ಲೋಕೇಶ್ ಕುಮಾರ್ ಇಂದ ಅರ್ಜುನ್ ಆಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಈಗ ಚಿತ್ರರಂಗದ ಬಹುಬೇಡಿಕೆಯ ಟಾಪ್ ಮ್ಯೂಸಿಕ್ ಡೈರೆಕ್ಟರ್ ಆಗಿ ಗುರುತಿಸಿಕೊಂಡು ಮ್ಯಾಜಿಕಲ್ ಕಂಪೋಸರ್, ಕನ್ನಡದ ಎ ಆರ್ ರೆಹಮಾನ್ ಎಂದೇ ಜನಪ್ರಿಯಗೊಂಡಿರುವ ಅರ್ಜುನ್ ಜನ್ಯ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು .
2006ರಲ್ಲಿ ಆಟೋಗ್ರಾಫ್ ಪ್ಲೀಸ್ ಎಂಬ ಚಿತ್ರದ ಮೂಲಕ ವೃತ್ತಿಜೀವನ ಆರಂಭಿಸಿದ ಅರ್ಜುನ್ ಅವರು ನಂತರ ಬಿರುಗಾಳಿ , ಸಂಚಾರಿ, ಜರಾಸಂಧ, ಯುಗ, ಸ್ಲಮ್ ಬಾಲ ಅತ್ಯುತ್ತಮ ಹಾಡುಗಳನ್ನು ನೀಡಿದ್ದರೂ ಅವರಿಗೆ ಯಶಸ್ಸು ತಂದುಕೊಟ್ಟಿದ್ದು ಮಾತ್ರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ನಿರ್ದೇಶನದ ಕೆಂಪೇಗೌಡ ಎಂಬ ಹಿಟ್ ಚಿತ್ರದ ಮೂಲಕ. ಅಲ್ಲಿಯವರೆಗೂ ಅರ್ಜುನ್ ಆಗಿದ್ದ ಇವರಿಗೆ ಸುದೀಪ್ ಅವರು ಜನ್ಯ ಎಂಬ ಪದವನ್ನು ಸೇರಿಸಿದರು. ಇಂದಿನಿಂದ ಅರ್ಜುನ್ ಜನ್ಯರಾಗಿ ಇಂದಿನವರೆಗೂ ಯಶಸ್ಸಿನ ಒಂದೊಂದೇ ಮೆಟ್ಟಿಲೇರುತ್ತಲೇ ಬಂದಿದ್ದಾರೆ . ಕೇವಲ ಸಂಗೀತ ಸಂಗೀತ ನಿರ್ದೇಶಕರಾಗಿ ಅಲ್ಲದೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುವ ಸರಿಗಮಪ ಹಾಡಿನ ರಿಯಾಲಿಟಿ ಶೋನಲ್ಲಿ ಹಂಸಲೇಖ, ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಅವರೊಟ್ಟಿಗೆ ತೀರ್ಪುಗಾರರಲ್ಲಿ ಒಬ್ಬರಾಗಿದ್ದಾರೆ. ಇದರ ಜೊತೆ ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋ ನಲ್ಲೂ ತೀರ್ಪುಗಾರರಾಗಿದ್ದಾರೆ. ಅಲ್ಲದೇ ಇವರ ಮತ್ತೊಂದು ವಿಶೇಷ ಗುಣವೆಂದರೆ ಜೊತೆಗೆ ಕಷ್ಟ ಎಂದು ಬಂದವರ ನೋವಿಗೆ ಸ್ಪಂದಿಸಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಇತರರಿಗೆ ಮಾದರಿಯಾಗಿದ್ದಾರೆ.
ಅದಕ್ಕೆ ಉತ್ತಮ ಉದಾಹರಣೆಯೆಂದರೆ ಸುವರ್ಣ ನ್ಯೂಸ್ ಕಾರ್ಯಕ್ರಮದ ಮೂಲಕ ಪರಿಚಿತಗೊಂಡು ಇದೀಗ ಸರಿಗಮಪ ಕಾರ್ಯಕ್ರಮದಲ್ಲಿ ವಿಶೇಷ ಸ್ಪರ್ಧಿಗಳಾಗಿರುವ ಕುಣಿಗಲ್‌ನ ಇಬ್ಬರು ಅಂಧ ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳೂ ಆಹಾರ ಒದಗಿಸುವ ಸಂಕಲ್ಪ ತೊಟ್ಟು ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ.
ಇದೀಗ ಯೋಗರಾಜ್ ಭಟ್ ಅವರ ನಿರ್ದೇಶನದ ಗಾಳಿಪಟ 2, ಪ್ರೇಮ್ ನಿರ್ದೇಶಿಸಿ, ರಕ್ಷಿತಾ ಅವರು ನಿರ್ಮಾಣ ಮಾಡುತ್ತಿರುವ ಏಕ್ ಲವ್ ಯಾ ಚಿತ್ರಗಳು ಬಹುನೀರಿಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ಈ ಎರಡೂ ಚಿತ್ರಗಳಿಗೆ ಇವರದೇ ಸಂಗೀತ ನಿರ್ದೇಶನವಿದ್ದು ಹಾಡುಗಳ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ. ಅಲ್ಲದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ರಾಬರ್ಟ್ ಚಿತ್ರದ ಹಾಡುಗಳು ಈಗಾಗಲೇ ಬಿಡುಗಡೆಗೊಂಡು ಎಲ್ಲರ ಮೆಚ್ಚುಗೆ ಗಳಿಸಿದೆ .ಇತ್ತೀಚಿಗೆ ಯೋಗರಾಜ್ ಭಟ್, ವಿಜಯ್ ಪ್ರಕಾಶ್ ಹಾಗು ಅರ್ಜುನ್ ಜನ್ಯ ಅವರ ಕಾಂಬಿನೇಷನ್ನಲ್ಲಿ ಕೊರೋನಾ ಬಗ್ಗೆ ಒಂದು ಹಾಡು ಬಿಡುಗಡೆಗೊಂಡು ಕೇಳುಗರಿಂದ ಒಳ್ಳೆಯ ಮಾತುಗಳು ಕೇಳಿಬರುತ್ತಿದೆ .
ಮಧುರ ಪಿಸುಮಾತಿಗೆ,ಹೂವಿನ ಬಾಣದಂತೆ -ಬಿರುಗಾಳಿ
ಗಾಳಿಯೇ ನೋಡು ಬಾ ದೀಪದ ನರ್ತನ -ಸಂಚಾರಿ
ಗೆಳೆಯನೇ ನನ್ನಾ ನೋಡು ಬಾ -ಕೆಂಪೇಗೌಡ
ಹೂವಿ ಸಂತೆಗೆ ಬಂದಿರೋ ಗಾಳಿಗೆ -ಲಕ್ಕಿ
ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು -ವಿಕ್ಟರಿ
ನಾವ್ ಮನೆಗ್ ಹೋಗೋದಿಲ್ಲ-ವಿಕ್ಟರಿ 2
ಆಲೋಚನೆ ಆರಾಧನೆ -ರೋಮಿಯೋ
ರೇ ರೇ ರೇ ಭಜರಂಗಿ -ವಜ್ರಕಾಯ
ನೀನೆ ರಾಮ ನೀನೆ ಶಾಮ -ಮುಕುಂದ ಮುರಾರಿ
ಸರಿಯಾಗಿ ನೆನಪಿದೆ ನನಗೆ -ಮುಂಗಾರು ಮಳೆ 2
ಜೀವ ಜೀವ ನನ್ ಜೀವ -ಮಾಣಿಕ್ಯ
ಚಕ್ರವರ್ತಿ -ಚಕ್ರವರ್ತಿ
ಕಾಣೆಯಾಗಿರುವೆ ನಾನು -ಒಡೆಯ
ಅಪ್ಪ ಐ ಲವ್ ಯೂ ಪಾ -ಚೌಕ
ಚುಟು ಚುಟು - ರ್ಯಾಂಬೋ2