ಭಾರತದ ಕೃಷಿ ಉತ್ಪನ್ನ ಹೆಚ್ಚಳಕ್ಕೆ ಡ್ರೋನ್‍ಗಳು ಹೇಗೆ ಸಹಾಯಕವಾಗಬಲ್ಲವು?

By Suvarna News  |  First Published Aug 23, 2022, 6:18 PM IST

ನಿಖರ ಕೃಷಿ ಚಟುವಟಿಕೆಗಳಲ್ಲಿ ಯುಎವಿಗಳ ಬಳಕೆ ಕೇವಲ ಕೃಷಿ ಕ್ಷೇತ್ರಕ್ಕೆ ಮಾತ್ರ ಲಾಭದಾಯಕವಾಗಿರುವುದಲ್ಲದೆ, ಯುಎವಿ ತಂತ್ರಜ್ಞಾನದ ಕ್ರಾಂತಿಗೂ ಹೊಸ ರೂಪ ನೀಡುತ್ತಿದೆ. ಡ್ರೋನ್ ಬಳಕೆಯಿಂದ ಕಾರ್ಮಿಕರ ಮೇಲೆ ರಾಸಾಯನಿಕ ಉತ್ಪನ್ನಗಳ ದುಷ್ಪರಿಣಾಮ ಉಂಟಾಗದಂತೆ ತಡೆಯಬಹುದು ಮತ್ತು ಅವರ ಕೆಲಸ ಹೆಚ್ಚು ಆರಾಮದಾಯಕ ಮತ್ತು ವೇಗವಾಗುವಂತೆ ಮಾಡಬಹುದು.


ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಅಗ್ರಿಕಲ್ಚರಲ್ ಡ್ರೋನ್ ಎನ್ನುವುದು ಕೃಷಿ ಚಟುವಟಿಕೆಗಳಲ್ಲಿ, ಅದರಲ್ಲೂ ವಿಶೇಷವಾಗಿ ಇಳುವರಿ ಹೆಚ್ಚಳ ಹಾಗೂ ಬೆಳೆಯ ಅಭಿವೃದ್ಧಿ ಹಾಗೂ ಬೆಳೆಯ ಉತ್ಪಾದನೆಯಲ್ಲಿ ಬಳಸಿಕೊಳ್ಳಬಹುದಾದ ಮಾನವರಹಿತ ವೈಮಾನಿಕ ವಾಹನವಾಗಿದೆ. ಈ ಕೃಷಿ ಡ್ರೋನ್‍ಗಳು ಬೆಳೆಯ ಬೆಳವಣಿಗೆಯ ವಿವಿಧ ಹಂತಗಳ ಕುರಿತು, ಬೆಳೆಯ ಆರೋಗ್ಯದ ಕುರಿತು, ಮಣ್ಣಿನ ವೈವಿಧ್ಯದ ಕುರಿತು ಮಾಹಿತಿ ನೀಡುತ್ತವೆ. ಕೃಷಿ ಡ್ರೋನ್‍ಗಳಲ್ಲಿ ಬಳಸಲಾಗುವ ಮಲ್ಟಿ ಸ್ಪೆಕ್ಟ್ರಲ್ ಸೆನ್ಸರ್‍ಗಳು ನಿಯರ್ ಇನ್ಫ್ರಾರೆಡ್ ಹಾಗೂ ಶಾರ್ಟ್ ವೇವ್ ಸೇರಿದಂತೆ ಗೋಚರ ವರ್ಣಪಟಲವನ್ನೂ ಮೀರಿ ಇಲೆಕ್ಟ್ರೋಮ್ಯಾಗ್ನೆಟಿಕ್ ವಿಕಿರಣವನ್ನು ಚಿತ್ರಿಸುತ್ತವೆ.
 
ತಂತ್ರಜ್ಞಾನದ ಆಧುನಿಕತೆಯ ಪರಿಣಾಮವಾಗಿ, ಸ್ಮಾರ್ಟ್ ಕೃಷಿ ಚಟುವಟಿಕೆಗಳು ಈಗ ಮಾಹಿತಿ ಆಧಾರಿತವಾಗಿವೆ. ಅದರೊಡನೆ, ಯುಎವಿಗಳು ಈ ಮಾಹಿತಿಗಳನ್ನು ಸಮರ್ಪಕವಾಗಿ ಕಲೆಹಾಕಿ, ಅವುಗಳನ್ನು ಹಂಚಲು ಸಮರ್ಥವಾಗಿವೆ. ಇದರ ಪರಿಣಾಮವಾಗಿ ಕೃಷಿಕರು ತಮ್ಮ ಕೃಷಿ ಭೂಮಿಯ ಮಣ್ಣಿನ ಪರಿಸ್ಥಿತಿಯ ಆಧಾರದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಾಧ‍್ಯವಾಗುತ್ತದೆ.

Tap to resize

Latest Videos

undefined

ಕೃಷಿ ಡ್ರೋನ್‍ಗಳ ವರ್ಗೀಕರಣ:
ಆಧುನಿಕ ಬಗೆಯ ಯುಎವಿಗಳು ವೈಜ್ಞಾನಿಕ ವೈಶಿಷ್ಟ್ಯಗಳನ್ನು ಹೊಂದಿದ್ದು, ಇವುಗಳು ವಿಶಾಲವಾದ, ದೂರದಲ್ಲಿರುವ, ಪದೇ ಪದೇ ತೆರಳಲು ಕಷ್ಟವಾಗುವಂತಹ ಸ್ಥಳಗಳಿಂದ ಮಾಹಿತಿ ಪಡೆಯಲು ಮನುಷ್ಯರು ಕಷ್ಟಪಟ್ಟು ತೆರಳುವುದಕ್ಕೆ ಸೂಕ್ತವಾದ ಬದಲಿ ವ್ಯವಸ್ಥೆಗಳಾಗಿವೆ.

ದೇಶೀಯ ರಕ್ಷಣಾ ಉತ್ಪಾದನೆಯಲ್ಲಿ ಖಾಸಗಿ ವಲಯದ ಸಹಭಾಗಿತ್ವ!

ಗಾತ್ರದ ಆಧಾರದಲ್ಲಿ ಹೇಳುವುದಾದರೆ, ಈ ಡ್ರೋನ್‍ಗಳಲ್ಲಿ ನ್ಯಾನೋ, ಮೈಕ್ರೋ, ಮಿನಿ, ಸ್ಮಾಲ್, ಮೀಡಿಯಂ ಹಾಗು ಲಾರ್ಜ್ ಯುಎವಿಗಳೆಂಬ ವರ್ಗಗಳಿವೆ. ಅವುಗಳನ್ನು ಉಪಯೋಗದ ಅಗತ್ಯ ಮತ್ತು ಉದ್ದೇಶಗಳಿಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದು.

ಗಾತ್ರದ ಆಧಾರದ ವರ್ಗೀಕರಣ:
1.    ನ್ಯಾನೋ ಮತ್ತು ಮೈಕ್ರೋ
ಅತ್ಯಂತ ಸಣ್ಣದಾದ ಗಾತ್ರ, ಕಡಿಮೆ ಬ್ಯಾಟರಿ ಸಾಮರ್ಥ್ಯ ಮತ್ತು ಕನಿಷ್ಠ ಪ್ರಮಾಣದ ಭಾರ ಒಯ್ಯುವ ಸಾಮರ್ಥ್ಯ ಇರುವುದರಿಂದ ನ್ಯಾನೋ ಹಾಗೂ ಮೈಕ್ರೋ ಯುಎವಿಗಳನ್ನು ಬೃಹತ್ ಭೂಪ್ರದೇಶದ ವೀಕ್ಷಣೆಗೆ ಬಳಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಇವುಗಳು ನಿಖರ ಕೃಷಿ ಚಟುವಟಿಕೆಗಳ ಬಳಕೆಗೆ ಸೂಕ್ತವಾಗಲಾರವು. ಆದರೆ ಇವುಗಳನ್ನು ಒಳಾಂಗಣ ಕೃಷಿ ಚಟುವಟಿಕೆಗಳಿಗೆ ಅಗತ್ಯವಿದ್ದರೆ ಬಳಸಿಕೊಳ್ಳಬಹುದು.

2.    ಮಿನಿ ಮತ್ತು ಸ್ಮಾಲ್:
ಮಿನಿ ಮತ್ತು ಸ್ಮಾಲ್ ಯುಎವಿಗಳು ಕೃಷಿ ಮೇಲ್ವಿಚಾರಣಾ ಅಗತ್ಯಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸಬಲ್ಲವು.

3.    ಮೀಡಿಯಂ ಮತ್ತು ಲಾರ್ಜ್:
 ಮಿನಿ ಮತ್ತು ಸ್ಮಾಲ್ ಯುಎವಿಗಳಿಗೆ ಹೋಲಿಸಿದರೆ, ಈ ಮೀಡಿಯಂ ಮತ್ತು ಲಾರ್ಜ್ ಯುಎವಿಗಳು ನಿರ್ವಹಣೆ, ನಿಯಂತ್ರಣ ಸಾಧಿಸಲು ಕಷ್ಟಕರವಾದವು. ಅದರೊಡನೆ ಇವುಗಳ ಬೆಲೆಯೂ ಹೆಚ್ಚಾಗಿರುತ್ತದೆ. ಆದರೆ ಮೀಡಿಯಂ ಮತ್ತು ಲಾರ್ಜ್ ಯುಎವಿಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ, ಅವುಗಳನ್ನೂ ಯಶಸ್ವಿಯಾಗಿ ಕೃಷಿ ಚಟುವಟಿಕೆಗಳಲ್ಲಿ ಕಾರ್ಯಾಚರಿಸುವಂತೆ ಮಾಡಬಹುದು.

ರೆಕ್ಕೆಗಳ ಆಧಾರದಲ್ಲಿ:
1.    ಫಿಕ್ಸ್ಡ್ ವಿಂಗ್:
ಫಿಕ್ಸ್ಡ್ ವಿಂಗ್ ಅಥವಾ ಸ್ಥಿರವಾದ ರೆಕ್ಕೆ ಹೊಂದಿರುವ ಯುಎವಿಗಳೆಂದರೆ ಅವುಗಳ ರೆಕ್ಕೆ ಅಥವಾ ಬಾಹುಗಳನ್ನು ಕಳಚಲು ಸಾಧ್ಯವಿಲ್ಲ. ಅವುಗಳನ್ನು ದೂರದಿಂದ ನಿಯಂತ್ರಿಸಬಹುದು ಅಥವಾ ಅವುಗಳು ಸ್ವಯಂಚಾಲಿತವಾಗಿರಲೂಬಹುದು.
ಅವುಗಳನ್ನು ಈಗಾಗಲೇ ಕ್ಷೇತ್ರನಕ್ಷೆ ಮತ್ತು ಹೈನುಗಾರಿಕೆ ಉದ್ದೇಶಗಳಿಗಾಗಿ ಬಹುವಾಗಿ ಬಳಸಿಕೊಳ್ಳಲಾಗುತ್ತಿದೆ. ಇವುಗಳ ಸರಳವಾದ ವಿನ್ಯಾಸ ಮತ್ತು ಸ್ಥಿರವಾದ ರೆಕ್ಕೆಗಳ ಕಾರಣದಿಂದ ಸಾಧಿಸಬಲ್ಲ ನಿಯಂತ್ರಣ ಈ ರೀತಿಯ ಯುಎವಿಗಳನ್ನು ಹೆಚ್ಚು ನಂಬಿಕಸ್ಥ ಎನಿಸುವಂತೆ ಮಾಡಿದೆ. ಇತರ ಯುಎವಿ ಮಾದರಿಗಳಿಗೆ ಹೋಲಿಸಿದರೆ ಅವುಗಳು ಅಷ್ಟೊಂದು ಹೆಚ್ಚಿನ ಬೆಲೆ ಬಾಳುವುದಿಲ್ಲ.

LCH: ಭಾರತೀಯ ವಾಯುಪಡೆಗೆ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್‌ ಬಲ, ಹೀಗಿದೆ ಇದರ ಸಾಮರ್ಥ್ಯ!

2.    ಹೈಬ್ರಿಡ್ ವಿಟಿಓಎಲ್ (ವರ್ಟಿಕಲ್ ಟೇಕ್ ಆಫ್ ಆ್ಯಂಡ್ ಲ್ಯಾಂಡಿಂಗ್)
ಇದನ್ನು ಫಿಕ್ಸ್ಡ್ ವಿಂಗ್ ಜೆಟ್ ಅಥವಾ ಒಂದು ಹೈಬ್ರಿಡ್ ಯುಎವಿ, ಅಥವಾ ವಿಟಿಓಎಲ್ ಏರ್‍ಕ್ರಾಫ್ಟ್ ಎಂದೂ ಕರೆಯಲಾಗುತ್ತದೆ.
ಈ ಹೈಬ್ರಿಡ್ ಮಾದರಿಯ ವಿಟಿಓಎಲ್ ಯುಎವಿಗಳು ಅವುಗಳ ಸೂಕ್ತ ಹಾರಾಟ ತಂತ್ರಗಳಿಂದಾಗಿ ಹೆಚ್ಚು ಪ್ರಭಾವಶಾಲಿಯಾಗಿದೆ. ಇದು ಕೃಷಿ ಚಟುವಟಿಕೆಗಳಿಗೆ ಉಪಯುಕ್ತವಾಗಿರಲಿದ್ದು, ನಾಲ್ಕು ಅಥವಾ ಹೆಚ್ಚು ಪ್ರೊಪೆಲ್ಲರ್‍ಗಳನ್ನು ಹೊಂದಿರುವ ಮಲ್ಟಿ ರೋಟಾರ್ ವಿನ್ಯಾಸವನ್ನು ಹೊಂದಿದೆ.
ಒಂದು ಅಥವಾ ಎರಡು ರೋಟಾರ್ ಹಾಗೂ ಟ್ರೈಕಾಪ್ಟರ್ ಯುಎವಿಗಳನ್ನು ಆಧುನಿಕ ಕೃ‍ಷಿ ಚಟುವಟಿಕೆಗಳಲ್ಲಿ ಅಷ್ಟಾಗಿ ಬಳಸಿಕೊಳ್ಳಲಾಗುತ್ತಿಲ್ಲ. ಅದಕ್ಕೆ ಅವುಗಳ ಸಂಕೀರ್ಣ ಏರೋಡೈನಾಮಿಕ್ಸ್ ಹಾಗೂ ಕ್ಲಿಷ್ಟಕರ ನಿಯಂತ್ರಣವೂ ಕಾರಣವಾಗಿದೆ. ಆದರೆ ಕ್ವಾಡ್ ಕಾಪ್ಟರ್‍ ಯುಎವಿಗಳು ಅವುಗಳ ಅತ್ಯುನ್ನತ ಏರೋನಾಟಿಕ್ಸ್ ಕಾರಣದಿಂದ ಕೃ‍ಷಿಯಲ್ಲಿ ಅಪಾರವಾಗಿ ಬಳಕೆಯಾಗುತ್ತಿವೆ. ಅದರೊಡನೆ, ಕೃಷಿಯಲ್ಲಿ ಯುಎವಿ ಬಳಕೆಯ ಕುರಿತ ನಡೆದ ಹಲವು ಸಂಶೋಧನೆಗಳ ಪ್ರಕಾರ ಈ ಮಾದರಿಯ ಯುಎವಿ ಕೃಷಿ ಭೂಮಿಯಲ್ಲಿ ಅತ್ಯಂತ ಸೂಕ್ತವಾದದ್ದಾಗಿದೆ.

ಭಾರತೀಯ ಕೃ‍ಷಿ ಡ್ರೋನ್ ಮಾರುಕಟ್ಟೆ 2028ರಲ್ಲಿ ನಾಲ್ಕು ಪಟ್ಟು ಅಭಿವೃದ್ಧಿ ಹೊಂದಲಿದೆ:
ಕರ್ನಾಟಕ, ಹರಿಯಾಣ, ಪಂಜಾಬ್, ತಮಿಳುನಾಡು ಹಾಗೂ ಮಧ್ಯ ಪ್ರದೇಶ ಸರ್ಕಾರಗಳು ಡ್ರೋನ್ ಉತ್ಪಾದಕರು, ಕೃಷಿ ಉತ್ಪನ್ನ ಸಂಘ‍ಟನೆಗಳು, ಹಾಗೂ ರಾಜ್ಯ ಕೃಷಿ ವಿಶ್ವವಿದ್ಯಾಲಯಗಳೊಡನೆ ಸಹಯೋಗ ಹೊಂದಿ, ರಸಗೊಬ್ಬರ ಸಿಂಪಡಿಸುವ ಡ್ರೋನ್ ಸಿದ್ಧಪಡಿಸುವ ಯೋಜನೆಗಳನ್ನು ಹಮ್ಮಿಕೊಂಡಿವೆ. ಅದರೊಡನೆ ಈ ರಾಜ್ಯ ಸರ್ಕಾರಗಳು ಕೃಷಿ ವಿಶ್ವವಿದ್ಯಾಲಯಗಳ ಬಳಿ ಕೃಷಿಕರಿಗೆ ಈ ಡ್ರೋನ್‍ಗಳ ಬಳಕೆಯ ವಿಧಾನವನ್ನೂ ತಿಳಿ ಹೇಳುವಂತೆ ಸೂಚಿಸಿವೆ.

ಕಾರ್ಯತಂತ್ರ ಸಮಾಲೋಚನಾ ಮತ್ತು ಮಾರುಕಟ್ಟೆ ಸಂಶೋಧನಾ ಸಂಸ್ಥೆಯೊಂದು ಭಾರತದಲ್ಲಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದ ಕೃಷಿ ಡ್ರೋನ್ ಮಾರುಕಟ್ಟೆ 2028ರ ವೇಳೆಗೆ ನಾಲ್ಕು ಪಟ್ಟು ಹೆಚ್ಚಳ ಕಾಣುವ ಸಾಧ‍್ಯತೆ ಇದೆ ಎಂದಿದೆ. 2022 – 2028ರ ಮಧ್ಯ ಸಿಎಜಿಆರ್ 25%ಕ್ಕೂ ಹೆಚ್ಚು ಪ್ರಮಾಣದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ.

ಕೃಷಿ ಡ್ರೋನ್‍ಗಳು ಸಾಮಾನ್ಯವಾಗಿ ಸ್ಪ್ರೇ ಡ್ರೋನ್‍ ಸಾಮರ್ಥ್ಯ ಹೊಂದಿರುವ ಮಾನವ ರಹಿತ ವೈಮಾನಿಕ ವಾಹನಗಳಾಗಿದ್ದು, ಕೃಷಿ ಚಟುವಟಿಕೆಗಳನ್ನು ಸುಲಭ ಹಾಗೂ ಸರಳವಾಗಿಸುವ ಉದ್ದೇಶದಿಂದ ಬಳಸಲ್ಪಡುತ್ತವೆ. ಇವುಗಳು ಕೃಷಿ ಉತ್ಪನ್ನ, ಬೆಳೆ ಅಭಿವೃದ್ಧಿಯ ವೀಕ್ಷಣೆಯಲ್ಲಿ ಸಹಕಾರಿಯಾಗುತ್ತವೆ. ಡ್ರೋನಿನ ಸೆನ್ಸರ್‍ಗಳು ಹಾಗೂ ಡಿಜಿಟಲ್ ಫೋಟೋಗ್ರಫಿ ಸಾಮರ್ಥ್ಯಗಳೂ ಕೃಷಿಕರಿಗೆ ಅವರ ಕೃಷಿ ಭೂಮಿಯ ಸಮಗ್ರ ಚಿತ್ರಣ ಒದಗಿಸಲು ಸಹಕಾರಿಯಾಗಿವೆ.

ಅದರೊಡನೆ, ವಿಪರೀತವಾಗುತ್ತಿರುವ ಹವಾಮಾನ ಬದಲಾವಣೆಯೂ ಸಹ ಕೃಷಿ ಉದ್ಯಮಕ್ಕೆ ಹೆಚ್ಚಿನ ಸಂಕೀರ್ಣತೆ, ಸಂಕಷ್ಟವನ್ನು ತಂದೊಡ್ಡಿದೆ. ಇದರ ಪರಿಣಾಮವಾಗಿ ಕೃಷಿ ಡ್ರೋನ್‍ನಂತಹ ತಾಂತ್ರಿಕ ಪರಿಹಾರಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಅದರಿಂದ ಇಳುವರಿ ಹೆಚ್ಚಳ ಮತ್ತು ಕೃಷಿ ಸಂಸ್ಥೆಗಳ ಅಭಿವೃದ್ಧಿ ಸಾಧ್ಯ ಎಂದು ಅಂದಾಜಿಸಲಾಗುತ್ತಿದೆ.

ಇದರೊಂದಿಗೆ, ಕೃಷಿ ಡ್ರೋನ್ ಒದಗಿಸುವ ವೈಮಾನಿಕ ನೋಟವೂ ಹಲವು ಸಮಸ್ಯೆಗಳನ್ನು ತೆರೆದಿಡಬಹುದು. ಅದರ ಮೂಲಕ ಮಣ್ಣಿನ ಗುಣಮಟ್ಟ, ನೀರಾವರಿ ಸಮಸ್ಯೆಗಳು ಹಾಗೂ ಕೃಷಿಗೆ ಶಿಲೀಂಧ್ರಗಳ ಮುತ್ತಿಕೊಳ್ಳುವಿಕೆಯನ್ನೂ ಸುಲಭವಾಗಿ, ಶೀಘ್ರವಾಗಿ ಗಮನಿಸಬಹುದು. ಈ ಡ್ರೋನ್‍ಗಳನ್ನು ಕೃಷಿ ಸಮೀಕ್ಷೆ ಮತ್ತು ಶೀಘ್ರವಾಗಿ ಸಮಸ್ಯೆಗಳ ಗುರುತಿಸುವಿಕೆಯ ಉದ್ದೇಶಕ್ಕಾಗಿ ಬಳಸಿಕೊಳ್ಳಬಹುದು. ಇವೆಲ್ಲ ಕಾರಣಗಳಿಂದ ಮುಂದಿನ ವರ್ಷಗಳಲ್ಲಿ ಭಾರತದಲ್ಲಿ ಕೃಷಿ ಡ್ರೋನ್‍ಗಳಿಗೆ ಬೇಡಿಕೆಯೂ ಹೆಚ್ಚಳವಾಗುವ ಸಾಧ್ಯತೆಗಳಿವೆ.

ಪ್ರಸ್ತುತ ದಿನಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಅಗತ್ಯ ಮಾನವ ಸಂಪನ್ಮೂಲದ ಕೊರತೆ ಎದುರಾಗಿರುವುದರಿಂದ, ನಿಖರ ಕೃಷಿಗೆ ಸಹಾಯಕವಾಗಬಲ್ಲ ಕೃಷಿ ಡ್ರೋನಿನಂತಹ ಉಪಕರಣಗಳ ಮೇಲಿನ ಅವಲಂಬನೆಯೂ ಹೆಚ್ಚುತ್ತಿದೆ. ದೊಡ್ಡ ದೊಡ್ಡ ಕೃಷಿ ಭೂಮಿಗಳು ನಿಖರ ಕೃಷಿಯನ್ನು ಜಾರಿಗೆ ತರುತ್ತಿದ್ದು, ಆ ಮೂಲಕ ತಾಂತ್ರಿಕ ಸವಾಲುಗಳನ್ನು ಮೀರುತ್ತಿವೆ.

ತಜ್ಞರ ಅಭಿಪ್ರಾಯದ ಪ್ರಕಾರ, 2050ರ ವೇಳೆಗೆ ಜಾಗತಿಕ ಜನಸಂಖ್ಯೆ 9 ಮಿಲಿಯನ್ ಆಗಲಿದೆ. ಅದೇ ವೇಳೆಗೆ ಕೃಷಿ ಉತ್ಪನ್ನಗಳ ಬಳಕೆಯೂ ಬಹುತೇಕ 70% ಹೆಚ್ಚಳವಾಗುವ ಸಾಧ‍್ಯತೆಗಳಿವೆ. ಕೃತಕ ಬುದ್ಧಿಮತ್ತೆ (ಏಐ), ಮೆಷಿನ್ ಲರ್ನಿಂಗ್ (ಎಂಎಲ್) ಹಾಗೂ ರಿಮೋಟ್ ಸೆನ್ಸಿಂಗ್ ಸಾಮರ್ಥ್ಯ ಹೊಂದಿರುವ ಡ್ರೋನ್ ತಂತ್ರಜ್ಞಾನವೂ ಅದರ ಪ್ರಯೋಜನಗಳ ಕಾರಣದಿಂದ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿದೆ.

ಕೇಂದ್ರ ಸರ್ಕಾರವೂ ತನ್ನ ಆನ್‍ಲೈನ್ ಡಿಜಿಟಲ್ ಸ್ಕೈ ವೇದಿಕೆಯ ಮೂಲಕ ಮಾನವ ರಹಿತ ವೈಮಾನಿಕ ವಾಹನ, ಮೆಷಿನ್ ಲರ್ನಿಂಗ್ ಹಾಗೂ ಕೃತಕ ಬುದ್ಧಿಮತ್ತೆಗಳ ಪ್ರಾಮುಖ್ಯತೆಯ ಕುರಿತು ಒಪ್ಪಿಕೊಂಡಿರುವುದರಿಂದ ನಿರೀಕ್ಷಿತ ಅವಧಿಯಲ್ಲಿ ಭಾರತದಲ್ಲಿ ಡ್ರೋನ್ ಬಳಕೆ ಹೆಚ್ಚಳವಾಗುವ ಎಲ್ಲ ಸಾಧ್ಯತೆಗಳಿವೆ.

ಭಾರತದಲ್ಲಿನ ಡ್ರೋನ್ ಸ್ಟಾರ್ಟಪ್ ಸಂಸ್ಥೆಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದು, ಅವುಗಳ ತಾಂತ್ರಕ ಸಾಮರ್ಥ್ಯದ ಅಭಿವೃದ್ಧಿಗೆ ಗಮನ ಹರಿಸಿವೆ. ನಿಖರ ಕೃಷಿ ತಂತ್ರಜ್ಞಾನವೂ ಇಳುವರಿಯನ್ನು 5%ದಷ್ಟು ಹೆಚ್ಚಿಸುವುದಾಗಿ ಸಾಬೀತಾಗಿದೆ. ಎನ್‍ಡಿವಿಐ (ನಾರ್ಮಲೈಸ್ಡ್ ಡಿಫರೆನ್ಸ್ ವೆಜಿಟೇಷನ್ ಇಂಡೆಕ್ಸ್) ಚಿತ್ರಣ ಉಪಕರಣಗಳನ್ನು ಹೊಂದಿರುವ ಡ್ರೋನ್‍ಗಳು ಅತ್ಯಂತ ಕರಾರುವಕ್ಕಾದ ಬಣ್ಣಗಳೊಂದಿಗೆ ಚಿತ್ರಗಳನ್ನು ಒದಗಿಸುವುದರಿಂದ, ಸಸ್ಯದ ಆರೋಗ್ಯದ ಬಗ್ಗೆ ಸೂಕ್ತ ಮಾಹಿತಿ ಲಭ್ಯವಾಗಲಿದೆ.

ಇಬ್ಬರು ನಿಯಂತ್ರಕರ ತಂಡ ಲಭ್ಯವಿದ್ದರೆ, ಡ್ರೋನ್‍ಗಳು ಪ್ರತಿದಿನವೂ 40,000 ಗಿಡಗಳನ್ನು ನೆಡುವ ಸಾಮರ್ಥ್ಯ ಹೊಂದಿದ್ದು, ಹತ್ತು ಡ್ರೋನ್‍ಗಳು 4 ಲಕ್ಷ ಗಿಡಗಳನ್ನು ನೆಡಬಲ್ಲವು. ಜಾಗತಿಕವಾಗಿ ಆಹಾರಕ್ಕಾಗಿ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ಗಿಡಗಳ ಆರೋಗ್ಯವನ್ನು ಕಾಪಾಡಿಕೊಳ್ಳುವ ಒತ್ತಡವೂ ದಿನೇದಿನೇ ಹೆಚ್ಚುತ್ತಿದೆ. ಆರೋಗ್ಯವಂತ ಗಿಡಗಳಿಂದ ಮಾತ್ರ ಅಧಿಕ ಇಳುವರಿ ಪಡೆಯಲು ಸಾಧ‍್ಯ. ಭಾರತ ಒಂದು ಪ್ರಮುಖ ಕೃಷಿ ಉತ್ಪಾದಕ ರಾಷ್ಟ್ರವಾಗಿರುವುದರಿಂದ, ಭಾರತದಲ್ಲಿ ಡ್ರೋನ್ ಉತ್ಪಾದಕರಿಗೆ ಬೃಹತ್ ಅವಕಾಶ ಒದಗಿಸಲಿದೆ.

ಪ್ರಾಂತವಾರು ಸಮೀಕ್ಷೆ:
ರಾಜಸ್ತಾನದ ಕೃಷಿ ಚಟುವಟಿಕೆಗಳಲ್ಲಿ ಡ್ರೋನ್‍ಗಳು ವಿಪುಲವಾಗಿ ಬಳಕೆಯಾಗುತ್ತಿವೆ. ಡ್ರೋನ್‍ಗಳನ್ನು ಹೇಗೆ ವಿವಿಧ ಕಾರ್ಯಗಳಿಗೆ ಬಳಸಿಕೊಳ್ಳಬಹುದು ಎಂಬ ಕುರಿತೂ ಯೋಜನೆಗಳು ತಯಾರಾಗುತ್ತಿವೆ. ಅವುಗಳಲ್ಲಿ ರಾಸಾಯನಿಕಗಳ ಸಿಂಪಡಣೆ ಮತ್ತು ನೀರಿನಲ್ಲಿ ಕರಗಬಲ್ಲ ರಸಗೊಬ್ಬರಗಳ ಸಿಂಪಡನೆಯೂ ಸೇರಿದೆ. ರಾಜಸ್ತಾನದ ಕೃಷಿ ಇಲಾಖೆಯೂ ಸಹ ಡ್ರೋನ್‍ಗಳ ತಾಂತ್ರಿಕ ವಿಚಾರಗಳು ಮತ್ತು ಸುರಕ್ಷಾ ವೈಶಿಷ್ಟ್ಯಗಳ ಕುರಿತು ವಿಚಾರಣೆ ನಡೆಸುತ್ತಿದೆ. ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳೂ ಸಹ ಡ್ರೋನ್ ಕಂಪನಿಗಳೊಡನೆ ಸಹಯೋಗ ಹೊಂದುವ ಮತ್ತು ನೂತನ ತಂತ್ರಜ್ಞಾನಗಳನ್ನು ಜಾರಿಗೊಳಿಸುವ ಕುರಿತು ಆಲೋಚಿಸುತ್ತಿವೆ.

ಇಲ್ಲಿಯವರೆಗೆ ನಡೆದ ಅಭಿವೃದ್ಧಿ:
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶಾದ್ಯಂತ ವಿವಿಧ ಭಾಗಗಳಲ್ಲಿ ತಯಾರಾದ ನೂರು ಮೇಡ್ ಇನ್ ಇಂಡಿಯಾ ಕೃಷಿ ಡ್ರೋನ್‍ಗಳಿಗೆ ಫೆಬ್ರವರಿ ತಿಂಗಳಲ್ಲಿ ಚಾಲನೆ ನೀಡಿದರು. ಈ ಡ್ರೋನ್‍ಗಳು ವಿವಿಧ ಕಾರ್ಯಾಚರಣೆಗಳಲ್ಲಿ ಬಳಕೆಯಾಗಲಿವೆ.

ಡ್ರೋನ್ ಬ್ಲಿಟ್ಜ್ ಭಾರತದಲ್ಲಿ ನಡೆಯುವ, ಅತಿದೊಡ್ಡ ಕೃಷಿ ಡ್ರೋನ್ ಪ್ರದರ್ಶನ ಕಾರ್ಯಕ್ರಮವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ನೂತನ ತಂತ್ರಜ್ಞಾನಗಳು ಭಾರತದ ಕೃಷಿಕರಿಗೆ ಮತ್ತು ಯುವಜನತೆಗೆ ಜಾಗತಿಕ ಗುಣಮಟ್ಟದ ಅವಕಾಶಗಳಿಗೆ ಹಾದಿ ಮಾಡಿಕೊಡಲಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. “ಇದು 21ನೇ ಶತಮಾನದಲ್ಲಿ ನೂತನ ಮತ್ತು ಆಧುನಿಕ ಕೃಷಿ ತಂತ್ರಜ್ಞಾನದ ದಿಕ್ಕಿನಲ್ಲಿ ಒಂದು ಹೊಸ ಅಧ್ಯಾಯವಾಗಿದೆ. ಈ ಯೋಜನೆ ಕೇವಲ ಡ್ರೋನ್ ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ಮಾತ್ರ ಒಂದು ಮೈಲುಗಲ್ಲಾಗಿರದೆ, ಇದು ಅಸಂಖ್ಯಾತ ನೂತನ ಸಾಧ್ಯತೆಗಳಿಗೆ ಆಗಸವಾಗಿ ಮೂಡಲಿದೆ” ಎಂದು ಪ್ರಧಾನಿ ಈ ಬೃಹತ್ ಡ್ರೋನ್ ಲೋಕಾರ್ಪಣಾ ಸಮಾರಂಭದ ಬಳಿಕ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದರು.

2022-23ರ ಕೇಂದ್ರ ಬಜೆಟ್ ಸಹ ಕಿಸಾನ್ ಡ್ರೋನ್‍ ಯೋಜನೆಗಾಗಿ ವಿಶೇಷ ಆದ್ಯತೆಯನ್ನು ಘೋಷಿಸಿತು. ಈ ಬಜೆಟ್ ಅತ್ಯಾಧುನಿಕ ರೈತ ಉಪಯೋಗಿ ಸೇವೆಗಳ ಅಭಿವೃದ್ಧಿಗಾಗಿ ಸರ್ಕಾರಿ ಮತ್ತು ಖಾಸಗಿ ಸಹಯೋಗವನ್ನು ಏರ್ಪಡಿಸುವ ಉದ್ದೇಶವನ್ನೂ ವ್ಯಕ್ತಪಡಿಸಿತ್ತು.
 

click me!