ಆ ಬಹಳಷ್ಟು ಸಿಡಿಗಳು ಇನ್ನೂ ನನ್ನ ಬಳಿ ಇವೆ: ಗೋಲ್ಡನ್‌ ಸ್ಟಾರ್‌ ಗಣೇಶ್‌ ಪತ್ನಿ ಮಾತಿನ ಮರ್ಮವೇನು?

Published : May 11, 2026, 04:33 PM IST
Shilpa Ganesh

ಸಾರಾಂಶ

ನನಗೆ ಚಿಕ್ಕಂದಿನಿಂದಲೂ ಗಾಯನ ಅಂದ್ರೆ ಬಹಳ ಇಷ್ಟ. ಶಾಸ್ತ್ರೀಯವಾಗಿ ಕಲಿತಿಲ್ಲವಾದರೂ ಬಾಲ್ಯದಿಂದಲೇ ನನಗಿಷ್ಟ ಬಂದ ಹಾಡುಗಳನ್ನು ಪ್ರಾಕ್ಟೀಸ್ ಮಾಡುತ್ತಲೇ ಇದ್ದೆ ಎನ್ನುತ್ತಾರೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ಪತ್ನಿ.

ಕನ್ನಡ ಮತ್ತು ತುಳು ಚಿತ್ರರಂಗಕ್ಕೆ ಹೊಸ ಗಾಯಕಿಯೊಬ್ಬರ ಪರಿಚಯವಾಗಿದೆ. ಅವರೇ ಶಿಲ್ಪಾ ಗಣೇಶ್. ತುಳು ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿರುವ ‘ಪಿಚ್ಚರ್‌’ ಚಿತ್ರಕ್ಕೆ ‘ಗೋಕುಲದ ರಾಧೆ’ ಎಂಬ ಹಾಡನ್ನು ಎರಡೂ ಭಾಷೆಯಲ್ಲಿ ಹಾಡಿದ್ದಾರೆ. ಈ ಹಾಡು ಬಿಡುಗಡೆಯಾಗಿ ಇದೀಗ ಭಾರಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ಈ ಸಿನಿಮಾವನ್ನು ಗೋಲ್ಡನ್ ಮೂವೀಸ್ ಮೂಲಕ ಶಿಲ್ಪಾ ಗಣೇಶ್ ಅವರೇ ನಿರ್ಮಿಸುತ್ತಿದ್ದಾರೆ. ತನ್ನ ಗಾಯನ ಕನಸಿನ ಕುರಿತು ಅವರು, ‘ನನಗೆ ಚಿಕ್ಕಂದಿನಿಂದಲೂ ಗಾಯನ ಅಂದ್ರೆ ಬಹಳ ಇಷ್ಟ. ಶಾಸ್ತ್ರೀಯವಾಗಿ ಕಲಿತಿಲ್ಲವಾದರೂ ಬಾಲ್ಯದಿಂದಲೇ ನನಗಿಷ್ಟ ಬಂದ ಹಾಡುಗಳನ್ನು ಪ್ರಾಕ್ಟೀಸ್ ಮಾಡುತ್ತಲೇ ಇದ್ದೆ. ಹಾಗೆ ನನ್ನ ಹಾಡು ರೆಕಾರ್ಡ್ ಮಾಡಿರುವ ಬಹಳಷ್ಟು ಸಿಡಿಗಳು ಇನ್ನೂ ನನ್ನ ಬಳಿ ಇವೆ. ಕೇಳಿದವರೆಲ್ಲಾ ಎಷ್ಟು ಚೆನ್ನಾಗಿದೆ ಧ್ವನಿ, ನೀನು ಸಿನಿಮಾದಲ್ಲಿ ಹಾಡಬೇಕು ಅನ್ನುತ್ತಿದ್ದರು. ಅದಕ್ಕೆ ನನ್ನದೇ ನಿರ್ಮಾಣದ ಸಿನಿಮಾದಲ್ಲಿ ಹಾಡಿದ್ದೇನೆ. ಕನಸು ನನಸಾದ ಖುಷಿ ಇದೆ’ ಎನ್ನುತ್ತಾರೆ.

ತುಳು ಚಿತ್ರರಂಗಕ್ಕೆ ಪ್ರವೇಶಿಸಿರುವ ಕುರಿತು ಮಾತನಾಡಿ, ‘ಗೋಲ್ಡನ್‌ ಮೂವೀಸ್‌ನಲ್ಲಿ ತುಳು ಸಿನಿಮಾ ಮಾಡುವ ಯೋಜನೆ ಇತ್ತು. ಈ ವಸ್ತು ಕನ್ನಡಕ್ಕೂ ಸೂಕ್ತವಾಗುತ್ತದೆ ಎಂಬ ಕಾರಣಕ್ಕೆ ಕನ್ನಡದಲ್ಲೂ ಬಿಡುಗಡೆ ಮಾಡುತ್ತಿದ್ದೇವೆ. ನಮ್ಮ ಸಂಸ್ಥೆ ನಿರ್ಮಾಣ ಮಾಡುತ್ತದೆ ಎಂದ ಮೇಲೆ ಕೊಂಚ ವಿಶೇಷತೆ ಇರಬೇಕು ಅಂತ ಆಕರ್ಷಕ ರೀತಿಯಲ್ಲಿ ಸಿನಿಮಾ ಕಟ್ಟಿದ್ದೇವೆ. ಕೌಟುಂಬಿಕ ಕಥಾಹಂದರದ ಸಿನಿಮಾ. ಆರಂಭದಿಂದ ಅಂತ್ಯದವರೆಗೂ ನಗುವಿದೆ. ಎಲ್ಲರನ್ನೂ ಹಗುರಾಗಿಸುವ ಸಿನಿಮಾ ಇದು’ ಎಂದು ಹೇಳುತ್ತಾರೆ.

ಚಿತ್ರ ನಿರ್ಮಾಣ ಪ್ರಕ್ರಿಯೆಯ ಕುರಿತು ಮಾತನಾಡುವ ಅವರು, ‘ಒಳ್ಳೆಯ ಕಂಟೆಂಟ್‌ ಇರುವ ಸಿನಿಮಾ ಮಾಡಬೇಕು ಅನ್ನುವುದು ನಮ್ಮ ಆಸೆಯಾಗಿತ್ತು. ಅದಕ್ಕೆ ತಕ್ಕಂತೆ ಸಿನಿಮಾ ಮೂಡಿಬಂದಿದೆ. ಅದ್ದೂರಿಯಾಗಿ ಚಿತ್ರೀಕರಣ ಮಾಡಿದ್ದೇವೆ. ಅದರಲ್ಲೂ ಹಾಡುಗಳು ಬಹಳ ಸೊಗಸಾಗಿವೆ. ನಮ್ಮ ಸಂಸ್ಥೆಯ ನಿರ್ಮಾಣದ ಚಿತ್ರದ ಹಾಡುಗಳಿಗೆ ನಾನು ಹೆಚ್ಚು ಆಸ್ಥೆ ವಹಿಸುತ್ತೇನೆ. ನನ್ನ ವೈಯಕ್ತಿಕ ಇಷ್ಟದ ವಿಭಾಗ ಅದು. ಈ ಚಿತ್ರದಲ್ಲಿ ಮಂಗಳೂರಿನ ಬಹಳಷ್ಟು ರಂಗಭೂಮಿ ಹಿನ್ನೆಲೆಯ ಉತ್ಕೃಷ್ಟ ಕಲಾವಿದರು ನಟಿಸಿದ್ದಾರೆ’ ಎನ್ನುತ್ತಾರೆ.

ಸಂದೀಪ್ ಬೆದ್ರ ನಿರ್ದೇಶನದ ಈ ಚಿತ್ರದಲ್ಲಿ ನಿತ್ಯಪ್ರಕಾಶ್ ಬಂಟ್ವಾಳ ಮತ್ತು ಅಮೃತಾ ನಾಯಕ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ‘ಪಿಚ್ಚರ್‌’ ಸಿನಿಮಾ ಜು.24ರಂದು ಕನ್ನಡ ಮತ್ತು ತುಳುವಿನಲ್ಲಿ ಬಿಡುಗಡೆಯಾಗುತ್ತಿದೆ.

ಗಣೇಶ್‌ಗೂ ಇಷ್ಟ ಶಿಲ್ಪಾ ಹಾಡು

ಪತಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಪ್ರತಿಕ್ರಿಯೆ ಹೇಗಿತ್ತು ಎಂದು ಕೇಳಿದರೆ, ‘ಹಾಡು ಕೇಳಿ ಗಣೇಶ್‌ ತುಂಬಾ ಇಷ್ಟಪಟ್ಟರು. ಹಿಂದೆಯೆಲ್ಲಾ ನಮ್ಮ ತಂಡ ಒಟ್ಟು ಸೇರಿದಾಗ ನಾನು ಹಾಡುತ್ತಿದ್ದೆ. ಬಳಗವೆಲ್ಲಾ ಸಿನಿಮಾಗೆ ಹಾಡಿಸಬೇಕು ಎಂದು ಹೇಳುತ್ತಿದ್ದರು. ಕಾಲ ಕೂಡಿ ಬಂದಿರಲಿಲ್ಲ. ಈ ಹಾಡಿನ ಮೂಲಕ ಎಲ್ಲರೂ ಮೆಚ್ಚುಗೆ ಸಲ್ಲಿಸುತ್ತಿದ್ದಾರೆ’ ಎನ್ನುತ್ತಾರೆ ಶಿಲ್ಪಾ ಗಣೇಶ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಕ್ಷಿತ್ ಶೆಟ್ಟಿ ಮತ್ತು ನನ್ನ ನಡುವೆ ಮ್ಯೂಸಿಕ್ ಸೀಕ್ರೆಟ್‌ಗಳಿವೆ: ಅಜನೀಶ್‌ ಲೋಕನಾಥ್
ಕಿಚ್ಚ ಸುದೀಪ್ ಮಗಳು ಗಾಯಕಿ ಸಾನ್ವಿ ಬೆನ್ನೇರಿದ ವಿನಾಯಕ! ಸನಾತನಿಗಳಿಂದ ಬಂತು ಶುಭ ಹಾರೈಕೆ!