'ನಾನು ಅವನಲ್ಲ, ಅವಳು' ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಮೆದುಳು ನಿಷ್ಕ್ರಿಯ

By Suvarna News  |  First Published Jun 14, 2021, 12:39 PM IST

* ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಮೆದುಳು ನಿಷ್ಕ್ರಿಯ

* ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು, ಬೆಂಗಳೂರು ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ

* ಅಪಘಾತದಲ್ಲಿ ಮೆದುಳಿಗೆ ತೀವ್ರ ಪೆಟ್ಟು


ಬೆಂಗಳೂರು(ಜೂ.14): ಅಪಘಾತಕ್ಕೀಡಾಗಿ, ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಮೆದುಳು ನಿಷ್ಟ್ರಿಯಗೊಂಡಿದೆ. ಈಗಾಗಲೇ ಅವರು ಕೊನೆಯುಸಿರೆಳೆದಿದ್ದಾರೆಂದು ಸುದ್ದಿಗಳು ಬರುತ್ತಿದ್ದು, ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಆದರಿನ್ನೂ ಅವರು ಉಸಿರಾಡುತ್ತಿದ್ದಾರೆಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಅಂಗಾಂಗ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದು, ಈ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕಿದೆ.

ಶನಿವಾರ ತಡರಾತ್ರಿ ಔಷಧ ತರಲು ಹೋಗುತ್ತಿದ್ದಾಗ ವಿಜಯ್‌ ಅವರಿದ್ದ ಬೈಕ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ವಿಜಯ್‌ ಅವರ ಮೆದುಳಿಗೆ ತೀವ್ರ ಪೆಟ್ಟು ಬಿದ್ದಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಬಲ ತೊಡೆಯ ಮೂಳೆ ಮುರಿದಿದ್ದು, ಸರ್ಜರಿ ಮಾಡಲಾಗಿತ್ತು. ವೆಂಟಿಲೇಟರ್‌ ಮೂಲಕ ಚಿಕಿತ್ಸೆ ನೀಡಲಾಗುತ್ತಿದ್ದು, ಮುಂದಿನ 48 ತಾಸು ಏನನ್ನೂ ಹೇಳಲು ಆಗದು ಎಂದು ವೈದ್ಯರು ತಿಳಿಸಿದ್ದಾರೆ. ವಿಜಯ್ ಅಂಗಾಂಗಗಳನ್ನು ದಾನ ಮಾಡುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. 

Latest Videos

undefined

ಏನಾಗಿತ್ತು?:

ಜೆ.ಪಿ. ನಗರದ  7ನೇ ಹಂತದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ತೀವ್ರ ಗಾಯಗೊಂಡ ವಿಜಯ್‌ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ನೇಹಿತ ನವೀಜ್ ಜತೆ ರಾತ್ರಿ ಸುಮಾರು 11.45ರ ಸುಮಾರಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.  ವಿಜಯ್ ತಲೆ ಹಾಗೂ ತೊಡೆಗೆ ತೀವ್ರ ಪೆಟ್ಟು ಬಿದ್ದಿತ್ತು ಹಾಗೂ ಸ್ನೇಹಿತ ನವೀನ್ ಅವರ ಬೆನ್ನು ಮೂಳೆಗೆ ಪೆಟ್ಟಾಗಿದೆ.

ಸಂಚಾರಿ ವಿಜಯ್‌ಗೆ ನೆರವಾದ ಕಿಚ್ಚ ಸುದೀಪ್, ಆಪರೇಶನ್‌ಗೆ ವ್ಯವಸ್ಥೆ 

ನವೀನ್ ಅವರೇ ಬೈಕ್ ಓಡಿಸುತ್ತಿದ್ದರು, ವಿಜಯ್ ಹಿಂಬದಿಯಲ್ಲಿದ್ದರು. ಬೈಕ್ ನಿಯಂತ್ರಣ ತಪ್ಪಿ, ಬೈಕ್‌ನಿಂದ ಉರುಳಿ ಬಿದ್ದಿದ್ದಾರೆ. ರಸ್ತೆಗೆ ಉಜ್ಜಿಕೊಂಡು ಹೋಗಿ ಪಕ್ಕದ ವಿದ್ಯುತ್ ಕಂಬಕ್ಕೆ  ಗುದ್ದಿತ್ತು. ಸ್ಥಳದಲ್ಲೇ ವಿಜಯ್ ಪ್ರಜ್ಞೆ ತಪ್ಪಿದ್ದರು. ನವೀನ್ ಅವರೇ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಬಂದ ಸ್ನೇಹಿತರು ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.

ನಾನು ಅವನಲ್ಲ ಅಭಿಯನಕ್ಕೆ ವಿಜಯ್ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಶ್ರುತಿ ಹಾಸನ ಜೊತೆ ನಟಿಸಿದ ನಾತಿಚರಾಮಿಯೂ ಅತ್ಯುತ್ತಮ ಪ್ರತಿಕ್ರಿಯೆ ಪಡೆದಿದ್ದು. ತಮ್ಮ ಅಭಿನಯದಿಂದಲೇ ಕನ್ನಡಿಗರ ಹೃದಯ ಗೆದ್ದಿದ್ದ ವಿಜಯ್ ಅವರಿಗೆ ಇತ್ತೀಚೆಗೆ ಹತ್ತು ಹಲವು ಚಿತ್ರಗಳಲ್ಲಿ ನಟಿಸುವ ಆಫರ್ಸ್ ಇದ್ದವು. ಕೃಷ್ಣ ತುಳಸಿ, ಹರಿವು, 6ನೇ ಮೈಲಿ, ಆಟಕ್ಕುಂಟು ಲೆಕ್ಕಕ್ಕಿಲ್ಲ, ಆ್ಯಕ್ಟ್ 1978, ರಿಕ್ತ, ಪಾದರಸ, ಒಗ್ಗರಣೆ, ಶುದ್ಧಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು ವಿಜಯ. 

ಕಂಗನಾ ರಣಾವತ್ ಭೇಟಿ ಮಾಡಿದ ಸಂಚಾರಿ ವಿಜಯ್; 'ಎಷ್ಟು ಬೇಕಾದ್ರೂ ಫೋಟೋ ಹಿಡಿಯಿರಿ'! 

ಇತ್ತೀಚೆಗೆ ಬೆಂಗಳೂರಿಗೆ ಬಂದಾಗ ಬದುಕಿಗಾಗಿ ಹೋರಾಡಿದ್ದು ಹೇಗಿತ್ತು ಎಂಬುದನ್ನು ಫೇಸ್‌ಬುಕ್‌ ಮೂಲಕ ಶೇರ್ ಮಾಡಿ ಕೊಂಡಿದ್ದ ಪೋಸ್ಟ್ ವೈರಲ್ ಆಗಿತ್ತು. ಕಷ್ಟದಿಂದ ಬಂದ ನಟನೊಬ್ಬನನ್ನು ಕಳೆದು ಕೊಂಡ ಕರುನಾಡಿಗೆ ಇದೊಂದು ದೊಡ್ಡ ಆಘಾತ. ಅಗಲಿದ ಜೀವಕ್ಕೆ ಶಾಂತಿ ಸಿಗಲಿ ಎಂಬುವುದು ಎಲ್ಲರ ಆಶಯ.
 

click me!