Kannada Movies: ಈ ವಾರ ರಿಲೀಸ್‌ ಆಗಲಿದೆ ವೀಕ್ಷಕರ ಮನಸ್ಸು ಗೆದ್ದು ಕಾಡಿಸುವ ಸಿನಿಮಾಗಳು! ಯಾವುವು?

Published : Feb 06, 2026, 09:48 AM IST
list of kannada movies 2026

ಸಾರಾಂಶ

Kannada Movies: ಕಳೆದ ವಾರ ಜ.30ರಂದು ಐದಾರು ಸಿನಿಮಾಗಳು ಒಟ್ಟಿಗೆ ಬಂದವು. ಆರು ಬಂದರೆ ಯಾರೂ ಉಳಿಯೋದಿಲ್ಲ ಎಂಬಂತೆ ಗಮನ ಸೆಳೆದದ್ದು ಒಂದೋ ಎರಡೋ. ಈ ವಾರ ಅದನ್ನು ಮೀರಿಸುವಂತೆ 10 ಸಿನಿಮಾಗಳು ಪ್ರೇಕ್ಷಕರ ಮುಂದೆ ಬರುತ್ತಿವೆ. 

ಮಾರ್ಚ್‌ ತಿಂಗಳಲ್ಲಿ ತೆರೆಗೆ ಬರುತ್ತಿರುವ ಮಹಾನ್ ಸಿನಿಮಾಗಳ ಭಯದಿಂದ ಚಿಕ್ಕ ಸಿನಿಮಾಗಳು ಈಗಲೇ ತೆರೆ ಕಾಣುತ್ತಿವೆ. ಮಾರ್ಚ್‌ ತಿಂಗಳಲ್ಲಿ 15ಕ್ಕೂ ಹೆಚ್ಚು ಬಿಗ್‌ ಬಜೆಟ್‌ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಈ ಪೈಕಿ ಯಶ್‌ ನಟನೆಯ ‘ಟಾಕ್ಸಿಕ್‌’ ಹಾಗೂ ರಣವೀರ್‌ಸಿಂಗ್‌ ಅಭಿನಯದ ‘ಧರಂಧರ್‌ 2’ ಚಿತ್ರಗಳು ಜಿದ್ದಾಜಿದ್ದಿಗೆ ತಯಾರಾಗಿವೆ. ಏಪ್ರಿಲ್‌ನಲ್ಲಿಯೂ ಬಿಗ್‌ ಬಜೆಟ್‌ನ ಪ್ಯಾನ್‌ ಇಂಡಿಯಾ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರಲಿವೆ. ಈ ವಾರದ ಹತ್ತು ಮುತ್ತುಗಳು ಇಲ್ಲಿವೆ.

ಡಾಲಿ ಧನಂಜಯ್‌ ನಿರ್ಮಾಣದ ಜೆಸಿ

ಡಾಲಿ ಧನಂಜಯ ನಿರ್ಮಾಣದ ಪ್ರಖ್ಯಾತ್‌ ನಟನೆಯ, ಚೇತನ್‌ ಜಯರಾಮ್‌ ನಿರ್ದೇಶನದ ಚಿತ್ರವಿದು. ಇದು ಜೈಲು ಕಂಬಿಗಳ ಹಿಂದಿನ ಕತೆ. ಜೈಲು ಒಳಗಿನ ಅವ್ಯವಹಾರ, ಕೈದಿಗಳ ದರ್ಬಾರ್, ಫೈಟ್, ಕೊಲೆ, ರಕ್ತ ಇದರ ನಡುವೆ ಅಪ್ಪ ಮಗನ ಭಾವನಾತ್ಮಕ ಕಥೆಯನ್ನು ಹೇಳಲಾಗಿದೆ.

ರಾಜ್‌ ಬಿ ಶೆಟ್ಟಿ ನಟನೆಯ ರಕ್ಕಸಪುರದೋಳ್‌

ರಾಜ್‌ ಬಿ ಶೆಟ್ಟಿ ನಟನೆ, ಸಾಹಸ ನಿರ್ದೇಶಕ ಕೆ.‌ರವಿವರ್ಮ ನಿರ್ಮಾಣದ ಚಿತ್ರ. ಜೋಗಿ ಪ್ರೇಮ್‌ ಶಿಷ್ಯ ರವಿ ಸಾರಂಗ ನಿರ್ದೇಶನ. ಸ್ವಾದಿಷ್ಟ ಕೃಷ್ಣ ನಾಯಕಿ. ಕನ್ನಡ ಹಾಗೂ ಮಲಯಾಳಂನಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಇದೊಂದು ಸೈಕಾಲಜಿಕಲ್‌ ಆಕ್ಷನ್ ಥ್ರಿಲ್ಲರ್‌ ಸಿನಿಮಾ. ರಾಜ್ ಬಿ ಶೆಟ್ಟಿ ಅವರು ಪೊಲೀಸ್‌ ಪಾತ್ರ ಮಾಡಿರುವುದು ಚಿತ್ರದ ಹೈಲೈಟ್‌.

ಅಬ್ಬರಿಸುವ ಕರಿಕಾಡ

ಹೆಸರು, ಟೀಸರ್‌ ಹಾಗೂ ಟ್ರೇಲರ್‌ ಮೂಲಕ ಗಮನ ಸೆಳೆದಿರುವ ರಗಡ್ ಸ್ಟೋರಿ ಸಿನಿಮಾ. ಕಾಡ ನಟರಾಜ್‌ ನಾಯಕ. ನಿರೀಕ್ಷಾ ಶೆಟ್ಟಿ ನಾಯಕಿ. ಗಿಲ್ಲಿ ವೆಂಕಟೇಶ್‌ ನಿರ್ದೇಶನ ದೀಪ್ತಿ ದಾಮೋದರ್‌ ನಿರ್ಮಾಣದ ಈ ಚಿತ್ರ ಐದು ಭಾಷೆಗಳಲ್ಲಿ ಮೂಡಿ ಬಂದಿದೆ. ಅಡ್ವೆಂಚರ್‌ ಜೊತೆಗೆ ಪಕ್ಕ ಹಳ್ಳಿ ಸೊಗಡಿನ ಸಿನಿಮಾ.

ವಿಸ್ಮಯ ನಿಗೂಢಲೋಕದ ಕತೆ ಘಾರ್ಗಾ

ಇದೊಂದು ಕ್ರೈಮ್‌ ಥ್ರಿಲ್ಲರ್‌. ‘ಜೋಗಿ’ ನಿರ್ಮಾಪಕ ಅಶ್ವಿನಿ ರಾಮ್‌ ಪ್ರಸಾದ್‌ ನಿರ್ಮಾಣ, ಎಂ. ಶಶಿಧರ್‌ ನಿರ್ದೇಶನ. ಘಾರ್ಗಾ ಒಂದು ನಿಗೂಢ ಊರಿನ ಹೆಸರು. ‘ದ ಲ್ಯಾಂಡ್‌ ಆಫ್‌ ಶಾಡೋ’ ಎಂಬ ಅಡಿಬರಹ ಇರುವ ಈ ಚಿತ್ರದಲ್ಲಿ ಅರುಣ್‌ ರಾಮ್‌ಪ್ರಸಾದ್‌ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ರೆಹಾನ ಚಿತ್ರದ ನಾಯಕಿ. ಸಾಯಿ ಕುಮಾರ್‌, ಸಂಪತ್‌ ರಾಜ್‌, ರಾಹುಲ್‌ ದೇವ್‌, ಅರುಣ್‌ ಸಾಗರ್‌, ದೇವ್‌ ಗಿಲ್‌, ಮಿತ್ರ ಚಿತ್ರದ ಪಾತ್ರಧಾರಿಗಳು.

ಕಟ್ಲೆ

ಹಾಸ್ಯ ಕಲಾವಿದ ಕೆಂಪೇಗೌಡ ನಾಯಕನಾಗಿ ನಟಿಸಿರುವ ಚಿತ್ರ. ಶ್ರೀವಿಧಾ ಅಭಿನಂದನ್‌ ನಿರ್ದೇಶನ, ಹೊಸಕೋಟೆ ಮೂಲದ ಭರತ್‌ಗೌಡ ನಿರ್ಮಾಪಕ. ಸನ್ಮಿತ, ಅಮೃತ ನಾಯಕಿಯರು. ಮತ್ತೊಂದು ಮುಖ್ಯ ಪಾತ್ರದಲ್ಲಿ ಹರ್ಷಿಕಾ ಪೂರ್ಣಚ್ಚ ನಟಿಸಿದ್ದಾರೆ. ಟೆನ್ನಿಸ್‌ಕೃಷ್ಣ, ತಬಲನಾಣಿ, ಹರೀಶ್‌ರಾಜ್‌, ಗಣೇಶ್‌ರಾವ್‌ ಕೇಸರಕರ್‌ ಚಿತ್ರದ ಉಳಿದ ಪಾತ್ರಗಳು. ಕಾಲಚಕ್ರದ ಕತೆಯನ್ನು ಹೇಳುವ ಸಿನಿಮಾ ಇದು.

ನಾನ್‌ವೆಜ್‌

‘ಎಕ್ಸ್‌ ಆ್ಯಂಡ್‌ ವೈ’ ಸಿನಿಮಾ ಖ್ಯಾತಿಯ ಅಥರ್ವ ಪ್ರಕಾಶ್ ನಟನೆಯ ಚಿತ್ರ. ಹಾಸ್ಯ ಕಥಾಹಂದರ ಹೊಂದಿರುವ ಸಿನಿಮಾ ಇದು. ಪ್ರಕಾಶ್ ಪಾಂಡೇಶ್ವರ್ ನಿರ್ಮಾಪಕರು. ಕೆ. ಸೂರಜ್ ಶೆಟ್ಟಿ ನಿರ್ದೇಶಕರು. ಯಾವುದನ್ನು ಕೆಟ್ಟದ್ದು ಎಂದು ಪರಿಗಣಿಸಿದ್ದೇವೆಯೋ ಅದು ಎಷ್ಟು ಅನಿವಾರ್ಯ ಮತ್ತು ಸಹಜ ಎಂಬುದನ್ನು ಸಿನಿಮಾ ಸಾರುವ ಸಿನಿಮಾ ಇದು. ಕನ್ನಡ ಮತ್ತು ತುಳು ಎರಡೂ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ.

ನೆನಪುಗಳ ಮಾತು ಮಧುರ

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆರೆಡ್ ಆಂಡ್ ವೈಟ್ ಸೆವೆನ್‌ ರಾಜ್‌ ನಿರ್ಮಾಣ, ಅಫ್ಜಲ್‌ ನಿರ್ದೇಶನ ಇದೆ. ನಾಲ್ಕು ಸ್ನೇಹಿತರ ನಡುವೆ ನಡೆಯುವ ನಾಲ್ಕು ಕಥೆಗಳ ಗುಚ್ಛವಿದು. ವಸಿಷ್ಠ ಬಂಟನೂರು, ರಣವೀರ್‌, ರಾಜ ಪ್ರಭು, ವಿನಯ್‌, ಅಂಜಲಿ, ಸೌಮ್ಯ ತಾರಾಬಳಗವಿದೆ.

ಸರ್ಕಾರಿ ಶಾಲೆ ಎಚ್‌8

ಸಸ್ಪೆನ್ಸ್,ಥ್ರಿಲ್ಲರ್‌ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಬಿಗ್‌ ಬಾಸ್‌ ವಿಜೇತ ಗಿಲ್ಲಿ ನಟ ಪ್ರಮುಖ ಪಾತ್ರಲ್ಲಿ ನಟಿಸಿದ್ದಾರೆ. ಗುಣ ಹರಿಯಬ್ಬೆ ನಿರ್ದೇಶನ, ತೇಜಸ್ವಿನಿ ಎಸ್‌. ನಿರ್ಮಾಪಕರು. ಒಂದು ವಿಗ್ರಹದ ಸುತ್ತಾ ಸಾಗುವ ಕತೆ ಈ ಚಿತ್ರದಲ್ಲಿದೆ. ರಾಘವೇಂದ್ರ ರಾಜ್‌ಕುಮಾರ್, ಸುಚೇಂದ್ರ ಪ್ರಸಾದ್‌ ಜಗಪ್ಪ, ನವಾಜ್, ಸುಶ್ಮಿತ ಜಗಪ್ಪ, ಕಡ್ಡಿ ವಿಶ್ವ, ಜೋತಿರಾಜ್‌, ನಮ್ರತಾ, ಮೇಘಶ್ರೀ, ಮೋಹನ್ ನಟಿಸಿದ್ದಾರೆ.

ಸುಖೀಭವ

ಸಂತೋಷ್‌ ಕುಮಾರ್‌, ಭಾರ್ಗವಿ ಸಂತೋಷ್‌ ನಿರ್ಮಿಸಿರುವ ಈ ಚಿತ್ರವನ್ನು ಎನ್‌.ಕೆ.ರಾಜೇಶ್‌ ನಾಯ್ಡು ನಿರ್ದೇಶಿಸಿದ್ದಾರೆ. ಮಹೇಂದ್ರ, ಸುಶ್ಮಿತ ನಾಯಕ್‌, ವಿಹಾನ್‌ಶಿ ಹೆಗ್ಡೆ, ಗೌರವ ಶೆಟ್ಟಿ, ಶೋಭರಾಜ್‌, ರವಿಶಂಕರ್‌ಗೌಡ, ಸುನಿಲ್‌ ಪುರಾಣಿಕ್‌, ತುಕಾಲಿ ಸಂತು, ಮೈತ್ರಿ ಜಗ್ಗು ನಟಿಸಿದ್ದಾರೆ. ಮಧ್ಯಮ ವರ್ಗದ ಜೀವನ, ಪ್ರೇಮ ಕತೆಯನ್ನು ಹೇಳುವ ಸಿನಿಮಾ.

ಬಯಕೆಗಳು ಬೇರೂರಿದಾಗ

ಕುಟುಂಬ, ಮೌಲ್ಯಗಳು ಹಾಗೂ ಸಂಬಂಧಗಳ ಸೂಕ್ಷ್ಮ ತಂತುಗಳನ್ನು ಚಿತ್ರಿಸುವ ಈ ಕತೆ, ಸಮಸ್ಯೆಗಳಿಗೆ ದಾರಿ ಹುಡುಕುತ್ತಾ ಮಹತ್ವದ ಸಂದೇಶ ನೀಡುವ ಸಿನಿಮಾ ಇದು. ಸಮಾಜದಲ್ಲಿ ವಿವಾಹೇತರ ಸಂಬಂಧಗಳು ಹೆಚ್ಚುತ್ತಿರುವುದು ಗಂಭೀರವಾದ ವಿಷಯದ ಮೇಲೆ ಸಿನಿಮಾ ಸಾಗುತ್ತದೆ. ಆಕರ್ಷ್ ಆದಿತ್ಯ, ಶರಣ್ಯ, ಶೈಲಜಾ ಜೋಶಿ, ಮಾನಸ ಜೋಶಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾದಬ್ರಹ್ಮ ಹಂಸಲೇಖ ಅವರಿಗೆ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 'ಜೀವಮಾನ ಸಾಧನೆ' ಪ್ರಶಸ್ತಿ
ನೀನು ದನ ಕಾಯ್ತಿದ್ದವನು, ನಿರ್ಮಾಪಕರ ರಕ್ತ ಹೀರಿ ಕೋಟಿ ಒಡೆಯನಾದೆ: ಜೋಗಿ ಪ್ರೇಮ್ ವಿರುದ್ಧ ಸಿಡಿದ ಕನಕಪುರ ಶ್ರೀನಿವಾಸ್!