ಮೇ ನಲ್ಲಿ ಬರಲಿದ್ದಾನೆ ಗೋಧ್ರಾದ ಕಾಂತ್ರಿಕಾರಿ!

By Suvarna NewsFirst Published Mar 20, 2020, 9:54 AM IST
Highlights

2020ರ ಬಹು ನಿರೀಕ್ಷಿತ ಚಿತ್ರಗಳ ಪೈಕಿ ‘ಗೋಧ್ರಾ’ ಕೂಡ ಒಂದಾಗಿದ್ದು ಸತೀಶ್‌ ಅಭಿನಯದ ಸಿನಿಮಾ ಎನ್ನುವುದಕ್ಕೆ ಮಾತ್ರವಲ್ಲ, ಅಲ್ಲಿನ ಅವರ ಪಾತ್ರ,ಕತೆಯೊಳಗಿರುವ ವಿಶೇಷತೆ, ನಿರ್ಮಾಣದ ವೈಖರಿಯ ಜತೆಗೆ ಅದರ ಪಾತ್ರವರ್ಗವೂ ಹೌದು. ಚಿತ್ರ ಶುರುವಾದ ಆರಂಭದಲ್ಲಿ ರಿವೀಲ್‌ ಆಗಿದ್ದ ಅವರ ಪಾತ್ರದೊಂದು ಲುಕ್‌ ಸಂಚಲನ ಮೂಡಿಸಿತ್ತು. ಹಾಗೆಯೇ ಅವರೊಳಗೊಬ್ಬ ಹೋರಾಟಗಾರನಿದ್ದಾನೆನ್ನುವುದರ ಸುಳಿವು ಕೂಡ ಆಗಲೇ ಗೊತ್ತಾಗಿತ್ತು. ಆ ಮೇಲೆ ಅದು ನಿಜವೂ ಆಯಿತು. ‘ಗೋಧ್ರಾ’ದೊಳಗೀಗ ನೀನಾಸಂ ಸತೀಶ್‌ ಒಬ್ಬ ಹೋರಾಟಗಾರ !

ಮಧ್ಯಮ ವರ್ಗದ ಹುಡುಗ

ಆತ ಎಂತಹ ಹೋರಾಟಗಾರ ? ಅದಕ್ಕೂ ಈಗ ಅಲ್ಪ ಸ್ವಲ್ಪ ಉತ್ತರವೂ ಸಿಕ್ಕಿದೆ. ಅವರಿಲ್ಲಿ ಹಸಿವು, ಬಡತನ, ಶೋಷಣೆಯಲ್ಲಿ ನೊಂದು -ಬೆಂದು ವ್ಯವಸ್ಥೆಯ ವಿರುದ್ಧ ದಂಗೆ ಎದ್ದ ಉಗ್ರಹೋರಾಟಗಾರ. ಈಗಷ್ಟೇ ಹೊರ ಬಂದಿರುವ ಚಿತ್ರದ ಟ್ರೇಲರ್‌ ಇದರ ಸುಳಿವು ಕೊಟ್ಟಿದೆ. ಹಾಗಾದ್ರೆ ಆ ಪಾತ್ರ ತೊಟ್ಟಸತೀಶ್‌ ಆ ಬಗ್ಗೆ ಹೇಳುವುದೇನು?‘ಇಲ್ಲಿ ನಾನೊಬ್ಬ ಮಧ್ಯಮ ವರ್ಗದ ಹುಡುಗ.ಆತ ಒಬ್ಬ ವಿದ್ಯಾರ್ಥಿ. ಅದಕ್ಕೆ ನಾಲ್ಕು ಶೇಡ್ಸ್‌ ಇವೆ. ಹಸಿವು, ಬಡತನ, ಶೋಷಣೆಯ ಕುಲುಮೆಯೊಳಗಿ ನೊಂದು ಬೆಂದ ಹುಡುಗ ಆತ. ಅಸಮಾನತೆ, ತರಾತಮ್ಯ, ಶೋಷಣೆ ತುಂಬಿಕೊಂಡ ಈ ಸಮಾಜ ಆತನಲ್ಲಿ ಒಬ್ಬ ಹೋರಾಟಗಾರನಾಗಿ ಮಾಡಿದೆ. ಆತ ಅವುಗಳೆಲ್ಲದರ ವಿರುದ್ಧ ಹೇಗೆ ಧ್ವನಿ ಎತ್ತುತ್ತಾನೆ, ತಾನು ಎನ್ನುವುದಕ್ಕಿಂತ ಸಮಾಜದೊಳಿಗಿನ ಎಲ್ಲ ಶೋಷಿತರ ಪರವಾಗಿ ಹೇಗೆ ಹೋರಾಡುತ್ತಾನೆ ಎನ್ನುವುದೇ ನನ್ನ ಪಾತ್ರ ’ ಎನ್ನುವ ಸತೀಶ್‌, ಅದು ಪಾತ್ರ ಎನ್ನುವುದಕ್ಕಿಂತ ಅದು ನನ್ನದೇ ವ್ಯಕ್ತಿತ್ವ ಎಂದು ಕುತೂಹಲ ಮೂಡಿಸುತ್ತಾರೆ.

ಹುಟ್ಟು ದರಿದ್ರವಾಗಿದ್ರೂ ಸಾವು ಚರಿತ್ರೆಯಾಗ್ಬೇಕು': ಇದು ನೀನಾಸಂ ಸತೀಶ್‌ 'ಗೋದ್ರಾ' ಕಥೆ!

ನನ್ನದೇ ವ್ಯಕ್ತಿತ್ವದ ಪಾತ್ರ

‘ ನಾನೊಬ್ಬ ಕಲಾವಿದ , ಸಿನಿಮಾ ಮಾಡುತ್ತಾ ಹೋಗುತ್ತೇನೆ. ಅಲ್ಲಿ ಹತ್ತಾರು ಪಾತ್ರಗಳು ಸಿಗುತ್ತವೆ. ಅದರಲ್ಲಿ ಕೆಲವು ನಮ್ಮದೇ ವ್ಯಕ್ತಿತ್ವಗಳಾಗಿ ಕಾಣುತ್ತವೆ. ಅಂತಹದೇ ಒಂದು ಪಾತ್ರ ಇದು. ಯಾಕಂದ್ರೆ ಹಸಿವು, ಬಡತನ, ಶೋಷಣೆಯ ವ್ಯವಸ್ಥಿತಲ್ಲಿ ನೊಂದು ಬೆಂದು ಬಂದ ವಿದ್ಯಾರ್ಥಿಗೂ ನನಗೂ ಹೆಚ್ಚೇನು ವ್ಯತ್ಯಾಸ ಇಲ್ಲ. ನಾನು ಕೂಡ ಹಳ್ಳಿಯಿಂದ ಬಂದವನು. ಅದೇ ಹಸಿವು, ಬಡತನ ಕಂಡವನು. ಹಾಗಾಗಿ ಅದು ನನಗೆ ಪಾತ್ರವೇ ಎಂದೆನಿಸಿಲ್ಲ. ನಾನೇ ಅದು ಎಂಬುದಾಗಿಯೇ ಅದರಲ್ಲಿ ಅಭಿನಯಿಸಿದ್ದೇನೆ’ ಎನ್ನುವ ವರ್ಣನೆ ಅವರದು. ಇನ್ನು ಗೋಧ್ರಾ ಎನ್ನುವ ಚಿತ್ರದ ಶೀರ್ಷಿಕೆಯೇ ಇಲ್ಲಿನ ಹಲವು ಕೌತುಕ ಕೇಂದ್ರ. ಯಾಕಂದ್ರೆ ‘ ಗೋದ್ರಾ’ ಎಂದಾಕ್ಷಣ ನಮಗೆಲ್ಲ ನೆನಪಾಗುವುದು ಗುಜರಾತ್‌ನ ಗೋಧ್ರಾ ಹತ್ಯಾಕಾಂಡ. ಇಲ್ಲಿನ ಟೈಟಲ್‌ ಜತೆಗೆ ಎಂದು ಮುಗಿಯದ ಯುದ್ಧ ಎಂಬುದಾಗಿ ಅದಕ್ಕಿರುವ ಸಬ್‌ ಟೈಟಲ್‌ ನೋಡಿದರೆ ಅದೇ ಕತೆಯ ಚಿತ್ರವಿದು ಎಂದೆನಿಸುವುದು ಸಹಜ. ಆದರೆ ದುರಂತಕ್ಕೂ ಈ ಚಿತ್ರದ ಕಥೆಗೂ ಯಾವುದೇ ನಂಟಿಲ್ಲ’ ಎನ್ನುವುದು ನೀನಾಸಂ ಸತೀಶ್‌ ಕೂಡುವ ಸ್ಪಷ್ಟನೆ.

ಸಂಚಲನ ಮೂಡಿಸುವ ಸಿನಿಮಾ

‘ ಇದೊಂದು ಪಕ್ಕಾ ಪೋಲಿಟಿಕಲ್‌ ಡ್ರಾಮಾ. ಅದರೊಳಗೆ ಪ್ರೇಮಕತೆಯೂ ಇದೆ. ಮುಖ್ಯವಾಗಿ ಈ ಚಿತ್ರ ವ್ಯವಸ್ತೆಯ ದೋಷಗಳ ಬಗ್ಗೆ ಮಾತನಾಡುತ್ತಾ ಹೋಗುತ್ತದೆ. ಹಾಗಾಗಿಯೇ ನಾವಿಲ್ಲಿ ಇದು ಎಂದು ಮುಗಿಯದ ಯುದ್ಧ ಎನ್ನುವ ಸಬ್‌ ಟೈಟಲ್‌ ಹಾಕಿದ್ದೇವೆ. ಇದು ನನಗಾಗಿ ನಡೆಯುವ ಹೋರಾಟ ಅಲ್ಲ. ಶೋಷಿತರೆಲ್ಲರ ಪರವಾಗಿ ನಡೆಯುವ ಹೋರಾಟ. ಒಂದಲ್ಲೊಂದು ಕಾರಣಕ್ಕೆ ವ್ಯವಸ್ಥೆಯೊಳಗೆ ನೊಂದರಿಗೆಲ್ಲ ಕನೆಕ್ಟ್ ಆಗುವ ಕತೆಯಿದು. ಅದೊಂದೇ ಕಾರಣಕ್ಕೆ ನಾನು ಈ ಸಿನಿಮಾ ಒಪ್ಪಿಕೊಂಡೆ. ನಿರ್ದೇಶಕರು ಕತೆ ಹೇಳುವಾಗ ಏನೆಲ್ಲ ನನ್ನೆದುರು ಹೇಳಿದ್ದರೋ, ಅದೆಲ್ಲವನ್ನು ಅಚ್ಚುಕಟ್ಟಾಗಿ ತೆರೆ ಮೇಲೆ ತಂದಿದ್ದಾರೆ. ಸಿನಿಮಾ ತೆರೆ ಕಂಡರೆ ಸಂಚಲನ ಮೂಡಿಸುವ ಭರವಸೆ ನನಗಿದೆ’ ಎನ್ನುವ ವಿಶ್ವಾಸದ ಮಾತು ಸತೀಶ್‌ ಅವರದ್ದು. ಇನ್ನು ಈ ಸಿನಿಮಾದ ಟ್ರೇಲರ್‌ ನೋಡಿದವರಿಗೆ ಸಣ್ಣದೊಂದು ಅನುಮಾನ ಇದೆ. ಇದೊಂದು ನಕ್ಸಲೈಟ್‌ ಕತೆಯ ಚಿತ್ರ ಎನ್ನುವುದು. ಅದೇ ಇಡೀ ಸಿನಿಮಾದ ಕತೆ ಅಲ್ಲ ಅಂತಾರೆ ಸತೀಶ್‌.‘ ಅದೊಂದು ಚಿತ್ರದ ಸಣ್ಣ ಎಳೆ. ಸಾಂದಾರ್ಬಿಕವಾಗಿ ಅಲ್ಲಿ ಉಗ್ರ ಹೋರಾಟದ ಪ್ರಸಾಪ ಬರುತ್ತೆ. ಆದರೆ ಇಡೀ ಸಿನಿಮಾ ವ್ಯವಸ್ಥೆಯ ದೋಷಕ್ಕೆ ಕನ್ನಡಿ ಹಿಡಿಯುತ್ತದೆ’ ಎನ್ನುತ್ತಾರೆ.

ನಗರ ಸಂವೇದನೆ ಇರುವ ಕಿರುಚಿತ್ರ 'ಜಿಪಿಎಸ್'!

ಅದ್ಧೂರಿ ನಿರ್ಮಾಣದ ಚಿತ್ರ

ಜೇಕಬ್‌ ಫಿಲಮ್ಸ್‌ ಮತ್ತು ಲೀಡರ್‌ ಫಿಲಂಸ್‌ ಪೊ›ಡಕ್ಷನ್‌ ಬ್ಯಾನರ್‌ನಡಿ ನಿರ್ಮಾಣವಾದ ಚಿತ್ರವಿದು. ಚಿತ್ರದ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ಕೆ.ಎಸ್‌.ನಂದೀಶ್‌ ಅವರದ್ದು. ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗಿದೆ ಎನ್ನುವ ಮಾತು ಕೂಡ ಸತೀಶ್‌ ಅವರದ್ದು. ಹಾಗೆಯೇ ಚಿತ್ರದ ತಾರಾಗಣ ಕೂಡ ಅಷ್ಟೇ ದೊಡ್ಡದಿದೆ. ಶ್ರದ್ಧಾ ಶ್ರೀನಾಥ್‌, ಅಚ್ಯುತ್‌ ಕುಮಾರ್‌, ವಸಿಷ್ಟಸಿಂಹ ಇದ್ದಾರೆ. ಅವರೆಲ್ಲರ ಪಾತ್ರವೂ ಸೊಗಸಾಗಿ ಮೂಡಿ ಬಂದಿವೆ ಎನ್ನುವ ಸತೀಶ್‌, ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಚಿತ್ರೀಕರಣ ಮಾಡಬೇಕಾದ್ದರಿಂದ ಚಿತ್ರದ ಚಿತ್ರೀಕರಣ ಮುಗಿಯಲು ಸ್ವಲ್ಪ ತಡವಾಗಿದೆ. ತಡವಾದರೂ ನೀವೆಲ್ಲರೂ ಅಚ್ಚರಿಪಡುವ ಚಿತ್ರ ಇದಾಗಲಿದೆ. ಮೇ ತಿಂಗಳಲ್ಲಿ ತೆರೆಗೆ ಬರಲಿದೆ ಎನ್ನುತ್ತಾರೆ.

click me!