ಪ್ರಾಣಿ ರಕ್ಷಣೆಗೆ ಸಂಯುಕ್ತ ಹೊರನಾಡು ಆ್ಯಂಬುಲೆನ್ಸ್‌, ಹೆಲ್ಪ್‌ಲೈನ್‌ಗೆ ಆರಂಭ;ಈ ಸಂಖ್ಯೆಗೆ ಕರೆ ಮಾಡಿ

Published : Feb 16, 2023, 09:50 AM IST
ಪ್ರಾಣಿ ರಕ್ಷಣೆಗೆ ಸಂಯುಕ್ತ ಹೊರನಾಡು ಆ್ಯಂಬುಲೆನ್ಸ್‌, ಹೆಲ್ಪ್‌ಲೈನ್‌ಗೆ ಆರಂಭ;ಈ ಸಂಖ್ಯೆಗೆ ಕರೆ ಮಾಡಿ

ಸಾರಾಂಶ

ಪ್ರಾಣಿ ರಕ್ಷಣೆಗೆ ಸಂಯುಕ್ತ ಹೊರನಾಡು ಆ್ಯಂಬುಲೆನ್ಸ್‌, ಹೆಲ್ಪ್‌ಲೈನ್‌ಗೆ ಆರಂಭ ನಟಿ ಸಂಯುಕ್ತಾ ಹೊರನಾಡು ಸಾರಥ್ಯದ ಪ್ರಾಣ ಫೌಂಡೇಶನ್‌ ಯೋಜನೆ

‘ಪ್ರಾಣಿಗಳ ಕುರಿತು ಅಂತಃಕರಣದಿಂದ ಮಾತನಾಡಿದಾಗ ಕೆಲವರು ಹುಚ್ಚರು ಎಂಬಂತೆ ನೋಡಬಹುದು. ಆದರೆ ಪ್ರಾಣಿ ಪ್ರೀತಿ ನಮ್ಮ ಬದುಕಿನ ಭಾಗವಾಗಿತ್ತು. ಹಸುವಿಗೆ ಸೊಪ್ಪು ಹರಿದುಕೊಂಡು ಹೋಗಿ ಕೊಡುತ್ತಿದ್ದೆವು. ಈಗ ನಗರಗಳಲ್ಲಿ ಗುಬ್ಬಚ್ಚಿ ಇಲ್ಲ ಎನ್ನುತ್ತೇವೆ. ಆದರೆ ಗುಬ್ಬಚ್ಚಿ ತಿನ್ನುವುದಕ್ಕೆ ಅನ್ನದ ಅಗುಳುಗಳು ಎಲ್ಲಿ ಸಿಗುತ್ತವೆ? ಮನೆಯ ಪೈಪುಗಳಲ್ಲಿ ಎಲ್ಲೋ ಸಾಗಿ ಹೋಗುತ್ತವೆ. ದಿನಸಿ ಅಂಗಡಿಗಳಲ್ಲಿ ಅಕ್ಕಿ ಚೆಲ್ಲುವುದಿಲ್ಲ. ಈ ಸಮಸ್ಯೆ ನಮಗೆ ಅರಿವಾಗುವುದಿಲ್ಲ. 5ಜಿ ಎಂದು ಸುಳ್ಳೇ ಕಾರಣ ಕೊಡುತ್ತೇವೆ. ಈ ಮಧ್ಯೆ ಹೊಸ ಪೀಳಿಗೆಯ ತರುಣ, ತರುಣಿಯರಲ್ಲಿ ಸಂವೇದನೆ ಬೆಳೆಯುತ್ತಿದೆ. ಪ್ರಾಣಿ ಪ್ರೀತಿ ಜಾಗೃತವಾಗುತ್ತಿದೆ. ಅದು ನನಗೆ ಖುಷಿ ಕೊಟ್ಟಿದೆ’ ಎಂದು ಬಹುಭಾಷಾ ನಟ ಪ್ರಕಾಶ್‌ ರೈ ಹೇಳಿದರು.

ಸಂಯುಕ್ತಾ ಹೊರನಾಡು ಸಾರಥ್ಯದ ಪ್ರಾಣ ಅನಿಮಲ್‌  ಫೌಂಡೇಶನ್‌ ಬೆಂಗಳೂರಿನಲ್ಲಿ ನೂತನವಾಗಿ ಆರಂಭಿಸಿರುವ ಪ್ರಾಣಿಗಳ ಆ್ಯಂಬುಲೆನ್ಸ್‌ ಮತ್ತು ಪ್ರಾಣಿಗಳ ರಕ್ಷಣೆಗೆ ವಾರದ ಇಪ್ಪತ್ನಾಲ್ಕು ಗಂಟೆ ಹೆಲ್ಪ್‌ಲೈನ್‌ ಸೇವೆ ಉದ್ಘಾಟಿಸಿ ಅವರು ಈ ಮಾತುಗಳನ್ನು ಹೇಳಿದರು.

ಪ್ರಾಣಿಗಳ ರಕ್ಷಣೆಗೆ ಆ್ಯಂಬುಲೆನ್ಸ್‌ ಸೇವೆ ಶುರು ಮಾಡಿದ ಸಂಯುಕ್ತಾ ಹೊರನಾಡು

 

ಈ ಸಂದರ್ಭದಲ್ಲಿ ಮಾತನಾಡಿದ ಬಹುಭಾಷಾ ನಟ ಪ್ರಕಾಶ್‌ ಬೆಳವಾಡಿ, ‘ಹಳ್ಳಿಗಳಲ್ಲಿ ನಾಯಿಗಳು ಆರೋಗ್ಯವಾಗಿರುತ್ತವೆ. ಆದರೆ ನಗರಗಳಲ್ಲಿ ನಾಗರಿಕತೆಯಿಂದಾಗಿ ಸಮಸ್ಯೆ ಆಗುತ್ತಿದೆ. ಮೊದಲೆಲ್ಲಾ ಪ್ರಾಣಿ, ಪಕ್ಷಿ ಪ್ರಕೃತಿ ನಮ್ಮ ಬದುಕಾಗಿತ್ತು. ನಮ್ಮ ಹಾಡುಗಳಲ್ಲಿ ಸಹಜವಾಗಿ ಬರುತ್ತಿದ್ದವು. ಆದರೆ ಈಗ ನಾವು ತುಂಬಾ ಮುಂದಕ್ಕೆ ಹೋಗಿಬಿಟ್ಟಿದ್ದೇವೆ. ವಾಯುಮಾಲಿನ್ಯದಿಂದ ಪ್ರಾಣಿಗಳು ಸಾಯುತ್ತಿವೆ. ಅವುಗಳನ್ನು ನಾವೇ ಇಂಜೆಕ್ಷನ್‌ ಕೊಟ್ಟು ಕೊಲ್ಲುವ ಪರಿಸ್ಥಿತಿ ಬಂದಿದೆ. ಜಾಗತಿಕ ತಾಪಮಾನ ಏರಿಕೆಯಿಂದ ಸೀ ಗ್ರೀನ್‌ ಟರ್ಟಲ್ಸ್‌ ಎಂದು ಕರೆಯುವ ಆಮೆಗಳು ಸಂತಾನ ನಾಶವಾಗಲಿದೆ ಎಂಬ ವರದಿ ಬಂದಿದೆ. ನಾವು ಈಗ ಸ್ವಲ್ಪ ಹಿಂದಕ್ಕೆ ಹೋಗಬೇಕಾಗಿದೆ. ಎಲ್ಲದರ ಜೊತೆ ಬದುಕೋದು ಕಲಿಯಬೇಕಾಗಿದೆ. ಆ ನಿಟ್ಟಿನಲ್ಲಿ ಸಂಯುಕ್ತಾ ಯೋಜನೆ ಮುಂದಕ್ಕೆ ಹೋಗುವುದರ ವಿರುದ್ಧದ ಪ್ರತಿಭಟನೆಯ ಥರ ಇದೆ’ ಎಂದರು.

ಪ್ರಾಣ ಅನಿಮಲ್‌  ಫೌಂಡೇಷನ್‌ ಸ್ಥಾಪಕಿ, ನಟಿ ಸಂಯುಕ್ತಾ ಹೊರನಾಡು, ‘ಅಜ್ಜಿ ಭಾರ್ಗವಿ ನಾರಾಯಣ್‌ ತೀರಿಕೊಂಡಿದ್ದು ಫೆ.14ರಂದು. ಅಜ್ಜಿಯ ನೆನಪಿನಲ್ಲಿ ಪ್ರೇಮಿಗಳ ದಿನ ಆಚರಿಸಲು ಅವರು ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಪ್ರಾಣಿಗಳು ವಿನಾಕಾರಣ ಪ್ರೀತಿ ಕೊಡುತ್ತವೆ. ಅವುಗಳ ನೋವನ್ನು ಕಡಿಮೆ ಮಾಡುವುದರ ಕಡೆಗೆ ಪ್ರಾಣ ಫೌಂಡೇಶನ್‌ ಕೆಲಸ ಮಾಡಲಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಪ್ರಾಣ ಆ್ಯಂಬುಲೆನ್ಸ್‌ ಕೆಲಸ ಮಾಡುತ್ತದೆ. ಅದರೊಂದಿಗೆ ಪ್ರಾಣಿಗಳ ನೆರವಿಗೆ ಹೆಲ್ಪ್‌ಲೈನ್‌ ಸ್ಥಾಪಿಸಿದ್ದೇವೆ. ಮುಂದೆ ನಮ್ಮ ಕನಸು ವಿಸ್ತರಿಸುವ ಹಂಬಲ ಇದೆ. ಪ್ರಾಣ ಫೌಂಡೇಶನ್‌ ಸ್ಥಾಪನೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ’ ಎಂದು ಹೇಳಿದರು.

ವಿಲಾಸ್‌ಕುಮಾರ್‌ ನಾಯಕ್‌ ಚಿತ್ರ ಬಿಡಿಸುವ ಮೂಲಕ ಪ್ರಾಣ ಫೌಂಡೇಶನ್‌ ಉದ್ದೇಶವನ್ನು ಸಾರಿದರು. ಕೇರ್‌ ಟ್ರಸ್ಟ್‌ನ ಸ್ಥಾಪಕಿ ಸುಧಾ ನಾರಾಯಣ್‌, ಅನಿರುದ್ಧ, ಸುಧಾ ಬೆಳವಾಡಿ ಮತ್ತಿತರರು ಇದ್ದರು.

ಪ್ರಾಣ ಆನಿಮಲ್‌ ಫೌಂಡೇಶನ್‌ನ ಹೆಲ್ಪ್‌ಲೈನ್‌ ನಂಬರ್‌: 91088 19998

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ ಸಂಯುಕ್ತಾ ಹೊರನಾಡು ಸಾರಥ್ಯದ ಪ್ರಾಣ ಅನಿಮಲ್‌ ಫೌಂಡೇಶನ್‌ ನೂತನವಾಗಿ ಆರಂಭಿಸಿರುವ ಪ್ರಾಣಿಗಳ ಆ್ಯಂಬುಲೆನ್ಸ್‌ ಮತ್ತು ಪ್ರಾಣಿಗಳ ರಕ್ಷಣೆಗೆ ಹೆಲ್ಪ್‌ಲೈನ್‌ ಸೇವೆಯನ್ನು ನಟ ಪ್ರಕಾಶ್‌ ರೈ ಉದ್ಘಾಟಿಸಿದರು. ಪ್ರಕಾಶ್‌ ಬೆಳವಾಡಿ, ಸುಧಾ ನಾರಾಯಣ್‌, ಅನಿರುದ್ಧ, ಸುಧಾ ಬೆಳವಾಡಿ ಇದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದರ್ಶನ್​ ಇಲ್ಲದ ಸಂಕ್ರಾಂತಿ: ಕುದುರೆ ಜೊತೆ ವಿಜಯಲಕ್ಷ್ಮಿ ಕುತೂಹಲದ ಪೋಸ್ಟ್​- ಅಭಿಮಾನಿಗಳು ಭಾವುಕ
ಹಾಸನ ನಿವೇಶನ ವಿವಾದ: ನಿರ್ಮಾಪಕಿ ಪುಷ್ಮಾ ಅರುಣ್‌ಕುಮಾರ್‌ಗೆ ನ್ಯಾಯಾಲಯದಲ್ಲಿ ಹಿನ್ನಡೆ