ಕಾಂತಾರ ಚಾಪ್ಟರ್-1 ಕಣ್ಣು, ಕಿವಿ ಮಾತ್ರವಲ್ಲ, ಇಡೀ ಅಂತರಾತ್ಮವೇ ಅನುಭವಿಸುವಂತಹ ಸಿನಿಮಾ: ಕರವೇ ನಾರಾಯಣ ಗೌಡ!

Published : Oct 05, 2025, 01:36 PM IST
Kantara Chapter 1 Narayana Gowda

ಸಾರಾಂಶ

'ಕಾಂತಾರ ಚಾಪ್ಟರ್ 1' ಚಿತ್ರವನ್ನು ವೀಕ್ಷಿಸಿದ ಕರವೇ ಅಧ್ಯಕ್ಷ ನಾರಾಯಣಗೌಡ, ಇದೊಂದು ಸಿನಿಮಾವಲ್ಲ, ಅಲೌಕಿಕ ಅನುಭವ ಎಂದು ಬಣ್ಣಿಸಿದ್ದಾರೆ. ರಿಷಬ್ ಶೆಟ್ಟಿಯವರ ನಿರ್ದೇಶನ, ನಟನೆ ಸಾಹಸವನ್ನು ಶ್ಲಾಘಿಸಿ, ಈ ಚಿತ್ರ ಕನ್ನಡ ಚಿತ್ರರಂಗವನ್ನು ಭಾರತದ ಮುಂಚೂಣಿಗೆ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಕಾಂತಾರ ಚಾಪ್ಟರ್ 1' ಕೇವಲ ಸಿನಿಮಾ ಅಲ್ಲ, ಒಂದು ಅನುಭವ. ಕಾಂತಾರ ಸಿನಿಮಾ ಮೂಲಕ ಪ್ರೇಕ್ಷಕರ ಕಣ್ಣು, ಕಿವಿ ಮಾತ್ರವಲ್ಲದೇ, ಇಡೀ ಅಂತರಾತ್ಮವೇ ಸಿನಿಮಾವನ್ನು ಅನುಭವಿಸುಂತಹ, ಒಂದು ಅಲೌಕಿಕ, ಮಾಂತ್ರಿಕ ಜಗತ್ತಿಗೆ ಕೊಂಡೊಯ್ಯುವಂಥ ಮಾಯಾಜಾಲವನ್ನು ಸೃಷ್ಟಿಸಿದ್ದಾರೆ ಎಂದು ರಿಷಬ್ ಶೆಟ್ಟಿ ಮತ್ತು ವಿಜಯ್ ಕಿರಗಂದೂರ್ ಸಾಧನೆಗೆ ಕರವೇ ಅಧ್ಯಕ್ಷ ನಾರಾಯಣಗೌಡ ಮೆಚ್ಚುಗೆ ಸೂಚಿಸಿದ್ದಾರೆ.

ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಅವರು, 'ನಿನ್ನೆ ನನ್ನ ಕುಟುಂಬದವರು, ಕರವೇ ಮುಖಂಡರೊಂದಿಗೆ ಕಾಂತಾರ ಚಾಪ್ಟರ್-1 ಸಿನಿಮಾ ನೋಡಿದೆ. ಸಿನಿಮಾ ನೋಡಿದೆ ಅನ್ನುವುದಕ್ಕಿಂತ ಅನುಭವಿಸಿದೆ ಎಂದು ಹೇಳಿದರೆ ಸರಿಯಾಗುತ್ತದೆ. ಕಾಂತಾರ ಒಂದು ಅನುಭವ, ಸಿನಿಮಾವನ್ನು ಮೀರಿದ ಅದ್ಭುತ ಕಾಣ್ಕೆ. ಇದನ್ನು ಪದಗಳಲ್ಲಿ ವಿವರಿಸಿ ಹೇಳಲಾಗದು. ಕಾಂತಾರ ನಮ್ಮ ಎಣಿಕೆಯನ್ನು, ಗ್ರಹಿಕೆಯನ್ನು ಮೀರಿದ್ದು. ಒಂದು ಸಿನಿಮಾ ನೋಡುಗರಲ್ಲಿ ಇಷ್ಟು ಭಾವತೀವ್ರತೆಯನ್ನು ಉಂಟುಮಾಡಬಹುದು ಎಂಬುದೇ ವಿಸ್ಮಯ.

ರಿಷಬ್ ಶೆಟ್ಟಿ ತಮ್ಮ ನಿರ್ದೇಶನ, ನಟನೆಯಲ್ಲಿ ಭಾರತ ಚಿತ್ರರಂಗದಲ್ಲಿ ಒಂದು ಹೊಸ ಮಾರ್ಗವನ್ನೇ ಸೃಷ್ಟಿಸಿದ್ದಾರೆ. ಕಣ್ಣು, ಕಿವಿ ಮಾತ್ರವಲ್ಲ, ನಮ್ಮ ಇಡೀ ಅಂತರಾತ್ಮವೇ ಸಿನಿಮಾವನ್ನು ಅನುಭವಿಸುತ್ತ, ಒಂದು ಅಲೌಕಿಕ, ಮಾಂತ್ರಿಕ ಜಗತ್ತಿಗೆ ಕೊಂಡೊಯ್ಯುವಂಥ ಮಾಯಾಜಾಲವನ್ನು ಸೃಷ್ಟಿಸಿದ್ದಾರೆ. ಒಂದು ಸಿನಿಮಾವನ್ನು ಹೀಗೂ ಮಾಡಬಹುದಾ ಎಂಬ ಬೆರಗನ್ನು ಮೂಡಿಸುತ್ತಲೇ ಸಿನಿಮಾ ನಿರ್ದೇಶಕರಿಗೆ ಒಂದು ಹೊಸ ದಾರಿಯನ್ನು ತೋರಿದ್ದಾರೆ. ಇಂಥ ಪವಾಡಗಳು ಪದೇಪದೇ ನಡೆಯುವುದಿಲ್ಲ. ಇದಕ್ಕಾಗಿ ರಿಷಬ್ ಶೆಟ್ಟಿ (@shetty_rishab) ಅವರನ್ನು ಎಷ್ಟು ಅಭಿನಂದಿಸಿದರೂ ಕಡಿಮೆಯೇ. ಇಂಥ ಅನುಭವವನ್ನು ಕೊಟ್ಟಿದ್ದಕ್ಕಾಗಿ ಅವರಿಗೆ ಕನ್ನಡ ಜನತೆಯ ಪರವಾಗಿ ಪ್ರೀತಿಯ ಹಾರೈಕೆಗಳು.

ಕನ್ನಡ ನೆಲಮೂಲದ ಕಥೆಗೆ ಸಿನಿಮಾ ರೂಪ:

ಕರ್ನಾಟಕದ ನೆಲಮೂಲದ ಕಥೆಗಳನ್ನು ಒಂದಕ್ಕೊಂದು ಪೋಣಿಸಿ, ಅದನ್ನು ಒಂದು ಸಿನಿಮಾ ರೂಪಕ್ಕೆ ತರುವಾಗಿನ ಶ್ರದ್ಧೆ, ಕುಶಲತೆ ಕಾಂತಾರದ ಮೂಲಬಂಡವಾಳ. ಹೇಳಬೇಕಾಗಿದ್ದನ್ನು ಅಚ್ಚುಕಟ್ಟಾಗಿ ಹೇಳುವ ಪ್ರಾಮಾಣಿಕತೆಯೇ ಇಲ್ಲಿ ಗೆದ್ದಿದೆ. ಸಿನಿಮಾಗಾಗಿ ಸುರಿದಿರುವ ಹಣ, ತಾಂತ್ರಿಕ ಕೌಶಲ್ಯ ಇತ್ಯಾದಿಗಳು ಈ ಪ್ರಾಮಾಣಿಕತೆಯ ಅಡಿಪಾಯದ ಮೇಲೆಯೇ ಅರಳಿಕೊಡಿವೆ. ಅದ್ದೂರಿ ದೃಶ್ಯವೈಭವಗಳ ನಡುವೆಯೂ ಕಾಂತಾರದ ಅಂತರಾತ್ಮ ಎಲ್ಲೂ ಮುಕ್ಕಾಗದಂತೆ ನೋಡಿಕೊಂಡಿರುವುದು ನಿಜವಾದ ಯಶಸ್ಸು.

ರಿಷಬ್ ಶೆಟ್ಟಿ ನಾನು ಗಮನಿಸಿದಂತೆ ಅಪಾರವಾದ ಕನ್ನಡ ಪ್ರೀತಿಯನ್ನು ಹೊಂದಿರುವ ಕಲಾವಿದ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಸಿನಿಮಾದ ಮೂಲಕವೇ ಅವರು ತಮ್ಮ ಕನ್ನಡಪ್ರೇಮವನ್ನು ಅವರು ತೋರಿದ್ದರು. ಕಾಂತಾರದ ಮೂಲಕ ಅವರು ಕನ್ನಡ ಚಿತ್ರರಂಗವನ್ನು ಭಾರತೀಯ ಚಿತ್ರರಂಗದ ಮುಂಚೂಣಿಗೆ ತಂದುನಿಲ್ಲಿಸಿದ್ದಾರೆ. ಬೇರೆ ಬೇರೆ ಚಿತ್ರರಂಗದ ನಿರ್ದೇಶಕರು, ತಂತ್ರಜ್ಞರು, ಕಲಾವಿದರು ಕಾಂತಾರವನ್ನು ಕಣ್ತುಂಬಿಕೊಂಡು ಶ್ಲಾಘಿಸುತ್ತಿದ್ದಾರೆ. ಇದಲ್ಲವೇ ನಿಜವಾದ ಕನ್ನಡಸೇವೆ? ಇದಲ್ಲವೇ ನಮ್ಮತನವನ್ನು ಜಗತ್ತಿಗೆ ಹರಡುವ ಸಾಧನೆ?

ಗೆಳೆಯ ವಿಜಯ್ ಕಿರಗಂದೂರು ಕನ್ನಡ ಚಿತ್ರರಂಗಕ್ಕೆ ಒದಗಿ ಬಂದ ಆಪತ್ಪಾಂಧವ. ಕನ್ನಡ ಸಿನಿಮಾದ ಹಿರಿಮೆಯನ್ನು ಗಡಿಗಳಾಚೆಗೆ ದಾಟಿಸಿದ ಮಹಾಸಾಹಸಿ. ಎಷ್ಟೇ ಪ್ರತಿಭಾವಂತ ಕಲಾವಿದರು/ತಂತ್ರಜ್ಞರು ಇದ್ದರೂ ಅವರ ಬೆನ್ನಿಗೆ ನಿಂತು, ಅವರನ್ನು ನಂಬಿ ಕೋಟಿಗಟ್ಟಲೆ ಹಣ ಹೂಡಿ ಸಿನಿಮಾ ಮಾಡುವವರು ಇಲ್ಲದೇ ಇದ್ದರೆ ಕೆಜಿಎಫ್, ಕಾಂತಾರಾದಂಥ ಇತಿಹಾಸ ನಿರ್ಮಾಣವಾಗುವುದಿಲ್ಲ. ವಿಜಯ್ ಕಿರಗಂದೂರು ಸವಾಲುಗಳನ್ನು ಸ್ವೀಕರಿಸಲು ಯಾವತ್ತೂ ಹಿಂಜರಿಯಲಿಲ್ಲ. ಕನ್ನಡದ ಪ್ರತಿಭೆಗಳ ಬೆನ್ನಿಗೆ ನಿಂತರು. ಅವರ ಕನಸುಗಳಿಗೆ ನೀರೆರೆದು ಪೋಷಿಸಿದರು.

ಸಿನಿಮಾ ಉದ್ಯಮವಾದರೂ ಕನ್ನಡಾಭಿಮಾನ ಕಮ್ಮಿಯಿಲ್ಲ:

ವಿಜಯ್ ಕಿರಗಂದೂರು ಕೂಡ ಅಪ್ಪಟ ಕನ್ನಡಾಭಿಮಾನಿ. ಸಿನಿಮಾ ಒಂದು ಉದ್ಯಮ ಎಂಬುದು ಎಷ್ಟು ನಿಜವೋ ಲಾಭ ನಷ್ಟಗಳಿಂದಾಚೆ ಬಂಡವಾಳ ಹೂಡುವವರ ಮನೋಧರ್ಮವನ್ನೂ ಕೂಡ ಅದು ಹೇಳುತ್ತದೆ. ಕನ್ನಡ ಸಿನಿಮಾ ಕುರಿತು ಜಗತ್ತು ಮಾತಾಡುವಂತೆ ಮಾಡಿದ ವಿಜಯ್ (@VKiragandur) ನಿಜಕ್ಕೂ ಅಭಿನಂದನೆಗೆ ಅರ್ಹರು. ಅವರ ಯಶೋಗಾಥೆ ಇದೇ ರೀತಿ ಮುಂದುವರೆಯುತ್ತಲೇ ಹೋಗಲಿ ಎಂದು ಹಾರೈಸುತ್ತೇನೆ. ವಿಜಯ್, ರಿಷಬ್ ಅವರು ಮುಂಬರುವ ದಿನಗಳಲ್ಲಿ ಕಾಂತಾರದಂಥ ಹತ್ತಾರು ಸಿನಿಮಾಗಳನ್ನು ಕೊಟ್ಟು ಕನ್ನಡ ಚಿತ್ರರಂಗವನ್ನು ಬೆಳೆಸಲಿ, ಕನ್ನಡದ ಕೀರ್ತಿಯನ್ನು ಜಗತ್ತಿನಾದ್ಯಂತ ಹರಡಲಿ ಎಂದು ಮನದುಂಬಿ ಹಾರೈಸುವೆ.

ಕಾಂತಾರ ಚಾಪ್ಟರ್ -1 ರಲ್ಲಿ ಕೆಲಸ ಮಾಡಿದ ಎಲ್ಲ ತಂತ್ರಜ್ಞರು, ಕಲಾವಿದರು, ಕಾರ್ಮಿಕರಿಗೆ ಈ ಮಹಾಯಶಸ್ಸಿನ ಪಾಲು ಸಲ್ಲಲೇಬೇಕು. ಅವರೆಲ್ಲರ ಸಮರ್ಪಣಾಭಾವದಿಂದಲೇ ಇದು ಇಷ್ಟು ದೊಡ್ಡದಾಗಿ ಬೆಳೆದಿದೆ. ಇಡೀ ಚಿತ್ರತಂಡವನ್ನು ನಾವು ಪ್ರೀತಿಯಿಂದ ಅಭಿನಂದಿಸುತ್ತೇನೆ. ನಿಸ್ಸಂಶಯವಾಗಿ ಕಾಂತಾರ ಚಾಪ್ಟರ್ -1 ಕನ್ನಡದ ಶ್ರೇಷ್ಠ ಚಿತ್ರಗಳಲ್ಲಿ ಒಂದು. ಇದನ್ನು ಚಿತ್ರಮಂದಿರಗಳಲ್ಲೇ ನೋಡಿ ಅನುಭವಿಸಬೇಕು. ಹೀಗಾಗಿ ನನ್ನೆಲ್ಲ ಕಾರ್ಯಕರ್ತರೂ ತಪ್ಪದೇ ಚಿತ್ರವನ್ನು ವೀಕ್ಷಿಸಿ ಬೆಂಬಲಿಸಬೇಕು ಎಂದು ಕೋರುವೆ. ಅಷ್ಟು ಮಾತ್ರವಲ್ಲ ಪೈರೆಸಿಯಂಥದ್ದು ಎಲ್ಲಾದರೂ ಕಂಡುಬಂದರೆ ಕೂಡಲೇ ಅದನ್ನು ಚಿತ್ರತಂಡದ, ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು ಎಂದು ವಿನಂತಿಸುವೆ. ಕಾಂತಾರ ಕನ್ನಡವನ್ನು ಗೆಲ್ಲಿಸಿದೆ, ಕಾಂತಾರಕ್ಕೆ ಅಭೂತಪೂರ್ವ ಗೆಲುವು ಕೊಡುವುದು ನಮ್ಮ ಕರ್ತವ್ಯ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ