
ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್ 2’ ಸುನಾಮಿ: ರಣವೀರ್ ಸಿಂಗ್ ನಟನೆಗೆ ಫಿದಾ ಆದ ‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ!
ಭಾರತೀಯ ಚಿತ್ರರಂಗದಲ್ಲಿ ಸದ್ಯ ‘ಧುರಂಧರ್: ದಿ ರಿವೇಂಜ್’ ಸಿನಿಮಾದ್ದೇ ಅಬ್ಬರ. ಆದಿತ್ಯ ಧರ್ ನಿರ್ದೇಶನದ (Dhurandhar: The Revange) ಈ ಸ್ಪೈ ಥ್ರಿಲ್ಲರ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹಳೆ ದಾಖಲೆಗಳನ್ನು ಧೂಳೀಪಟ ಮಾಡುತ್ತಾ ಹೊಸ ಇತಿಹಾಸ ಬರೆಯುತ್ತಿದೆ. ಬಿಡುಗಡೆಯಾದ ಕೇವಲ ಮೂರೇ ದಿನಗಳಲ್ಲಿ ಜಾಗತಿಕವಾಗಿ 500 ಕೋಟಿ ರೂಪಾಯಿಗಳ ಗಡಿಯನ್ನು ದಾಟಿರುವುದು ಇಡೀ ಚಿತ್ರರಂಗವೇ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ. ಕೇವಲ ಹಣ ಗಳಿಕೆಯಲ್ಲಷ್ಟೇ ಅಲ್ಲದೆ, ವಿಮರ್ಶಾತ್ಮಕವಾಗಿಯೂ ಈ ಸಿನಿಮಾ ದೊಡ್ಡ ಮಟ್ಟದ ಪ್ರಶಂಸೆ ಗಳಿಸುತ್ತಿದೆ.
ವಿಶೇಷವೆಂದರೆ, ಈ ಚಿತ್ರದ ಅಬ್ಬರಕ್ಕೆ ದಕ್ಷಿಣ ಭಾರತದ ಸ್ಟಾರ್ ನಟರು ಕೂಡ ಮಾರು ಹೋಗಿದ್ದಾರೆ. ಈಗಾಗಲೇ ಅಲ್ಲು ಅರ್ಜುನ್, ವಿಜಯ್ ದೇವರಕೊಂಡ ಮತ್ತು ಮಹೇಶ್ ಬಾಬು ಅಂತಹ ದಿಗ್ಗಜರು ಚಿತ್ರವನ್ನು ಹೊಗಳಿದ್ದರು. ಈಗ ಈ ಸಾಲಿಗೆ ನಮ್ಮ ಹೆಮ್ಮೆಯ ‘ಕಾಂತಾರ’ ಖ್ಯಾತಿಯ ರಿಷಬ್ ಶೆಟ್ಟಿ ಕೂಡ ಸೇರ್ಪಡೆಯಾಗಿದ್ದಾರೆ. ರಣವೀರ್ ಸಿಂಗ್ ನಟನೆಯನ್ನು ರಿಷಬ್ ಶೆಟ್ಟಿ ಮುಕ್ತಕಂಠದಿಂದ ಶ್ಲಾಘಿಸಿರುವುದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ತಮ್ಮ ಎಕ್ಸ್ (X) ಖಾತೆಯಲ್ಲಿ ಚಿತ್ರದ ಬಗ್ಗೆ ಬರೆದುಕೊಂಡಿರುವ ರಿಷಬ್ ಶೆಟ್ಟಿ, "ಧುರಂಧರ್: ದಿ ರಿವೇಂಜ್ ಸಿನಿಮಾದ ಮೊದಲ ದೃಶ್ಯವೇ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ಇದೊಂದು ಕೇವಲ ಸೀಕ್ವೆಲ್ ಅಷ್ಟೇ ಅಲ್ಲ, ಇದೊಂದು ಪಕ್ಕಾ ‘ಸ್ಟೇಟ್ಮೆಂಟ್’ ಸಿನಿಮಾ. ಕಥೆಯನ್ನು ಹೇಳಿದ ರೀತಿ ಮತ್ತು ಆದಿತ್ಯ ಧರ್ ಅವರ ನಿರ್ದೇಶನ ನನಗೆ ತುಂಬಾ ಇಷ್ಟವಾಯಿತು. ಪ್ರತಿಯೊಬ್ಬ ನಟನ ಪರ್ಫಾಮೆನ್ಸ್ ಅದ್ಭುತವಾಗಿದೆ," ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದ ಮ್ಯೂಸಿಕ್ ಮತ್ತು ಸಿನಿಮಾಟೋಗ್ರಫಿ ಬಗ್ಗೆಯೂ ಅವರು ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ.
ಮೌನ ಮುರಿದ ರಿಷಬ್ - ರಣವೀರ್ ವಿವಾದಕ್ಕೆ ತೆರೆ?
ರಿಷಬ್ ಶೆಟ್ಟಿ ಅವರು ಈ ಚಿತ್ರವನ್ನು ಹೊಗಳಿರುವುದು ದೊಡ್ಡ ಸುದ್ದಿಯಾಗಲು ಒಂದು ಪ್ರಮುಖ ಕಾರಣವಿದೆ. ಕಳೆದ ವರ್ಷ ಗೋವಾದಲ್ಲಿ ನಡೆದ ಫಿಲ್ಮ್ ಇವೆಂಟ್‌ವೊಂದರಲ್ಲಿ ರಣವೀರ್ ಸಿಂಗ್ ಅವರು ರಿಷಬ್ ಶೆಟ್ಟಿಯವರ ಮುಂದೆ ‘ಕಾಂತಾರ’ ಚಿತ್ರದ ಪಾತ್ರವನ್ನು ಅಣಕಿಸಿದ್ದರು ಎಂಬ ವಿವಾದ ಎದ್ದಿತ್ತು. ಈ ಬಗ್ಗೆ ರಣವೀರ್ ವಿರುದ್ಧ ದೂರು ಕೂಡ ದಾಖಲಾಗಿತ್ತು. ಆದರೆ, ಈಗ ರಿಷಬ್ ಶೆಟ್ಟಿ ಅವರು ದೊಡ್ಡತನ ಮೆರೆದು, ಹಳೆಯ ಕಹಿ ಘಟನೆಗಳನ್ನು ಮರೆತು ರಣವೀರ್ ಚಿತ್ರವನ್ನು ‘ಅದ್ಭುತ’ ಎಂದು ಕರೆಯುವ ಮೂಲಕ ಇಬ್ಬರ ನಡುವಿನ ಮೌನಕ್ಕೆ ಬ್ರೇಕ್ ಹಾಕಿದ್ದಾರೆ.
ರಿಷಬ್ ಶೆಟ್ಟಿಯವರ ಪೋಸ್ಟ್ ಕಂಡು ನಿರ್ದೇಶಕ ಆದಿತ್ಯ ಧರ್ ಖುಷಿಯಾಗಿದ್ದಾರೆ. ರಿಷಬ್ ಅವರ ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ಅವರು, "ನಿಮ್ಮಿಂದ ಈ ರೀತಿಯ ಹೊಗಳಿಕೆ ಕೇಳುವುದು ನಿಜಕ್ಕೂ ಅರ್ಥಪೂರ್ಣವಾಗಿದೆ ಸಹೋದರ. ನಾನು ಕಾಂತಾರ ಚಿತ್ರದ ದೊಡ್ಡ ಅಭಿಮಾನಿ. ನಿಮ್ಮ ಮಾತುಗಳು ಈ ಯಶಸ್ಸನ್ನು ಇನ್ನು ವಿಶೇಷವಾಗಿಸಿವೆ," ಎಂದು ಧನ್ಯವಾದ ಅರ್ಪಿಸಿದ್ದಾರೆ.
ದಾಖಲೆಗಳ ಸರದಾರ ‘ಧುರಂಧರ್ 2’:
ಸಿನಿಮಾ ಕೇವಲ 3 ದಿನಗಳಲ್ಲಿ 500 ಕೋಟಿ ಕ್ಲಬ್ ಸೇರಿರುವುದು ಬಾಲಿವುಡ್‌ಗೆ ಹೊಸ ಚೈತನ್ಯ ನೀಡಿದೆ. ಪ್ರೀಮಿಯರ್ ಶೋಗಳ ಮೂಲಕವೇ 43 ಕೋಟಿ ರೂ. ಗಳಿಸಿರುವುದು ಈ ಚಿತ್ರದ ಮೇಲಿದ್ದ ಕ್ರೇಜ್‌ಗೆ ಸಾಕ್ಷಿ. ಚಿತ್ರದಲ್ಲಿ ಸಂಜಯ್ ದತ್, ಅರ್ಜುನ್ ರಾಂಪಾಲ್, ಆರ್ ಮಾಧವನ್ ಮತ್ತು ಸಾರಾ ಅರ್ಜುನ್ ಅವರಂತಹ ಪ್ರತಿಭಾವಂತ ತಾರಾಗಣವಿರುವುದು ಚಿತ್ರದ ಪ್ಲಸ್ ಪಾಯಿಂಟ್ ಆಗಿದೆ.
ಒಟ್ಟಿನಲ್ಲಿ, ‘ಧುರಂಧರ್ 2’ ಕೇವಲ ಒಂದು ಸಿನಿಮಾ ಆಗಿ ಉಳಿಯದೆ, ಉತ್ತರ ಮತ್ತು ದಕ್ಷಿಣದ ಚಿತ್ರರಂಗದ ನಡುವಿನ ಸ್ನೇಹದ ಕೊಂಡಿಯಾಗಿಯೂ ಮಾರ್ಪಡುತ್ತಿದೆ. ರಿಷಬ್ ಶೆಟ್ಟಿಯವರ ಈ ನಡೆ ಅವರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.