ಏಪ್ರಿಲ್ 19 ರಂದು ಪಡ್ಡೆಹುಲಿ ಸಿನಿಮಾ ರಿಲೀಸ್ | ಮಣ್ಣಿನ ಸೊಗಡನ್ನು ಸೊಗಸಾಗಿ ಕಟ್ಟಿಕೊಡಲಿದೆ ಈ ಸಿನಿಮಾ | ಈ ಚಿತ್ರದಲ್ಲಿ ಹನ್ನೊಂದು ಹಾಡುಗಳಿವೆ
ಬೆಂಗಳೂರು (ಏ. 10): ಎಂ. ರಮೇಶ್ ರೆಡ್ಡಿ ತೇಜಸ್ವಿನಿ ಬ್ಯಾನರ್‍ನಡಿಯಲ್ಲಿ ನಿರ್ಮಾಣ ಮಾಡಿರುವ ಪಡ್ಡೆಹುಲಿ ಚಿತ್ರ ಏಪ್ರಿಲ್ ಹತ್ತೊಂಬತ್ತರಂದು ತೆರೆ ಕಾಣಲಿದೆ. ಪಡ್ಡೆಹುಲಿ ಪಕ್ಕಾ ಮಾಸ್ ಅನ್ನೋದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ಇದರ ಸ್ಪೆಷಾಲಿಟಿ ಬರೀ ಅಷ್ಟಕ್ಕೇ ಸೀಮಿತವಲ್ಲ. ಮಾಸ್ ಸಬ್ಜೆಕ್ಟಿನಾಚೆಗೂ ಪ್ರೇಕ್ಷಕರನ್ನು ಕ್ಷಣ ಕ್ಷಣವೂ ಹಿಡಿದು ನಿಲ್ಲಿಸುವಂಥಾ ಅದ್ಭುತ ಕಥೆಯೊಂದನ್ನು ಈ ಚಿತ್ರ ಹೊಂದಿದೆಯಂತೆ.
ರಾಜಾಹುಲಿಯಂಥಾ ಸೂಪರ್ ಹಿಟ್ ಚಿತ್ರ ಕೊಟ್ಟಿರೋ ಗುರುದೇಶಪಾಂಡೆ ಅವರ ಚಿತ್ರಗಳೆಂದ ಮೇಲೆ ಕಥೆ ಚೆನ್ನಾಗಿದ್ದೇ ಇರುತ್ತೆಂಬ ನಂಬಿಕೆಯಿದೆ. ಅದನ್ನು ಈ ವರೆಗೂ ಅವರು ಸುಳ್ಳು ಮಾಡಿದ್ದೇ ಇಲ್ಲ. ಅದರಲ್ಲಿಯೂ ಈ ನೆಲದ ಸೊಗಡಿನ, ಬದುಕಿಗೆ ಹತ್ತಿರವಾದ ಕಥೆ ಹೇಳೋದರಲ್ಲಿ ಅವರು ನಿಸ್ಸೀಮರು.
ಪಡ್ಡೆಹುಲಿ ಚಿತ್ರಕ್ಕೂ ಕೂಡಾ ಅಂಥಾದ್ದೇ ಮಣ್ಣಿನ ಸೊಗಡಿನ ಕಥೆಯನ್ನೇ ಗುರುದೇಶಪಾಂಡೆಯವರು ಹೊಸೆದಿದ್ದಾರಂತೆ. ಇದು ಮಧ್ಯಮ ವರ್ಗದ ಹುಡುಗನೊಬ್ಬನ ಸುತ್ತಾ ಸುತ್ತುವ ಕಥೆ ಹೊಂದಿರೋ ಚಿತ್ರ. ಎಲ್ಲ ಅಡೆತಡೆಗಳನ್ನು ಮೀರಿ ಅಂದುಕೊಂಡಿದ್ದನ್ನು ಸಾಧಿಸುವ ಹಾದಿಯ ಮಾಸ್ ಕಥನವನ್ನು ಈ ಚಿತ್ರ ಒಳಗೊಂಡಿದೆಯಂತೆ.
ಹಾಗೆಂದ ಮಾತ್ರಕ್ಕೆ ಪಡ್ಡೆಹುಲಿಯನ್ನು ಒಂದು ಚೌಕಟ್ಟಿಗೆ ಕಟ್ಟಿ ನಿಲ್ಲಿಸುವಂತಿಲ್ಲ. ನೋಡಿದ ಪ್ರತೀ ಪ್ರೇಕ್ಷಕರೂ ನಿಬ್ಬರಗಾಗೋ ಹಲವಾರು ವಿಚಾರಗಳೂ ಈ ಚಿತ್ರದಲ್ಲಿವೆ. ಹನ್ನೊಂದು ಹಾಡುಗಳ ಮೂಲಕ ಹೊಸಾ ದಾಖಲೆಯನ್ನೇ ಸೃಷ್ಟಿಸಿರೋ ಪಡ್ಡೆಹುಲಿ ಅಂಥಾದ್ದೇ ಭರಪೂರ ಯಶಸ್ಸಿನ ರೂವಾರಿಯಾಗೋ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.