ಪುಷ್ಪ-2 ಚಿತ್ರ ಬಿಡುಗಡೆಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ 3 ಗಂಟೆಗೆ ಪ್ರದರ್ಶನಕ್ಕೆ ಚಿತ್ರಮಂದಿರಗಳು ಮುಂದಾಗಿದ್ದವು. ಆದರೆ, ನಿರ್ಮಾಪಕರ ಸಂಘದ ವಿರೋಧದ ನಂತರ, ಜಿಲ್ಲಾಧಿಕಾರಿಗಳು ಬೆಳಗ್ಗೆ 6.30 ಕ್ಕಿಂತ ಮುಂಚೆ ಪ್ರದರ್ಶನ ಮಾಡದಂತೆ ಆದೇಶಿಸಿದ್ದಾರೆ.
ಬೆಂಗಳೂರು (ಡಿ.04): ನಾಳೆ ವಿಶ್ವದಾದ್ಯಂತ ಪುಷ್ಪ-2 ಸಿನಿಮಾ ಬಿಡುಗಡೆ ಆಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ವಿವಿಧೆಡೆ ಚಿತ್ರಮಂದಿರ ಪ್ರಾರಂಭದ ಅವಧಿಗೂ ಮುನ್ನವೇ ಅಂದರೆ ಬೆಳ್ಳಂಬೆಳಗ್ಗೆ 3 ಗಂಟೆಗೆ ಪುಷ್ಪ-2 ಸಿನಿಮಾ ಪ್ರದರ್ಶನ ಮಾಡುವುದಕ್ಕೆ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಮಾಡುವುದಕ್ಕೂ ಚಿತ್ರಮಂದಿರಗಳು ಅವಕಾಶ ನೀಡಿದ್ದವು. ಆದರೆ, ಈ ಬಗ್ಗೆ ಕರ್ನಾಟಕ ರಾಜ್ಯ ನಿರ್ಮಾಪಕರ ಸಂಘದಿಂದ ವಿರೋಧ ವ್ಯಕ್ತವಾದ ಬೆನ್ನಲ್ಲಿಯೇ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಯಾವುದೇ ಚಿತ್ರಮಂದಿರಗಳು ಬೆಳಗ್ಗೆ 6.30ಕ್ಕಿಂತ ಮುಂಚಿತವಾಗಿ ಪುಷ್ಪ-2 ಸಿನಿಮಾ ಪ್ರದರ್ಶನ ಮಾಡದಂತೆ ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಕರ್ನಾಟಕ ರಾಜ್ಯ ಸೇರಿದಂತೆ ಜಾಗತಿಕವಾಗಿ ಪುಷಪ-2 ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನಾಳೆ ಬೆಳಗಾದರೆ ಪುಷ್ಪ-2 ಸಿನಿಮಾ ರಿಲೀಸ್ ಆಗಲಿದ್ದು, ಚಿತ್ರಮಂದಿರಗಳು ಹೆಚ್ಚಿನ ಆದಾಯವನ್ನು ಗಳಿಸಲು ಚಿತ್ರಮಂದಿರಗಳ ಪ್ರಾರಂಭದ ಅವಧಿಗೂ ಮುನ್ನವೇ ಚಿತ್ರ ಪ್ರದರ್ಶನ ಮಾಡುವುದಕ್ಕೆ ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ 40ಕ್ಕೂ ಅಧಿಕ ಚಿತ್ರಮಂದಿರಗಳು ಬುಕ್ ಮೈ ಶೋ ಸೇರಿದಂತೆ ವಿವಿಧ ಆನ್‌ಲೈನ್ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಪ್ಲಾಟ್‌ಫಾರಂಗಳಲ್ಲಿ ಬೆಳಗ್ಗೆ 3 ಗಂಟೆಯಿಂದ ಬೆಳಗ್ಗೆ 4.30ರ ಅವಧಿ ನಡುವೆ ಮೊದಲ ಶೋ ಪ್ರದರ್ಶನ ಮಾಡುವುದಾಗಿ ಸಮಯ ನಿಗದಿಗೊಳಿಸಿವೆ. ಹೀಗಾಗಿ, ಕರ್ನಾಟಕ ರಾಜ್ಯ ನಿರ್ಮಾಪಕರ ಸಂಘದಿಂದ ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆ. ಈ ಕುರಿತು ರಾಜ್ಯ ಸರ್ಕಾರದಿಂದ ಚಿತ್ರಮಂದಿರಗಳಿಗೆ ಕಡಿವಾಣ ಹಾಕುವಂತೆ ಪತ್ರವನ್ನೂ ಬರೆದಿದ್ದರು.
ಕರ್ನಾಟಕದಲ್ಲಿ 30ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಪುಷ್ಪ-2 ಸಿನಿಮಾ ಬಿಡುಗಡೆ ಆಗುತ್ತಿದೆ. ಇಂದು ರಾತ್ರಿಯಿಂದಲೇ ಪುಷ್ಪ-2 ಸಿನಿಮಾಗೆ ಕರ್ನಾಟಕದಲ್ಲಿ ಪ್ರದರ್ಶನಕ್ಕೆ ಅವಕಾಶ ಕೊಡಲಾಗಿದೆ. ಅವಧಿಗೂ ಮುನ್ನ ಪ್ರದರ್ಶನ ಆಗುತ್ತಿರುವುದನ್ನು ತಡೆದು, ಸಂಬಂಧಪಟ್ಟ ಚಿತ್ರಮಂದಿರಗಳ ಮೇಲೆ ಕ್ರಮ ಕೈಗೊಳ್ಳುವಂತೆ ನಿರ್ಮಾಪಕರ ಸಂಘದಿಂದ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಮೂಲಕ ನಾನು ತಗ್ಗೋದೇ ಇಲ್ಲ ಎಂದು ಡೈಲಾಗ್ ಹೊಡೆಯುತ್ತಿದ್ದ ಪುಷ್ಪರಾಜ್‌ನನ್ನು ಬಗ್ಗಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ಪುಷ್ಪಾ 2 ಚಿತ್ರದಿಂದ ಷೇರು ಮಾರುಕಟ್ಟೆಯಲ್ಲಿ ಹಂಗಾಮ, ಬರೋಬ್ಬರಿ 426 ಕೋಟಿ ರೂ ಏರಿಕೆ!
undefined
ನಿರ್ಮಾಪಕರು ದೂರು ಕೊಟ್ಟ ಬೆನ್ನಲ್ಲಿಯೇ ಬೆಂಗಳೂರು ನಗರ ಜಿಲ್ಲಾಧಿಕಾರಿ ಅವರು, ಬೆಂಗಳೂರು ನಗರದಲ್ಲಿ ಸಮಯ ಪಾಲನೆ ಮಾಡದೇ ಅನಧಿಕೃತವಾಗಿ ಸಿನಿಮಾ ಪ್ರದರ್ಶನ ಮಾಡುತ್ತಿರೊ ಚಿತ್ರಮಂದಿರಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆದೇಶ ಹೊರಡಿಸಿದ್ದಾರೆ. ಒಂದು ವೇಳೆ ಬೆಳಗ್ಗೆ 6.30ಕ್ಕಿಂತ ಮುಂಚಿತವಾಗಿ ಯಾವುದಾದರೂ ಚಿತ್ರಮಂದಿರಗಳು ಸಿನಿಮಾ ಪ್ರದರ್ಶನ ಮಾಡಿದಲ್ಲಿ ಅವುಗಳ ಪ್ರದರ್ಶನ ರದ್ದುಗೊಳಿಸಬೇಕು ಎಂದು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಇನ್ನು ಬೆಂಗಳೂರು ಚಿತ್ರಮಂದಿರಗಳಲ್ಲಿ ಮಲ್ಟಿಫ್ಲೆಕ್ಸ್ ನಲ್ಲಿ ನಿಗದಿಪಡಿಸಿದುವ ಸಮಯ ಅಲ್ಲದೇ ಬೇರೆ ಸಮಯದಲ್ಲೂ ಚಿತ್ರ ಪ್ರದರ್ಶನ ಮಾಡಲಾಗುತ್ತಿದೆ. ಬುಕ್ ಮೈ ಶೋ ನಲ್ಲಿ ಟಿಕೆಟ್ ಮಾರಾಟ ಮಾಡುತ್ತಿರೋದು ಕಾಣುತ್ತಿದೆ. ಕರ್ನಾಟಕ ಸಿನಿಮಾ ರೆಗ್ಯುಲೇಷನ್ ಕಾಯ್ದೆ ಅಡಿ ಸಿನಿಮಾಗಳನ್ನ ಬೆಳಗ್ಗೆ 6.30 ರ ನಂತರ ಪ್ರದರ್ಶನ ಮಾಡಬೇಕು. ಆದರೆ ಪುಷ್ಪ-2ಸಿನಿಮಾವನ್ನ ಪ್ರದರ್ಶನದ ಅವಧಿಗೂ ಮುನ್ನ ಅನಧಿಕೃತವಾಗಿ ಬೆಳಗ್ಗೆ 3 ಗಂಟೆಗೆ ಪ್ರದರ್ಶನ ಮಾಡಲಾಗುತ್ತಿದೆ. ಅವಧಿಗೂ ಮುನ್ನ ಪ್ರದರ್ಶನಕ್ಕೆ ಬುಕ್ ಮೈ ಶೋ ನಲ್ಲಿ ಟಿಕೆಟ್ ಮಾರಾಟ ನಿಯಮ ಬಾಹಿರವಾಗಿದೆ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಂದ ಪೊಲೀಸ್ ಆಯುಕ್ತರಿಗೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ.