ಹೆಣ್ಣಿಲ್ಲದೇ ಕೇವಲ ಗಂಡಿನಿಂದ ಇಲಿ ಮರಿಗೆ ಜನ್ಮ ನೀಡಿದ ಚೀನಾ ವಿಜ್ಞಾನಿಗಳು

Published : Feb 02, 2025, 12:16 PM IST
ಹೆಣ್ಣಿಲ್ಲದೇ ಕೇವಲ ಗಂಡಿನಿಂದ ಇಲಿ ಮರಿಗೆ ಜನ್ಮ ನೀಡಿದ ಚೀನಾ ವಿಜ್ಞಾನಿಗಳು

ಸಾರಾಂಶ

ಚೀನಾದ ವಿಜ್ಞಾನಿಗಳು ಎರಡು ಗಂಡು ಇಲಿಗಳ ಡಿಎನ್‌ಎ ಬಳಸಿ ಮರಿ ಇಲಿಯನ್ನು ಸೃಷ್ಟಿಸಿದ್ದಾರೆ. ಈ ಇಲಿಗಳು ಪ್ರೌಢಾವಸ್ಥೆಯವರೆಗೆ ಬದುಕುಳಿದಿವೆ, ಇದು ಸಂತಾನೋತ್ಪತ್ತಿ ವಿಜ್ಞಾನದಲ್ಲಿ ಹೊಸ ಸಾಧ್ಯತೆಗಳಿಗೆ ಕಾರಣವಾಗಿದೆ.

ತಂತ್ರಜ್ಞಾನದಲ್ಲಿ ಬಹಳ ಮುಂದಿರುವ ಚೀನಾ ಪ್ರಾಕೃತಿಕ ವಿರುದ್ಧವಾದಂತಹವುಗಳನ್ನು ಸೃಷ್ಟಿಸುವುದರಲ್ಲಿ ಎತ್ತಿದ ಕೈ. ಏನೋ ಮಾಡಲು ಹೋಗಿ ಏನೇನೋ ಮಾಡಿ ಇಡೀ ಕೋವಿಡ್ ಪ್ರಸಾದವನ್ನು ಜಗತ್ತಿಗೆ ಹಂಚಿದ ಚೀನಾ ಈಗ ಹೆಣ್ಣಿನ ಡಿಎನ್‌ಎಯ ಸಹಾಯವಿಲ್ಲದೇ ಕೇವಲ ಎರಡು ಗಂಡು ಇಲಿಗಳ ಮೂಲಕ ಇಲಿಯೊಂದನ್ನು ಸೃಷ್ಟಿಸಿದ್ದು, ಈ ವಿಚಾರವೀಗ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ.

ತಳಿಶಾಸ್ತ್ರದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿರುವ ಚೀನಾದ ವಿಜ್ಞಾನಿಗಳು ಈಗ . ಎರಡು ಗಂಡು ಇಲಿಗಳ ಡಿಎನ್‌ಎ ಬಳಸಿ ಮರಿ ಇಲಿಯೊಂದನ್ನು ಸೃಷ್ಟಿಸಿದ್ದಾರೆ.  ವಿಜ್ಞಾನಿಗಳ ಇದೇ ರೀತಿಯ ಹಿಂದಿನ ಪ್ರಯತ್ನಗಳಿಗಿಂತ ಭಿನ್ನವಾಗಿ ಈ ಇಲಿಗಳು ಪ್ರೌಢಾವಸ್ಥೆಯವರೆಗೆ ಬದುಕುಳಿದಿವೆ ಎಂದು ವರದಿಯಾಗಿದ್ದು, ಸಂತಾನೋತ್ಪತ್ತಿ ವಿಜ್ಞಾನದಲ್ಲಿ ಹೊಸ ಸಾಧ್ಯತೆಗಳಿಗೆ ಕಾರಣವಾಗಿದೆ.  ಈ ಸಂಶೋಧನೆಯು ಜೀನ್ ಚಟುವಟಿಕೆ ಮತ್ತು ಅಭಿವೃದ್ಧಿಯಲ್ಲಿ ಅದರ ಪಾತ್ರದ ಬಗ್ಗೆ ತಿಳುವಳಿಕೆಯನ್ನು ಮತ್ತಷ್ಟು ವಿಸ್ತಾರಗೊಳಿಸಬಹುದು ಎಂದು ವರದಿಯಾಗಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಜನವರಿ 28 ರಂದು ಸೆಲ್ ಸ್ಟೆಮ್ ಸೆಲ್‌ನಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ. ಈ ಅಧ್ಯಯನವು ಒಂದು ವಿಶಿಷ್ಟ ವಿಧಾನವನ್ನು ಅನ್ವೇಷಿಸುತ್ತದೆ. ಚೀನೀ ಅಕಾಡೆಮಿ ಆಫ್ ಸೈನ್ಸಸ್‌ನ ಝಿ-ಕುನ್ ಲಿ ನೇತೃತ್ವದ ತಂಡವು ಜೀನ್‌ಗಳನ್ನು (imprinting genes) ಸೃಷ್ಟಿಸುವುದರ ಮೇಲೆ ತನ್ನ ಗಮನ ಕೇಂದ್ರಿಕರಿಸಿದೆ. ಈ ಜೀನ್‌ಗಳು ಪ್ರತಿಯೊಬ್ಬ ಪೋಷಕರಿಂದ ಒಂದು ಪ್ರತಿಯನ್ನು ಆನುವಂಶಿಕವಾಗಿ ಪಡೆಯುತ್ತವೆ ಆದರೆ ಕಾರ್ಯನಿರ್ವಹಿಸಲು ಕೇವಲ ಒಂದು ಪ್ರತಿಯ ಅಗತ್ಯ ಮಾತ್ರ ಇರುತ್ತದೆ. ಆದರೆ ಈ ಜೀನ್‌ಗಳು ಸರಿಯಾಗಿ ಕೆಲಸ ಮಾಡದಿದ್ದರೆ, ಅವು ಏಂಜಲ್‌ಮನ್ ಸಿಂಡ್ರೋಮ್‌ನಂತಹ ಅಸ್ವಸ್ಥತೆಗಳನ್ನು ಉಂಟುಮಾಡುತ್ತವೆ.

2023 ರ ಅಧ್ಯಯನವೊಂದರಲ್ಲಿ, ಜಪಾನಿನ ವಿಜ್ಞಾನಿಗಳು ಗಂಡು ಇಲಿಯ ಚರ್ಮದ ಕೋಶಗಳನ್ನು ಬಳಸಿದರು. ಅವರು ಅವುಗಳನ್ನು ಎರಡು X ವರ್ಣತಂತುಗಳನ್ನು ಹೊಂದಿರುವ ಮೊಟ್ಟೆಯ ಕೋಶಗಳಾಗಿ ಪರಿವರ್ತಿಸಿದರು. ನಂತರ ಈ ಮೊಟ್ಟೆಗಳನ್ನು ವೀರ್ಯದೊಂದಿಗೆ ಫಲವತ್ತಾಗಿಸಿ, ಕೇವಲ ಪುರುಷ ಡಿಎನ್‌ಎ ಹೊಂದಿರುವ ಇಲಿಗಳನ್ನು ಸೃಷ್ಟಿಸಿದ್ದರು. ಆದರೆ, ಚೀನಾದ ಸಂಶೋಧಕರು ವಿಭಿನ್ನ ಮಾರ್ಗವನ್ನು ಅನುಸರಿಸಿದ್ದಾರೆ.

ವಿಜ್ಞಾನಿಗಳು ಎರಡು-ತಂದೆ ಇಲಿಗಳನ್ನು ಹೇಗೆ ಸೃಷ್ಟಿಸಿದರೆಂದರೆ ತಂಡವು ಇನ್ನೂ ಪ್ರೌಢಾವಸ್ಥೆ ತಲುಪದ ಹೆಣ್ಣು ಇಲಿಯ ಮೊಟ್ಟೆಯಿಂದ ಡಿಎನ್‌ಎಯನ್ನು ತೆಗೆದು ಹಾಕಿ ನಂತರ ಅವರು ಭ್ರೂಣದ ಕಾಂಡಕೋಶಗಳನ್ನು ರಚಿಸಲು ವೀರ್ಯವನ್ನು ಪರಿಚಯಿಸಿದರು. ಈ ಕಾಂಡಕೋಶಗಳು ಮತ್ತೊಂದು ವೀರ್ಯದೊಂದಿಗೆ ಸೇರಿ ಫಲವತ್ತಾದ ಮೊಟ್ಟೆಯನ್ನು ರೂಪಿಸಿದವು. ಆನುವಂಶಿಕ ಸಮಸ್ಯೆಗಳನ್ನು ತಡೆಗಟ್ಟುವುದಕ್ಕಾಗಿ ಅವರು 20 ನಿರ್ದಿಷ್ಟ ಜೀನ್ ಮಾರ್ಪಾಡುಗಳನ್ನು ಮಾಡಿದರು ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ. 

ಅವರ ಹಿಂದಿನ ಅಧ್ಯಯನವು ಕೇವಲ ಏಳು ಆನುವಂಶಿಕ ಬದಲಾವಣೆಗಳನ್ನು ಮಾಡಿತ್ತು. ಆ ಇಲಿಗಳು ಗರ್ಭಧಾರಣೆಯ ವೇಳೆ ಬದುಕುಳಿದವು ಆದರೆ ಜನನದ ನಂತರ ತೀವ್ರ ಅಸಹಜತೆ ಸಮಸ್ಯೆಗಳಿಂದ ಸತ್ತವು.  ಆದರೆ ನಂತರದ ಅಧ್ಯಯನದಲ್ಲಿ ಡಿಎನ್‌ಎನಲ್ಲಿ ಮಾರ್ಪಾಡುಗಳನ್ನು ಹೆಚ್ಚಿಸಿದ್ದರಿಂದ, ಅವು ಬೆಳವಣಿಗೆಯ ಸಮಸ್ಯೆಗಳನ್ನು ನಿವಾರಿಸಿದವು. ಈ 18 ಬದಲಾವಣೆಗಳೊಂದಿಗೆ, ಇಲಿಗಳಿಗೆ ಆಹಾರ ಬೆಂಬಲದ ಅಗತ್ಯವಿತ್ತು ಆದರೆ ಅವು ಪ್ರೌಢಾವಸ್ಥೆಯವರೆಗೆ ಬದುಕುಳಿದವು. ನಂತರ ಇನ್ನೂ ಎರಡು ಬದಲಾವಣೆಗಳನ್ನು ಮಾಡುವ ಮೂಲಕ, ಇಲಿಗಳು ಹೆಚ್ಚು ಸಾಮಾನ್ಯವಾಗಿ ಅಭಿವೃದ್ಧಿ ಹೊಂದಿದವು. ಆದರೆ ಈ ಇಲಿಗಳು ಇನ್ನೂ ಕಡಿಮೆ ಜೀವಿತಾವಧಿಯನ್ನು ಹೊಂದಿದ್ದವು ಮತ್ತು ಬಂಜೆತನ ಹೊಂದಿದ್ದವು. ಇದಕ್ಕೆ ವ್ಯತಿರಿಕ್ತವಾಗಿ, 2023 ರಲ್ಲಿ ಜಪಾನಿನ ಸಂಶೋಧಕರು ಫಲವತ್ತಾದ ಗಂಡು-ಪೋಷಕ ಇಲಿಗಳನ್ನು ಸಾಕಿದರು. ಈಗ ಚೀನೀ ತಂಡವು ಜಪಾನ್‌ನ  ತಂತ್ರವನ್ನು ಪರಿಷ್ಕರಿಸಲು ಯೋಜಿಸಿದೆ.

ಜೆನೆಟಿಕ್ ಅಧ್ಯಯನಗಳ  ಈ ಸಂಶೋಧನೆಯು ಮುಂದೆ ಇಂಪ್ರಿಂಟಿಂಗ್ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ ಎಂದು ವಿಜ್ಞಾನಿಗಳು ನಂಬುತ್ತಾರೆ. ಇದು ಬಯಸಿದ ಗುಣಲಕ್ಷಣಗಳನ್ನು ಆಯ್ಕೆ ಮಾಡುವ ಮೂಲಕ ಜಾನುವಾರು ಸಂತಾನೋತ್ಪತ್ತಿಯಲ್ಲಿ ಮಹತ್ವದ ಬದಲಾವಣೆ ತರಬಹುದು.. ಆದಾಗ್ಯೂ, ತಜ್ಞರು ಶೀಘ್ರದಲ್ಲೇ ಮಾನವರ ಮೇಲೆ ಈ ವಿಧಾನವನ್ನು ಬಳಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ