ಕೊರೋನಾ ಸಂಕಷ್ಟದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ನೆರವು ನೀಡುತ್ತಿದ್ದಾರೆ. ಮೊದಲಿನಿಂದಲೂ ನಟ ಸುದೀಪ್ ಅವರು ತಮ್ಮ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಮೂಲಕ ಹಲವು ರೀತಿಯಲ್ಲಿ ಸಹಾಸ್ತ ನೀಡುತ್ತ ಬರುತ್ತಿದ್ದಾರೆ. ಈಗ ಅವರ ನೆರವು ಮತ್ತು ಧೈರ್ಯದ ಮಾತುಗಳು ಕನ್ನಡ ಚಿತ್ರರಂಗದ ಹಿರಿಯರ ಮನೆ ತಲುಪಿದೆ. ಇಷ್ಟಕ್ಕೂ ಕಿಚ್ಚ, ಉದ್ಯಮದ ಹಿರಿಯ ಚೇತನಗಳಿಗೆ ಹೇಗೆ ನೆರವಾಗುತ್ತಿದ್ದಾರೆ?
- ನಮ್ಮನ್ನು ನಮ್ಮ ಕುಟುಂಬದ ಸದಸ್ಯರೇ ಹೇಗಿದ್ದೀರಿ ಅಂತ ಕೇಳುತ್ತಿಲ್ಲ. ನೀವು ಸ್ವಂತ ಮನೆಯ ಸದಸ್ಯರಂತೆ ಬಂದ ವಿಚಾರಿಸುತ್ತಿದ್ದೀರಿ. ಈ ಋಣ ಹೇಗೆ ತೀರಿಸಲಿ?
- ನಿಮ್ಮ ಈ ಪ್ರೀತಿಗೆ ಭಾವುಕತೆಯ ಕಣ್ಣೀರು ಬಿಟ್ಟರೆ ಬೇರೆ ಏನೂ ಇಲ್ಲ...
undefined
- ಈಗ ನಮಗೆ ನಿಜವಾಗಲೂ ಧೈರ್ಯ ಬಂದಿದೆ.
- ನಮ್ಮನ್ನು ವಿಚಾರಿಸಿಕೊಳ್ಳುವುದಕ್ಕೂ ಒಬ್ಬ ಮಗ ಇದ್ದಾನೆ ಅನಿಸಿದೆ...
ಇವು ಚಿತ್ರರಂಗದ ಹಿರಿಯ ಕಲಾವಿದರು ಆಡಿದ ಮಾತುಗಳು.
ಸಂದರ್ಭ: ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಸದಸ್ಯರು ಈ ಕಲಾವಿದರ ಮನೆಗೆ ಭೇಟಿ ಕೊಟ್ಟು ಆರೋಗ್ಯ ವಿಚಾರಿಸಿದಾಗ.
ಕೊರೋನಾ ಸಂಕಷ್ಟದಲ್ಲಿ ನಟ ಸುದೀಪ್ ತಮ್ಮ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಮೂಲಕ ಕನ್ನಡ ಚಿತ್ರರಂಗದ ಎಲಲಾ ಹಿರಿಯ ಕಲಾವಿದರ ಆರೋಗ್ಯ ವಿಚಾರಿಸುವ ಅಪರೂಪ ಕೆಲಸ ಮಾಡುತ್ತಿದ್ದಾರೆ.
ವಿಶೇಷ ತಿಂಡಿ ಕಿಟ್ ನೀಡುವ ಮೂಲಕ ಹಿರಿಯ ಕಲಾವಿದರ ಯೋಗಕ್ಷೇಮ ವಿಚಾರಿಸಿದ ಸುದೀಪ್!
ಕಳೆದ ಎರಡು ದಿನಗಳಿಂದ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರ ಮನೆಗೆಗಳಿಗೆ ತಮ್ಮ ಸೊಸೈಟಿಯ ಸದಸ್ಯರನ್ನು ಕಳುಹಿಸಿ ಅವರ ಆರೋಗ್ಯ- ಕ್ಷೇಮ ಸಮಾಚಾರ ವಿಚಾರಿಸುವ ಮೂಲಕ ಈ ಹೊತ್ತಿನಲ್ಲಿ ಕೆಲಸ ಇಲ್ಲದೆ ಕಷ್ಟ ಎದುರಿಸುತ್ತಿದ್ದವರಿಗೆ ಧೈರ್ಯ ತುಂಬಿದ್ದಾರೆ ಸುದೀಪ್. ಡ್ರೈಫುಡ್, ರುಚಿಯಾದ ಬಿಸ್ಕೆಟ್, ಕೇಕ್ ಇತ್ಯಾದಿ ಆರೋಗ್ಯಕರ ತಿನುಸುಗಳನ್ನು ಒಳಗೊಂಡ ಕಿಟ್‌ಗಳ ಜತೆಗೆ ಸ್ವತಃ ಸುದೀಪ್ ಅವರೇ ಬರೆದಿರುವ ಒಂದು ಪತ್ರದೊಂದಿಗೆ ಸೊಸೈಟಿ ಸದಸ್ಯರು ಹಿರಿಯ ಕಲಾವಿದರ ಮನೆಗೆ ಹೋಗಿ ಆರೋಗ್ಯ ವಿಚಾರಿಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಸುದೀಪ್ ಬರೆದ ಪತ್ರ
‘ನಮಸ್ತೇ, ಹೇಗಿದ್ದೀರಿ. ನಿಮ್ಮ ಆರೋಗ್ಯ ಹೇಗಿದೆ. ನೀವು ಆರಾಮವಾಗಿ ಇರಿ. ನೀವು ನಮ್ಮ ಕುಟುಂಬದ ಸದಸ್ಯರು. ಧೈರ್ಯವಾಗಿರಿ... ಎನ್ನುವ ಸಾಲುಗಳು ಸುದೀಪ್ ಅವರು ಬರೆದಿರುವ ಪತ್ರದಲ್ಲಿದೆ.
‘ಕೊರೋನಾದಿಂದ ಆಚೆ ಬರಲಿಕ್ಕೇ ಆಗದ ಹಿರಿಯ ಕಲಾವಿದರು ಹೇಗಿದ್ದಾರೆ, ಅವರ ಆರೋಗ್ಯ ಹೇಗಿದೆ ಎಂದು ವಿಚಾರಿಸಬೇಕು. ಹಾಗಂತ ಬರೀ ಕೈಯಲ್ಲಿ ಅವರ ಮನೆಗೆ ಹೋಗುವುದು ಬೇಡ ಅಂತಲೇ ಸ್ವತಃ ಸುದೀಪ್ ಅವರೇ ಹೆಲ್ದಿಫುಡ್ ಕಿಟ್‌ಗಳನ್ನು ರೆಡಿ ಮಾಡಿ, ಇಡೀ ಚಿತ್ರರಂಗದಲ್ಲಿರುವ ಎಲ್ಲ ಹಿರಿಯ ಕಲಾವಿದರ ಹೆಸರುಗಳನ್ನು ಪಟ್ಟಿ ಮಾಡಿ ನಮಗೆ ಕೊಟ್ಟರು. ನೂರಕ್ಕೂ ಹೆಚ್ಚು ಕಲಾವಿದರು ಇದ್ದಾರೆ. ನಾವು ಮೂರು- ನಾಲ್ಕು ತಂಡಗಳನ್ನಾಗಿ ಮಾಡಿಕೊಂಡು ಕಲಾವಿದರ ಮನೆಗಳಿಗೆ ಹೋಗಿ ಫುಡ್ ಕಿಟ್ ನೀಡಿ ಅವರ ಆರೋಗ್ಯ ವಿಚಾರಿಸುತ್ತಿದ್ದೇವೆ. ಒಂದು ವೇಳೆ ಅವರಿಗೆ ಏನಾದರೂ ಕಷ್ಟ ಇದ್ದರೆ ಮುಂದೆ ಅವರಿಗೆ ನೆರವು ನೀಡುವುದು, ಆರೋಗ್ಯ ಸಮಸ್ಯೆ ಇದ್ದರೆ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದು ಕೂಡ ಈ ಕ್ಷೇಮ ಸಮಾಚಾರ ವಿಚಾರಣೆಯ ಉದ್ದೇಶ. ನಾವು ಭೇಟಿ ಮಾಡಿದ ಕಲಾವಿದರು ಕಣ್ಣಲ್ಲಿ ನೀರು ಹಾಕಿದ್ದುಂಟು. ಹಿರಿಯರನ್ನು ಕುಟುಂಬದವರೇ ಮರೆತಿರುವಾಗ ನೀವು ಬಂದು ನಮ್ಮ ಯೋಗಕ್ಷೇಮ ಕೇಳುತ್ತಿದ್ದೀರಿ ಎಂದು ಭಾವುಕರಾಗಿ ಮಾತನಾಡುತ್ತಿದ್ದರು. ಇದೆಲ್ಲವೂ ಸುದೀಪ್ ಅವರದ್ದೇ ಯೋಜನೆ’ ಎನ್ನುತ್ತಾರೆ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಯ ಕಿಟ್ಟಿ ಅವರು.