ಬೆಂಗಳೂರಿನ IISc ವಿಜ್ಞಾನಿಗಳ ಕ್ರಾಂತಿಕಾರಿ ಆವಿಷ್ಕಾರ!; ಬಾಯಿ ಕ್ಯಾನ್ಸರ್ ನಿಯಂತ್ರಣಕ್ಕೆ ಅಲ್ಟ್ರಾಸೌಂಡ್ ರಾಮಬಾಣ

Published : Jul 03, 2026, 11:37 AM IST
IISC Bengaluru

ಸಾರಾಂಶ

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (IISc) ವಿಜ್ಞಾನಿಗಳು ಬಾಯಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮಹತ್ವದ ಪ್ರಗತಿ ಸಾಧಿಸಿದ್ದಾರೆ. ಅಲ್ಟ್ರಾಸೌಂಡ್ ತರಂಗಗಳನ್ನು ಬಳಸಿ, ಆರೋಗ್ಯವಂತ ಕೋಶಗಳಿಗೆ ಹಾನಿಯಾಗದಂತೆ ಕೇವಲ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುವ ಹೊಸ ತಂತ್ರವನ್ನು ಅವರು ಕಂಡುಹಿಡಿದಿದ್ದಾರೆ. 

ಬೆಂಗಳೂರು (ಜು.3): ಭಾರತದಲ್ಲಿ ಅತ್ಯಂತ ವೇಗವಾಗಿ ಹರಡುತ್ತಿರುವ ಭೀಕರ ಕಾಯಿಲೆ ಬಾಯಿ ಕ್ಯಾನ್ಸರ್ (Oral Cancer) ಚಿಕಿತ್ಸೆಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (IISc) ಸಂಶೋಧಕರು ಐತಿಹಾಸಿಕ ಮೈಲಿಗಲ್ಲು ಸಾಧಿಸಿದ್ದಾರೆ. ಕಡಿಮೆ ಆವರ್ತನದ ಅಲ್ಟ್ರಾಸೌಂಡ್ (Low-frequency ultrasound) ತರಂಗಗಳನ್ನು ಬಳಸಿಕೊಂಡು, ಬಾಯಿಯೊಳಗಿನ ಆರೋಗ್ಯವಂತ ಕೋಶಗಳಿಗೆ ಯಾವುದೇ ಹಾನಿ ಮಾಡದಂತೆ ಕೇವಲ ಕ್ಯಾನ್ಸರ್ ಪೀಡಿತ ಕೋಶಗಳನ್ನು ಮಾತ್ರ ಆಯ್ದು ನಾಶಪಡಿಸಬಹುದು ಎಂಬುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಈ ಆವಿಷ್ಕಾರವು ಭವಿಷ್ಯದಲ್ಲಿ ಅತ್ಯಂತ ಕಡಿಮೆ ನೋವಿನ ಹಾಗೂ ಅಡ್ಡಪರಿಣಾಮಗಳಿಲ್ಲದ ಕ್ರಾಂತಿಕಾರಿ ಚಿಕಿತ್ಸಾ ಪದ್ಧತಿಗೆ ದಾರಿ ಮಾಡಿಕೊಡಲಿದೆ.

ಭಾರತದಲ್ಲಿ ತಂಬಾಕು, ಅಡಿಕೆ ಮತ್ತು ಗುಟ್ಕಾಗಳ ವ್ಯಾಪಕ ಬಳಕೆಯಿಂದಾಗಿ ಬಾಯಿ ಕ್ಯಾನ್ಸರ್ ಸಾರ್ವಜನಿಕ ಆರೋಗ್ಯಕ್ಕೆ ಸವಾಲಾಗಿ ಪರಿಣಮಿಸಿದೆ. ಪ್ರಸ್ತುತ ಇದಕ್ಕೆ ಲಭ್ಯವಿರುವ ಶಸ್ತ್ರಚಿಕಿತ್ಸೆ (Surgery), ಕೀಮೋಥೆರಪಿ (Chemotherapy) ಮತ್ತು ರೇಡಿಯೋಥೆರಪಿಯಂತಹ (Radiotherapy) ಸಾಂಪ್ರದಾಯಿಕ ಚಿಕಿತ್ಸೆಗಳು ಕ್ಯಾನ್ಸರ್ ಕೋಶಗಳ ಜೊತೆಗೆ ಆರೋಗ್ಯವಂತ ಅಂಗಾಂಶಗಳನ್ನೂ ನಾಶಪಡಿಸುತ್ತವೆ. ಇದರಿಂದಾಗಿ ರೋಗಿಗಳಲ್ಲಿ ಅಡ್ಡಪರಿಣಾಮಗಳು ಉಂಟಾಗುತ್ತವೆ.

ಇದಕ್ಕೆ ಪರಿಹಾರ ಹುಡುಕಲು ಹೊರಟ IISc ಸಂಶೋಧಕರು, ಬೆಂಗಳೂರಿನ ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (MS Ramaiah Medical College) ವೈದ್ಯರೊಂದಿಗೆ ಕೈಜೋಡಿಸಿ ನೇರವಾಗಿ ರೋಗಿಗಳಿಂದ ಪಡೆದ ಬಾಯಿಯ ಕ್ಯಾನ್ಸರ್‌ ಗೆಡ್ಡೆಯ (Tumour) ಮಾದರಿಗಳ ಮೇಲೆ ಕಡಿಮೆ ಆವರ್ತನದ ಅಲ್ಟ್ರಾಸೌಂಡ್ ಪ್ರಯೋಗ ನಡೆಸಿದ್ದಾರೆ. ಪ್ರಯೋಗಾಲಯದಲ್ಲಿ ಕೃತಕವಾಗಿ ಬೆಳೆಸಿದ ಕೋಶಗಳಿಗಿಂತ ನೇರವಾಗಿ ರೋಗಿಗಳಿಂದ ಪಡೆದ ಮಾದರಿಗಳನ್ನು ಬಳಸಿದ್ದರಿಂದ, ಭಾರತೀಯ ರೋಗಿಗಳಲ್ಲಿ ಕಂಡುಬರುವ ಕ್ಯಾನ್ಸರ್‌ನ ನೈಜ ವೈವಿಧ್ಯತೆಯನ್ನು ನಿಖರವಾಗಿ ಅರ್ಥಮಾಡಿಕೊಳ್ಳಲು ತಂಡಕ್ಕೆ ಸಾಧ್ಯವಾಗಿದೆ.

ಕ್ಯಾನ್ಸರ್ ಕೋಶಗಳ ಯಾಂತ್ರಿಕ ದೌರ್ಬಲ್ಯವೇ ಇವರಿಗೆ ಅಸ್ತ್ರ

ಅಲ್ಟ್ರಾಸೌಂಡ್ ತರಂಗಗಳು ಸೃಷ್ಟಿಸುವ ಸಾಧಾರಣ ಯಾಂತ್ರಿಕ ಒತ್ತಡಕ್ಕೆ (Mechanical Forces) ಬಾಯಿ ಕ್ಯಾನ್ಸರ್ ಕೋಶಗಳು ಅತಿ ಬೇಗನೆ ಬಲಿಯಾಗುತ್ತವೆ ಎಂಬುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. "ಸಾಮಾನ್ಯ ಆರೋಗ್ಯವಂತ ಜೀವಕೋಶಗಳು ಯಾಂತ್ರಿಕ ಒತ್ತಡವನ್ನು ತಡೆದುಕೊಳ್ಳುವ ಶಕ್ತಿ ಹೊಂದಿರುತ್ತವೆ. ಆದರೆ ಕ್ಯಾನ್ಸರ್ ಕೋಶಗಳಲ್ಲಿ ಈ ಒತ್ತಡವನ್ನು ತಡೆಯುವ 'ಟ್ರೋಪೋಮಯೋಸಿನ್ 2.1' (Tropomyosin 2.1) ಎಂಬ ಪ್ರೋಟೀನ್ ಅಂಶದ ಕೊರತೆ ಇರುತ್ತದೆ. ಹೀಗಾಗಿ ಅಲ್ಟ್ರಾಸೌಂಡ್ ತರಂಗಗಳಿಗೆ ಒಡ್ಡಿದಾಗ ಕ್ಯಾನ್ಸರ್ ಕೋಶಗಳು ಮಾತ್ರ ಆಯ್ದು ಸಾಯುತ್ತವೆ (Selective cell death). ಆದರೆ ಆರೋಗ್ಯವಂತ ಬಾಯಿಯ ಎಪಿತೀಲಿಯಲ್ ಕೋಶಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ," ಎಂದು ಐಐಎಸ್‌ಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಐಐಎಸ್‌ಸಿಯ ಬಯೋಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಮುಖ್ಯ ಸಂಶೋಧಕ ಅಜಯ್ ತಿಜೋರೆ, "ಯಾವುದೇ ರಾಸಾಯನಿಕ ಮದ್ದು ಅಥವಾ ತೀವ್ರವಾದ ಶಾಖವನ್ನು ಬಳಸದೆ, ಕೇವಲ ಧ್ವನಿ ತರಂಗಗಳ ಸಾಧಾರಣ ಯಾಂತ್ರಿಕ ಒತ್ತಡದ ಮೂಲಕ ಕ್ಯಾನ್ಸರ್ ಕೋಶಗಳನ್ನು ಚೇತರಿಸಿಕೊಳ್ಳಲಾಗದಷ್ಟು ಮಟ್ಟಿಗೆ ಹಾನಿ ಮಾಡುವುದು ಈ ಸಂಶೋಧನೆಯ ವಿಶಿಷ್ಟತೆಯಾಗಿದೆ," ಎಂದು ವಿವರಿಸಿದ್ದಾರೆ.

ಕ್ಯಾನ್ಸರ್ ಹರಡುವಿಕೆ ತಡೆ ಹಾಗೂ ರಕ್ಷಣಾ ಕವಚಕ್ಕೆ ಲಗ್ಗೆ

ಈ ಅಲ್ಟ್ರಾಸೌಂಡ್ ಚಿಕಿತ್ಸೆಯಿಂದ ಕ್ಯಾನ್ಸರ್ ಕೋಶಗಳು ಪಕ್ಕದ ಅಂಗಾಂಶಗಳಿಗೆ ಹರಡುವ (Migration and Invasion) ಸಾಮರ್ಥ್ಯವು ಗಣನೀಯವಾಗಿ ಕಡಿಮೆಯಾಗುತ್ತದೆ ಎಂಬುದನ್ನು ಅಧ್ಯಯನವು ದೃಢಪಡಿಸಿದೆ. ಇದಲ್ಲದೆ, ಕ್ಯಾನ್ಸರ್ ಗೆಡ್ಡೆಗಳ ಸುತ್ತಲೂ ಇರುವ ದಟ್ಟವಾದ ರಕ್ಷಣಾ ಕವಚವನ್ನು (Protective Barrier) ಭೇದಿಸಲು ಅಲ್ಟ್ರಾಸೌಂಡ್ ನೆರವಾಗುತ್ತದೆ. ಸಾಮಾನ್ಯವಾಗಿ ಈ ರಕ್ಷಣಾ ಕವಚದ ಕಾರಣದಿಂದಾಗಿಯೇ ಪ್ರಸ್ತುತ ನೀಡಲಾಗುವ ಔಷಧಗಳು ಮತ್ತು ದೇಹದ ರೋಗನಿರೋಧಕ ಕಣಗಳು ಕ್ಯಾನ್ಸರ್ ಗೆಡ್ಡೆಯನ್ನು ತಲುಪಲು ಸಾಧ್ಯವಾಗದೆ ಚಿಕಿತ್ಸೆ ವಿಫಲವಾಗುತ್ತಿತ್ತು. ಈಗ ಅಲ್ಟ್ರಾಸೌಂಡ್ ಮೂಲಕ ಆ ಕವಚವನ್ನು ಮುರಿಯಬಹುದಾಗಿದೆ.

"ವಿವಿಧ ಹಂತಗಳಲ್ಲಿದ್ದ (Different Cancer Stages) ಬೇರೆ ಬೇರೆ ರೋಗಿಗಳ ಕ್ಯಾನ್ಸರ್ ಕೋಶಗಳು ಅಲ್ಟ್ರಾಸೌಂಡ್ ತರಂಗಗಳಿಗೆ ಒಂದೇ ಮಾದರಿಯಲ್ಲಿ ಅತ್ಯಂತ ವೇಗವಾಗಿ ಸ್ಪಂದಿಸಿ ನಾಶವಾದವು. ಆದರೆ ಸಾಮಾನ್ಯ ಕೋಶಗಳಿಗೆ ಯಾವುದೇ ತೊಂದರೆಯಾಗಲಿಲ್ಲ. ಈ ಸ್ಥಿರತೆಯು ನಮಗೆ ಅತ್ಯಂತ ಆಶ್ಚರ್ಯ ಮೂಡಿಸಿದೆ," ಎಂದು ಸಂಶೋಧನೆಯ ಪ್ರಮುಖ ಲೇಖಕಿ ಹಾಗೂ ಐಐಎಸ್‌ಸಿಯ ಪಿಎಚ್‌ಡಿ ವಿದ್ಯಾರ್ಥಿನಿ ರಶ್ಮಿತಾ ಲುಹಾ ತಿಳಿಸಿದ್ದಾರೆ.

ಸ್ತನ ಮತ್ತು ಚರ್ಮದ ಕ್ಯಾನ್ಸರ್‌ಗೂ ದಿವ್ಯೌಷಧವಾಗುವ ಭರವಸೆ

ವೈದ್ಯಕೀಯ ರಂಗದಲ್ಲಿ ಅಲ್ಟ್ರಾಸೌಂಡ್ ಈಗಾಗಲೇ ಸುರಕ್ಷಿತ ಮತ್ತು ದೇಹಕ್ಕೆ ಯಾವುದೇ ಗಾಯ ಮಾಡದ (Non-invasive) ತಂತ್ರಜ್ಞಾನವಾಗಿ ವ್ಯಾಪಕ ಬಳಕೆಯಲ್ಲಿದೆ. ಹೀಗಾಗಿ ಈ ಹೊಸ ಸಂಶೋಧನೆಯು ಅತ್ಯಂತ ಸುರಕ್ಷಿತ ಮತ್ತು ನೇರ ಗುರಿ ಹೊಂದಿದ ಚಿಕಿತ್ಸಾ ಪದ್ಧತಿಗಳಿಗೆ ದಾರಿ ಮಾಡಿಕೊಡಲಿದೆ. ಪ್ರಸ್ತುತ ಸಂಶೋಧಕರು ಇದನ್ನು ಮುಂದಿನ ಹಂತದ ಸುಧಾರಿತ ಪ್ರಿಕ್ರಿನಿಕಲ್ ಮಾದರಿಗಳ (Preclinical Models) ಮೇಲೆ ಪರೀಕ್ಷಿಸಲು ಯೋಜಿಸುತ್ತಿದ್ದಾರೆ. ಈ ಚಿಕಿತ್ಸೆಯು ಕೇವಲ ಬಾಯಿ ಕ್ಯಾನ್ಸರ್ ಮಾತ್ರವಲ್ಲದೆ, ಭವಿಷ್ಯದಲ್ಲಿ ದೇಹದ ಮೇಲ್ಭಾಗಕ್ಕೆ ಸುಲಭವಾಗಿ ಕೈಗೆಟುಕುವ ಸ್ತನ ಕ್ಯಾನ್ಸರ್ (Breast Cancer) ಮತ್ತು ಚರ್ಮದ ಕ್ಯಾನ್ಸರ್ (Skin Cancer) ಚಿಕಿತ್ಸೆಗಳಿಗೂ ಹೊಸ ಆಶಾಕಿರಣ ಮೂಡಿಸಿದೆ.

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಮಳೆಗಾಲದಲ್ಲಿ ಈ ಕಪ್ಪೆಗಳು ಬಣ್ಣ ಬದಲಿಸೋದ್ಯಾಕೆ? ಕಪ್ಪೆಗಳ ಚಿನ್ನದ ಬಣ್ಣದ ರಹಸ್ಯ
ನೀಲಿ ಅಲೆ ಅಂದ್ರೆ ಇಷ್ಟನಾ? ಪದೇ ಪದೇ ಬೀಚ್‌ಗೆ ಹೋಗೋರ ಬಗ್ಗೆ ಮನಶಾಸ್ತ್ರ ಏನು ಹೇಳುತ್ತೆ ಗೊತ್ತಾ?