
ಸೆ.10 ರಮೇಶ್ ಅರವಿಂದ್ ಜನ್ಮದಿನ. ಈ ಹಿನ್ನೆಲೆಯಲ್ಲಿ ಅವರ ನಟನೆಯ ‘ದೈಜಿ’, ವಿಖ್ಯಾತ್ ನಿರ್ದೇಶನದ ‘ಯುವರ್ ಸಿನ್ಸಿಯರ್ಲೀ ರಾಮ್’ ಸಿನಿಮಾಗಳ ರಮೇಶ್ ಲುಕ್ ಬಿಡುಗಡೆಯಾಗಿದೆ. ‘ದೈಜಿ’ ಸಿನಿಮಾದಲ್ಲಿ ಜಪಾನಿ ಭೂತದ ಲುಕ್‌ನಲ್ಲಿ ರಮೇಶ್ ಅರವಿಂದ್ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆಯಾಗಿದೆ. ಆಕಾಶ್ ಶ್ರೀವತ್ಸ ನಿರ್ದೇಶನದ ಈ ಚಿತ್ರವನ್ನು ರವಿ ಕಶ್ಯಪ್ ನಿರ್ಮಿಸಿದ್ದಾರೆ. ದೈಜಿ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ರಮೇಶ್‌ಗೆ ಜನ್ಮದಿನದದ ಶುಭಾಶಯವನ್ನು ತಿಳಿಸಿದೆ. ಈಗಾಗಲೇ ಟೀಸರ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.
ಹುಟ್ಟು-ಸಾವು ಬಾಳಿನಲ್ಲಿ ಎರಡು ಕೊನೆಗಳು ಎಂಬ ಸಾಲಿದೆ. ಆದರೆ ಇವೆರಡರ ಮಧ್ಯೆ ಏನಿದೆ? ಇವೆರಡರ ಮಧ್ಯೆ ಪ್ರೀತಿ ಇದೆ. ಒಂದು ವೇಳೆ ಸಾವೇ ಕೊನೆಯಾಗದಿದ್ದರೆ ಏನಿರುತ್ತದೆ? ಅದರ ಆಚೆಗೆ ಒಂದು ದುಷ್ಟ ಶಕ್ತಿ ಇರುತ್ತದೆ. ಆ ಶಕ್ತಿ ಈ ಪ್ರೀತಿಯನ್ನು ಹೊತ್ತುಕೊಂಡು ಹೋಗುತ್ತದೆ. ಇದೇ ನಾವು ಸಾಮಾನ್ಯ ಹಾರರ್ ಚಿತ್ರಗಳಲ್ಲಿ ಕಾಣುವುದು. ಆದರೆ ನಿರ್ದೇಶಕ ಆಕಾಶ್ ಶ್ರೀವತ್ಸ ಈ ರೀತಿಯ ಹಾರಾರ್ ಸಿನಿಮಾ ಮಾಡಿಲ್ಲ. ಈವರೆಗೂ ನಾನು ಸಾಕಷ್ಟು ಹಾರರ್ ಸಿನಿಮಾ ನೋಡಿದ್ದೇನೆ. ಆದರೆ ಈ ರೀತಿ ಕಥೆ ನಾನು ನೋಡಿಲ್ಲ. ಅಂತಹ ಚಿತ್ರ ಮಾಡಿದ್ದಾರೆ ನಿರ್ದೇಶಕ ವತ್ಸ ಅವರು.
ನಾನು ಬಾಲಚಂದರ್ ಅವರಂತಹ ಹೆಸರಾಂತ ನಿರ್ದೇಶಕರ ಜೊತೆಗೆ ಹತ್ತು ಸಿನಿಮಾ ಮಾಡಿದ್ದೇನೆ. ಮುಂದೆ ವತ್ಸ ಅವರ ಜೊತೆಗೂ ಇದೇ ರೀತಿ ಮಾಡುತ್ತೇನೆ. ಇನ್ನೂ, ನಿರ್ಮಾಪಕ ರವಿ ಕಶ್ಯಪ್ ಅವರ ಸಿನಿಮಾ ಪ್ರೀತಿ ಬಗ್ಗೆ ಎಷ್ಟು ಹೇಳಿದರು ಕಡಿಮೆ. ರಾಧಿಕಾ ನಾರಾಯಣ್ ಅವರಂತೂ ಮಹಾನಟಿ. ದಿಗಂತ್ ಅವರ ಲವಲವಿಕೆ ನನಗೆ ಬಹಳ ಇಷ್ಟ. ಈ ಚಿತ್ರದಲ್ಲಿ ವಿದೇಶದ ಪ್ರಸಿದ್ದ ಕಲಾವಿದರೊಂದಿಗೂ ನಟಿಸಿದ್ದೇನೆ. ಆದಷ್ಟು ಬೇಗ ದೈಜಿ ಚಿತ್ರವನ್ನು ತೆರೆಯ ಮೇಲೆ ನೋಡಲು ಕಾತುರನಾಗಿದ್ದೇನೆ ಎಂದು ರಮೇಶ್ ಅರವಿಂದ್ ಹೇಳಿದರು.
ಸಂಖ್ಯಾಶಾಸ್ತ್ರದ ಪ್ರಕಾರ ಮೂರು ಅಂಕಿಗೂ, ನನಗೂ, ಈ ಚಿತ್ರಕ್ಕೂ ನಂಟಿದೆ. ಹೇಗೆಂದರೆ, ಇದು ನನ್ನ ನಿರ್ದೇಶನದಲ್ಲಿ ರಮೇಶ್ ಅವರು ನಾಯಕರಾಗಿ ನಟಿಸಿರುವ ಮೂರನೇ ಸಿನಿಮಾ. ನಟಿ ರಾಧಿಕಾ ನಾರಾಯಣ್ ಅವರ ಜೊತೆಗೂ ಇದು ಮೂರನೇ ಸಿನಿಮಾ. ನನ್ನ ಮತ್ತು ನಿರ್ಮಾಪಕರ ಮೂರನೇ ಕಾಂಬಿನೇಶನ್‌ನ ಸಿನಿಮಾವೂ ಹೌದು. ಹೇಗೆ ಮೂರರ ನಂಟನ್ನು ಸಾಕಷ್ಟು ಉದಾಹರಿಸಬಲ್ಲೆ. ನಿರ್ಮಾಪಕರು ವಿದೇಶದಲ್ಲಿ ತಾವು ಕಂಡ ನೈಜ ಘಟನೆಯನ್ನು ನನಗೆ ಹೇಳಿದರು. ಅವರು ಹೇಳಿದ ಈ ಕಥೆಯೇ ಈ ಸಿನಿಮಾಗೆ ಸ್ಪೂರ್ತಿ.
ನಂತರ ಈ ಕಥೆಗೆ ರಮೇಶ್ ಅವರೇ ಸೂಕ್ತ ಎನಿಸಿ, ಅವರಿಗೆ ಕಥೆ ಹೇಳಿದಾಗ, ಅವರು ನಟಿಸಲು ಒಪ್ಪಿಕೊಂಡಿದ್ದು ಬಹಳ ಸಂತೋಷವಾಯಿತು. ಸೂರ್ಯ ಎಂಬ ಪಾತ್ರದಲ್ಲಿ ರಮೇಶ್ ಅವರು ಕಾಣಿಸಿಕೊಂಡಿದ್ದಾರೆ. ರಾಧಿಕಾ ನಾರಾಯಣ್ ಅವರು ಭೂಮಿ ಪಾತ್ರದಲ್ಲಿ ಹಾಗೂ ರಮೇಶ್ ಅವರ ತಮ್ಮನಾಗಿ ನಟ ದಿಗಂತ್ ಗಗನ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೈಜಿ ಎಂದರೆ ಪ್ರೇತಾತ್ಮಗಳ ದೈವ ಎಂದರ್ಥ. ಈಗಾಗಲೇ ಟೀಸರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಟ್ರೇಲರ್ ಸಹ ಬರಲಿದ್ದು, ವರ್ಷದ ಕೊನೆ ಅಥವಾ ನೂತನ ವರ್ಷದ ಆರಂಭಕ್ಕೆ ದೈಜಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.