
ಕ್ಯಾನ್ಸರ್‌ನಿಂದ ಶಸ್ತ್ರಚಿಕಿತ್ಸೆ ಪಡೆದು ಗುಣಮುಖರಾಗಿ ಮತ್ತೆ ಸಿನಿಮಾದಲ್ಲಿ ಆರ್ಭಟಿಸುತ್ತಿದ್ದಾರೆ ಶಿವರಾಜ್ ಕುಮಾರ್. ಅಮೆರಿಕದಲ್ಲಿ ಆರು ಗಂಟೆಗಳ ಕಾಲ ನಡೆದಿರುವ ಶಸ್ತ್ರಚಿಕಿತ್ಸೆಯ ಬಳಿಕವೂ ಹೆಚ್ಚು ರೆಸ್ಟ್ ಕೂಡ ಪಡೆಯದೇ ಮತ್ತೆ ನಟನೆಗೆ ಮರಳಿದ್ದಾರೆ. ತಾವು ಕಾಲ್ಷೀಟ್ ಕೊಟ್ಟಿರುವ ಚಿತ್ರಗಳಲ್ಲಿ ಶಿವಣ್ಣ ಬಿಜಿಯಾಗಿದ್ದಾರೆ. ಆರಂಭದಲ್ಲಿ ಕಿಮೋ ಥೆರಪಿ ಪಡೆದಿದ್ದ ಬಳಿಕವೂ ಸ್ವಲ್ಪವೂ ಅಚಲರಾಗದೇ ನಟ ಫಿಟ್ ಆ್ಯಂಡ್ ಫೈನ್ ಆಗಿದ್ದ ಕಾರಣ, ಅವರು ಅನಾರೋಗ್ಯದಿಂದ ಬಳಲುತ್ತಿದ್ದುದು ಬಹುತೇಕರಿಗೆ ತಿಳಿದೇ ಇರಲಿಲ್ಲ. ಹಲವು ತಿಂಗಳುಗಳ ಹಿಂದೆಯೇ ಅವರಿಗೆ ಈ ಸಮಸ್ಯೆಯ ಅರಿವು ಇದ್ದರೂ ಅದು ಬಹಿರಂಗಗೊಂಡಿರಲಿಲ್ಲ, ಸದಾ ಚಟುವಟಿಕೆಯಿಂದ ಇರುತ್ತಿದ್ದ ಅವರು ತಮ್ಮೊಳಗೊಂದು ಕ್ಯಾನ್ಸರ್ ಎಂಬ ರಾಕ್ಷಸ ಅಡಗಿದ್ದಾನೆ ಎನ್ನುವುದನ್ನು ತೋರಿಸಿಕೊಂಡೂ ಇರಲಿಲ್ಲ. ಆದರೆ, ಅಮೆರಿಕಕ್ಕೆ ಚಿಕಿತ್ಸೆಗೆ ಹೋಗಲಿದ್ದಾರೆ ಎನ್ನುವ ಸುದ್ದಿ ಬಹಿರಂಗಗೊಳ್ಳುತ್ತಲೇ ಅಭಿಮಾನಿಗಳು ಶಾಕ್ಗೆ ಒಳಗಾಗಿದ್ದರು. ಮೊದಲ ಕಿಮೋ ಥೆರಪಿ ಮಾರನೆಯ ದಿನವೇ ಶಿವಣ್ಣ, ಶೂಟಿಂಗ್ನಲ್ಲಿ ಭಾಗಿಯಾಗಿದ್ದು ಆ್ಯಕ್ಷನ್ ದೃಶ್ಯಗಳಲ್ಲಿಯೂ ಕಾಣಿಸಿಕೊಂಡಿದ್ದರು ಎನ್ನಲಾಗಿದೆ. ಆದ್ದರಿಂದ ಅವರ ಒಳಗೇ ಅನುಭವಿಸುತ್ತಿದ್ದ ನೋವು ಅವರ ಕುಟುಂಬಸ್ಥರಿಗೆ ಮಾತ್ರ ತಿಳಿದಿತ್ತು.
ಇದೀಗ ಎಲ್ಲವೂ ಯಶಸ್ವಿಯಾಗಿದೆ. 62ರ ಹರೆಯದಲ್ಲಿಯೂ ಯುವಕರನ್ನು ನಾಚಿಸುವಂತೆ ಶಿವರಾಜ್‌ಕುಮಾರ್ ಚಟುವಟಿಕೆಯಿಂದ ಓಡಾಡುತ್ತಿದ್ದಾರೆ. ಇದಾಗಲೇ ಹಲವಾರ ಸಂದರ್ಶನಗಳಲ್ಲಿ ನಟ ಕ್ಯಾನ್ಸರ್ ಬಗ್ಗೆ ಹೇಳಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ತಮ್ಮ ಮನೆಯಲ್ಲಿ ಹಲವರಿಗೆ ಕ್ಯಾನ್ಸರ್ ಇದ್ದ ವಿಷಯವನ್ನು ರಿವೀಲ್ ಮಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, ಶಿವಣ್ಣ ಅವರು ತಮ್ಮ ಮನೆಯಲ್ಲಿ ಯಾರಿಗೆಲ್ಲಾ ಕ್ಯಾನ್ಸರ್ ಇತ್ತು ಎಂಬ ಬಗ್ಗೆ ಹೇಳಿದ್ದಾರೆ. ಸಾಮಾನ್ಯವಾಗಿ ಕ್ಯಾನ್ಸರ್ ಕೂಡ ವಂಶಪಾರಂಪರ್ಯವಾಗಿ ಬರುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಇದೇ ಕಾರಣಕ್ಕೆ ಶಿವಣ್ಣ ಅವರಿಗೂ ಬಂದಿರಲಿಕ್ಕೆ ಸಾಕು ಎಂಬ ಅನಿಸಿಕೆ ನಟನ ಈ ಮಾತಿನಿಂದ ಈಗ ಬಯಲಾಗಿದೆ.
ಅಷ್ಟಕ್ಕೂ ಶಿವರಾಜ್ ಕುಮಾರ್ ಹೇಳಿದ್ದೇನೆಂದರೆ, ನನಗೆ ಮೊದಲು ವಿಷಯ ಗೊತ್ತಾದಾಗ ಪಾಸಿಟಿವ್ ಆಗಿ ಇದ್ದರೂ ಮನಸ್ಸಿನಲ್ಲಿ ಏನೋ ಒಂದು ಆತಂಕ ಇತ್ತು. ನನಗೆ ಏನಾದರೂ ಆಗಿಬಿಟ್ಟರೆ ಎನ್ನುವ ಭಯವೂ ಇತ್ತು. ಆದರೆ, ಕ್ಯಾನ್ಸರ್ ನಮ್ಮ ಮನೆಯಲ್ಲಿ ತುಂಬಾ ಮಂದಿಗೆ ಬಂದಿತ್ತು. ಅದಕ್ಕಾಗಿಯೇ ಇದು ನನಗೆ ಮಾತ್ರ ಯಾಕೆ ಎನ್ನುವ ಪ್ರಶ್ನೆಯೇನೂ ಕಾಡಲಿಲ್ಲ ಎಂದಿದ್ದಾರೆ. ನನ್ನ ತಾಯಿ, ತಂಗಿ ಪೂರ್ಣಿಮಾ, ನನ್ನ ಕಸಿನ್ಸ್ ಎಲ್ಲರಿಗೂ ಕ್ಯಾನ್ಸರ್ ಇತ್ತು, ಅದಕ್ಕಾಗಿಯೇ ನನಗೆ ಕ್ಯಾನ್ಸರ್ ಬಂದಿದೆ ಎಂದು ತಿಳಿದಾಗ ಇನ್ನೇನು ಮಾಡೋಕೆ ಆಗತ್ತೆ ಎಂದುಕೊಂಡುಬಿಟ್ಟಿದ್ದೆ ಎಂದಿದ್ದಾರೆ ಶಿವರಾಜ್ ಕುಮಾರ್. ಇದೇ ವೇಳೆ ಪತ್ನಿ ಗೀತಾ ಕೂಡ ಕ್ಯಾನ್ಸರ್ ಎಂದು ತಿಳಿದಾಗ ಎಲ್ಲರಿಗೂ ಆಗಿದ್ದ ಆಘಾತ, ಅದನ್ನು ಪತಿ ಹೇಗೆ ನಿಭಾಯಿಸಿದರು ಎನ್ನುವ ಬಗ್ಗೆ ಮಾತನಾಡಿದ್ದಾರೆ.
ಅಷ್ಟಕ್ಕೂ ಶಿವರಾಜ್ ಕುಮಾರ್ ಅವರಿಗೆ ಕ್ಯಾನ್ಸರ್ ಇರುವ ವಿಷಯ ಗೊತ್ತಾಗಿದ್ದು ಹೇಗೆ ಎನ್ನುವ ಬಗ್ಗೆಯೂ ಗೀತಾ ಶಿವರಾಜ್ ಅವರು ಹೇಳಿದ್ದಾರೆ. ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ಗೊತ್ತಾಗಿದ್ದು ಎಂದಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡಿದ ಶಿವಣ್ಣ, ಮೂತ್ರದಲ್ಲಿ ಕೆಂಪು ಕಲರ್ ಬಂತು. ಹೀಟ್ ಆಗಿರಬಹುದು ಎಂದುಕೊಂಡೆ. ಗೀತಾಗೂ ಅದನ್ನೇ ಹೇಳಿದೆ. ಆಮೇಲೆ ವಾಪಸ್ ಬೆಂಗಳೂರಿಗೆ ಬಂದು ಟೆಸ್ಟ್ ಮಾಡಿದಾಗಲೇ ಕ್ಯಾನ್ಸರ್ ಎಂದು ತಿಳಿಯಿತು. ಅದು ಗೀತಾ ಒಬ್ಬರಿಗೇ ತಿಳಿದಿತ್ತು, ಅದನ್ನು ಆಕೆ ನನ್ನ ಬಳಿ ಹೇಳಲೇ ಇಲ್ಲ. ನಾನು ಕೂಡ ಸಿನಿಮಾದಲ್ಲಿ ಪಾಲ್ಗೊಂಡಿದ್ದೆ. ಆಗ ಭೈರತಿ ರಣಗಲ್ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಆಗ ಸ್ವಲ್ಪ ಕ್ಯಾನ್ಸರ್ ಬೇರೆ ಕಡೆ ಹರಡಲು ಶುರುವಾದಾಗ, ವಿಷಯ ನನಗೂ ತಿಳಿಯಿತು ಎಂದಿದ್ದಾರೆ.
ಪತ್ನಿ- ಮಗ ದೂರದಲ್ಲಿ ವಾಸಿಸ್ತಿರೋದಕ್ಕೆ ಕಾರಣ... ಮೊದಲ ಬಾರಿ ಮೌನ ಮುರಿದ ನಟ ವಿನೋದ್ ರಾಜ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.