
'ರೋಲೆಕ್ಸ್' ಸಿನಿಮಾ ಈಗಾಗಲೇ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. 'ರೋಲೆಕ್ಸ್' ಎಂಬ ಶೀರ್ಷಿಕೆ ಕೇಳಿದ ಕ್ಷಣವೇ ಕಮಲ್ ಹಾಸನ್ ಅಭಿನಯದ 'ವಿಕ್ರಮ್' ಚಿತ್ರದಲ್ಲಿನ ಸೂರ್ಯ ಅವರ ಪವರ್‌ಫುಲ್ ಪಾತ್ರ ನೆನಪಾಗುವುದು ಸಹಜ. ಆದರೆ ಈಗ ಕನ್ನಡ ಚಿತ್ರರಂಗದಲ್ಲಿ ಇದೇ ಶೀರ್ಷಿಕೆಯಡಿ ಮತ್ತೊಂದು ವಿಭಿನ್ನ ಕಥೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಸೆನ್ಸೇಶನಲ್ ಸ್ಟಾರ್ ಕೋಮಲ್ ಕುಮಾರ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಇದೀಗ ಮತ್ತೊಂದು ವಿಶೇಷ ಸೇರ್ಪಡೆಯಾಗಿದೆ.
ತಮ್ಮ ವಿಭಿನ್ನ ಮ್ಯಾನರಿಸಂ ಹಾಗೂ ವಿಶಿಷ್ಟ ಪಾತ್ರಗಳ ಮೂಲಕ ಕನ್ನಡಿಗರ ಮನಗೆದ್ದಿರುವ ಕೋಮಲ್ ಕುಮಾರ್, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, 'ರೋಲೆಕ್ಸ್' ಅವರ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್‌ಗಳಲ್ಲಿ ಒಂದಾಗಿದೆ. ಚಿತ್ರೀಕರಣ ಭರದಿಂದ ಸಾಗುತ್ತಿರುವ ಈ ಚಿತ್ರದ ತಂಡಕ್ಕೆ ಇದೀಗ ಮರಿ ಟೈಗರ್ ವಿನೋದ್ ಪ್ರಭಾಕರ್ ಎಂಟ್ರಿ ಕೊಟ್ಟಿದ್ದಾರೆ. ಹೌದು, ವಿನೋದ್ ಪ್ರಭಾಕರ್ ಈ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದು, ತಮ್ಮ ಸಿನಿ ಪಯಣದಲ್ಲಿ ಈವರೆಗೆ ಮಾಡದಂತಹ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.
ವಿಶೇಷವೆಂದರೆ ಇದೇ ಮೊದಲ ಬಾರಿಗೆ ಕೋಮಲ್ ಕುಮಾರ್ ಮತ್ತು ವಿನೋದ್ ಪ್ರಭಾಕರ್ ಒಂದೇ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಅಪರೂಪದ ಕಾಂಬಿನೇಷನ್ ಈಗಾಗಲೇ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದು, ಇಬ್ಬರನ್ನೂ ಒಟ್ಟಿಗೆ ದೊಡ್ಡ ಪರದೆಯಲ್ಲಿ ನೋಡುವ ನಿರೀಕ್ಷೆ ಗರಿಗೆದರಿದೆ. ಚಿತ್ರದಲ್ಲಿ ಕೋಮಲ್ ಕುಮಾರ್‌ಗೆ ಜೋಡಿಯಾಗಿ ಸೋನಾಲ್ ಮೊಂತೆರೋ ನಟಿಸುತ್ತಿದ್ದಾರೆ. 'ಬಿಲ್ ಗೇಟ್ಸ್' ಖ್ಯಾತಿಯ ಶ್ರೀನಿವಾಸ್ ಮಂಡ್ಯ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಕಾಮಿಡಿ, ಕುಟುಂಬ ಮೌಲ್ಯಗಳು ಮತ್ತು ಮನರಂಜನೆಯ ಅಂಶಗಳನ್ನು ಸಮತೋಲನವಾಗಿ ಹೆಣೆದಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ.
ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿರುವ 'ರೋಲೆಕ್ಸ್'ನಲ್ಲಿ ಕೋಮಲ್ ಕುಮಾರ್ ತಮ್ಮ ಹಿಂದಿನ ಚಿತ್ರಗಳಿಗಿಂತ ಸಂಪೂರ್ಣ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಅಚ್ಯುತ್ ಕುಮಾರ್, ನವೀನ್ ಪಡೀಲ್, ಅರುಣ್ ಬಾಲರಾಜ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿದ್ದು, ಡಾ. ವಿ. ನಾಗೇಂದ್ರ ಪ್ರಸಾದ್, ಕವಿರಾಜ್, ರಾಜೇಶ್ ವರ್ಮ ಹಾಗೂ ಕಿನ್ನಾಳ್ ರಾಜ್ ಸಾಹಿತ್ಯ ಬರೆದಿದ್ದಾರೆ. ರಾಕೇಶ್ ಸಿ ತಿಲಕ್ ಅವರ ಛಾಯಾಗ್ರಹಣ, ಅರವಿಂದ್ ರಾಜ್ ಅವರ ಸಂಕಲನ, ಯೋಗಾನಂದ್ ಸಾಹಸ ನಿರ್ದೇಶನ ಹಾಗೂ ಕಲೈ-ಮುರಳಿ ಅವರ ನೃತ್ಯ ಸಂಯೋಜನೆ ಚಿತ್ರದ ತಾಂತ್ರಿಕ ಬಲವನ್ನು ಹೆಚ್ಚಿಸಿವೆ.
ಆಂಧ್ರ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಅಂಬಟಿ ಮಧು ಮೋಹನಕೃಷ್ಣ ಅವರು ತಮ್ಮ 'ಮಧು ಫಿಲ್ಮ್ ಸರ್ಕ್ಯೂಟ್ಸ್' ಬ್ಯಾನರ್ ಅಡಿಯಲ್ಲಿ ಕನ್ನಡದಲ್ಲಿ ನಿರ್ಮಿಸುತ್ತಿರುವ ಮೊದಲ ಚಿತ್ರ ಇದಾಗಿದ್ದು, ನಿರ್ಮಾಣ ಹಂತದಲ್ಲೇ ಸಾಕಷ್ಟು ಗಮನ ಸೆಳೆದಿದೆ. ಸದ್ಯ ಶೂಟಿಂಗ್ ಪೂರ್ಣಗೊಳಿಸಿರುವ ಚಿತ್ರತಂಡ, ಶೀಘ್ರದಲ್ಲೇ ಟ್ರೇಲರ್ ಬಿಡುಗಡೆಗೆ ಸಿದ್ಧತೆ ನಡೆಸಿದ್ದು, 'ರೋಲೆಕ್ಸ್' ಬಗ್ಗೆ ಇನ್ನಷ್ಟು ಅಪ್‌ಡೇಟ್‌ಗಳು ಮುಂದಿನ ದಿನಗಳಲ್ಲಿ ಹೊರಬೀಳಲಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.