ಚಿತ್ರರಂಗದಿಂದ ಸಿಎಂ ಬಿಎಸ್‌ವೈ ಭೇಟಿ;ನಿನ್ನೆ ಶಿವರಾಜ್‌ ಕುಮಾರ್‌-ಸಿ.ಟಿ. ರವಿ ನಡುವೆ ಮಾತುಕತೆ!

By Kannadaprabha NewsFirst Published Jul 30, 2020, 8:53 AM IST
Highlights

ಲಾಕ್‌ಡೌನ್‌ ಕಾರಣ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕನ್ನಡ ಚಲನಚಿತ್ರ ಸಹನಟರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಹಾಗೂ ಚಿತ್ರರಂಗಕ್ಕೆ ಇತರ ಅನುಕೂಲತೆ ಕಲ್ಪಿಸಬೇಕು ಎಂಬ ಸಂಬಂಧ ಗುರುವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಲು ಚಿತ್ರರಂಗದ ಪ್ರಮುಖ ನಾಯಕ ನಟರು ತೀರ್ಮಾನಿಸಿದ್ದಾರೆ.

ಬುಧವಾರ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ ರವಿ ಅವರು, ನಟ ಶಿವರಾಜ್‌ಕುಮಾರ್‌ ಅವರ ನಿವಾಸದಲ್ಲಿ ಚಿತ್ರರಂಗದ ಪ್ರಮುಖ ನಟರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು.

‘ಲಾಕ್‌ಡೌನ್‌ ಘೋಷಣೆಯಾದ ದಿನದಿಂದ ಚಿತ್ರದೋದ್ಯಮವು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಇಡೀ ಚಿತ್ರರಂಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ನಟರು ಸಚಿವರಿಗೆ ಮನವರಿಕೆ ಮಾಡಿಕೊಟ್ಟಿರು. ಅದರಲ್ಲೂ ಸಹಕಲಾವಿದರು ಚಿತ್ರೋದ್ಯಮವನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಕಳೆದ ಐದು ತಿಂಗಳಿನಿಂದ ಕೆಲಸವಿಲ್ಲದೆ ಸಾವಿರಾರು ಕುಟುಂಬಗಳು ದೈನಂದಿನ ಜೀವನ ನಿರ್ವಾಹಣೆ ಮಾಡುವುದೇ ದುಸ್ತರವಾಗಿದೆ’ ಎಂದು ನಟರು ವಸ್ತುಸ್ಥಿತಿಯನ್ನು ವಿವರಿಸಿದರು.

ಆಗಸ್ಟ್‌ ಬರ್ತಿದೆ, ಥಿಯೇಟರ್‌ಗಳ ಕತೆ ಏನಾಗ್ತಿದೆ!

‘ಕಳೆದ ಐದು ತಿಂಗಳಿನಿಂದ ಕೊರೊನಾದಿಂದಾಗಿ ಉದ್ಯಮ ನಷ್ಟಕ್ಕೆ ಸಿಲುಕಿದೆ. ಹೀಗಾಗಿ ರಾಜ್ಯ ಸರ್ಕಾರ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಪರಿಹಾರ ನೀಡಬೇಕು. ಅಲ್ಲದೆ, ಜಿಎಸ್‌ಟಿಯಲ್ಲಿ ವಿನಾಯಿತಿ, ಬ್ಯಾಂಕ್‌ಗಳಿಂದ ಪಡೆದ ಸಾಲ ಪಾವತಿ ಮುಂದೂಡಿಕೆ, ಬಡ್ಡಿದರದಲ್ಲಿ ಕಡಿತ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಮನವಿ ಮಾಡಿದರು.

‘ಈ ಹಿಂದೆ ವಿವಿಧ ಕ್ಷೇತ್ರಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದವರಿಗೆ ನೀಡಿದ್ದ ಮಾದರಿಯಲ್ಲೇ ಚಲನಚಿತ್ರ ಸಹಕಲಾವಿದರಿಗೂ ಐದು ಸಾವಿರ ರು. ಆರ್ಥಿಕ ನೆರವು ಹಾಗೂ ಚಿತ್ರೋದ್ಯಮಕ್ಕೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡುವಂತೆ ಆಗ್ರಹಿಸಿದರು.

ಚಿತ್ರರಂಗದವರ ಎಲ್ಲ ಬೇಡಿಕೆಗಳನ್ನು ಸಹನೆಯಿಂದಲೇ ಆಲಿಸಿದ ಸಚಿವ ರವಿ ಅವರು, ಈಗಾಗಲೇ ಸಹಕಲಾವಿದರಿಗೆ ಐದು ಸಾವಿರ ರು. ಆರ್ಥಿಕ ನೆರವು ಘೋಷಣೆ ಮಾಡುವಂತೆ ಮುಖ್ಯಮತ್ರಿಗಳನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿರುವುದನ್ನು ಸಭೆಯ ಗಮನಕ್ಕೆ ತಂದರು. ಜೊತೆಗೆ ರಾಜ್ಯ ಸರ್ಕಾರ ಕನ್ನಡ ಚಿತ್ರರಂಗದ ನೆರವಿಗೆ ಯಾವಾಗಲೂ ಬದ್ಧವಾಗಿದೆ. ಸಂಕಷ್ಟದಲ್ಲಿರುವ ಕಲಾವಿದರ ಹಿತಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಚಿತ್ರರಂಗದ ಸ್ಥಿತಿ ಗತಿ ಬಗ್ಗೆ ಶಿವರಾಜ್ ಕುಮಾರ್ ಮನೆಯಲ್ಲಿ ಮತ್ತೊಂದು ಸಭೆ: ಇಲ್ಲಿವೆ ಫೋಟೋಸ್

ಕನ್ನಡ ಚಿತ್ರರಂಗ ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಅರಿವು ತಮಗೂ ಇದೆ. ಅದರಲ್ಲೂ ಸಹ ಕಲಾವಿದರ ಜೀವನ ನಿರ್ವಹಣೆ ನಡೆಸುವುದು ಎಷ್ಟುಕಷ್ಟಎಂಬುದು ತಮಗೆ ತಿಳಿದಿದೆ. ಹೀಗಾಗಿ ಮುಖ್ಯಮಂತ್ರಿ ಬಳಿ ಚಿತ್ರರಂಗ ಈಗ ಎದುರಿಸುತ್ತಿರುವ ಸಮಸ್ಯೆಗಳನ್ನು ಮತ್ತೊಮ್ಮೆ ಮನವರಿಕೆ ಮಾಡಿಕೊಟ್ಟು ವಿಶೇಷ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದರು.

ಅಂತಿಮವಾಗಿ ಸಭೆಯಲ್ಲಿ ವ್ಯಕ್ತವಾದ ಒಟ್ಟಾರೆ ಅಭಿಪ್ರಾಯದಂತೆ ಗುರುವಾರ ಸಚಿವ ಸಿ.ಟಿ. ರವಿ ಅವರ ನೇತೃತ್ವದಲ್ಲಿ ಕನ್ನಡ ಚಿತ್ರರಂಗದ ಪ್ರಮುಖರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಲು ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಯಿತು. ಮಾತುಕತೆ ವೇಳೆ ಚಿತ್ರನಟರಾದ ಶಿವರಾಜ್‌ಕುಮಾರ್‌, ವಿ.ರವಿಚಂದ್ರನ್‌, ರಮೇಶ್‌ ಅರವಿಂದ್‌, ಉಪೇಂದ್ರ, ಪುನೀತ್‌ ರಾಜ್‌ಕುಮಾರ್‌, ಯಶ್‌, ಗಣೇಶ್‌, ದುನಿಯಾ ವಿಜಯ್‌, ಶ್ರೀಮುರಳಿ, ರಕ್ಷಿತ್‌ ಶೆಟ್ಟಿಮತ್ತಿತರರು ಉಪಸ್ಥಿತರಿದ್ದರು.

click me!