
ಧುರಂಧರ್ ಸಿನಿಮಾಗೆ ಶಿವರಾಜ್‌ಕುಮಾರ್ ಪ್ರಶಂಸೆ
ಆದಿತ್ಯ ಧರ್ ನಿರ್ದೇಶನ, ರಣವೀರ್ ಸಿಂಗ್ ಅಭಿನಯದ ʻಧುರಂಧರ್ 2ʼ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಸಂಚಲನವನ್ನು ಉಂಟು ಮಾಡಿದೆ. ಜಾಗತಿಕವಾಗಿ ಈ ಸಿನಿಮಾ ಹೆಚ್ಚಿನ ಮಹತ್ವ ಹಾಗೂ ಮೆಚ್ಚುಗೆ ಗಳಿಸಿದ್ದು, ಈವರೆ ಈ ಚಿತ್ರದ ಗಳಿಕೆಯು ವಿಶ್ವಾದ್ಯಂತ 900+ ಕೋಟಿ ರೂಗಲನ್ನು ದಾಟಿದೆ. ಬಾಲಿವುಡ್ ಮಾತ್ರವಲ್ಲದೆ, ದಕ್ಷಿಣ ಭಾರತದಲ್ಲೂ ಈ ಚಿತ್ರಕ್ಕೆ ದೊಡ್ಡ ಕ್ರೇಜ್ ಇದೆ. ದಕ್ಷಿಣದ ಹಲವು ಸಿನಿಮಾತಾರೆಯರು ಧುರಂಧರ್ 2 ಸಿನಿಮಾವನ್ನು ಕೊಂಡಾಡಿದ್ದಾರೆ.
ಇದೀಗ ʻಕರುನಾಡ ಚಕ್ರವರ್ತಿʼ ಖ್ಯಾತಿಯ ನಟ ಡಾ. ಶಿವರಾಜ್‌ಕುಮಾರ್ 'ಧುರಂಧರ್ 2' ಸಿನಿಮಾವನ್ನು ವೀಕ್ಷಣೆ ಮಾಡಿ, ಖುಷಿ ಪಟ್ಟಿದ್ದಾರೆ. ಜೊತೆಗೆ, ತಮ್ಮ ಅಧಿಕೃತ ಎಕ್ಸ್ () ಅಕೌಂಟ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಜೊತೆಗೆ, ಧುರಂಧರ್ ಸಿನಿಮಾ ತಂಡಕ್ಕೂ ಅಭಿನಂದನೆ ಹೇಳಿದ್ದಾರೆ.
"ಧುರಂಧರ್: ದಿ ರಿವೆಂಜ್ ಸಿನಿಮಾ ಅದ್ಭುತವಾಗಿದೆ! ಚಿತ್ರದ ಪ್ರತಿಯೊಂದು ಕ್ಷಣವನ್ನೂ ಆನಂದಿಸಿದೆ. ರಣವೀರ್ ಸಿಂಗ್ ಅವರ ನಟನೆ ಅಮೋಘವಾಗಿದೆ. ಇನ್ನು ಶಾಶ್ವತ್ ಸಚ್ದೇವ್ ಅವರ ಸಂಗೀತ ಅದ್ಭುತವಾಗಿದೆ, ವಿಶೇಷವಾಗಿ ಹಳೆಯ ಹಾಡುಗಳ ಬಳಕೆ ಸಿನಿಮಾದ ಮೇಲೆ ಬಲವಾದ ಪ್ರಭಾವ ಬೀರುತ್ತದೆ. ಆದಿತ್ಯ ಧರ್ ಅವರ ದೃಢ ವಿಶ್ವಾಸ ಮತ್ತು ಕಲೆಗಾರಿಕೆಗೆ ದೊಡ್ಡ ನಮಸ್ಕಾರಗಳು. ದೇಶಭಕ್ತಿಗಾಗಿ ಒಬ್ಬ ಸೈನಿಕ ಪಡುವ ಶ್ರಮವೇ ಈ ಸಿನಿಮಾದ ಆತ್ಮ. 'ಧುರಂಧರ್ 2: ದಿ ರಿವೆಂಜ್' ಚಿತ್ರತಂಡದ ಪ್ರತಿಯೊಬ್ಬರಿಗೂ ಅಭಿನಂದನೆಗಳು" ಎಂದು ಶಿವರಾಜ್‌ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.
ಇನ್ನು ಕನ್ನಡದ ಖ್ಯಾತ ಸಂಗೀತ ನಿರ್ದೇಶಕರಾದ ಅಜನೀಶ್ ಲೋಕನಾಥ್ ಸಹ ಧುರಂಧರ್ ಸಿನಿಮಾ ಮೆಚ್ಚಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ರಿಷಬ್ ಶೆಟ್ಟಿ, ಮಹೇಶ್ ಬಾಬು ಸೇರಿದಂತೆ ಭಾರತದ ಹಲವು ಸೂಪರ್ ಸ್ಟಾರ್‌ಗಳು, ವಿಐಪಿಗಳು ಧರಂಧರ್ ಸಿನಿಮಾ ಮೆಚ್ಚಿ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಆದರೆ ಸ್ಯಾಂಡಲ್‌ವುಡ್ ನಟಿ ರಮ್ಯಾ ಮಾತ್ರ ಧುರಂಧರ್ 2 ಬಗ್ಗೆ ಕೆಂಡಕಾರಿದ್ದರು.
ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ʻಧುರಂಧರ್ 2ʼ ಸಿನಿಮಾವನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಈಗಷ್ಟೇ 'ಧುರಂಧರ್ 2' ಸಿನಿಮಾ ನೋಡಿದೆ, ನಿಜ ಹೇಳಬೇಕೆಂದರೆ ಅದರ ಗುಂಗಿನಿಂದ ಇನ್ನೂ ಹೊರಬರಲು ಸಾಧ್ಯವಾಗುತ್ತಿಲ್ಲ. ಎಂತಹ ಅದ್ಭುತ ಅನುಭವ! ಈ ಸಿನಿಮಾದಲ್ಲಿ ನಿರ್ದೇಶನವೇ ಅತೀ ದೊಡ್ಡ ಗೆಲುವು. ನೈಜ ಘಟನೆಗಳ ಸರಣಿಯನ್ನು ಇಟ್ಟುಕೊಂಡು ಇಷ್ಟೊಂದು ಪ್ರಭಾವಶಾಲಿ ಸಿನಿಮಾ ಮಾಡುವುದು ಸುಲಭವಲ್ಲ. ಆದರೆ ಕಥೆಯನ್ನು ಹೆಣೆದಿರುವ ರೀತಿ ಮತ್ತು ಸನ್ನಿವೇಶಗಳನ್ನು ಜೋಡಿಸಿರುವ ರೀತಿ ತುಂಬಾ ನ್ಯಾಚುರಲ್ ಆಗಿ, ಆಕರ್ಷಕವಾಗಿ ಮೂಡಿಬಂದಿದೆ" ಎಂದು ಅಜನೀಶ್ ಲೋಕನಾಥ್ ಬರೆದುಕೊಂಡಿದ್ದಾರೆ.
ಈ ಚಿತ್ರ ಒಂದು ಕ್ಷಣವೂ ಬೋರ್ ಎನಿಸುವುದಿಲ್ಲ
"ಈ ಸಿನಿಮಾವು ದೀರ್ಘಾವಧಿಯದ್ದಾಗಿದ್ದರೂ, ಒಂದು ಕ್ಷಣವೂ ಬೋರ್ ಎನಿಸುವುದಿಲ್ಲ. ಕಥೆ ಹೇಳುವ ಶೈಲಿ ಮತ್ತು ಚಿತ್ರಕಥೆ ಎಷ್ಟು ಬಲಿಷ್ಠವಾಗಿದೆ ಎಂಬುದಕ್ಕೆ ಇದೇ ಸಾಕ್ಷಿ. ಬರಹವು ನಿಮ್ಮನ್ನು ಪೂರ್ತಿ ಸಿನಿಮಾದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ಯಾವುದೇ ಅವಸರವಿಲ್ಲದೆ ಭಾವನೆಗಳು ಮತ್ತು ತೀವ್ರತೆಯನ್ನು ನಿಧಾನವಾಗಿ ಕಟ್ಟಿಕೊಡುತ್ತದೆ. ಪ್ರತಿಯೊಂದು ದೃಶ್ಯವೂ ಅರ್ಥಪೂರ್ಣವಾಗಿದ್ದು, ಕಥೆಯ ಪಯಣಕ್ಕೆ ಹೆಚ್ಚಿನ ಆಳವನ್ನು ನೀಡುತ್ತದೆ" ಎಂದು ಅಜನೀಶ್ ಲೋಕನಾಥ್ ಹೇಳಿದ್ದಾರೆ.
ರಣವೀರ್ ಸಿಂಗ್ ಪಾತ್ರವಾಗಿಯೇ ಜೀವಿಸಿದ್ದಾರೆ
"ನಿರ್ದೇಶಕ ಆದಿತ್ಯ ಧರ್ ಅವರು ಎಲ್ಲವನ್ನೂ ಬಹಳ ಸುಂದರವಾಗಿ ಹಿಡಿದಿಟ್ಟಿದ್ದಾರೆ. ಪ್ರತಿ ಫ್ರೇಮ್ ಕೂಡ ದೃಶ್ಯಕಾವ್ಯದಂತಿದೆ. ಸುದೀರ್ಘ ಅವಧಿ ಇದ್ದರೂ ಸಿನಿಮಾ ಎಲ್ಲೂ ಲಯ ತಪ್ಪದಂತೆ ಎಡಿಟಿಂಗ್ ಬಿಗಿಯಾಗಿಟ್ಟಿದೆ. ಶಾಶ್ವತ್ ಸಚ್ದೇವ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ನಿರೂಪಣೆಯ ತೀವ್ರತೆಯನ್ನು ಹೆಚ್ಚಿಸುವುದಲ್ಲದೆ, ಸಿನಿಮಾ ಮುಗಿದ ಮೇಲೂ ನಿಮ್ಮನ್ನು ಕಾಡುತ್ತದೆ. ರಣವೀರ್ ಸಿಂಗ್ ಅವರು ತಮ್ಮ ವೃತ್ತಿಜೀವನದ ಅತ್ಯುತ್ತಮ ನಟನೆಯನ್ನು ನೀಡಿದ್ದಾರೆ. ಅವರು ಆ ಪಾತ್ರದಲ್ಲಿ ನಟಿಸಿಲ್ಲ, ಬದಲಾಗಿ ಆ ಪಾತ್ರವಾಗಿಯೇ ಜೀವಿಸಿದ್ದಾರೆ ಎನಿಸುತ್ತದೆ" ಎಂದು ಅಜನೀಶ್ ಲೋಕನಾಥ್ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.