ಸೌರ ಚಟುವಟಿಕೆಗಳ ಅಧ್ಯಯನಕ್ಕೆ ಸಜ್ಜಾದ ಆದಿತ್ಯ ಎಲ್1 ಬಗ್ಗೆ ಒಂದಿಷ್ಟು..!

By Suvarna News  |  First Published Aug 29, 2023, 3:13 PM IST

ಭಾರತ ಸೂರ್ಯ ಶಿಕಾರಿಗೆ ಸಜ್ಜಾಗಿದೆ. ಈ ಸಂದರ್ಭದಲ್ಲಿ ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ ಗಿರೀಶ್ ಲಿಂಗಣ್ಣ, ಅವರು ಈ ಸೂರ್ಯ ಶಿಕಾರಿ ಆದಿತ್ಯ ಎಲ್1 ಯೋಜನೆ ಯ ಮಹತ್ವದ ಬಗ್ಗೆ ತಿಳಿಸಿದ್ದಾರೆ.


ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಆದಿತ್ಯ ಎಲ್1 ಯೋಜನೆ ಬಾಹ್ಯಾಕಾಶ ವಾತಾವರಣ ಹಾಗೂ ಭೂಮಿಯ ಹವಾಮಾನದ ಮೇಲೆ ಸೂರ್ಯನ ಪ್ರಭಾವದ ರಹಸ್ಯಗಳನ್ನು ಅನಾವರಣಗೊಳಿಸುವ ಗುರಿಯನ್ನು ಹೊಂದಿದೆ. ನಮ್ಮ ಸೌರಮಂಡಲದಲ್ಲಿ ಸೂರ್ಯ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದು, ಭೂಮಿ ಮತ್ತು ಇತರ ಗ್ರಹಗಳ ಮೇಲೆ ಅಪಾರ ಪರಿಣಾಮ ಬೀರುತ್ತದೆ. ಸೌರ ಜ್ವಾಲೆಗಳು ಹಾಗೂ ಕೊರೋನಲ್ ಮಾಸ್ ಇಜೆಕ್ಷನ್‌ನಂತಹ ಸೂರ್ಯನ ಚಟುವಟಿಕೆಗಳು ನಮ್ಮ ಸಂಪರ್ಕ, ಉಪಗ್ರಹಗಳು ಹಾಗೂ ಭೂಮಿಯಲ್ಲಿ ವಿದ್ಯುತ್ ಪೂರೈಕೆಯ ಮೇಲೂ ಇದು ಪರಿಣಾಮ ಬೀರಬಲ್ಲವು.

Latest Videos

undefined

ಬಾಹ್ಯಾಕಾಶ ವಾತಾವರಣ ಹೇಗಿರಲಿದೆ ಎಂದು ತಿಳಿದು, ನಮ್ಮ ಬಾಹ್ಯಾಕಾಶ ಯೋಜನೆಗಳು ಹಾಗೂ ತಂತ್ರಜ್ಞಾನಗಳನ್ನು ಸುರಕ್ಷಿತವಾಗಿಡಲು ಸೂರ್ಯ ಹೇಗೆ ವರ್ತಿಸುತ್ತದೆ ಎಂದು ತಿಳಿಯುವುದು ಮುಖ್ಯವಾಗಿದೆ.

ಭಾರತದ ಮೊದಲ ಸೌರ ಅನ್ವೇಷಣಾ ಯೋಜನೆಯ ಪ್ರಮುಖ ವೈಜ್ಞಾನಿಕ ಉದ್ದೇಶಗಳು:

1. ಸೂರ್ಯನ ಕೊರೋನಾದ ಅಧ್ಯಯನ:

ಆದಿತ್ಯ ಎಲ್1 ಯೋಜನೆ ಕೊರೋನಾ ಎಂದು ಕರೆಯಲಾಗುವ ಸೂರ್ಯನ ಹೊರ ಪದರದ ಅನ್ವೇಷಣೆ ನಡೆಸುವ ಗುರಿ ಹೊಂದಿದೆ. ಕೊರೋನಾ ಎನ್ನುವುದು ಒಂದು ವಿಸ್ಮಯಕಾರಿ ಅಂಗವಾಗಿದ್ದು, ಇದು ಸೂರ್ಯನಿಂದ ಆರಂಭಗೊಂಡು, ಬಾಹ್ಯಾಕಾಶದಲ್ಲಿ ಮಿಲಿಯಾಂತರ ಕಿಲೋಮೀಟರ್‌ಗಳಷ್ಟು ಚಲಿಸುತ್ತದೆ. ಗ್ರಹಣದ ಸಂದರ್ಭದಲ್ಲಿ, ಸೂರ್ಯ ಸಂಪೂರ್ಣವಾಗಿ ಮುಚ್ಚಲ್ಪಟ್ಟಾಗ ನಮಗೆ ಈ ಕೊರೋನಾ ಭಾಗ ಕಾಣಿಸುತ್ತದೆ.

ಸೂರ್ಯನ ಕೊರೋನಾ 'ಸೌರ ಗಾಳಿ'ಗೆ (solar wind) ಅತ್ಯಂತ ನಿಕಟವಾಗಿ ಸಂಬಂಧಿಸಿರುವುದರಿಂದ, ಅದರ ಅಧ್ಯಯನ ಅತ್ಯಂತ ಮುಖ್ಯವಾಗಿದೆ. ಇದು ಒಂದು ರೀತಿ ಸೂರ್ಯನಿಂದ ಬರುವ ಚಾರ್ಜ್ ಹೊಂದಿರುವ ಸಣ್ಣ ಕಣಗಳ ತೊರೆಯಂತೆ ಕಂಡುಬರುತ್ತದೆ. ಈ ಕಣಗಳು ಭೂಮಿ ಮತ್ತು ಇತರ ಗ್ರಹಗಳ ಸುತ್ತಲಿನ ಬಾಹ್ಯಾಕಾಶದ ಮೇಲೆ ಪ್ರಭಾವ ಬೀರುತ್ತವೆ. ಆದ್ದರಿಂದ ಕೊರೋನಾ ಕುರಿತು ಹೆಚ್ಚು ತಿಳಿದುಕೊಳ್ಳುವುದರಿಂದ ನಮಗೆ ಬಾಹ್ಯಕಾಶ ಹವಾಮಾನದ ಕುರಿತು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ.

ಭಾರತದ ಸೂರ್ಯ ಶಿಖಾರಿ.. 'ಆದಿತ್ಯ' ಮೊದಲ ಚಿತ್ರಗಳನ್ನು ಬಿಡುಗಡೆ ಮಾಡಿದ ಇಸ್ರೋ!

2. ಸೂರ್ಯನ ಕಾಂತೀಯ ಕ್ಷೇತ್ರದ ಅನ್ವೇಷಣೆ

ಸೂರ್ಯನ ಕಾಂತೀಯ ಕ್ಷೇತ್ರ ಸನ್ ಸ್ಪಾಟ್‌ಗಳು, ಸೌರ ಜ್ವಾಲೆಗಳು, ಹಾಗೂ ಕೊರೋನಲ್ ಮಾಸ್ ಇಜೆಕ್ಷನ್ (CME) ನಂತಹ ಹಲವು ಸೌರ ಚಟುವಟಿಕೆಗಳಿಗೆ ಸಂಬಂಧಿಸಿದೆ. ಅಂದರೆ, ಸೂರ್ಯನಲ್ಲಿ ನಡೆಯುವ ಚಟುವಟಿಕೆಗಳಲ್ಲಿ ಸೂರ್ಯನ ಕಾಂತೀಯ ಕ್ಷೇತ್ರವೂ ಭಾಗಿಯಾಗಿದೆ. ಈ ಚಟುವಟಿಕೆಗಳು ಬಾಹ್ಯಾಕಾಶ ವಾತಾವರಣದ ಮೇಲೆ ಭಾರೀ ಪ್ರಭಾವ ಬೀರಿ, ಉಪಗ್ರಹಗಳು, ಭೂಮಿಯ ಮೇಲಿನ ಪವರ್ ಗ್ರಿಡ್‌ಗಳು, ಹಾಗೂ ಸಂಚರಣಾ (ನ್ಯಾವಿಗೇಶನ್) ವ್ಯವಸ್ಥೆಯ ಮೇಲೆ ಗಂಭೀರ ಪ್ರಭಾವ ಉಂಟುಮಾಡಬಲ್ಲವು. ಆದಿತ್ಯ ಎಲ್1 (Aditya L1) ಯೋಜನೆ ಸೂರ್ಯನ ಕಾಂತೀಯ ಕ್ಷೇತ್ರವನ್ನು ಅತ್ಯಂತ ನಿಖರವಾಗಿ ಗಮನಿಸುವ ಗುರಿ ಹೊಂದಿದೆ. ಇದು ವಿಜ್ಞಾನಿಗಳಿಗೆ ಸೌರ ಚಟುವಟಿಕೆಗಳನ್ನು ಊಹಿಸಲು, ಅವುಗಳು ನಮ್ಮ ತಂತ್ರಜ್ಞಾನ ಆಧಾರಿತವಾದ ಜಗತ್ತಿನ ಮೇಲೆ ಎಂತಹ ಪರಿಣಾಮ ಬೀರಬಹುದು ಎಂದು ತಿಳಿಯಲು ನೆರವಾಗುತ್ತದೆ.

3. ಸೌರ ಸ್ಫೋಟಗಳು ಮತ್ತು ಜ್ವಾಲೆಗಳನ್ನು ಅರ್ಥೈಸಿಕೊಳ್ಳುವುದು

ಸೌರ ಜ್ವಾಲೆಗಳು ಮತ್ತು ಸಿಎಂಇಗಳು ಸೂರ್ಯನ ಮೇಲೆ ನಡೆಯುವ ಭಾರೀ ಸ್ಫೋಟಗಳಾಗಿದ್ದು, ಬಾಹ್ಯಾಕಾಶಕ್ಕೆ ಅಪಾರ ಪ್ರಮಾಣದ ಶಕ್ತಿ ಮತ್ತು ಚಾರ್ಜ್ ಹೊಂದಿರುವ ಕಣಗಳನ್ನು ಬಿಡುಗಡೆಗೊಳಿಸುತ್ತವೆ. ಕೆಲವು ಬಾರಿ, ಈ ಸ್ಫೋಟಗಳು ಅತ್ಯಂತ ಪ್ರಬಲ ಕ್ಷ-ಕಿರಣಗಳು, ನೇರಳಾತೀತ ಕಿರಣಗಳು ಹಾಗೂ ಶಕ್ತಿಶಾಲಿ ಕಣಗಳನ್ನು ಉಂಟುಮಾಡುತ್ತವೆ. ಇವು ಬಾಹ್ಯಾಕಾಶ ಯೋಜನೆಗಳಿಗೆ, ಗಗನಯಾತ್ರಿಗಳಿಗೆ ಹಾಗೂ ಬಾಹ್ಯಾಕಾಶದಲ್ಲಿರುವ ಉಪಗ್ರಹಗಳಿಗೆ ಅಪಾಯಕಾರಿಯಾಗಬಲ್ಲವು.

 ಕ್ಷ-ಕಿರಣಗಳು (ಎಕ್ಸ್-ರೇ) ಅತ್ಯಂತ ಶಕ್ತಿಶಾಲಿ ಬೆಳಕಾಗಿದ್ದು, ಅವುಗಳನ್ನು ನಾವು ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ. ಆದರೆ ಅವುಗಳು ನಮ್ಮ ಚರ್ಮ, ಮಾಂಸಖಂಡಗಳ ಮೂಲಕ ತೂರಿ ಹೋಗಬಲ್ಲವು.  ನೇರಳಾತೀತ ಕಿರಣಗಳು ನಾವು ನೋಡುವ ಬೆಳಕಿನಿಂದಲೂ ಹೆಚ್ಚು ಶಕ್ತಿಶಾಲಿ ಬೆಳಕಾಗಿದೆ. ಒಂದು ವೇಳೆ ಬಿಸಿಲಿನಲ್ಲಿ ಜಾಸ್ತಿ ಹೊತ್ತು ಇದ್ದರೆ, ನೇರಳಾತೀತ ಕಿರಣಗಳು ಮೈಯಲ್ಲಿ ಸನ್ ಬರ್ನ್ ಎಂದು ಕರೆಯುವ ಉರಿಯುವಿಕೆಯನ್ನು ಉಂಟು ಮಾಡಬಲ್ಲವು.

ಆದಿತ್ಯ ಎಲ್1 ಯೋಜನೆ ಈ ಸೂರ್ಯನ ಸ್ಫೋಟಗಳನ್ನು ಚೆನ್ನಾಗಿ ಅರ್ಥೈಸಿಕೊಳ್ಳುವ ಉದ್ದೇಶ ಹೊಂದಿದೆ. ಆ ಮೂಲಕ, ಇಂತಹ ಸ್ಫೋಟಗಳು ಯಾವಾಗ ಸಂಭವಿಸಬಹುದು, ಬಾಹ್ಯಾಕಾಶದಲ್ಲಿರುವ ವಸ್ತುಗಳ ಮೇಲೆ ಅವು ಎಂತಹ ಪರಿಣಾಮ ಬೀರಬಹುದು ಎಂದು ತಿಳಿಯಲು ಸುಲಭವಾಗುತ್ತದೆ.

ಚಂದ್ರಯಾನದ ಬೆನ್ನಲ್ಲೇ ಸೂರ್ಯನ ಅಧ್ಯಯನಕ್ಕೆ ಇಸ್ರೋ ಸಜ್ಜು: ಶ್ರೀಹರಿಕೋಟಕ್ಕೆ ಬಂದ ಆದಿತ್ಯ-ಎಲ್‌1 ಉಪಗ್ರಹ

4. ಸೂರ್ಯನ ಫೋಟೋಸ್ಫಿಯರ್ ಅಧ್ಯಯನ

ಸೂರ್ಯನ ಫೋಟೋಸ್ಫಿಯರ್ (Photosphere) ಎನ್ನುವುದು ಕಣ್ಣಿಗೆ ಕಾಣುವ ಸೂರ್ಯನ ಪದರವಾಗಿದ್ದು, ಭೂಮಿಗೆ ತಲುಪುವ ಸೂರ್ಯನ ಕಿರಣಗಳ ಪ್ರಾಥಮಿಕ ಮೂಲವಾಗಿದೆ. ಫೋಟೋಸ್ಫಿಯರ್ ಅನ್ನು ಕೂಲಂಕಷವಾಗಿ ಅಧ್ಯಯನ ನಡೆಸುವುದರಿಂದ, ವಿಜ್ಞಾನಿಗಳಿಗೆ ಸೂರ್ಯ ಹೇಗೆ ಶಕ್ತಿ ಉತ್ಪಾದಿಸುತ್ತದೆ, ಸೂರ್ಯನ ಮೇಲೆ ನಡೆಯುವ ಚಟುವಟಿಕೆಗಳೇನು, ಮತ್ತು ಭೂಮಿ ಹಾಗೂ ಭೂಮಿಯ ವಾತಾವರಣದ ಮೇಲೆ ಅದರ ಪ್ರಭಾವಗಳನ್ನು ತಿಳಿಯಲು ನೆರವಾಗುತ್ತದೆ. ಆದಿತ್ಯ ಎಲ್1 ಸೂರ್ಯನ ಮೂಲಭೂತ ಚಟುವಟಿಕೆಗಳ ಕುರಿತು ನಮ್ಮ ಜ್ಞಾನವನ್ನು ಹೆಚ್ಚಿಸಲು ಅವಶ್ಯಕವಾದ ಮಾಹಿತಿಗಳನ್ನು ಪೂರೈಸಲಿದೆ.

5. ಸೌರ ವ್ಯತ್ಯಾಸಗಳ ಗಮನಿಸುವಿಕೆ

ಸೂರ್ಯನ ವರ್ತನೆಗಳು ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಸೂರ್ಯನಲ್ಲಿ ಹನ್ನೊಂದು ವರ್ಷಗಳ ದೀರ್ಘ ಅವಧಿ ತೆಗೆದುಕೊಳ್ಳುವಂತಹ ಬದಲಾವಣೆಗಳೂ ತಲೆದೋರುತ್ತವೆ. ಈ ಅವಧಿಗಳಲ್ಲಿ, ಸನ್ ಸ್ಪಾಟ್‌ಗಳು, ಸೌರ ಜ್ವಾಲೆಗಳಂತಹ ಸೂರ್ಯನ ಚಟುವಟಿಕೆಗಳು ಅಪಾರವಾಗಿ ಬದಲಾಗುತ್ತವೆ. ಇಂತಹ ಬದಲಾಗುವ ಚಟುವಟಿಕೆಗಳು ಬಾಹ್ಯಾಕಾಶ ಹವಾಮಾನ (ಬಾಹ್ಯಾಕಾಶದ ಪರಿಸ್ಥಿತಿ) ಹಾಗೂ ಭೂಮಿಯ ವಾತಾವರಣದ ಮೇಲೆ ಪ್ರಮುಖ ಪರಿಣಾಮಗಳನ್ನು ಬೀರುತ್ತವೆ. ಆದಿತ್ಯ ಎಲ್1 ಯೋಜನೆ ದೀರ್ಘಾವಧಿಯಲ್ಲಿ ಸೂರ್ಯನಲ್ಲಿ ಬದಲಾವಣೆಗಳನ್ನು ಗಮನಿಸಲು ನೆರವಾಗಿ, ಸೌರ ಚಕ್ರಗಳನ್ನು ಅಧ್ಯಯನ ಮಾಡಿ, ಭೂಮಿಯ ಮೇಲೆ ಅವುಗಳ ಪರಿಣಾಮಗಳನ್ನು ತಿಳಿಯಲು ಸಹಾಯಕವಾಗಲಿದೆ.

ADITYA-L1: ಚಂದ್ರಯಾನದ ಬಳಿಕ ಇಸ್ರೋದ ‘ಸೂರ‍್ಯಯಾನ!

6. ಬಾಹ್ಯಾಕಾಶ ವಾತಾವರಣ ಮುನ್ಸೂಚನೆ

ಸೂರ್ಯನ ಚಟುವಟಿಕೆಗಳಿಂದ ಉಂಟಾಗುವ ಬಾಹ್ಯಾಕಾಶ ವಾತಾವರಣ ಬದಲಾವಣೆಗಳ ಕಾರಣದಿಂದ ಉಪಗ್ರಹ ಸಂವಹನಕ್ಕೆ ಅಡ್ಡಿ ಎದುರಾಗಿ, ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳಿಗೆ ತೊಂದರೆ ಉಂಟಾಗಬಹುದು. ಅದರೊಡನೆ, ಭೂಮಿಯ ಸುತ್ತಲೂ ಇರುವ ಅಯನೋಸ್ಫಿಯರ್ ಮೇಲೂ ಪರಿಣಾಮ ಬೀರಬಹುದು.

ಅಯನೋಸ್ಫಿಯರ್ ಎನ್ನುವುದು ಭೂಮಿಯ ವಾತಾವರಣದ ಮೇಲ್ಭಾಗದಲ್ಲಿರುವ ಪದರವಾಗಿದ್ದು, ಅಯಾನ್‌ಗಳು ಮತ್ತು ಸ್ವತಂತ್ರ ಇಲೆಕ್ಟ್ರಾನ್‌ಗಳನ್ನು ಒಳಗೊಂಡಿದೆ. ಇದು ರೇಡಿಯೋ ಸಂಕೇತಗಳನ್ನು ಪ್ರತಿಫಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಮತ್ತು ಜಾಗತಿಕ ಸಂವಹನ ಹಾಗೂ ನ್ಯಾವಿಗೇಶನ್ ವ್ಯವಸ್ಥೆಗಳ ಮೇಲೆ ಪ್ರಭಾವ ಬೀರುತ್ತದೆ. 

ಅಯಾನ್‌ಗಳೆಂದರೆ ಇಲೆಕ್ಟ್ರಾನ್‌ಗಳನ್ನು ಪಡೆದುಕೊಂಡ, ಅಥವಾ ಕಳೆದುಕೊಂಡ ಪರಮಾಣುಗಳು ಅಥವಾ ಅಣುಗಳಾಗಿದ್ದು, ಅವುಗಳು ಧನಾತ್ಮಕ ಅಥವಾ ಋಣಾತ್ಮಕ ಚಾರ್ಜ್ ಹೊಂದಿರುತ್ತವೆ. ಈ ಚಾರ್ಜ್ ಅವುಗಳನ್ನು ವಿದ್ಯುತ್ ಸಕ್ರಿಯವಾಗಿಸಿ, ಅವುಗಳ ಸುತ್ತಲಿನ ವಿವಿಧ ಭೌತಿಕ ಮತ್ತು ರಾಸಾಯನಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವಂತೆ ಮಾಡುತ್ತವೆ. ಆದಿತ್ಯ ಎಲ್1 ಯೋಜನೆ ಸೌರ ಚಟುವಟಿಕೆಗಳನ್ನು ನೈಜ ಸಮಯದಲ್ಲಿ ಗಮನಿಸಿ, ಬಾಹ್ಯಾಕಾಶ ವಾತಾವರಣದ ಆಯಾಮಗಳ ಕುರಿತು ನಮ್ಮ ಅರ್ಥೈಸುವಿಕೆಯನ್ನು ಹೆಚ್ಚಿಸಲಿದೆ.

ಅವುಗಳನ್ನು ಹೆಚ್ಚು ಅರ್ಥ ಮಾಡಿಕೊಳ್ಳುವುದರಿಂದ, ಇನ್ನಷ್ಟು ನಿಖರವಾದ ಬಾಹ್ಯಾಕಾಶ ಹವಾಮಾನ ಮುನ್ಸೂಚನೆ ಪಡೆದು, ಸೌರ ಚಟುವಟಿಕೆಗಳ ಅಡ್ಡ ಪರಿಣಾಮಗಳು ಬಾಹ್ಯಾಕಾಶ ಯೋಜನೆಗಳು ಮತ್ತು ಭೂಮಿಯ ಮೇಲಿನ ತಂತ್ರಜ್ಞಾನಗಳನ್ನು ಬಾಧಿಸದಂತೆ ತಡೆಯಲು ಸಾಧ್ಯವಾಗಲಿದೆ.

7. ಯುವಿ ಇಮೇಜಿಂಗ್ ಹಾಗೂ ಸ್ಪೆಕ್ಟ್ರೋಸ್ಕೊಪಿ

ನೇರಳಾತೀತ ಕಿರಣದಲ್ಲಿ ಸೂರ್ಯನ ಛಾಯಾಚಿತ್ರಗಳನ್ನು ತೆಗೆದು, ಸೂರ್ಯನ ಹೊರ ಪದರಗಳಾದ ಕ್ರೋಮೋಸ್ಫಿಯರ್ ಹಾಗೂ ಟ್ರಾನ್ಸಿಷನ್ ಪ್ರದೇಶಗಳ ಅಧ್ಯಯನ ನಡೆಸಲು ನೆರವಾಗುತ್ತದೆ. ಇದರಿಂದ ನಮಗೆ ಸೂರ್ಯನ ವಾತಾವರಣ ಹಾಗೂ ಗುಣಲಕ್ಷಣಗಳನ್ನು ತಿಳಿಯಲು ಸಾಧ್ಯವಾಗುತ್ತದೆ.

8. ಪೇಲೋಡ್ ಪ್ರಯೋಗಗಳು

ಆದಿತ್ಯ ಎಲ್1 ಹೊಂದಿರುವ ವೈಜ್ಞಾನಿಕ ಉಪಕರಣಗಳು ವಿವಿಧ ಪರೀಕ್ಷೆಗಳು ಹಾಗೂ ಸಂಶೋಧನೆಗಳನ್ನು ಕೈಗೊಂಡು, ಚಂದ್ರನ ಕುರಿತು ನಮ್ಮ ಜ್ಞಾನವನ್ನು ಇನ್ನಷ್ಟು ವೃದ್ಧಿಸಿ, ನಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ಗಳಿಸಲಿದೆ. ಆದಿತ್ಯ ಎಲ್1 ಸೂರ್ಯನ ಅತ್ಯಂತ ಹೊರ ಪದರವಾದ ಕೊರೋನಾದ ಕುರಿತು ನಮಗೆ ಮಾಹಿತಿ ನೀಡಲಿದೆ.


ಭಾರತದ ಮೊದಲ ಸೌರ ಯೋಜನೆಯ ವೈಶಿಷ್ಟ್ಯಗಳು

1. ಕೊರೊನಾ ವೀಕ್ಷಣೆ

ಆದಿತ್ಯ ಎಲ್1 ಯೋಜನೆಯ ಪ್ರಮುಖ ಗುರಿಯೆಂದರೆ, ಸೂರ್ಯನ ಅತ್ಯಂತ ಹೊರಪದರವಾದ ಕೊರೋನಾದ ಅಧ್ಯಯನ ನಡೆಸುವುದು. ಕೊರೋನಾ ಸೂರ್ಯನ ಮೇಲ್ಮೈಗಿಂತ ಹೆಚ್ಚು ಬಿಸಿಯಾಗಿದ್ದು, ಅದು ಹೇಗೆ ವರ್ತಿಸುತ್ತದೆ ಎಂದು ತಿಳಿಯುವುದು ಸೌರ ವಿಜ್ಞಾನದಲ್ಲಿ ಅತ್ಯಂತ ಆಕರ್ಷಕ ವಿಚಾರವಾಗಿದೆ.

2. ಸೌರ ಗಾಳಿಯ ಅಧ್ಯಯನ

ಆದಿತ್ಯ ಎಲ್1 ಯೋಜನೆ, ಸೌರ ಗಾಳಿಗಳು ಹೇಗೆ ರೂಪುಗೊಳ್ಳುತ್ತವೆ, ಹೇಗೆ ವೇಗವರ್ಧನೆಗೊಳ್ಳುತ್ತವೆ ಎಂದು ಅಧ್ಯಯನ ನಡೆಸುತ್ತದೆ. ಸೌರ ಗಾಳಿಯಲ್ಲಿ ಸೂರ್ಯನಿಂದ ಚಲಿಸುವ ಚಾರ್ಜ್ ಹೊಂದಿರುವ ಕಣಗಳಿದ್ದು, ಅವುಗಳು ಬಾಹ್ಯಾಕಾಶ ವಾತಾವರಣದ ಮೇಲೆ ಪ್ರಭಾವ ಬೀರುತ್ತವೆ. ಆ ಮೂಲಕ ಭೂಮಿಯ ಮ್ಯಾಗ್ನೆಟೋಸ್ಫಿಯರ್ ಮತ್ತು ವಾತಾವರಣದ ಮೇಲೆ ಪರಿಣಾಮ ಉಂಟುಮಾಡುತ್ತವೆ.

3. ಮ್ಯಾಗ್ನೆಟೋಮೀಟರ್

ಆದಿತ್ಯ ಎಲ್1 ಉಪಗ್ರಹ ಮ್ಯಾಗ್ನೆಟೋಮೀಟರ್ ಎಂಬ ಉಪಕರಣ ಹೊಂದಿದ್ದು, ಸೂರ್ಯನ ಕಾಂತೀಯ ಕ್ಷೇತ್ರವನ್ನು ಅಳೆದು, ಬದಲಾವಣೆಗಳನ್ನು ಗಮನಿಸುತ್ತದೆ. ಕಾಂತೀಯ ಕ್ಷೇತ್ರಗಳು ಸೌರ ಜ್ವಾಲೆಗಳು, ಕೊರೋನಲ್ ಮಾಸ್ ಇಜೆಕ್ಷನ್ (ಸಿಎಂಇ) ನಂತಹ ಇತರ ಸೌರ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

4. ವಿಸಿಬಲ್ ಎಮಿಷನ್ ಲೈನ್ ಕೊರೊನಾಗ್ರಾಫ್ (ವಿಇಎಲ್‌ಸಿ)

ಆದಿತ್ಯ ಎಲ್1 ಹೊಂದಿರುವ ಒಂದು ಮಹತ್ವದ ಪೇಲೋಡ್ ಎಂದರೆ ವಿಇಎಲ್‌ಸಿ ಆಗಿದ್ದು, ಸೂರ್ಯನ ಹೊರ ಪ್ರದೇಶಗಳ ಚಿತ್ರ ತೆಗೆದು, ಕೊರೋನಾದ ಅಧ್ಯಯನ ನಡೆಸಲಿದೆ. ಇದು ನಿರ್ದಿಷ್ಟವಾದ ದೃಗ್ಗೋಚರ ಮತ್ತು ನೇರಳಾತೀತ ಬೆಳಕನ್ನು ಬಳಸಿ ಛಾಯಾಚಿತ್ರಗಳನ್ನು ತೆಗೆಯಲಿದೆ. ಈ ರೀತಿ ತೆಗೆದ ಛಾಯಾಚಿತ್ರಗಳು ವಿಜ್ಞಾನಿಗಳಿಗೆ ಕೊರೊನಾದಲ್ಲಿರುವ ಆಯಾಮಗಳು ಮತ್ತು ರಚನೆಗಳ ಕುರಿತು ತಿಳಿಯಲು ನೆರವಾಗುತ್ತವೆ.

5. ಸೋಲಾರ್ ಅಲ್ಟ್ರಾವಯೊಲೆಟ್ ಇಮೇಜಿಂಗ್ ಟೆಲಿಸ್ಕೋಪ್ (ಎಸ್‌ಯುಐಟಿ)

ಎಸ್‌ಯುಐಟಿ ಸೂರ್ಯನನ್ನು ಅಲ್ಟ್ರಾವಯೊಲೆಟ್ ಸ್ಪೆಕ್ಟ್ರಮ್ ನಲ್ಲಿ ಗಮನಿಸಲು ವಿನ್ಯಾಸಗೊಳಿಸಿರುವ ಉಪಕರಣವಾಗಿದೆ. ಅಲ್ಟ್ರಾವಯೊಲೆಟ್ (ನೇರಳಾತೀತ ಕಿರಣ) ಸ್ಪೆಕ್ಟ್ರಮ್ ಎನ್ನುವುದು ಕಣ್ಣಿಗೆ ಕಾಣುವುದರಿಂದ ಕಡಿಮೆ ತರಂಗಾಂತರ ಹೊಂದಿರುವ ಇಲೆಕ್ಟ್ರೋಮ್ಯಾಗ್ನೆಟಿಕ್ ಅಲೆಗಳ ರೂಪದಲ್ಲಿದ್ದು, ಇದು ಮಾನವರ ಕಣ್ಣಿಗೆ ಕಾಣಿಸುವುದಿಲ್ಲ. ಇದು ಸೂರ್ಯನ ವಾತಾವರಣದ ಅತ್ಯಂತ ಹೆಚ್ಚಿನ ರೆಸಲ್ಯೂಶನ್ ಹೊಂದಿರುವ ಚಿತ್ರಗಳನ್ನು ತೆಗೆದು, ಸೂರ್ಯನ ಕ್ರೋಮೋಸ್ಫಿಯರ್ ಮತ್ತು ಟ್ರಾನ್ಸಿಷನ್ ಪ್ರದೇಶಗಳ ಅಧ್ಯಯನ ನಡೆಸಲು ನೆರವಾಗುತ್ತದೆ.

6. ಪ್ಲಾಸ್ಮಾ ಅನಲೈಸರ್ ಪ್ಯಾಕೇಜ್ ಫಾರ್ ಆದಿತ್ಯ (ಪಿಎಪಿಎ)

ಸೌರ ಗಾಳಿಯಲ್ಲಿರುವ ಚಾರ್ಜ್ ಹೊಂದಿರುವ ಕಣಗಳ ಪರೀಕ್ಷೆ ನಡೆಸಲು, ಅವುಗಳ ವೇಗ ಮತ್ತು ಸಂಯೋಜನೆಯನ್ನು ಅಧ್ಯಯನ ನಡೆಸಲು ವಿನ್ಯಾಸಗೊಳಿಸಲಾಗಿದೆ. ಬಾಹ್ಯಾಕಾಶದ ವಾತಾವರಣ ಮುನ್ಸೂಚನೆ ಪಡೆಯಲು, ಭೂಮಿಯ ತಂತ್ರಜ್ಞಾನಗಳ ಕುರಿತು ಮಾಹಿತಿ ಪಡೆಯಲು ಸೌರ ಗಾಳಿಯ ಕುರಿತು ಮಾಹಿತಿ ಪಡೆಯುವುದು ಅವಶ್ಯಕವಾಗಿದೆ.

7. ಆದಿತ್ಯ ಸೋಲಾರ್ ವಿಂಡ್ ಪಾರ್ಟಿಕಲ್ ಎಕ್ಸ್‌ಪರಿಮೆಂಟ್ (ಎಎಸ್‌ಪಿಇಎಕ್ಸ್)

‌ಪಿಇಎಕ್ಸ್ ಉಪಕರಣ ಸೌರ ಗಾಳಿಯ ಲಕ್ಷಣಗಳಲ್ಲಿನ ಬದಲಾವಣೆಗಳು ಮತ್ತು ಭೂಮಿಯ ಮ್ಯಾಗ್ನೆಟೋಸ್ಫಿಯರ್ ಮತ್ತು ಅಯನೋಸ್ಫಿಯರ್ ಮೇಲೆ ಅದರ ಪ್ರಭಾವಗಳನ್ನು ಅಧ್ಯಯನ ನಡೆಸಲಿದೆ.

8. ಬಾಹ್ಯಾಕಾಶ ಹವಾಮಾನ ಅಧ್ಯಯನ

ಆದಿತ್ಯ ಎಲ್1 ಕಲೆಹಾಕುವ ಮಾಹಿತಿಗಳು ಬಾಹ್ಯಾಕಾಶ ಹವಾಮಾನ ಅಧ್ಯಯನ ನಡೆಸಲು ಅತ್ಯಂತ ಮಹತ್ವದ್ದಾಗಿವೆ. ಬಾಹ್ಯಾಕಾಶ ಹವಾಮಾನ ಎನ್ನುವುದು ಬಾಹ್ಯಾಕಾಶದ ಪರಿಸ್ಥಿತಿಗಳು ಮತ್ತು ಉಪಗ್ರಹಗಳು, ಸಂವಹನ ಜಾಲ ಮತ್ತು ಪವರ್ ಗ್ರಿಡ್‌ಗಳ ಮೇಲೆ ಅವುಗಳ ಪ್ರಭಾವವನ್ನು ಒಳಗೊಂಡಿದೆ. ಬಾಹ್ಯಾಕಾಶ ವಾತಾವರಣದ ಕುರಿತ ಜಾಗೃತಿ ನಮ್ಮ ತಂತ್ರಜ್ಞಾನ ಅವಲಂಬಿತ ಸಮಾಜಕ್ಕೆ ಅತ್ಯವಶ್ಯಕವಾಗಿದೆ.

9. ಕಕ್ಷೆ ಮತ್ತು ಸ್ಥಾನ

ಆದಿತ್ಯ ಎಲ್1 ಅನ್ನು ಎಲ್1 ಲ್ಯಾಗ್ರೇಂಜ್ ಬಿಂದುವಿನ ಸುತ್ತಲಿನ ಹ್ಯಾಲೋ ಕಕ್ಷೆಯಲ್ಲಿ ಅಳವಡಿಸಲಾಗುತ್ತದೆ. ಇದು ಭೂಮಿಯಿಂದ ಸೂರ್ಯನೆಡೆಗೆ 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿದೆ. ಈ ಬಿಂದುವಿನಲ್ಲಿ ಅಳವಡಿಸುವುದರಿಂದ, ಸೂರ್ಯನ ಕಡೆಗೆ ತಡೆರಹಿತವಾಗಿ ನೋಡಿ, ಸೂರ್ಯನ ಚಟುವಟಿಕೆಗಳು ಮತ್ತು ಭೂಮಿಯ ಮೇಲೆ ಅದರ ಪ್ರಭಾವವನ್ನು ತಿಳಿಯಲು ನೆರವಾಗುತ್ತದೆ.

click me!