
ಬೆಂಗಳೂರು: ಐದೂವರೆ ವರ್ಷಗಳ ಹಿಂದೆ ಭೂಮಿಯಿಂದ ಕೊನೆಯ ಬಾರಿಗೆ ಗೋಚರಿಸಿದ್ದ '10P/ಟೆಂಪಲ್ 2' (10P/Tempel 2) ಧೂಮಕೇತುವು ಈಗ ಮತ್ತೊಮ್ಮೆ ಬೆಂಗಳೂರಿನ ಆಕಾಶದಲ್ಲಿ ಕಣ್ಣಿಗೆ ರಾಜನಾಗಲು ಸಜ್ಜಾಗಿದೆ. ಆಗಸ್ಟ್ ಆರಂಭದವರೆಗೆ ಬೆಂಗಳೂರಿನ ಖಗೋಳಾಸಕ್ತರು ಇದನ್ನು ಬೆಳಗಿನ ಜಾವದಲ್ಲಿ ವೀಕ್ಷಿಸಬಹುದಾಗಿದೆ.
ಈ ಧೂಮಕೇತುವು ಮೊದಲು ಪತ್ತೆಯಾಗಿದ್ದು 1873ರಲ್ಲಿ. ಇದು ಪ್ರತಿ 5.5 ವರ್ಷಗಳಿಗೊಮ್ಮೆ ಸೂರ್ಯನ ಸುತ್ತ ಒಂದು ಸುತ್ತು ಪೂರ್ಣಗೊಳಿಸುತ್ತದೆ. ಇದು ಕೊನೆಯ ಬಾರಿಗೆ 2021ರಲ್ಲಿ ಭೂಮಿಯಲ್ಲಿ ಗೋಚರಿಸಿತ್ತು. ಬೆಂಗಳೂರಿನ ಖಗೋಳ ಉತ್ಸಾಹಿ ದೀಪಕ್ ಚೌಧರಿ ಅವರು ಜುಲೈ 26ರಂದು 'ಸೀಸ್ಟಾರ್ S50' ಸ್ಮಾರ್ಟ್ ದೂರದರ್ಶಕವನ್ನು (Smart Telescope) ಬಳಸಿ ಈ ಧೂಮಕೇತುವಿನ ಸುಂದರ ಚಿತ್ರವನ್ನು ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ. ಅವರ ಪ್ರಕಾರ, ಈ ಧೂಮಕೇತುವು ಜೂನ್ ಮತ್ತು ಜುಲೈ ತಿಂಗಳಲ್ಲಿ ಸಾಕಷ್ಟು ಪ್ರಕಾಶಮಾನವಾಗಿ ಗೋಚರಿಸಿದ್ದು, ಆಗಸ್ಟ್ ಆರಂಭದವರೆಗೆ ತನ್ನ ಬೆಳಕನ್ನು ಚೆಲ್ಲುತ್ತಲೇ ಇರುತ್ತದೆ.
ಧೂಮಕೇತುಗಳ ವೀಕ್ಷಣೆಗೆ ಆಗಸ್ಟ್ ಮೊದಲ ವಾರ ಅತ್ಯಂತ ಮಹತ್ವದ್ದಾಗಿದೆ. ಆಗಸ್ಟ್ 2ರಂದು ಈ ಧೂಮಕೇತುವು ಸೂರ್ಯನಿಗೆ ಅತ್ಯಂತ ಹತ್ತಿರದ ಬಿಂದುವನ್ನು (Perihelion) ತಲುಪಲಿದೆ. ಸೂರ್ಯನ ತೀವ್ರ ಶಾಖದಿಂದಾಗಿ ಇದರ ಮೇಲಿರುವ ಮಂಜುಗಡ್ಡೆ ಹೆಚ್ಚಿನ ಪ್ರಮಾಣದಲ್ಲಿ ಆವಿಯಾಗಲಿದ್ದು, ಇದು ಧೂಮಕೇತುವಿಗೆ ಸುಂದರವಾದ 'ಕೋಮಾ' (ಧೂಮಕೇತುವಿನ ಸುತ್ತಲಿನ ಅನಿಲದ ಮೋಡ) ಮತ್ತು ಬಾಲವನ್ನು ಸೃಷ್ಟಿಸುತ್ತದೆ. ಈ ವಿಶೇಷ ವೈಶಿಷ್ಟ್ಯದಿಂದಾಗಿ ಇದು ಅತ್ಯಂತ ಪ್ರಕಾಶಮಾನವಾಗಿ ಕಾಣಿಸಿಕೊಳ್ಳಲಿದೆ.
ಇದರ ಮರುದಿನವೇ ಅಂದರೆ ಆಗಸ್ಟ್ 3ರಂದು ಇದು ಭೂಮಿಗೆ ಅತ್ಯಂತ ಸಮೀಪಕ್ಕೆ (Perigee) ಬರಲಿದ್ದು, ಆಕಾಶ ವೀಕ್ಷಕರಿಗೆ ಇದನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲು ಸುವರ್ಣಾವಕಾಶ ಸಿಗಲಿದೆ. ಇದರ ಬಳಿಕ ಧೂಮಕೇತುವು ಸೂರ್ಯ ಮತ್ತು ಭೂಮಿಯಿಂದ ಕ್ರಮೇಣ ದೂರ ಸರಿಯುತ್ತಾ ಸಾಗಿ ನಿಧಾನವಾಗಿ ಮಸುಕಾಗಲಿದೆ ಎಂದು ದೀಪಕ್ ಚೌಧರಿ ತಿಳಿಸಿದ್ದಾರೆ.
ಈ ಅವಧಿಯಲ್ಲಿ ಧೂಮಕೇತುವು ಸುಮಾರು 8 ರಿಂದ 9ರಷ್ಟು ತೀವ್ರತೆಯಲ್ಲಿ ಪ್ರಕಾಶಮಾನವಾಗಿ ಹೊಳೆಯುವ ಮಟ್ಟವನ್ನು ತಲುಪುವ ನಿರೀಕ್ಷೆಯಿದೆ. ಇದು ಬರಿಗಣ್ಣಿಗೆ ಗೋಚರಿಸುವುದು ಕಷ್ಟ. ಆದರೆ, 80-150 ಮಿಮೀ ದ್ಯುತಿರಂಧ್ರ (Aperture) ಹೊಂದಿರುವ ಬೈನಾಕ್ಯುಲರ್‌ಗಳು ಅಥವಾ ಸಣ್ಣ ದೂರದರ್ಶಕಗಳ ಮೂಲಕ ಇದನ್ನು ಸ್ಪಷ್ಟವಾಗಿ ನೋಡಬಹುದು. ನಗರದ ಬೆಳಕಿನ ಮಾಲಿನ್ಯದಿಂದ ದೂರವಿರುವ, ಸ್ಪಷ್ಟವಾದ ಹಾಗೂ ಚಂದ್ರನಿಲ್ಲದ ಕತ್ತಲೆಯ ರಾತ್ರಿಯಲ್ಲಿ ಇದನ್ನು ವೀಕ್ಷಿಸುವುದು ಅತ್ಯಂತ ಸೂಕ್ತ ಅನುಭವವನ್ನು ನೀಡುತ್ತದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.