ಎಚ್‌ಎಎಲ್‌ ಸ್ಥಾಪನಾ ದಿನ: ಭಾರತದ ಏರೋಸ್ಪೇಸ್‌ ಸಾಧನೆಯ 86 ವರ್ಷಗಳ ಸಂಭ್ರಮಾಚರಣೆ

Published : Dec 22, 2025, 09:11 PM IST
HAL Foundation Day

ಸಾರಾಂಶ

‌ಎಚ್‌ಎಎಲ್‌ ಸ್ಥಾಪನಾ ದಿನ: ಭಾರತದ ಏರೋಸ್ಪೇಸ್‌ ಸಾಧನೆಯ 86 ವರ್ಷಗಳ ಸಂಭ್ರಮಾಚರಣೆ, ಭಾರತಕ್ಕೆ ರೆಕ್ಕೆ ನೀಡಿದ ಯುವ ಮಹಾರಾಜರ ದೂರದೃಷ್ಟಿ ಮತ್ತು ದಿಟ್ಟತನ, ಜಯಚಾಮರಾಜೇಂದ್ರ ಒಡೆಯರ್‌ ತನ್ನ 21ನೇ ವಯಸ್ಸಿಗೆ ಭಾರತದ ಏರೋಸ್ಪೇಸ್‌ ಪಯಣಕ್ಕೆ ನಾಂದಿ ಹಾಡುವಂತಹ ದಿಟ್ಟ ನಿರ್ಧಾರವೊಂದನ್ನು ಕೈಗೊಂಡರು.

ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ನಾಳೆ, ಡಿಸೆಂಬರ್‌ 23, 2025ರಂದು ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್) ತನ್ನ 86ನೇ ಸ್ಥಾಪನಾ ದಿನವನ್ನು ಆಚರಿಸುತ್ತಿದೆ. ಎಚ್‌ಎಎಲ್‌ 2024ರ ಅಕ್ಟೋಬರ್‌ ತಿಂಗಳಲ್ಲಿ ಗೌರವಯುತ ʼಮಹಾರತ್ನʼ ಸ್ಥಾನ ಸಂಪಾದಿಸಿದ ಬಳಿಕ ಆಚರಿಸುತ್ತಿರುವ ಎರಡನೇ ಸ್ಥಾಪನಾ ದಿನಾಚರಣೆ ಇದಾಗಿದ್ದು, ಇನ್ನಷ್ಟು ಮಹತ್ವ ಪಡೆದುಕೊಂಡಿದೆ. ಈ ಬಾರಿಯ ಎಚ್‌ಎಎಲ್‌ ಸ್ಥಾಪನಾ ದಿನಾಚರಣೆಗೆ ಮೈಸೂರು ರಾಜವಂಶಸ್ಥರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ಭಾರತದ ಏರೋಸ್ಪೇಸ್‌ ಉದ್ಯಮಕ್ಕೆ ಮೈಸೂರು ರಾಜ ವಂಶ ಅಪಾರ ಕೊಡುಗೆ ನೀಡಿರುವುದರಿಂದ, ಈ ಬಾರಿ ಯದುವೀರ್‌ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವುದು ಸೂಕ್ತ ಕ್ರಮವಾಗಿದೆ.

ಎಚ್‌ಎಎಲ್‌ ಏಕೆ ಸ್ಥಾಪನಾ ದಿನವನ್ನು ಆಚರಿಸುತ್ತದೆ?

ಎಚ್‌ಎಎಲ್‌ ಪ್ರತಿವರ್ಷವೂ ಡಿಸೆಂಬರ್‌ 23ರಂದು 1940ರಲ್ಲಿ ಕಂಪನಿಯ ಸ್ಥಾಪನೆಯಾದುದನ್ನು ಸ್ಮರಿಸಲು, ಮತ್ತು ತನ್ನ ಸ್ಥಾಪಕರಾದ ಕನಸುಗಾರ ಉದ್ಯಮಿ ವಾಲ್‌ಚಂದ್‌ ಹೀರಾಚಂದ್‌ ಮತ್ತು ದೂರದೃಷ್ಟಿಯ ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್‌ ಅವರಿಗೆ ಗೌರವ ಸಲ್ಲಿಸಲು ಸ್ಥಾಪನಾ ದಿನವನ್ನು ಆಚರಿಸುತ್ತದೆ. ಈ ದಿನ ಕೇವಲ ಒಂದು ಆಚರಣೆ ಮಾತ್ರವಲ್ಲದೆ, ಎಚ್‌ಎಎಲ್‌ ಸಾಗಿಬಂದ ಹಾದಿಯನ್ನು ಸ್ಮರಿಸಲು, ಎಚ್‌ಎಎಲ್‌ ಉದ್ಯೋಗಿಗಳ ಕೊಡುಗೆಗಳನ್ನು ಸ್ಮರಿಸಲು, ಭಾರತದ ಏರೋಸ್ಪೇಸ್‌ ಭವಿಷ್ಯಕ್ಕೆ ಮುಂದಿನ ಹಾದಿಯನ್ನು ರೂಪಿಸಲು ನಕಾಶೆ ರೂಪಿಸುತ್ತದೆ. ಸ್ಥಾಪನಾ ದಿನಾಚರಣೆ ಎಚ್‌ಎಎಲ್‌ ಹಿಂದಿನ ಮುಖ್ಯಸ್ಥರು, ವ್ಯವಸ್ಥಾಪಕ ನಿರ್ದೇಶಕರು, ಸಿಬ್ಬಂದಿಗಳು, ಮತ್ತು ಪಾಲುದಾರರನ್ನು ಒಂದೆಡೆ ಸೇರಿಸಿ, ಅವರ ಅನುಭವಗಳನ್ನು ಹಂಚಿಕೊಳ್ಳಲು, ಸವಾಲುಗಳನ್ನು ಚರ್ಚಿಸಲು, ಭಾರತದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಅವರ ಬದ್ಧತೆಯನ್ನು ಪುನರುಚ್ಚರಿಸಲು ವೇದಿಕೆ ಒದಗಿಸುತ್ತದೆ.

ಕಳೆದ ವರ್ಷ, ಎಚ್‌ಎಎಲ್‌ 85ನೇ ಸ್ಥಾಪನಾ ದಿನಾಚರಣೆಯಂದು ʼಫ್ಲೈಟ್ಸ್‌ ಆಫ್‌ ಇನ್ಸ್ಪಿರೇಶನ್‌: ಎಚ್‌ಎಎಲ್ಸ್‌ ಮಹಾರತ್ನ ಸ್ಟೋರಿʼ ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಗಿತ್ತು. ಈ ಪುಸ್ತಕ ಸಂಸ್ಥೆ ಭಾರತದ ಅತ್ಯಂತ ಮೌಲ್ಯಯುತ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿ ಬೆಳೆದು ಬಂದ ಅಸಾಧಾರಣ ಪ್ರಗತಿಯನ್ನು ಸಮರ್ಥವಾಗಿ ದಾಖಲಿಸಿತ್ತು.

ಮರೆತಿರುವ ಮಹಾಗಾಥೆ: 21 ವರ್ಷದ ಯುವ ಮಹಾರಾಜರ ವೈಮಾನಿಕ ಕನಸು

ಎಚ್‌ಎಎಲ್‌ ಇಂದು ಸಾಧಿಸಿರುವ ಮಹತ್ವದ ಯಶಸ್ಸಿನ ಹಿಂದೆ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಆರಂಭಗೊಂಡ ಒಂದು ವೈಮಾನಿಕ ದೂರದೃಷ್ಟಿಯ ಮಹತ್ವದ ಕಥೆಯೇ ಇದೆ. ಸೆಪ್ಟೆಂಬರ್‌ 1940ರಲ್ಲಿ, ಸಮಸ್ತ ಜಗತ್ತು ಯುದ್ಧದ ದಳ್ಳುರಿಗೆ ಸಿಲುಕಿ ನಲುಗುತ್ತಿತ್ತು. ಆ ಸಂದರ್ಭದಲ್ಲಿ, ಜಯಚಾಮರಾಜೇಂದ್ರ ಒಡೆಯರ್‌ ಎನ್ನುವ ಯುವರಾಜರೊಬ್ಬರು ಕೇವಲ ತನ್ನ 21ನೇ ವಯಸ್ಸಿಗೆ ಮೈಸೂರು ಸಂಸ್ಥಾನದ ಮಹಾರಾಜರಾಗಿ, ಸಿಂಹಾಸನ ಏರಿದ್ದರು. ಪಟ್ಟಕ್ಕೆ ಬಂದ ಕೆಲವೇ ತಿಂಗಳಲ್ಲಿ, ಯುವ ಮಹಾರಾಜರು ಭಾರತದ ಏರೋಸ್ಪೇಸ್‌ ಪಯಣಕ್ಕೆ ನಾಂದಿ ಹಾಡುವಂತಹ ದಿಟ್ಟ ನಿರ್ಧಾರವೊಂದನ್ನು ಕೈಗೊಂಡರು.

ಅಮೆರಿಕನ್ ಉದ್ಯಮಿ ವಿಲಿಯಂ ಡಗ್ಲಾಸ್ ಪಾವ್ಲೇ ಎಂಬಾತ ಚೀನಾದಲ್ಲಿ ತನ್ನ ಸೆಂಟ್ರಲ್ ಏರ್‌ಕ್ರಾಫ್ಟ್ ಮ್ಯಾನುಫಾಕ್ಚರಿಂಗ್ ಕಂಪನಿಯ (CAMCO) ಮೂಲಕ ವಿಮಾನ ಉತ್ಪಾದನೆ ನಡೆಸುತ್ತಿದ್ದರು. ಆದರೆ, ಮಹಾಯುದ್ಧದಲ್ಲಿ ಜಪಾನ್ ಚೀನಾ ಮೇಲೆ ದಾಳಿ ನಡೆಸಲು ಆರಂಭಿಸಿದ್ದರಿಂದ, ಪಾವ್ಲೇ ತನ್ನ ಉದ್ಯಮಕ್ಕೆ ಬೇರೆ ನೆಲೆ ಹುಡುಕುವ ಅನಿವಾರ್ಯತೆ ಎದುರಾಯಿತು. ಈ ಸಮಯದಲ್ಲಿ, ಭಾರತೀಯ ಉದ್ಯಮಿ ವಾಲ್‌ಚಂದ್ ಹೀರಾಚಂದ್ ಅವರಿಗೆ ಇದರಲ್ಲಿ ಭಾರತದ ಪ್ರಥಮ ಮಹತ್ವದ ವಿಮಾನ ಉತ್ಪಾದನಾ ಘಟಕ ಆರಂಭಿಸುವ ಅವಕಾಶ ಕಾಣಿಸಿತು. ಆದರೆ, ವಾಲ್‌ಚಂದ್ ಇದಕ್ಕಾಗಿ ಬರೋಡಾ, ಗ್ವಾಲಿಯರ್, ಭಾವನಗರ್ ಸೇರಿದಂತೆ ಹಲವು ರಾಜರನ್ನು ಭೇಟಿಯಾಗಿ, ಬೆಂಬಲ ಕೋರಿದಾಗ ಅವರು ಇಂತಹ ಬೃಹತ್ ಉದ್ಯಮದ ಅಪಾಯವನ್ನು ಕೈಗೆತ್ತಿಕೊಳ್ಳಲು ನಿರಾಕರಿಸಿದರು.

ವಾಲ್‌ಚಂದ್ ಮತ್ತು ಪಾವ್ಲೇ ಅಕ್ಟೋಬರ್ 1940ರಲ್ಲಿ ಬೆಂಗಳೂರಿಗೆ ಬಂದು, ಮೈಸೂರಿನ ಯುವ ಮಹಾರಾಜರ ಬಳಿ ಯೋಜನೆಯ ಪ್ರಸ್ತಾವನೆಯನ್ನು ಸಲ್ಲಿಸಿದಾಗ, ಒಂದು ಅನಿರೀಕ್ಷಿತ ಬೆಳವಣಿಗೆ ನಡೆಯಿತು. ಇತರ ಮಹಾರಾಜರು ಈ ಬೃಹತ್ ಯೋಜನೆ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದರೆ, ಜಯಚಾಮರಾಜೇಂದ್ರ ಒಡೆಯರ್ ಭಾರತದ ಭವಿಷ್ಯಕ್ಕೆ ವೈಮಾನಿಕ ಕ್ಷೇತ್ರ ಅತ್ಯಂತ ಮುಖ್ಯವಾಗಲಿದೆ ಎಂದು ತಕ್ಷಣವೇ ಮನಗಂಡರು. ಅವರು ಕೈಗೊಂಡ ನಿರ್ಧಾರ ಕ್ಷಿಪ್ರ ಮತ್ತು ನಿರ್ಣಾಯಕವಾಗಿತ್ತು.

ಭೇಟಿಯ ಕೇವಲ 72 ಗಂಟೆಗಳ ಒಳಗಾಗಿ, ಮೈಸೂರು ಸರ್ಕಾರ ಕಾರ್ಖಾನೆಗೆ 700 ಎಕರೆ ಭೂಮಿಯನ್ನು ಸಂಪೂರ್ಣ ಉಚಿತವಾಗಿ ಒದಗಿಸಿ, ಷೇರಿನ ರೂಪದಲ್ಲಿ 25 ಲಕ್ಷ ರೂಪಾಯಿ ಹೂಡಿಕೆ ನಡೆಸಿ, ಸಂಪೂರ್ಣ ಬೆಂಬಲ ಘೋಷಿಸಿತು. ಡಿಸೆಂಬರ್ 23, 1940ರಂದು ಹಿಂದೂಸ್ತಾನ್ ಏರ್‌ಕ್ರಾಫ್ಟ್ ಕಂಪನಿ ಅಧಿಕೃತವಾಗಿ ನೋಂದಾಯಿತವಾಯಿತು. ಅದರ ಮರುದಿನವೇ ಕೆಲಸವೂ ಆರಂಭಗೊಂಡು, ಜನವರಿ 1941ರ ಮಧ್ಯಭಾಗದ ವೇಳೆಗಾಗಲೇ ಮೊದಲ ಕಟ್ಟಡ ಮತ್ತು ರನ್‌ವೇ ಸಿದ್ಧಗೊಂಡಿದ್ದವು. ಆಗಸ್ಟ್ 29, 1941ರಂದು, ಕಂಪನಿ ಆರಂಭಗೊಂಡ ಒಂದು ವರ್ಷದ ಒಳಗೇ ಕಂಪನಿ ತನ್ನ ಮೊದಲ ವಿಮಾನವಾದ ಹಾರ್ಲೋ ಟ್ರೈನರ್ ಅನ್ನು ಸರ್ಕಾರಕ್ಕೆ ಒದಗಿಸಿತ್ತು. ಈ ಮೂಲಕ ಭಾರತದ ವೈಮಾನಿಕ ಯಾತ್ರೆ ನಿಜಕ್ಕೂ ಆರಂಭಗೊಂಡಿತ್ತು.

ಮಹಾರಾಜರ ವೈಮಾನಿಕ ಕೊಡುಗೆಗಳು: ಎಚ್ಎಎಲ್ ಮೀರಿದ ಸಾಧನೆ

ವೈಮಾನಿಕ ಕ್ಷೇತ್ರಕ್ಕೆ ಜಯಚಾಮರಾಜೇಂದ್ರ ಒಡೆಯರ್ ಕೊಡುಗೆಗಳು ಕೇವಲ ಎಚ್ಎಎಲ್ ಸ್ಥಾಪನೆಗೆ ಸೀಮಿತವಾಗಿರಲಿಲ್ಲ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ, ಬ್ರಿಟಿಷ್ ಇಂಡಿಯನ್ ಸರ್ಕಾರಕ್ಕೆ ನೆರವಿನ ಅವಶ್ಯಕತೆ ಎದುರಾದಾಗ, ಮೈಸೂರು ಸರ್ಕಾರ 1 ಲಕ್ಷ ಪೌಂಡ್ ಹಣವನ್ನು ಒದಗಿಸಿ, ರಾಯಲ್ ಏರ್ ಫೋರ್ಸ್ ನಂ 129 ಸ್ಕ್ವಾಡ್ರನ್ ಸ್ಥಾಪನೆಗೆ ಕಾರಣವಾಯಿತು. ಈ ಸ್ಕ್ವಾಡ್ರನ್ 'ಮೈಸೂರು ಸ್ಕ್ವಾಡ್ರನ್' ಎಂದೇ ಪ್ರಸಿದ್ಧವಾಗಿತ್ತು. ಸೂಪರ್ ಮರೀನ್ ಸ್ಪಿಟ್‌ಫೈರ್ ವಿಮಾನಗಳನ್ನು ಚಲಾಯಿಸುತ್ತಿದ್ದ ಈ ಸ್ಕ್ವಾಡ್ರನ್, ಬ್ಯಾಟಲ್ ಆಫ್ ಬ್ರಿಟನ್ ಮತ್ತು ಇತರ ಪ್ರಮುಖ ಕಾರ್ಯಾಚರಣೆಗಳಲ್ಲಿ ಧೈರ್ಯದಿಂದ ಹೋರಾಡಿತು. ಈ ಸ್ಕ್ವಾಡ್ರನ್ ಮೈಸೂರಿನ ಪೌರಾಣಿಕ ಎರಡು ತಲೆಯ ಪಕ್ಷಿಯಾದ ಗಂಡಭೇರುಂಡವನ್ನು ತನ್ನ ಲಾಂಛನವಾಗಿ ಹೊಂದಿತ್ತು. ಅದರೊಡನೆ, 'ಐ ವಿಲ್ ಡಿಫೆಂಡ್ ದ ರೈಟ್' (ನಾನು ನ್ಯಾಯವನ್ನು ರಕ್ಷಿಸುತ್ತೇನೆ) ಎಂಬ ಧ್ಯೇಯ ವಾಕ್ಯವನ್ನು ಹೊಂದಿತ್ತು. ಮಹಾರಾಜರು ವೈಯಕ್ತಿಕವಾಗಿ ಸ್ಕ್ವಾಡ್ರನ್ನಿನ ಪ್ರತಿಯೊಬ್ಬ ಪೈಲಟ್‌ಗೂ ಗಂಡಭೇರುಂಡ ಬ್ಯಾಜ್ ನೀಡಿ, ಮೈಸೂರಿನ ಬೆಂಬಲವನ್ನು ಪ್ರದರ್ಶಿಸಿದ್ದರು.

1945ರಲ್ಲಿ ಎರಡನೇ ಮಹಾಯುದ್ಧ ಮುಗಿದ ಬಳಿಕ, ಬಹಳಷ್ಟು ಡಕೋಡಾ ಡಿಸಿ-3 ವಿಮಾನಗಳು ಲಭ್ಯವಾದವು. ಈ ವಿಮಾನಗಳು 'ವರ್ಕ್ ಹಾರ್ಸ್ ಆಫ್ ದ ಏರ್' ಎಂದೇ ಹೆಸರಾಗಿದ್ದವು. ಡಗ್ಲಾಸ್ ಏರ್‌ಕ್ರಾಫ್ಟ್ ಕಂಪನಿ ಹಿಂದೂಸ್ತಾನ್ ಏರ್‌ಕ್ರಾಫ್ಟ್ ಕಂಪನಿಗೆ ಈ ವಿಮಾನಗಳ ನಿರ್ವಹಣೆ, ಕೂಲಂಕಷ ಪರಿಶೀಲನೆ, ದುರಸ್ತಿ ನಡೆಸಲು ಪರವಾನಗಿ ನೀಡಿತು. 1946ರಲ್ಲಿ, ಸ್ವತಃ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರು ಈ ಡಕೋಟಾ ವಿಮಾನಗಳಲ್ಲಿ ಒಂದನ್ನು ಪಡೆದುಕೊಂಡರು. ಇದಕ್ಕೆ ಮೈಸೂರು ಡಕೋಟಾ ವಿಟಿ-ಎಎಕ್ಸ್ಎಕ್ಸ್ ಎಂದು ಹೆಸರಿಡಲಾಗಿತ್ತು. ಇದನ್ನು 21 ಆಸನಗಳ ಪ್ರಯಾಣಿಕ ವಿಮಾನವಾಗಿ ಪರಿವರ್ತಿಸಲಾಯಿತು. ಬಳಿಕ ಈ ವಿಮಾನ ಮಹಾರಾಜರ ಖಾಸಗಿ ವಿಮಾನವಾಗಿ ಬಳಿಕೆಯಾಯಿತು.

ಭಾರತದ ಏಕೀಕರಣ ನಡೆಸಿದ ಉಡುಗೊರೆ: ಸರ್ದಾರ್ ಪಟೇಲರ ನೆರವಿಗೆ ಬಂದ ಮೈಸೂರು ಡಕೋಟಾ

ಮೈಸೂರು ಮಹಾರಾಜರ ಖಾಸಗಿ ವಿಮಾನ ಭಾರತದ ಏಕೀಕರಣದಲ್ಲಿ ಬಹುದೊಡ್ಡ ಪಾತ್ರ ನಿರ್ವಹಿಸಿದೆ ಎನ್ನುವುದು ಬಹಳಷ್ಟು ಜನರಿಗೆ ತಿಳಿದಿರದ ವಿಚಾರ. ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರು ಸ್ವತಂತ್ರ ಭಾರತದ ಉಪ ಪ್ರಧಾನ ಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ತನ್ನ ಸ್ವಂತ ಡಕೋಟಾ ವಿಮಾನವನ್ನು ಭಾರತದ ಏಕೀಕರಣದ ಸಂದರ್ಭದಲ್ಲಿ ಬಳಸುವಂತೆ ಹಸ್ತಾಂತರಿಸಿದರು. 560ಕ್ಕೂ ಹೆಚ್ಚು ರಾಜ ಪ್ರಭುತ್ವದ ಪ್ರಾಂತ್ಯಗಳನ್ನು ಸ್ವತಂತ್ರ ಭಾರತದಲ್ಲಿ ವಿಲೀನಗೊಳಿಸುವ ಬಹುದೊಡ್ಡ ಜವಾಬ್ದಾರಿ ಹೊಂದಿದ್ದ ಸರ್ದಾರ್ ಪಟೇಲರು ಮೈಸೂರು ಡಕೋಟಾ ಮೂಲಕ ದೇಶದ ಉದ್ದಗಲಕ್ಕೂ ಸಂಚರಿಸಿದ್ದರು.

ಮಹಾರಾಜರ ವೈಯಕ್ತಿಕ ಪೈಲಟ್ ಆಗಿದ್ದ ಕ್ಯಾಪ್ಟನ್ ಸುಂದರಂ ಅವರು ಸರ್ದಾರ್ ಪಟೇಲರನ್ನು ಹಲವಾರು ಸಂದರ್ಭಗಳಲ್ಲಿ ವಿಮಾನದಲ್ಲಿ ಕರೆದೊಯ್ದು, ಬಳಿಕ ಸರ್ದಾರ್ ಪಟೇಲರ ಖಾಸಗಿ ಪೈಲಟ್ ಎಂಬ ರೀತಿಯಲ್ಲೇ ಹೆಚ್ಚು ಜನಪ್ರಿಯರಾದರು! ತನ್ನ ಸ್ವಂತ ವಿಮಾನವನ್ನೇ ರಾಷ್ಟ್ರೀಯ ಉದ್ದೇಶಕ್ಕೆ ಒದಗಿಸಿದ್ದು ಅವರು ತನ್ನ ಸ್ವಂತ ಹಿತಾಸಕ್ತಿಗಿಂತಲೂ ರಾಷ್ಟ್ರೀಯ ಐಕ್ಯತೆಗೆ ಹೆಚ್ಚಿನ ಆದ್ಯತೆ ನೀಡಿದ್ದಕ್ಕೆ ಸಾಕ್ಷಿಯಾಗಿತ್ತು.

ಡಿಸೆಂಬರ್ 28, 1948ರಂದು ಜಕ್ಕೂರಿನಲ್ಲಿ ಭಾರತದ ಮೊದಲ ವಿಮಾನ ಹಾರಾಟ ತರಬೇತಿ ಕೇಂದ್ರದ ಉದ್ಘಾಟನೆಗೆ ಬಂದಿದ್ದ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರೂ ಸಹ ಮೈಸೂರು ಡಕೋಟಾ ವಿಮಾನದಲ್ಲಿ ಹಾರಾಟ ನಡೆಸಿದ್ದರು. ಜಕ್ಕೂರಿನ ಈ ಭೂಮಿಯನ್ನು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರು ವಿಮಾನಯಾನ ತರಬೇತಿ ಶಾಲೆಯ ಸ್ಥಾಪನೆಗಾಗಿ ಉಡುಗೊರೆಯಾಗಿ ನೀಡಿದ್ದರು. ಈ ತರಬೇತಿ ಕೇಂದ್ರದ ಉದ್ಘಾಟನೆ ನಡೆಸಿದ ಬಳಿಕ, ಪ್ರಧಾನಿ ನೆಹರೂ ಮೈಸೂರಿಗೆ ವಿಮಾನದಲ್ಲಿ ತೆರಳಿ, ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರ್ ಆಫ್ ಸೈನ್ಸ್ ಪದವಿ ಸ್ವೀಕರಿಸಿದರು.

ದೇಶ ನಿರ್ಮಾಣದ ಮಹತ್ವದ ಸಂದರ್ಭದಲ್ಲಿ, ಮಹಾರಾಜರು ತನ್ನ ಸ್ವಂತ ಖಾಸಗಿ ವಿಮಾನವನ್ನೇ ರಾಷ್ಟ್ರೀಯ ನಾಯಕರ ಬಳಕೆಗೆ ಉದಾರವಾಗಿ ಒದಗಿಸಿದ್ದು ಅವರಿಗೆ ಅಪಾರ ಗೌರವ ತಂದುಕೊಟ್ಟಿತು. ಮಹಾರಾಜರ ನಡೆಯಿಂದಾಗಿ, ಇತರ ರಾಜಾಡಳಿತದ ಪ್ರಾಂತ್ಯಗಳೂ ಸಹ ಏಕೀಕರಣ ಪ್ರಕ್ರಿಯೆಗೆ ಸಹಕರಿಸಿ, ಭಾರತದ ಏಕೀಕರಣ ಹೆಚ್ಚು ಸುಗಮ ಮತ್ತು ಶಾಂತಿಯುತವಾಗಿ ನೆರವೇರುವಂತೆ ಮಾಡಿದವು.

ಎರಡನೇ ಮಹಾಯುದ್ಧದಲ್ಲಿ ಎಚ್ಎಎಲ್ ಪಾತ್ರ

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ, ಹಿಂದೂಸ್ತಾನ್ ಏರ್‌ಕ್ರಾಫ್ಟ್ ಕಂಪನಿ ಮಿತ್ರರಾಷ್ಟ್ರಗಳ ಏಷ್ಯಾ ಕಾರ್ಯಾಚರಣೆಗಳಲ್ಲಿ ಬಹುದೊಡ್ಡ ಪಾತ್ರ ನಿರ್ವಹಿಸಿತ್ತು. ಚೀನಾದಲ್ಲಿನ ಕ್ಯಾಂಕೋ ಕಾರ್ಖಾನೆಗೆ ಜಪಾನ್ ಬಾಂಬ್ ದಾಳಿ ನಡೆಸಿದಾಗ, ಕಾರ್ಖಾನೆಯ ಎಲ್ಲ ಯಂತ್ರೋಪಕರಣಗಳನ್ನು ಮೈಸೂರು ಸಾಮ್ರಾಜ್ಯಕ್ಕೆ ಸ್ಥಳಾಂತರಿಸಲಾಯಿತು. ಕಾರ್ಖಾನೆಯನ್ನು ಯುಎಸ್ ಆರ್ಮಿ ವಾಯು ಪಡೆಗಳು 1943ರಲ್ಲಿ 84ನೇ ಏರ್ ಡಿಪೋ ಆಗಿ ಪರಿವರ್ತಿಸಿದವು. ಆ ಮೂಲಕ ಇದು ಏಷ್ಯಾದ ಅತಿದೊಡ್ಡ ವಿಮಾನ ದುರಸ್ತಿ ಕೇಂದ್ರವಾಗಿ ಹೊರಹೊಮ್ಮಿತು.

ಕಂಪನಿ ಪಿಬಿವೈ ಕ್ಯಾಟಲೈನ್ಸ್ ಮತ್ತು ಇತರ ಹಲವಾರು ವಿಮಾನಗಳನ್ನು ಭಾರತ - ಬರ್ಮಾ ಥಿಯೇಟರ್‌ನಲ್ಲಿ ದುರಸ್ತಿಗೊಳಿಸಿತು. ಮೈಸೂರು ಸಾಮ್ರಾಜ್ಯ ಹೊಂದಿದ್ದ ವಿಮಾನ ದುರಸ್ತಿ ಕೇಂದ್ರದ ಪರಿಣಾಮವಾಗಿ, ಜಪಾನಿ ಪಡೆಗಳನ್ನು ಮಣಿಪುರ ಮತ್ತು ನಾಗಾಲ್ಯಾಂಡ್ ಪ್ರದೇಶಗಳಿಂದ ಮರಳಿ ಹಿಂದಕ್ಕೆ ಕಳುಹಿಸಲು ಅತ್ಯಂತ ಅನುಕೂಲವಾಯಿತು. ಈ ಘಟಕದ ಕಾರ್ಯತಂತ್ರದ ಮಹತ್ವ ಎಷ್ಟು ಹೆಚ್ಚಾಗಿತ್ತು ಎಂದರೆ, 1941ರಲ್ಲಿ ಬ್ರಿಟಿಷ್ ಇಂಡಿಯನ್ ಸರ್ಕಾರ ಸಹ ಮೈಸೂರು ಸರ್ಕಾರ ಒದಗಿಸಿದಷ್ಟೇ, ಅಂದರೆ, 25 ಲಕ್ಷ ರೂಪಾಯಿ ಹೂಡಿಕೆ ನಡೆಸಿ, ತಾನೂ ಸಂಸ್ಥೆಯಲ್ಲಿ ಪಾಲುದಾರನಾಯಿತು.

ಭಾರತದ ವೈಮಾನಿಕ ಮೂಲಭೂತ ವ್ಯವಸ್ಥೆಯ ನಿರ್ಮಾಣ

ವೈಮಾನಿಕ ಕ್ಷೇತ್ರದ ಕುರಿತು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ದೂರದೃಷ್ಟಿ ಕೇವಲ ವಿಮಾನ ಉತ್ಪಾದನೆಗೆ ಮಾತ್ರ ಸೀಮಿತವಾಗಿರಲಿಲ್ಲ. 1948ರಲ್ಲಿ ಅವರು ಬೆಂಗಳೂರಿನ ಜಕ್ಕೂರಿನಲ್ಲಿ ಭಾರತದ ಮೊದಲ ವಿಮಾನ ಹಾರಾಟ ತರಬೇತಿ ಕೇಂದ್ರವನ್ನು ಆರಂಭಿಸಿದರು. ಇದರ ಭೂಮಿಯನ್ನೂ ಮಹಾರಾಜರು ಸ್ವತಃ ವಿಮಾನಯಾನ ತರಬೇತಿಗಾಗಿ ನೀಡಿದ್ದರು. ಈ ಮಹತ್ವದ ವಿಮಾನ ಹಾರಾಟ ತರಬೇತಿ ಕೇಂದ್ರ ಆರಂಭಗೊಂಡಾಗ, ಮಹಾರಾಜರ ಖಾಸಗಿ ಪೈಲಟ್ ಆಗಿದ್ದ ಕ್ಯಾಪ್ಟನ್ ಸುಂದರಂ ಅವರು ಮೈಸೂರಿನ ನಾಗರಿಕ ವಿಮಾನಯಾನ ನಿರ್ದೇಶಕ ಸ್ಥಾನಕ್ಕೆ ಏರಿದರು.

ಪ್ರಧಾನಿ ನೆಹರೂ ಅವರು ಉದ್ಘಾಟಿಸಿದ ಈ ಹಾರಾಟ ಶಾಲೆ ಹಲವು ತಲೆಮಾರುಗಳ ಭಾರತೀಯ ಪೈಲಟ್‌ಗಳಿಗೆ ತರಬೇತಿ ನೀಡಿ, ಭಾರತದ ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಭದ್ರ ಬುನಾದಿ ನಿರ್ಮಿಸಿತು. ಭಾರತ ವೈಮಾನಿಕ ಕ್ಷೇತ್ರದಲ್ಲಿ ಸ್ವಾವಲಂಬಿ ಆಗಬೇಕಾದರೆ, ಅದಕ್ಕೆ ಕೇವಲ ವಿಮಾನ ಉತ್ಪಾದನಾ ಸಾಮರ್ಥ್ಯ ಮಾತ್ರವಲ್ಲದೆ, ನುರಿತ, ಕೌಶಲಯುತ ಪೈಲಟ್‌ಗಳನ್ನು ತರಬೇತುಗೊಳಿಸುವುದೂ ಅಷ್ಟೇ ಮುಖ್ಯ ಎನ್ನುವುದು ಮಹಾರಾಜರ ಅರಿವಿಗೆ ಬಂದಿತ್ತು.

ನೈಜ ದೇಶಭಕ್ತಿಯ ಮಹಾರಾಜ

ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ಮಹಾನ್ ವ್ಯಕ್ತಿತ್ವದ ನೈಜ ಆಯಾಮ 1947ರಲ್ಲಿ ಪ್ರಕಟಗೊಂಡಿತ್ತು. ಭಾರತ ಸ್ವಾತಂತ್ರ್ಯ ಗಳಿಸಿದ ಸಂದರ್ಭದಲ್ಲಿ, ಅವರು ನೂತನವಾಗಿ ನಿರ್ಮಾಣವಾದ ಸ್ವತಂತ್ರ ಭಾರತ ದೇಶದಲ್ಲಿ ತನ್ನ ರಾಜ್ಯವನ್ನು ಸ್ವ ಇಚ್ಛೆಯಿಂದ ವಿಲೀನಗೊಳಿಸಿದ ಮೊದಲ ಮಹಾರಾಜ ಎಂಬ ಹೆಗ್ಗಳಿಕೆಗೆ ಜಯಚಾಮರಾಜೇಂದ್ರ ಒಡೆಯರ್ ಪಾತ್ರರಾದರು. ಆ ಸಮಯದಲ್ಲಿ ಮೈಸೂರು ಸಾಮ್ರಾಜ್ಯ ಏಷ್ಯಾದ ಅತ್ಯಂತ ಶ್ರೀಮಂತ, ಅಭಿವೃದ್ಧಿ ಹೊಂದಿದ ಸಾಮ್ರಾಜ್ಯಗಳಲ್ಲಿ ಒಂದಾಗಿತ್ತು. ಇಷ್ಟಾದರೂ ಮಹಾರಾಜರು ಭಾರತದ ಒಳಿತಿಗಾಗಿ ತನ್ನ ಆಡಳಿತವನ್ನು ಬಿಟ್ಟುಕೊಡಲು ಸಿದ್ಧರಾಗಿದ್ದರು.

ಮಹಾರಾಜರ ಕನ್ನಡ ಉಪನ್ಯಾಸಕರು, ಬಳಿಕ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳೂ ಆದ ರಾಷ್ಟ್ರಕವಿ ಕುವೆಂಪು ಅವರು ಮಹಾರಾಜರ ಕೊಡುಗೆಯನ್ನು ಸೂಕ್ತವಾಗಿ ಬಣ್ಣಿಸಿದ್ದಾರೆ. "ಬಹಳಷ್ಟು ರಾಜರು ಸಿಂಹಾಸನವನ್ನು ಏರುವ ಮೂಲಕ ಮಹಾರಾಜ ಎನಿಸಿಕೊಂಡರು. ಆದರೆ, ಜಯಚಾಮರಾಜೇಂದ್ರ ಒಡೆಯರ್ ಸಿಂಹಾಸನವನ್ನು ತ್ಯಜಿಸುವ ಮೂಲಕವೇ ಶ್ರೇಷ್ಠ ಮಹಾರಾಜ ಎನಿಸಿಕೊಂಡರು" ಎಂದು ಕುವೆಂಪು ಶ್ಲಾಘಿಸಿದ್ದರು. ರಾಷ್ಟ್ರದ ಐಕ್ಯತೆಗಾಗಿ ತನ್ನ ಸ್ವಂತ ಅಧಿಕಾರವನ್ನೇ ಬಿಟ್ಟುಕೊಡಲು ಮುಂದಾಗಿದ್ದು, ಎಚ್ಎಎಲ್ ಸ್ಥಾಪನೆಗೆ ನೆರವಾಗಿದ್ದು, ಭಾರತದ ಏಕೀಕರಣಕ್ಕಾಗಿ ತನ್ನ ಸ್ವಂತ ಖಾಸಗಿ ವಿಮಾನವನ್ನೇ ನೀಡಿದ್ದು ಮಹಾರಾಜರ ಶ್ರೇಷ್ಠತೆಗೆ ಸಾಕ್ಷಿಯಾಗಿದ್ದವು.

ಕನಸಿನಿಂದ ವಾಸ್ತವದತ್ತ ಎಚ್ಎಎಲ್ ಸಾಗಿಬಂದ ಹಾದಿ

ಇಂದು ಎಚ್ಎಎಲ್ ಏಷ್ಯಾದ ಪ್ರಮುಖ ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿದ್ದು, ವಾರ್ಷಿಕವಾಗಿ 3 ಬಿಲಿಯನ್ ಡಾಲರ್‌ಗೂ ಹೆಚ್ಚಿನ ಮೌಲ್ಯದ ವಹಿವಾಟು ನಡೆಸುತ್ತದೆ. ಸಂಸ್ಥೆ ಇಂದು ಭಾರತದಾದ್ಯಂತ 11 ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು, 21 ಉತ್ಪಾದನಾ ವಿಭಾಗಗಳನ್ನು ಕಾರ್ಯಾಚರಿಸುತ್ತಿದೆ. 1940ರಲ್ಲಿ ತನ್ನ ಸಣ್ಣ ಆರಂಭದಿಂದ, ಎಚ್ಎಎಲ್ ಇಂದಿಗೆ ತೇಜಸ್ ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್‌ನಂತಹ ದೇಶೀಯ ಯುದ್ಧ ವಿಮಾನಗಳು, ಧ್ರುವ್, ಪ್ರಚಂಡ್‌ನಂತಹ ಹೆಲಿಕಾಪ್ಟರ್‌ಗಳನ್ನು ನಿರ್ಮಿಸುವ ತನಕ, ಇಸ್ರೋ ಜೊತೆಗಿನ ಸಹಯೋಗದೊಂದಿಗೆ ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ನೆರವಾಗುವ ತನಕ ಸಾಗಿಬಂದಿದೆ.

ಆಗಸ್ಟ್ 1941ರಲ್ಲಿ ನಿರ್ಮಾಣಗೊಂಡ ಮೊದಲ ಹಾರ್ಲೋ ಟ್ರೈನರ್ ವಿಮಾನದಿಂದ, ಇಂದಿನ ಆಧುನಿಕ ತೇಜಸ್ ಯುದ್ಧ ವಿಮಾನದ ನಿರ್ಮಾಣದ ತನಕ ಎಚ್ಎಎಲ್ ಸಾಗಿಬಂದ 85 ವರ್ಷಗಳ ಹಾದಿ ನಿರಂತರ ನಾವೀನ್ಯತೆ ಮತ್ತು ಪ್ರಗತಿಯ ಪ್ರತೀಕವಾಗಿದೆ. ಭಾರತೀಯ ರನ್‌ವೇಯಿಂದ ಮೇಲಕ್ಕೆ ಚಿಮ್ಮುವ ಪ್ರತಿಯೊಂದು ವಿಮಾನ, ಭಾರತೀಯ ಸೇನಾ ಪಡೆಗಳಿಗೆ ಸೇವೆ ಸಲ್ಲಿಸುವ ಪ್ರತಿಯೊಂದು ಹೆಲಿಕಾಪ್ಟರ್, ಮತ್ತು ಎಚ್ಎಎಲ್ ನಡೆಸುವ ಪ್ರತಿಯೊಂದು ಸಾಧನೆಯೂ 21 ವರ್ಷದ ಮಹಾರಾಜರು 1940ರಲ್ಲಿ ಕಂಡ ಮಹಾನ್ ಕನಸಿನ ಸಾಕಾರ ರೂಪವಾಗಿದೆ.

ಭವಿಷ್ಯದತ್ತ ನೋಟ

ಎಚ್ಎಎಲ್ ತನ್ನ 86ನೇ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದ್ದು, ಮೈಸೂರು ರಾಜವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ. ಅವರ ಪಾಲ್ಗೊಳ್ಳುವಿಕೆ ಇತಿಹಾಸದ ಒಂದು ಸುಂದರ ಚಕ್ರಕ್ಕೆ ಸಾಕ್ಷಿಯಾಗಲಿದೆ. ಜಯಚಾಮರಾಜೇಂದ್ರ ಒಡೆಯರ್ ಅವರ ಮೊಮ್ಮಗನಾದ ಯದುವೀರ್ ಒಡೆಯರ್ ಅವರು ತನ್ನ ಪೂರ್ವಜರು ಸ್ಥಾಪಿಸಿ, ಕಾರ್ಯಾಚರಿಸಲು ನೆರವಾದ ಸಂಸ್ಥೆಗೆ ಆಗಮಿಸಿ, ನಾಯಕತ್ವ ಎಂದರೆ ಮುಂದಿನ ಹಲವಾರು ತಲೆಮಾರುಗಳಿಗೆ ನೆರವಾಗುವಂತಹ ಕೊಡುಗೆಯನ್ನು, ಪರಂಪರೆಯನ್ನು ನಿರ್ಮಿಸುವುದು ಎನ್ನುವುದನ್ನು ನೆನಪಿಸಲಿದ್ದಾರೆ.

ಎಚ್ಎಎಲ್ ಸಿಎಂಡಿ ಆಗಿರುವ ಡಾ. ಡಿ ಕೆ ಸುನಿಲ್ ಅವರು ಎಚ್ಎಎಲ್ ಅನ್ನು ಜಾಗತಿಕ ಏರೋಸ್ಪೇಸ್ ಮುಖಂಡನಾಗಿಸುವ, ಅದಕ್ಕಾಗಿ ತಂತ್ರಜ್ಞಾನ ಚಾಲಿತ ಕಾರ್ಯಕ್ರಮಗಳನ್ನು ರೂಪಿಸುವ, ಕಾರ್ಯಾಚರಣಾ ಶ್ರೇಷ್ಠತೆ ಸಾಧಿಸುವ, ಮತ್ತು ರಫ್ತಿಗೆ ಆದ್ಯತೆ ನೀಡುವ ಮಹತ್ವಾಕಾಂಕ್ಷಿ ಮಾರ್ಗಸೂಚಿಯನ್ನು ಹಾಕಿಕೊಂಡಿದ್ದಾರೆ. ಎಚ್ಎಎಲ್ ಇತ್ತೀಚೆಗೆ ಮಹಾರತ್ನ ಸ್ಥಾನಮಾನವನ್ನೂ ಗಳಿಸಿಕೊಂಡಿದ್ದು, ಇದು ಸಂಸ್ಥೆಗೆ ಹೆಚ್ಚಿನ ಸ್ವಾಯತ್ತತೆ ಮತ್ತು ಆರ್ಥಿಕ ಸಾಮರ್ಥ್ಯಗಳನ್ನು ಒದಗಿಸಿದೆ. ಇದರಿಂದ ಎಚ್ಎಎಲ್ ತನ್ನ ಗುರಿಗಳನ್ನು ಇನ್ನಷ್ಟು ಉತ್ತಮವಾಗಿ ಸಾಧಿಸಬಹುದು.

ಎಚ್ಎಎಲ್ ಸಂಸ್ಥಾಪನಾ ದಿನವನ್ನು ಆಚರಿಸುವ ಸಂದರ್ಭದಲ್ಲಿ, ಇತರರು ಹಿಂದೇಟು ಹಾಕಿದಾಗಲೂ ಮುಂದೆ ಬಂದು, ಭಾರತಕ್ಕೆ ಹಾರಾಟ ನಡೆಸಲು ಅತ್ಯವಶ್ಯಕವಾದ ರೆಕ್ಕೆಯನ್ನು ನೀಡಿದ, ಭಾರತದ ಏಕೀಕರಣಕ್ಕಾಗಿ ತನ್ನ ಸ್ವಂತ ವಿಮಾನವನ್ನೇ ನೀಡಿದ, ಭಾರತೀಯ ಪೈಲಟ್‌ಗಳಿಗೆ ತರಬೇತಿ ನೀಡಲು ಹಾರಾಟ ಶಾಲೆಯನ್ನು ಸ್ಥಾಪಿಸಿದ, ಮತ್ತು ನಮ್ಮ ದೇಶದ ಆಗಸವನ್ನು ವ್ಯಾಪಿಸಿರುವ ದೂರದೃಷ್ಟಿ ಹೊಂದಿದ್ದ ಯುವ ದೇಶಭಕ್ತ ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಸ್ಮರಿಸಬೇಕು.

ಎಚ್ಎಎಲ್ ಸಂಸ್ಥೆಯ ಹಿರಿಮೆ ಕೇವಲ ವಿಮಾನ ಮತ್ತು ತಂತ್ರಜ್ಞಾನಕ್ಕೆ ಸೀಮಿತವಲ್ಲ. ಬದಲಿಗೆ, ಅದು ಸ್ವಾವಲಂಬನೆಯ, ದೊಡ್ಡ ಕನಸುಗಳನ್ನು ಕಾಣುವ ಧೈರ್ಯದ, ಮತ್ತು ಶಕ್ತಿಯುತ ಭಾರತವನ್ನು ಕಟ್ಟುವ ಬದ್ಧತೆಯ ಪ್ರತೀಕವಾಗಿದೆ. 85 ವರ್ಷಗಳ ಹಿಂದೆ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರಿಂದ ಸ್ಥಾಪನೆಗೊಂಡ ಎಚ್ಎಎಲ್ ಇಂದಿಗೂ ಭಾರತದ ಏರೋಸ್ಪೇಸ್ ಉದ್ಯಮಕ್ಕೆ ಮಾರ್ಗದರ್ಶನ ಮತ್ತು ಸ್ಫೂರ್ತಿ ನೀಡುತ್ತಿದೆ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಮಹತ್ವದ ಉಪಗ್ರಹ ಲಾಂಚ್‌ಗೂ ಮೊದಲು ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದ ಇಸ್ರೋ ವಿಜ್ಞಾನಿಗಳ ತಂಡ
Viral Video: ಗಗನಯಾನ್‌ ಮಿಷನ್‌ ಲ್ಯಾಡಿಂಗ್‌ ಪ್ಯಾರಚೂಟ್‌ ಯಶಸ್ವಿ ಪರೀಕ್ಷೆ ನಡೆಸಿದ ಇಸ್ರೋ