
ನವದೆಹಲಿ (ಜು.31): ಭಾರತದ ಮಹತ್ವಾಕಾಂಕ್ಷೆಯ ಸ್ವದೇಶಿ ಉಪಗ್ರಹ ಆಧಾರಿತ ನ್ಯಾವಿಗೇಷನ್ ವ್ಯವಸ್ಥೆ 'ನಾವಿಕ್' (NavIC - Navigation with Indian Constellation) ಪ್ರಸ್ತುತ ಸಂಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಒಪ್ಪಿಕೊಂಡಿದೆ. ನ್ಯಾವಿಗೇಷನ್ ಸೇವೆಗಳಿಗೆ ಅಗತ್ಯವಿರುವ ಕನಿಷ್ಠ ಉಪಗ್ರಹಗಳ ಸಂಖ್ಯೆ ಕಡಿಮೆಯಾಗಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಸದ್ಯ ಕೇವಲ ಮೂರು ಉಪಗ್ರಹಗಳು ಮಾತ್ರವೇ ಸ್ಥಾನ, ನ್ಯಾವಿಗೇಷನ್ ಮತ್ತು ಸಮಯ ಸೂಚಿಸುವ (PNT) ಸೇವೆಗಳನ್ನು ನೀಡುತ್ತಿದ್ದು, ಕನಿಷ್ಠ ನಾಲ್ಕು ಉಪಗ್ರಹಗಳಿಲ್ಲದೆ 'ನ್ಯಾವಿಕ್' ತನ್ನ ಪೂರ್ಣ ಸಾಮರ್ಥ್ಯದ ಸೇವೆಯನ್ನು ನೀಡಲು ಸಾಧ್ಯವಿಲ್ಲ.
ನಾವಿಕ್ ಜಾಲದ ಪ್ರಮುಖ ಉಪಗ್ರಹಗಳಲ್ಲಿ ಒಂದಾದ 'ಐಆರ್‌ಎನ್‌ಎಸ್‌ಎಸ್-1ಎಫ್' (IRNSS-1F) ತನ್ನ 10 ವರ್ಷಗಳ ಜೀವಿತಾವಧಿಯನ್ನು ಪೂರ್ಣಗೊಳಿಸಿದ ನಂತರ, ಅದರಲ್ಲಿದ್ದ ಕೊನೆಯ ಅಟಾಮಿಕ್ ಕ್ಲಾಕ್ (ಪರಮಾಣು ಗಡಿಯಾರ) ಕಾರ್ಯನಿರ್ವಹಣೆ ಸ್ಥಗಿತಗೊಳಿಸಿರುವುದು ಈ ಹಿನ್ನಡೆಗೆ ತಕ್ಷಣದ ಕಾರಣವಾಗಿದೆ.
ಉಪಗ್ರಹ ಆಧಾರಿತ ನ್ಯಾವಿಗೇಷನ್ ವ್ಯವಸ್ಥೆಯು ಬಹು ಉಪಗ್ರಹಗಳಿಂದ ಬರುವ ಸಂಕೇತಗಳನ್ನು (signals) ಆಧರಿಸಿ ಬಳಕೆದಾರರ ನಿಖರ ಸ್ಥಳವನ್ನು ಲೆಕ್ಕಹಾಕುತ್ತದೆ. ಉತ್ತಮ ಪರಿಸ್ಥಿತಿಗಳಲ್ಲಿ ಸ್ಥಳವನ್ನು ಗುರುತಿಸಲು ಮೂರು ಉಪಗ್ರಹಗಳು ಸಾಕಾಗುತ್ತವೆಯಾದರೂ, ಉಪಗ್ರಹಗಳಲ್ಲಿದ್ದ ಗಡಿಯಾರ ಮತ್ತು ರಿಸೀವರ್ ಗಡಿಯಾರಗಳ ನಡುವಿನ ವ್ಯತ್ಯಾಸವನ್ನು ಅತ್ಯಂತ ನಿಖರವಾಗಿ ಲೆಕ್ಕಹಾಕಲು ನಾಲ್ಕನೇ ಉಪಗ್ರಹದ ಅಗತ್ಯವಿರುತ್ತದೆ. ಈ ನಾಲ್ಕನೇ ಉಪಗ್ರಹವಿಲ್ಲದೆ ವ್ಯವಸ್ಥೆಯು ನಿಖರವಾದ ಸ್ಥಾನ, ನ್ಯಾವಿಗೇಷನ್ ಮತ್ತು ಸಮಯ (PNT) ವಿವರಗಳನ್ನು ನೀಡಲು ಸಾಧ್ಯವಿಲ್ಲ.
ಇದೇ ಕಾರಣಕ್ಕಾಗಿ ಜಾಗತಿಕ ನ್ಯಾವಿಗೇಷನ್ ವ್ಯವಸ್ಥೆಗಳಾದ ಅಮೆರಿಕದ ಜಿಪಿಎಸ್ (GPS), ಯುರೋಪ್‌ನ ಗಲಿಲಿಯೋ ಮತ್ತು ಭಾರತದ 'ನಾವಿಕ್' ಒಂದೇ ಸಮಯದಲ್ಲಿ ಕಾರ್ಯನಿರ್ವಹಿಸುವ ಬಹು ಉಪಗ್ರಹಗಳನ್ನು ನೆಚ್ಚಿಕೊಂಡಿವೆ.
ಭಾರತವು ಕಳೆದ ಕೆಲವು ವರ್ಷಗಳಲ್ಲಿ ಒಟ್ಟು 11 'ನಾವಿಕ್' ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದೆ. ಆದರೆ, ಈ ಪೈಕಿ ಹಲವಾರು ಉಪಗ್ರಹಗಳು ತಮ್ಮ ಕಾರ್ಯಚರಣೆಯ ಅವಧಿಯನ್ನು ಪೂರ್ಣಗೊಳಿಸಿವೆ, ಇನ್ನು ಕೆಲವು ನ್ಯಾವಿಗೇಷನ್ ಸಾಮರ್ಥ್ಯವನ್ನು ಕಳೆದುಕೊಂಡಿವೆ ಅಥವಾ ನಿಗದಿತ ಕಕ್ಷೆಯನ್ನು ತಲುಪಲು ವಿಫಲವಾಗಿವೆ. 2016 ರಲ್ಲಿ ಉಡಾವಣೆಯಾಗಿದ್ದ 'IRNSS-1F' ಉಪಗ್ರಹದ ಕೊನೆಯ ಅಟಾಮಿಕ್ ಕ್ಲಾಕ್ ಕೂಡ ಇತ್ತೀಚೆಗೆ ಸ್ತಬ್ಧಗೊಂಡಿದ್ದರಿಂದ ಈ ಸಮಸ್ಯೆ ಎದುರಾಗಿದೆ. ಪರಿಣಾಮವಾಗಿ, ಪ್ರಸ್ತುತ ಕೇವಲ 3 ಉಪಗ್ರಹಗಳು ಮಾತ್ರವೇ ಪೂರ್ಣ ಪ್ರಮಾಣದ ನ್ಯಾವಿಗೇಷನ್ ಸೇವೆ ನೀಡುವ ಸಾಮರ್ಥ್ಯ ಹೊಂದಿದ್ದು, ಉಳಿದ 5 ಉಪಗ್ರಹಗಳು ಕೇವಲ ಏಕಮುಖ ಸಂದೇಶ (One-way messaging) ಸೇವೆಗಳಿಗೆ ಮಾತ್ರ ಬೆಂಬಲ ನೀಡುತ್ತಿವೆ.
ಅಮೆರಿಕದ 'ಜಿಪಿಎಸ್'ಗೆ ಪರ್ಯಾಯವಾಗಿ ಭಾರತವೇ ಸ್ವಂತವಾಗಿ ಅಭಿವೃದ್ಧಿಪಡಿಸಿರುವ 'ನಾವಿಕ್', ಭಾರತ ಮತ್ತು ದೇಶದ ಗಡಿಯಿಂದ ಸುಮಾರು 1,500 ಕಿಲೋಮೀಟರ್‌ಗಳಷ್ಟು ವಿಸ್ತಾರವಾದ ಪ್ರದೇಶಕ್ಕೆ ಸ್ಥಾನ, ಸ್ಥಳ ಮತ್ತು ಸಮಯದ ಮಾಹಿತಿಯನ್ನು ಒದಗಿಸುವ ವಿನ್ಯಾಸ ಹೊಂದಿದೆ. ಈ ವ್ಯವಸ್ಥೆಯು ಪ್ರಮುಖವಾಗಿ ವಾಹನಗಳ ನ್ಯಾವಿಗೇಷನ್ ಮತ್ತು ಸಾರಿಗೆ ಸಂಚಾರ, ಸಾಗರ/ಸಮುದ್ರ ಸಾರಿಗೆ ಕಾರ್ಯಾಚರಣೆಗಳು, ವಿಪತ್ತು ನಿರ್ವಹಣೆ, ಸಾರ್ವಜನಿಕ ಸಾರಿಗೆಯ ಟ್ರ್ಯಾಕಿಂಗ್, ಮೀನುಗಾರಿಕಾ ದೋಣಿಗಳ ಸುರಕ್ಷತೆ, ರಕ್ಷಣೆ ಮತ್ತು ಕಾರ್ಯತಂತ್ರದ ಮಿಲಿಟರಿ ಕಾರ್ಯಾಚರಣೆಗಳು, ಪ್ರಮುಖ ಮೂಲಸೌಕರ್ಯಗಳಿಗೆ ಸಮಯ ಹೊಂದಾಣಿಕೆ (Time Synchronisation) ಮಾತ್ರವಲ್ಲದೆ ಪ್ರಸ್ತುತ ದೇಶದ ಸಾವಿರಾರು ವಾಣಿಜ್ಯ ವಾಹನಗಳು ಹಾಗೂ ರೇಲ್ವೆ ಟ್ರ್ಯಾಕಿಂಗ್ ವ್ಯವಸ್ಥೆಗಳಲ್ಲಿ ಈ ನಾವಿಕ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
ನಾವಿಕ್ ಉಪಗ್ರಹಗಳ ಜಾಲವನ್ನು ಪುನರುಜ್ಜೀವನಗೊಳಿಸಲು ಮತ್ತು ಬಲಪಡಿಸಲು ಶ್ರಮಿಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ. ಮುಂಬರುವ ದಿನಗಳಲ್ಲಿ ಸಂಪೂರ್ಣ ಉಪಗ್ರಹ ನೆಟ್‌ವರ್ಕ್ ಪೂರ್ಣಗೊಳಿಸುವುದು, ಹೆಚ್ಚುವರಿ ಉಪಗ್ರಹಗಳನ್ನು ಉಡಾವಣೆ ಮಾಡುವುದು, ಬಳಕೆದಾರರಿಗೆ ಸೇವೆಯನ್ನು ವಿಸ್ತರಿಸುವುದು ಮತ್ತು ವಿದೇಶಿ ತಂತ್ರಜ್ಞಾನದ ಮೇಲಿನ ಅವಲಂಬನೆ ತಗ್ಗಿಸಲು ಸ್ವದೇಶಿ ಬಾಹ್ಯಾಕಾಶ ಮಟ್ಟದ ಅಟಾಮಿಕ್ ಕ್ಲಾಕ್ ಬಳಕೆಯನ್ನು ಹೆಚ್ಚಿಸಲು ಯೋಜಿಸಲಾಗಿದೆ. ನಾಗರಿಕ ಹಾಗೂ ಆಯಕಟ್ಟಿನ ಮಿಲಿಟರಿ ಅಗತ್ಯಗಳಿಗೆ ಪೂರಕವಾಗುವಂತೆ ಭರವಸೆಯ ನ್ಯಾವಿಗೇಷನ್ ವ್ಯವಸ್ಥೆಯನ್ನು ನಿರ್ಮಿಸುವುದು ಸರ್ಕಾರದ ದೀರ್ಘಾವಧಿಯ ಗುರಿಯಾಗಿದೆ.
ಅಮೆರಿಕದ 'ಜಿಪಿಎಸ್' (GPS), ಯುರೋಪ್‌ನ 'ಗಲಿಲಿಯೋ' (Galileo), ರಷ್ಯಾದ 'ಗ್ಲೋನಾಸ್' (GLONASS) ಮತ್ತು ಚೀನಾದ 'ಬೈಡೋ' (BeiDou) ನಂತಹ ವಿದೇಶಿ ಉಪಗ್ರಹ ವ್ಯವಸ್ಥೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸ್ವದೇಶಿ ನ್ಯಾವಿಗೇಷನ್ ವ್ಯವಸ್ಥೆ ಅತ್ಯಂತ ಆಯಕಟ್ಟಿನದ್ದಾಗಿದೆ. ಸಂಪೂರ್ಣ ಕಾರ್ಯನಿರ್ವಹಿಸುವ 'ನಾವಿಕ್' ವ್ಯವಸ್ಥೆಯು ದೇಶಕ್ಕೆ ಹೆಚ್ಚಿನ ಭದ್ರತೆಯನ್ನು ನೀಡುವುದಲ್ಲದೆ, ತುರ್ತು ಪರಿಸ್ಥಿತಿಗಳಲ್ಲಿ ತಡೆಯಿಲ್ಲದ ಸೇವೆ ಹಾಗೂ ಸಾರಿಗೆ, ರಕ್ಷಣೆ ಮತ್ತು ಮೂಲಸೌಕರ್ಯ ವಲಯಗಳಿಗೆ ಹೆಚ್ಚಿನ ಬೆಂಬಲ ನೀಡುತ್ತದೆ. ಆದ್ದರಿಂದ ನಾವಿಕ್ ಅನ್ನು ಮತ್ತೆ ಹಳಿಗೆ ತರುವುದು ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಮೊದಲ ಆದ್ಯತೆಯಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.