ರಿಷಭ್ ಶೆಟ್ಟಿ ಚಿತ್ರ ಕಥೆ ಬರೆದು, ಅಭಿನಯಿಸಿ, ನಿರ್ದೇಶಿದ ಕಾಂತಾರ ಚಿತ್ರ ಭಾರತದ ಚಿತ್ರರಂಗದಲ್ಲಿ ಸೃಷ್ಟಿಸಿದ ಸಂಚಲನ ಎಲ್ಲರಿಗೂ ಗೊತ್ತಿದೆ. ಇದರ ಇದರ ಪ್ರೀಕ್ವೆಲ್‌ನ ಮೊದಲ ಲುಕ್ ಬಿಡುಗಡೆಯಾಗಿದ್ದು, ಮತ್ತಷ್ಟು ಕುತೂಹಲ ಹೆಚ್ಚಿಸಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿ, ರಿಷಭ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿ, ಚಿತ್ರ ಕಥೆ ಬರೆದ ಕಾಂತಾರ ಕನ್ನಡ ಚಿತ್ರರಂಗದಲ್ಲಿ ಧೂಳೆಬ್ಬಿಸಿ, ನಂತರ ಇಡೀ ಭಾರತೀಯ ಚಿತ್ರರಂಗವೇ ಹುಬ್ಬೇರಿಸುವಂತೆ ಮಾಡಿದ್ದು ಇದೀಗ ಇತಿಹಾಸ. ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ಈ ಚಿತ್ರದ ಪ್ರೀಕ್ವೆಲ್ ಮಾಡಲು ಇದೇ ಚಿತ್ರ ತಂಡ ಮುಂದಾಗಿದ್ದು, ನವೆಂಬರ್ 27ರಂದು ಉಡುಪಿಯ ಜಿಲ್ಲೆಯ ಕುಂದಾಪುರ ಸಮೀಪ ಆಣೆಗುಡ್ಡ ಗಣಪತಿ ದೇವಸ್ಥಾನದಲ್ಲಿ ಮುಹೂರ್ತಕ್ಕೆ ಪೂಜೆ ನಡೆದಿದ್ದು, ಕಾಂತಾರದ ಇಡೀ ಚಿತ್ರ ತಂಡವೇ ಪಾಲ್ಗೊಂಡಿತ್ತು.
ರಿಷಭ್ ಶೆಟ್ಟಿ, ಪತ್ನಿ ಪ್ರಗತಿ ಶೆಟ್ಟಿಯೊಂದಿಗೆ ಪೂಜೆಯಲ್ಲಿ ಪಾಲ್ಗೊಂಡು ಚಿತ್ರದ ಯಶಸ್ಸಿಗೆ ಪ್ರಾರ್ಥಿಸಿದರು. ದಕ್ಷಿಣ ಕನ್ನಡದಲ್ಲಿ ಪ್ರಚಲಿತದಲ್ಲಿರುವ ದೈವಾಚರಣೆ ಹಾಗೂ ಅದರ ಸುತ್ತ ನಡೆಯುವ ಕಥೆ ಕಾಂತಾರದ್ದು. ಇದೀಗ ಚಿತ್ರದ ಫಸ್ಟ್ ಲುಕ್ ಸಹ ಕನ್ನಡ, ಇಂಗ್ಲಿಷ್ ಸೇರಿ ಏಳು ಭಾಷೆಗಳಲ್ಲಿ ರಿಲೀಸ್ ಆಗಿದೆ. ಫಸ್ಟ್ ಲುಕ್ ನಲ್ಲಿ ಇರುವಂತೆ ಇದು ಕದಂಬರ ಕಾಲದ ಕಥೆ ಎಂಬುವುದು ಸ್ಪಷ್ಟವಾಗುತ್ತದೆ. ಪಂಜುರ್ಲಿ ದೈವದ ಆಚರಣೆ ಕ್ರಿಸ್ತ ಪೂರ್ವ 3000 ವರ್ಷಗಳ ಹಿಂದಿನದು ಎಂದು ಇತಿಹಾಸವೇ ಹೇಳುತ್ತದೆ. ಆದರೂ ಪಂಜುರ್ಲಿ ದೈವದ ಆಚರಣೆಯಲ್ಲದೇ, ಬನವಾಸಿ (ಕದಂಬ ಸಾಮ್ರಾಜ್ಯ)-ಕುಂದಾಪುರ ಪ್ರದೇಶದಲ್ಲಿ ಹರಿಯುವ ನದಿಗಳಲ್ಲಿ ಒಂದು ನದಿಗೆ ವರಾಹಿ ಎಂಬ ಹೆಸರು ಇದೆ. ಹಾಗಾಗಿ ಆ ಕಥೆಗೂ ಕಾಂತಾರ ಚಾಪ್ಟರ್1ರ ಫಸ್ಟ್ ಲುಕ್‌ಗೂ ಥಳುಕು ಹಾಕುವಂತಿದೆ.
undefined
ಕಾಂತಾರ ಚಾಪ್ಟರ್ 1 ಫಸ್ಟ್ ಲುಕ್ ರಿಲೀಸ್
ಫಸ್ಟ್‌ಲುಕ್‌ನ ಒಂದು ಫ್ರೇಮ್‌ನ ಬೆಳಕಿನಲ್ಲಿ ಶಿವಲಿಂಗದ ಚಿತ್ರಣವನ್ನೂ ನೀಡಲಾಗಿದೆ. ರಿಷಬ್ ಪಾತ್ರದ ಕೈಯಲ್ಲಿ ಶಿವನ ಆಯುಧ ತ್ರಿಶೂಲವಿದೆ. ಪಂಜುರ್ಲಿ ದೈವ ಶಿವನ ಜೊತೆ ಇರುವ ದೈವ. ಧರ್ಮಸ್ಥಳ ಮಂಜುನಾಥನ ಪಕ್ಕ ಅಣ್ಣಪ್ಪ ಪಂಜುರ್ಲಿ ಇರುವುದು ಎಲ್ಲರಿಗೂ ಗೊತ್ತಿದೆ. ಇವೆಲ್ಲಾ ಅಂಶಗಳು ಈ ಚಿತ್ರದಲ್ಲಿ ಪಂಜುರ್ಲಿ ದೈವದ ಕಥೆ ಇರಬಹುದೆಂದೇ ತೋರಿಸುತ್ತದೆ. ಒಟ್ಟಾರೆ ಭಾರತ ಚಿತ್ರರಂಗ ತಿರುಗಿ ನೋಡುವ ಸಿನಿಮಾ ಆಗಿ ಕಾಂತಾರ ಚಾಪ್ಟರ್ 1 ಮೂಡಿ ಬರುವುದರಲ್ಲಿ ಸಂಶಯವೇ ಇಲ್ಲ.
ಹೊಂಬಾಳೆ ಫಿಲಂಸ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ, ‘ಪ್ರತಿ ಕ್ಷಣವೂ ದೈವಿಕ ಸ್ಪರ್ಶವನ್ನು ಅನುಭವಿಸುವ ಜತೆ ಇತಿಹಾಸದ ನಿಗೂಢ ಸತ್ಯವನ್ನು ಅನ್ವೇಷಿಸುವ ಪ್ರಯತ್ನವಿದು. ಹಿಂದೆಂದೂ ನೋಡದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ನಿರೀಕ್ಷಿಸಿ. ಇದು ಬರಿ ಬೆಳಕಲ್ಲ, ದರ್ಶನ,’ ಎಂದು ಫಸ್ಟ್ ಲುಕ್ ಬಿಡುಗಡೆಗೆ ಮುನ್ನವೊಂದು ಪೋಸ್ಟ್ ಹಾಕಿದ್ದು. ಅದಕ್ಕೆ ತಕ್ಕಂತೆ ಮೊದಲ ಲುಕ್ ಬಿಡುಗಡೆಯಾಗಿದೆ. ರಿಷಫ್ ಶೆಟ್ಟಿ ತಮ್ಮ ದೈವವತಾರವನ್ನು ಅದ್ಭುತವಾಗಿ ಪ್ರದರ್ಶಿಸಿದ್ದಾರೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದ್ದು, ಎಲ್ಲ ಭಾಷೆಗಳಲ್ಲಿಯೂ ಮೊದಲ ಲುಕ್‌ನ ಟೀಸರ್ ಬಿಡುಗಡೆಯಾಗಿದೆ.
ಕಾಂತಾರ ಮೊದಲ ಚಿತ್ರ ಬಿಡುಗಡೆಯಾದಾಗ ಅಷ್ಟೇನೂ ಸದ್ದು ಮಾಡಿರಲಿಲ್ಲ. ಚಿತ್ರ ಬಿಡುಗಡೆಯಾಗುವವರಿಗೂ ಈ ಚಿತ್ರ ಇಷ್ಟು ಯಶಸ್ಸನ್ನು ತಂದು ಕೊಡಬಲ್ಲದೆಂದು ಯಾರೂ ಊಹಿಸಿಯೂ ಇರಲಿಲ್ಲ. ಕಡಿಮೆ ಬಜೆಟ್‌ನ ಚಿತ್ರ ತಂದು ಕೊಟ್ಟ ಯಶಸ್ಸಿನಿಂದ ಪುಳಕಿತವಾದ ಚಿತ್ರ ತಂಡ ಇದೀಗ ದೊಡ್ಡ ಬಜೆಟ್‌ನಲ್ಲಿ ಚಿತ್ರ ನಿರ್ಮಿಸುತ್ತಿದ್ದು, ಆರಂಭದಿಂದಲೇ ಪ್ರಚಾರ ನೀಡುತ್ತಿದೆ. ಸಹಜವಾಗಿ ಪ್ರೇಕ್ಷಕರ ಕೂತಹಲವೂ ಹೆಚ್ಚಾಗಿದ್ದು, ಅದೇ ಒತ್ತಡದಲ್ಲಿ ಕಾರ್ಯನಿರ್ವಹಿಸಬೇಕಾದ ಹೊಣೆ ರಿಷಬ್ ಶೆಟ್ಟಿ ಅವರ ಮೇಲೂ ಇದೆ.
'ಇದು ಬರಿ ಬೆಳಕಲ್ಲ, ದರ್ಶನ': Kantara 2 ಫಸ್ಟ್ ಲುಕ್ ರಿಲೀಸ್ ಡೇಟ್ ಅನೌನ್ಸ್ ಮಾಡಿದ ರಿಷಬ್!
ಶೆಟ್ಟಿಯವರಿಗೆ ತಮ್ಮ ಪಾಡಿಗೆ ಚಿತ್ರ ಮಾಡಲು ಜನರು ಬಿಟ್ಟರೆ ವರ್ಷವೊಂದರಲ್ಲಿ ಚಿತ್ರ ಮುಗಿದು, ರಿಲೀಸ್ ಆಗಬಹುದು. ಆದರೆ, ಅವರ ಏಕಾಂತಕ್ಕೆ ಭಂಗವುಂಟಾದರೆ ಮಾತ್ರ ಮತ್ತಷ್ಟು ವಿಳಂಬವಾಗಬಹುದೆಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಚಿತ್ರದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆಗಳಿದ್ದು, ಅಭಿಮಾನಿಗಳ ಆಶಯವನ್ನು ರಿಷಬ್ ಹೇಗೆ ತಲುಪುತ್ತಾರೆಯೇ ಎಂಬ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಫಸ್ಟ್ ರಿಲೀಸ್ ಮಾಡಿ ಗಂಟೆಯೊಳಗೆ ಮಿಲಿಯನ್ ವ್ಯೂಸ್ ಆಗಿದೆ. ಶುಭವಾಗಲಿ ರಿಷಬ್.ಶೆಟ್ಟಿಗೆ.