ಮೊದಲ ಬಾರಿ ಚಂದ್ರನ ಮೇಲಿನ ಕಂಪನ ಪತ್ತೆ, ಚಂದಮಾಮನ ಉಲ್ಲೇಖ ಮಾಡಿದ ಇಸ್ರೋ

By Suvarna News  |  First Published Sep 1, 2023, 9:46 AM IST

ಚಂದ್ರನಲ್ಲಿ ಮತ್ತಷ್ಟು ಗಂಧಕ ಪತ್ತೆ, ಸಲ್ಫರ್‌ ಅಂಶ ಪತ್ತೆ ಹಚ್ಚಿದ ಪ್ರಜ್ಞಾನ್‌ನ ಇನ್ನೊಂದು ಸಾಧನ. ಸಲ್ಫರ್‌ನ ಮೂಲ ಪತ್ತೆ ಮಾಡಲು ಇಸ್ರೋ ನಿರ್ಧಾರ. ಚಂದ್ರನ ಮೇಲಿನ ಕಂಪನ  ಕೂಡ ಪತ್ತೆ.


ಬೆಂಗಳೂರು (ಆ.1): ಭಾರತದ ಚಂದ್ರಯಾನ-3 ಗುರುವಾರ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ. ‘ಪ್ರಜ್ಞಾನ್‌’ ರೋವರ್‌ನಲ್ಲಿನ ಮತ್ತೊಂದು ಉಪಕರಣ ಕೂಡಾ ಚಂದ್ರನ ದಕ್ಷಿಣ ಧ್ರುವದಲ್ಲಿ ಸಲ್ಫರ್‌ ಸೇರಿದಂತೆ ಹಲವು ಅಮೂಲ್ಯ ಪದಾರ್ಥಗಳ ಇರುವಿಕೆಯನ್ನು ಪತ್ತೆ ಹಚ್ಚಿದೆ. ಹೀಗಾಗಿ ಇವುಗಳ ಮೂಲದ ಬಗ್ಗೆ ಸಂಶೋಧನೆ ನಡೆಸಲು ಇಸ್ರೋ ನಿರ್ಧರಿಸಿದೆ.

ಇದಕ್ಕೂ ಮೊದಲು ರೋವರ್‌ನಲ್ಲಿರುವ ‘ದ ಲೇಸರ್‌ ಇನ್‌ಡ್ಯೂಸ್ಡ್‌ ಬ್ರೇಕ್‌ಡೌನ್‌ ಸ್ಪೆಕ್ಟ್ರೋಸ್ಕೋಪ್‌’ (ಲಿಬ್ಸ್‌) ಗಂಧಕ ಸೇರಿ ವಿವಿಧ ವಸ್ತುಗಳ ಇರುವಿಕೆಯನ್ನು ಖಚಿತಪಡಿಸಿತ್ತು. ಈಗ ರೋವರ್‌ನಲ್ಲಿನ ಆಲ್ಫಾ ಪಾರ್ಟಿಕಲ್‌ ಎಕ್ಸ್‌-ರೇ ಸ್ಪೆಕ್ಟ್ರೋಸ್ಕೋಪ್‌ (ಎಪಿಎಕ್ಸ್‌ಎಸ್‌) ಚಂದ್ರನಲ್ಲಿ ಸಲ್ಫರ್‌ ಇರುವಿಕೆಯನ್ನು ಖಚಿತಪಡಿಸಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಇದರ ಜೊತೆಗೆ ಅಲ್ಯುಮಿನಿಯಂ, ಕ್ಯಾಲ್ಷಿಯಂ, ಕಬ್ಬಿಣದ ಮೊದಲಾದ ವಸ್ತುಗಳನ್ನು ಕೂಡಾ ಪತ್ತೆ ಹಚ್ಚಿದೆ.

Tap to resize

Latest Videos

ಈ ಸಂಶೋಧನೆಯು ಸಲ್ಫರ್‌ ಮೊದಲಾದ ವಸ್ತುಗಳು ಸ್ವಾಭಾವಿಕವಾಗಿ ಇವೆಯೋ? ಜಾಲ್ವಾಮುಖಿಗಳಿಂದಾಗಿ ಇದೆಯೋ ಅಥವಾ ಉಲ್ಕಪಾತಗಳಿಂದಾಗಿ ಕಾಣಿಸಿಕೊಂಡಿವೆಯೋ ಎಂಬುದರ ಕುರಿತು ಇನ್ನಷ್ಟುಸಂಶೋಧನೆ ನಡೆಸಲು ವಿಜ್ಞಾನಿಗಳನ್ನು ಉತ್ತೇಜಿಸಲಿದೆ ಎಂದು ಇಸ್ರೋ ಹೇಳಿದೆ.

ಚಂದಮಾಮನ ಮೇಲೆ ಮಕ್ಕಳ ನೆಗೆದಾಟಕ್ಕೆ ಪ್ರಜ್ಞಾನ್‌ ಸುತ್ತಾಟದ ಹೋಲಿಕೆ: ಚಂದ್ರಯಾನ 3 ಉಡ್ಡಯನದ ಆರಂಭದ ದಿನದಿಂದಲೂ ಇಡೀ ಪ್ರಕ್ರಿಯೆಗೆ ಭಾವನಾತ್ಮಕ ಸ್ಪರ್ಶ ನೀಡುತ್ತಲೇ ಗಮನ ಸೆಳೆಯುತ್ತಿರುವ ಇಸ್ರೋ, ಇದೀಗ ಚಂದ್ರನಲ್ಲಿ ವಿಕ್ರಂ ಲ್ಯಾಂಡರ್‌ ಮತ್ತು ಪ್ರಜ್ಞಾನ್‌ ರೋವರ್‌ ನಡುವಿನ ಸಂವಹನವನ್ನು ಅಮ್ಮ-ಮಕ್ಕಳ ನಡುವಿನ ಭಾವನಾತ್ಮಕ ಬೆಸುಗೆಗೆ ಹೋಲಿಸುವ ಮೂಲಕ ಜನ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಜ್ಞಾನ್‌ ರೋವರ್‌ ಸಾಗಬೇಕಾದ ಹಾದಿಯಲ್ಲಿ ಅಡೆತಡೆ ಎದುರಾದ ಹಿನ್ನೆಲೆಯಲ್ಲಿ ಅದನ್ನು ಸೂಕ್ತ ಹಾದಿಯಲ್ಲಿ ಸಾಗಲು ತಿರುಗಿಸಲಾಗಿತ್ತು. ಈ ಘಟನೆಯನ್ನು ಲ್ಯಾಂಡರ್‌ನಲ್ಲಿನ ಕ್ಯಾಮೆರಾ ಸೆರೆಹಿಡಿದಿದೆ. ಪ್ರಜ್ಞಾನ್‌ನ ಈ ಸುತ್ತಾಟವನ್ನು ಚಂದಮಾಮನ ಮೇಲೆ ಮಕ್ಕಳ ನೆಗೆದಾಟಕ್ಕೆ ಹೋಲಿಸಿದ್ದರೆ, ಅದರ ವಿಡಿಯೋ ಸೆರೆಹಿಡಿದ ವಿಕ್ರಂ ಲ್ಯಾಂಡರ್‌ ಅನ್ನು ಮಕ್ಕಳ ಆಟವನ್ನು ತನ್ಮಯತೆಯಿಂದ, ಸಂಭ್ರಮದಿಂದ ವೀಕ್ಷಿಸುತ್ತಿರುವ ತಾಯಿಗೆ ಹೋಲಿಸುವ ಮೂಲಕ ತಾಂತ್ರಿಕತೆಗೂ ಭಾವನೆಯ ಬಂಧ ಬೆಸೆದಿದೆ. ಗುರುವಾರ ಎಕ್ಸ್‌ (ಹಿಂದಿನ ಟ್ವೀಟರ್‌)ನಲ್ಲಿ ಇಸ್ರೋದ ಖಾತೆಯಲ್ಲಿ ಇಂಥದ್ದೊಂದು ಸಂಭ್ರಮವನ್ನು ಹಂಚಿಕೊಳ್ಳಲಾಗಿದೆ.

ಚಂದ್ರನ ಮೇಲಿನ ಕಂಪನ ಪತ್ತೆ: ಚಂದ್ರನ ಮೇಲೆ ಉಂಟಾಗುವ ಕಂಪಗಳನ್ನು ಅರಿಯಲು ಲ್ಯಾಂಡರ್‌ನಲ್ಲಿ ಅಳವಡಿಸಲಾಗಿದ್ದ ಇನ್‌ಸ್ಟ್ರುಮೆಂಟ್‌ ಫಾರ್‌ ದ ಲೂನಾರ್‌ ಸೆಸ್ಮಿಕ್‌ ಆಕ್ಟಿವಿಟಿ (ಐಎಲ್‌ಎಸ್‌ಎ) ಪೇಲೋಡ್‌ ಮೊದಲ ಬಾರಿ ರೋವರ್‌ನ ಓಡಾಟದ ಕಂಪನವನ್ನು ಪತ್ತೆ ಮಾಡಿದೆ. ಅಲ್ಲದೇ ಮತ್ತೊಂದು ನೈಸರ್ಗಿಕ ಮಾಹಿತಿಯನ್ನು ರವಾನಿಸಿದ್ದು, ಇದರ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ ಎಂದು ಇಸ್ರೋ (ISRO) ಹೇಳಿದೆ.

click me!