು ಬೃಹತ್ ಕುಳಿಗಳಿಂದ ತುಂಬಿದ್ದು, ಇಲ್ಲಿ ಇಳಿಯುವುದು ಅತ್ಯಂತ ಸಾಹಸಮಯ ಕೆಲಸ. 2023ರಲ್ಲಿ ರಷ್ಯಾದ ಲೂನಾ-25 ಇಲ್ಲಿ ಇಳಿಯಲು ಯತ್ನಿಸಿ ಪತನಗೊಂಡಿತ್ತು. ಅದೇ ಆಗಸ್ಟ್ 2023ರಲ್ಲಿ ಭಾರತದ ಚಂದ್ರಯಾನ-3 ಯಶಸ್ವಿಯಾಗಿ ಇಳಿದು ದಕ್ಷಿಣ ಧ್ರುವದ ಮಣ್ಣಿನ ತಾಪಮಾನ ಮತ್ತು ಹೈಡ್ರೋಜನ್-ಸಲ್ಫರ್ ಇರುವಿಕೆಯನ್ನು ಪತ್ತೆಹಚ್ಚಿ ಇತಿಹಾಸ ನಿರ್ಮಿಸಿತ್ತು. ಇದೀಗ ಚೀನಾದ ಚಾಂಗ್‌ಇ-7 ಕಾರ್ಯಾಚರಣೆಯು ಭವಿಷ್ಯದ ಅಂತರರಾಷ್ಟ್ರೀಯ ಚಂದ್ರ ಸಂಶೋಧನಾ ಕೇಂದ್ರಕ್ಕೆ (ILRS) ಬಲವಾದ ಅಡಿಪಾಯ ಹಾಕಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.