
ಸ್ಯಾಂಡಲ್‌ವುಡ್‌ನಲ್ಲಿ ನಾಯಕನಾಗಿಯೂ, ಖಳನಾಯಕನಾಗಿಯೂ ತನ್ನದೇ ಛಾಪು ಮೂಡಿಸಿರುವ ನಟ ವಜ್ರಾಂಗ್ ಶೆಟ್ಟಿ ಈಗ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದ್ದಾರೆ. ಈ ಬಾರಿ ಅವರು ಕಾಲಿವುಡ್‌ಗೆ ಭರ್ಜರಿ ಎಂಟ್ರಿ ನೀಡಿದ್ದು, ತಮಿಳು ಸೂಪರ್‌ಸ್ಟಾರ್ ವಿಜಯ್ ದಳಪತಿ ಅಭಿನಯದ ಬಹುನಿರೀಕ್ಷಿತ ಹಾಗೂ ಅವರ ವಿದಾಯ ಚಿತ್ರವೆಂದು ಹೇಳಲಾಗುತ್ತಿರುವ 'ಜನನಾಯಗನ್' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.
ಕಳೆದ ವಾರ ಬಿಡುಗಡೆಯಾದ ಜನನಾಯಗನ್ ಸಿನಿಮಾ ತಮಿಳುನಾಡಿನಲ್ಲಿ ಭರ್ಜರಿ ಚರ್ಚೆಗೆ ಗ್ರಾಸವಾಗಿದ್ದು, ಚಿತ್ರದ ಖಳನಾಯಕ ಬಾಬಿ ಡಿಯೋಲ್ ನಂತರ ಗಮನ ಸೆಳೆದ ಮತ್ತೊಂದು ಹೆಸರು ವಜ್ರಾಂಗ್ ಶೆಟ್ಟಿ. ವಿಶೇಷವಾಗಿ ವಿಜಯ್ ಮತ್ತು ವಜ್ರಾಂಗ್ ನಡುವಿನ ಮಾಸ್ ಆ್ಯಕ್ಷನ್ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾಲಿವುಡ್ ಸಿನಿಪ್ರಿಯರಿಂದ ಮೆಚ್ಚುಗೆ ಗಳಿಸಿವೆ.
ಮೂಲತಃ ಕುಂದಾಪುರದವರಾದ ಮಣಿ ಶೆಟ್ಟಿ, ಚಿತ್ರರಂಗದಲ್ಲಿ ವಜ್ರಾಂಗ್ ಶೆಟ್ಟಿ ಎಂದೇ ಪರಿಚಿತರು. 2014ರಲ್ಲಿ ಮಿಸ್ಟರ್ ಕುಂದಾಪುರ ಪಟ್ಟ ಗೆದ್ದ ಅವರು, ಸುಮಾರು 6.3 ಅಡಿ ಎತ್ತರದ ಆಕರ್ಷಕ ವ್ಯಕ್ತಿತ್ವ ಮತ್ತು ದಿಟ್ಟ ಮೈಕಟ್ಟಿನ ಮೂಲಕ ಆರಂಭದಿಂದಲೇ ಗಮನ ಸೆಳೆದಿದ್ದರು. ಇದೇ ಕಾರಣಕ್ಕೆ ನಾಯಕ ಹಾಗೂ ಖಳನಾಯಕ ಎರಡೂ ಬಗೆಯ ಪಾತ್ರಗಳಲ್ಲಿ ಯಶಸ್ವಿಯಾಗಿ ಗುರುತಿಸಿಕೊಂಡಿದ್ದಾರೆ.
ವಿನಯ್ ರಾಜ್‌ಕುಮಾರ್ ಅಭಿನಯದ 'ಸಿದ್ದಾರ್ಥ' ಚಿತ್ರದ ಮೂಲಕ ಖಳನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ವಜ್ರಾಂಗ್, ಪಾರ್ವತಮ್ಮ ರಾಜ್‌ಕುಮಾರ್ ಅವರ ವಜ್ರೇಶ್ವರಿ ಕಂಬೈನ್ಸ್ ಬ್ಯಾನರ್‌ನಿಂದ ತಮ್ಮ ಸಿನಿಪಯಣ ಆರಂಭಿಸಿದರು. ನಂತರ 'ಮಂತ್ರಂ' ಹಾಗೂ 'ಬಬ್ಲುಷಾ' ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿ ಗಮನ ಸೆಳೆದರು. ಪ್ರಜ್ವಲ್ ದೇವರಾಜ್ ಅಭಿನಯದ 'ಮಾದ ಮತ್ತು ಮಾನಸಿ' ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಅವರು, ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಸಿನಿಮಾ 'ಜೇಮ್ಸ್'ನಲ್ಲಿ ಪ್ರತಾಪ್ ಅರಸ್ ಎಂಬ ಖಳಪಾತ್ರದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು.
ಕನ್ನಡದ ಬಳಿಕ ಟಾಲಿವುಡ್‌ನಲ್ಲೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ ವಜ್ರಾಂಗ್ ಶೆಟ್ಟಿ, ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾದಲ್ಲಿ ವಿಷ್ಣು ಎಂಬ ಪಾತ್ರದ ಮೂಲಕ ತೆಲುಗು ಪ್ರೇಕ್ಷಕರ ಗಮನ ಸೆಳೆದರು. ವಿಶೇಷವಾಗಿ ಪ್ರಭಾಸ್ ಜೊತೆಗಿನ ಆ್ಯಕ್ಷನ್ ದೃಶ್ಯಗಳು ಇಂದಿಗೂ ಅಭಿಮಾನಿಗಳ ಮೆಚ್ಚಿನ ಕ್ಷಣಗಳಾಗಿ ಉಳಿದಿವೆ.
ಈಗ ಜನನಾಯಗನ್ ಮೂಲಕ ಕಾಲಿವುಡ್‌ನಲ್ಲೂ ಅದ್ದೂರಿ ಪ್ರವೇಶ ಮಾಡಿರುವ ವಜ್ರಾಂಗ್ ಶೆಟ್ಟಿ, ಕನ್ನಡದಿಂದ ತೆಲುಗು, ಅಲ್ಲಿಂದ ತಮಿಳು ಚಿತ್ರರಂಗದವರೆಗೆ ತಮ್ಮ ಪ್ರತಿಭೆಯ ಛಾಪು ಮೂಡಿಸುತ್ತಿದ್ದಾರೆ. ಪ್ರತಿಯೊಂದು ಭಾಷೆಯಲ್ಲೂ ತಮ್ಮದೇ ಆದ ಪ್ರಭಾವ ಬೀರುತ್ತಿರುವ ಈ ಕನ್ನಡದ ಪ್ರತಿಭೆ, ಮುಂದಿನ ದಿನಗಳಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟರಲ್ಲಿ ಒಬ್ಬರಾಗುವ ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.