2020:75/365; ಥೇಟರುಗಳೇ ಗಟ್ಟಿ, ಓಟಿಟಿ ಬಿಟ್ಟಿ

By Kannadaprabha NewsFirst Published Dec 26, 2020, 9:37 AM IST
Highlights

ಸಿನಿಮಾಗಳಿಗೆ ಥೇಟರ್‌ ಕಲೆಕ್ಷನ್ನೇ ಗಟ್ಟಿ, ಓಟಿಟಿಗಳಿಗೆ ಪ್ರದರ್ಶನಕ್ಕೆ ನೀಡಿದರೆ ಕಾಸು ಬರುವುದು ಖಾತ್ರಿಯಿಲ್ಲ ಅನ್ನುವುದನ್ನು ಕನ್ನಡ ಚಿತ್ರಗಳು ಕೋವಿಡ್‌ ಅವಧಿಯಲ್ಲಿ ಅರ್ಥಮಾಡಿಕೊಂಡವು. ರವಿಚಂದ್ರನ್‌ರಿಂದ ಹಿಡಿದು ಹೊಸಬರ ತನಕ ಓಟಿಟಿ ಮಾಡ್ತೀವಿ ಅಂದವರು ವರ್ಷದ ಕೊನೆಗೆ ಸುಮ್ಮನಾದರು. ಓಟಿಟಿಗೋಸ್ಕರ ಸಿನಿಮಾ ಮಾಡ್ತೀವಿ ಅಂದವರು ನಿಧಾನಕ್ಕೆ ಥೇಟರೇ ವಾಸಿ ಅನ್ನುವ ತೀರ್ಮಾನಕ್ಕೆ ಬಂದರು. ಪ್ರೇಕ್ಷಕರೂ ಅಷ್ಟೇ, ಓಟಿಟಿಯಲ್ಲಿ ಕನ್ನಡ ಸಿನಿಮಾ ನೋಡೋದು ಬ್ಯಾಡ ಅಂತ ತೀರ್ಮಾನಿಸಿದಂತೆ ಥೇಟರ್‌ ಯಾವಾಗ ಓಪನ್ನು ಅಂತ ಕೇಳುತ್ತಾ ಶರಟಿನ ತೋಳು ಮಡಿಚಿಕೊಳ್ಳುತ್ತಾ ಸರಬರ ಓಡಾಡಿದರು.

ಆರ್‌.ಕೇಶವಮೂರ್ತಿ 

75/365

ಮೊನ್ನೆ ಮೊನ್ನೆ ಆಸ್ಪ್ರೇಲಿಯಾದ ವಿರುದ್ಧ 36 ರನ್ನಿಗೆ ಇಂಡಿಯಾದ ಕ್ರಿಕೆಟ್‌ ತಂಡ ಔಟಾದಾಗ, ಅದನ್ನು ಅತ್ಯಂತ ಕಳಪೆ ಸ್ಕೋರು ಅಂದರು. ಚಿತ್ರರಂಗದ್ದೂ ಈ ವರ್ಷ ಅತಿ ಕಡಿಮೆ ಸ್ಕೋರೇ. ಕಳೆದ ಇಪ್ಪತ್ತು ವರ್ಷಗಳಲ್ಲಿ ಇಂಥ ಕಳಪೆ ಆಟವನ್ನು ಗಾಂಧೀನಗರ ಟೀಮು ಪ್ರದರ್ಶಿಸಿರಲೇ ಇಲ್ಲ ಅಂತ ಹೇಳಿದರೆ ಬೇಸರ ಮಾಡಿಕೊಳ್ಳುವ ಅಗತ್ಯ ಇಲ್ಲ. ಯಾಕೆಂದರೆ ಈ ಸಲ ಮ್ಯಾಚೇ ನಡೆಯಲಿಲ್ಲ. ಅಂಗಣವೂ ಇರಲಿಲ್ಲ, ಪ್ರೇಕ್ಷಕರೂ!

ಚಿತ್ರರಂಗ ಕಂಡುಕೇಳರಿಯದ ಆಘಾತವೊಂದನ್ನು ಈ ವರ್ಷ ಅನುಭವಿಸಿತು. ಹಾಗಿದ್ದರೂ ಅದು ಪುಟಿದೆದ್ದು ನಿಲ್ಲಲು ಹರಸಾಹಸ ಮಾಡಿತು. ಅದರ ಪರಿಣಾಮವೇ ಮುನ್ನೂರ ಅರವತ್ತೈದು ದಿನಗಳಲ್ಲಿ ತೆರೆಕಂಡ 75 ಸಿನಿಮಾಗಳು.

ಹಾಗೆ ನೋಡಿದರೆ ಈ ವರ್ಷದಲ್ಲಿ ನಿವ್ವಳವಾಗಿ ಸಿಕ್ಕಿದ್ದು ಆರಂಭದ 72 ದಿನಗಳು ಮತ್ತು ಕೊನೆಯ 41 ದಿನಗಳು ಮಾತ್ರ. ಈ ಅಲ್ಪಾವಧಿಯಲ್ಲೇ ಭಯಗ್ರಸ್ತ ವಾತಾವರಣದಲ್ಲಿ ಚಿತ್ರರಂಗ ತನ್ನಿಂದಾದ ಸಾಧನೆ ಮಾಡಿತು. ಮಿಕ್ಕ ಭಾರತೀಯ ಚಿತ್ರರಂಗಗಳಿಗೆ ಹೋಲಿಸಿದರೆ ಕನ್ನಡದ್ದೇ ದಿಟ್ಟನಿಲುವು ಎನ್ನಬಹುದು.

2021: ನಾವು ಬಂದೇವ,ನಾವು ಬಂದೇವಾ! ನಾವು ರೆಡಿ! ನೀವು? 

ಈ 75 ಚಿತ್ರಗಳೂ ಕೂಡ ಒಂದೇ ಹಂತದಲ್ಲಿ ತೆರೆಗೆ ಬಂದಿಲ್ಲ. ಕೊರೋನಾ ಪ್ರವೇಶಿಸುವ ಮುನ್ನ ಜನವರಿಯಿಂದ ಮಾಚ್‌ರ್‍ 13ರ ವರೆಗೆ 58 ಚಿತ್ರಗಳು ತೆರೆಗೆ ಮೇಲೆ ಬಂದಿವೆ. ‘ಗುಡುಮನ’ ಎನ್ನುವ ಚಿತ್ರದಿಂದ ಆರಂಭವಾದ ಈ ವರ್ಷದ ಸಿನಿಮಾ ಜಾತ್ರೆ ‘ಕುಷ್ಕ’ ಚಿತ್ರದ ವರೆಗೂ ಬಂದು ನಿಂತಿತ್ತು. ಲಾಕ್‌ಡೌನ್‌ ಮುಗಿದ ಬಳಿಕ ಮೊದಲ ಬಾರಿಗೆ ಚಿತ್ರಮಂದಿರ ಪ್ರವೇಶಿಸಿದ್ದು ‘ಆಕ್ಟ್ 1978’ ಸಿನಿಮಾ. ಸಾಕಷ್ಟುದೊಡ್ಡ ಮಟ್ಟದಲ್ಲೇ ಓಪನಿಂಗ್‌ ತೆಗೆದುಕೊಂಡು ಈಗಲೂ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಸಿನಿಮಾ ಇದು ಎನ್ನಬಹುದು. ‘ಆಕ್ಟ್ 1978’ ಚಿತ್ರದಿಂದ ಡಿಸೆಂಬರ್‌ 25ರಂದು ತೆರೆಗೆ ಬರುತ್ತಿರುವ ‘ಶಕೀಲಾ’ ಚಿತ್ರದ ವರೆಗೂ 10 ಚಿತ್ರಗಳು ಬಿಡುಗಡೆಯಾಗಿವೆ.

ಇದು ಎರಡು ಹಂತಗಳಾದರೆ ಏಳು ಸಿನಿಮಾಗಳ ಓಟಿಟಿ ಬಿಡುಗಡೆ ಮತ್ತೊಂದು ಆಯಾಮ. ‘ಫ್ರೆಂಚ್‌ ಬಿರಿಯಾನಿ’, ‘ಲಾ’ ಹಾಗೂ ‘ಭೀಮಸೇನಾ ನಳಮಹಾರಾಜ’ ಚಿತ್ರಗಳಿಂದ ಶುರುವಾಗಿ ಓಟಿಟಿಯಲ್ಲಿ ತೆರೆಕಂಡದ್ದು 7 ಚಿತ್ರಗಳು. ಇದಲ್ಲದೇ ಏಳೆಂಟು ಚಿತ್ರಗಳು ಮರು ಬಿಡುಗಡೆ ಆಗಿವೆ.

ಯಶಸ್ಸಿನ ಲೆಕ್ಕಾಚಾರ

ತೆರೆಗೆ ಬಂದ ಚಿತ್ರಗಳ ಪೈಕಿ ‘ಲವ್‌ ಮಾಕ್ಟೇಲ್‌’, ‘ದಿಯಾ’, ‘ಜಂಟಲ್‌ಮನ್‌’, ‘ಪಾಪ್‌ ಕಾರ್ನ್‌ ಮಂಕಿ ಟೈಗರ್‌’, ‘ಮಾಲ್ಗುಡಿ ಡೇಸ್‌’, ‘ಕಾಣದಂತೆ ಮಾಯವಾದನು’, ‘ಮತ್ತೆ ಉದ್ಭವ’, ‘ಶಿವಾಜಿ ಸೂರತ್ಕಲ್‌’, ‘ಮಾಯಾ ಬಜಾರ್‌’, ‘ಆಕ್ಟ್ 1978’ ಹಾಗೂ ‘ಅರಿಷಡ್ವರ್ಗ’ ಚಿತ್ರಗಳು ಆಟಕ್ಕೂ ಸೈ ಲೆಕ್ಕಕ್ಕೂ ಜೈ ಅನ್ನಿಸಿಕೊಂಡವು. ಸಾಮಾನ್ಯವಾಗಿ 200 ಸಿನಿಮಾಗಳು ಬಂದಾಗ ಹಾಕಿದ ಬಂಡವಾಳ ವಾಪಸ್ಸು ಪಡೆಯುತ್ತಿದ್ದವು ಹೆಚ್ಚೆಂದರೆ ಏಳೋ ಎಂಟೋ. ಈ ಸಲ 75ರಲ್ಲೇ ಹನ್ನೊಂದು ಚಿತ್ರಗಳು ಗೆದ್ದು ಕಷ್ಟಕಾಲದಲ್ಲೂ ಸಾಧನೆ ಮೆರೆದಿವೆ

1. ವರುಷದ ಸ್ಟಾ​ರ್‍ಸ್

ಲವ್‌ ಮಾಕ್ಟೇಲ್‌ ಚಿತ್ರದ ಡಾರ್ಲಿಂಗ್‌ ಕೃಷ್ಣ, ದಿಯಾ ಚಿತ್ರದಿಂದ ಪೃಥ್ವಿ ಅಂಬಾರ್‌ ಮತ್ತು ಆ್ಯಕ್ಟ್ 1978 ಚಿತ್ರದ ಯಜ್ಞಾ ಶೆಟ್ಟಿಈ ವರುಷ ಗಮನ ಸೆಳೆದವರು. ಈ ಮೂವರನ್ನೂ ವರ್ಷದ ತಾರೆಯರೆಂದು ಕರೆಯಬಹುದು.

ಡಾಲಿ ಮತ್ತು ರಮೇಶ್‌ ಅರವಿಂದ್‌ ತಮ್ಮ ಎಂದಿನ ಆಟದಲ್ಲಿ ಮಿಂಚಿದರು. ಶಿವಾಜಿ ಸುರತ್ಕಲ್‌ ಗಮನ ಸೆಳೆಯಿತು. ಪಾಪ್‌ಕಾರ್ನ್‌ ಮಂಕಿ ಟೈಗರ್‌ ದುನಿಯಾ ಸೂರಿ ಕಚ್ಚಾ ಶೈಲಿ ಮೆಚ್ಚುವರಿಗೆ ಅಚ್ಚುಮೆಚ್ಚಾಯಿತು.

2. ಗಮನ ಸೆಳೆದ ನಿರ್ದೇಶಕರು

ಈ ವರ್ಷ ಗಮನ ಸೆಳೆದ ನಿರ್ದೇಶಕರ ಪೈಕಿ ಹೊಸಬರೂ ಇದ್ದಾರೆ, ಪಳಗಿದವರೂ ಸೇರಿದ್ದಾರೆ. ಅರಿಷಡ್ವರ್ಗದ ಅರವಿಂದ ಕಾಮತ್‌ ತಮ್ಮ ತಾಂತ್ರಿಕತೆಯಿಂದ ಗಮನ ಸೆಳೆದರೆ, ಮಂಸೋರೆ ತಮ್ಮ ಹಿಂದಿನ ಸಿನಿಮಾಗಳ ಮಿತಿಯನ್ನೆಲ್ಲ ಮೀರಿ ಮೆರೆದರು. ಡಾರ್ಲಿಂಗ್‌ ಕೃಷ್ಣ ನಿರ್ದೇಶನಕ್ಕೂ ಸೈ ಅಂತ ತೋರಿಸಿಕೊಟ್ಟರೆ, ಕೆ ಎಸ್‌ ಅಶೋಕ್‌ ತಮ್ಮ ಮೊದಲ ಚಿತ್ರದ ಗೆಲುವು ಆಕಸ್ಮಿಕ ಅಲ್ಲ ಅಂತ ಸಾಬೀತು ಮಾಡಿದರು. ಮಿಂಚಿದ್‌ ಇನ್ನಿಬ್ಬರೆಂದರೆ ಜಡೇಶ್‌ ಕುಮಾರ್‌ ಹಂಪಿ (ಜಂಟಲ್‌ಮನ್‌) ಮತ್ತು ಕಿಶೋರ್‌ ಮೂಡಬಿದ್ರೆ (ಮಾಲ್ಗುಡಿ ಡೇಸ್‌).

3. ಹೈಲೈಟ್ಸ್‌

- ತೆರೆಗೆ ಬಂದ ಚಿತ್ರಗಳು: 75

- ಲಾಡ್‌ಗೂ ಮೊದಲು: 58

-ಲಾಕ್‌ಡೌನ್‌ ನಂತರ: 10

- ಓಟಿಟಿಯಲ್ಲಿ ತೆರೆಗೆ: 7

4. ಮನಸು ಗೆದ್ದು ಕಾಸು ಮಾಡಿದ್ದು

ಲವ್‌ ಮಾಕ್ಟೇಲ್‌

ದಿಯಾ

ಆಕ್ಟ್ 1978

5. ಹೊಸಿಲು ದಾಟದ ನಾಲ್ಕು ಸಿನಿಮಾ

ಪಾಪ್‌ ಕಾರ್ನ್‌ ಮಂಕಿ ಟೈಗರ್‌

ಮಾಲ್ಗುಡಿ ಡೇಸ್‌

ಜಂಟಲ್‌ಮನ್‌

ಅರಿಷಡ್ವರ್ಗ

ಮಿಂಚಿದ ನಾಯಕಿಯರು

ಖುಷಿ ರವಿ

ಮಿಲನಾ ನಾಗರಾಜ್‌

click me!