ಮಳೆಯಲಿ ‘ಸಲಗ’ನ ಜೊತೆಯಲಿ; ಹಸಿರು ಗುಡ್ಡಗಳ ಮೇಲೆ ದುನಿಯಾ ಶೂಟಿಂಗ್!

By Kannadaprabha NewsFirst Published Aug 17, 2020, 9:36 AM IST
Highlights

ಕಪ್ಪು ಮೋಡಗಳು ದಟ್ಟೈಸಿ ಬಿಡದೆ ಸುರಿಯುವ ಮಳೆ, ಸುತ್ತಲೂ ಹಸಿರ ಕಾನನ. ತಣ್ಣನೆಯ ಗಾಳಿಯೊಂದಿಗೆ ಅಪ್ಪಿಕೊಳ್ಳುತ್ತಿರುವ ಚಳಿ. ‘ಚಳಿ ಚಳಿ ತಾಳೆನು ಈ ಚಳಿಯ’ ಎನ್ನುವ ಹಾಡಿನ ಸಾಲುಗಳನ್ನು ನೆನಪಿಸುತ್ತಿರುವ ಹೊತ್ತಿನಲ್ಲಿ ದುನಿಯಾ ವಿಜಯ್‌ ಅವರು ಸಂಜನಾ ಆನಂದ್‌ ಅವರನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾರೆ. 

ಚಳಿಗೊಂದು ಬೆಚ್ಚನೆಯ ಗಿಫ್ಟ್‌ ಸಿಕ್ಕಂತೆ ಸಂಜನಾ ಆನಂದ್‌ ಕೂಡ ವಿಜಯ್‌ ತೋಳಿನಲ್ಲಿ ಸೆರೆಯಾಗುತ್ತಾರೆ. ಚಳಿಯಲ್ಲಿ ಮೂಡುತ್ತಿರುವ ರೊಮ್ಯಾಂಟಿಕ್‌ ಮೂಡಿನ ಅಪ್ಪಿಕೋ ದೃಶ್ಯಗಳನ್ನು ಛಾಯಾಗ್ರಾಹಕ ಶಿವಸೇನ ಸದ್ದಿಲ್ಲದೆ ಚಿತ್ರೀಕರಿಸುತ್ತಾರೆ. ಹೀಗೆ ‘ಮಳೆಯಲಿ ಜೊತೆಯಲಿ’ ವಿಜಯ್‌ ಹಾಗೂ ಸಂಜನಾ ರೊಮ್ಯಾಂಟಿಕ್‌ ಹಾಡಿನಲ್ಲಿ ಕಳೆದು ಹೋಗಿದ್ದು ‘ಸಲಗ’ ಚಿತ್ರಕ್ಕಾಗಿ.

ಸಂಜನಾ ಆನಂದ್‌ಗೆ 5 ಪ್ರಶ್ನೆಗಳು;ಸಲಗ ಚಿತ್ರದ ನಾಯಕಿ ಜತೆ ಮಾತುಕತೆ!

ಅದು ಚಿಕ್ಕಮಗಳೂರಿನ ಹಸಿರು ಗುಡ್ಡಗಳ ನೆತ್ತಿಯ ಮೇಲೆ ಚಿತ್ರೀಕರಣಗೊಳ್ಳುತ್ತಿರುವ ಹಾಡು. ಲಾಕ್‌ಡೌನ್‌ ನಂತರ ಶೂಟಿಂಗ್‌ ಸೆಟ್‌ಗೆ ಇಳಿದ ಮತ್ತೊಬ್ಬ ಸ್ಟಾರ್‌ ನಟನ ಬಿಗ್‌ ಬಜೆಟ್‌ ಸಿನಿಮಾ. ಮೊದಲ ಬಾರಿಗೆ ದುನಿಯಾ ವಿಜಯ್‌ ನಿರ್ದೇಶನ ಮಾಡುತ್ತಿದ್ದಾರೆ.

ಟಗರು ತಂಡ ಬೆನ್ನಿಗೆ ನಿಂತಿದೆ ಎನ್ನುವ ಕಾರಣಕ್ಕೆ ಸಾಕಷ್ಟುನಿರೀಕ್ಷೆ ಮೂಡಿಸಿದ್ದ ಸಿನಿಮಾ‘ಸಲಗ’. ಕೊರೋನಾ ಹಾಗೂ ಲಾಕ್‌ಡೌನ್‌ ಕಾರಣಕ್ಕೆ ಚಿತ್ರೀಕರಣವನ್ನು ಸೈಲೆಂಟ್‌ ಆಗಿ ಉಳಿಸಿಕೊಂಡಿದ್ದ ‘ಸಲಗ’ ತಂಡ ಈಗ ಮಳೆಯಲ್ಲಿ ರೊಮ್ಯಾಂಟಿಕ್‌ ಆಗಿದೆ. ಬಿಡದೇ ಸುರಿವ ಮಳೆಯನ್ನೂ ಲೆಕ್ಕಿಸದೇ ಹಾಡುಗಳ ಚಿತ್ರೀಕರಣ ಮಾಡಿಕೊಂಡಿದೆ. ನಿರ್ಮಾಪಕ ಕೆ ಪಿ ಶ್ರೀಕಾಂತ್‌ ಎಲ್ಲ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡೇ ಚಿತ್ರೀಕರಣ ಆರಂಭಿಸಿದ್ದಾರೆ. ನಾಯಕ, ನಾಯಕಿ ಹಾಗೂ ಒಂದಿಷ್ಟುತಂತ್ರಜ್ಞರ ತಂಡವನ್ನು ಒಳಗೊಂಡ ಕೇವಲ 12 ಮಂದಿ ಮಾತ್ರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ಚರಣ್‌ ರಾಜ್‌ ಸಂಗೀತ ಸಂಯೋಜನೆಯ ‘ಮಳೆಯೇ ಮಳೆಯೇ ಅಂಬೆಗಾಲಿಕ್ಕುತ್ತಾ ಸುರಿಯೇ...’ ಎನ್ನುವ ಹಾಡಿಗೆ ನಾಯಕ, ನಾಯಕಿ ಜಡಿ ಮಳೆಯ ನಡುವೆಯೂ ಹೆಜ್ಜೆ ಹಾಕಿದ್ದರು. ಇದೊಂದು ಅಪ್ಪಟ ಪ್ರೇಮ- ಪ್ರಣಯ ಗೀತೆ ಆಗಿರುವುದು ವಿಶೇಷ.

"

ಸಾಮಾನ್ಯವಾಗಿ ಸಿನಿಮಾಗಳಲ್ಲಿ ಬರುವ ಇಂಥ ಅಪ್ಪುಗೆಯ ರೊಮ್ಯಾಂಟಿಕ್‌ ಹಾಡುಗಳಿಗೆ ಕೃತಕ ಮಳೆ ಸೃಷ್ಟಿಸುವುದು ಸಿನಿಮಾ ಮಂದಿಯ ವಾಡಿಕೆ. ಆದರೆ, ಈಗ ಮಳೆಗಾಲದ ಸೀಸನ್‌. ಹೀಗಾಗಿ ‘ಸಲಗ’ ಚಿತ್ರದ ಈ ಪ್ರೇಮ ಗೀತೆಗೆ ನೈಜ ಮಳೆಯೇ ಸಿಕ್ಕ ಖುಷಿ ಚಿತ್ರತಂಡದ್ದು. ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಹಾಸನದ ಸಕಲೇಶಪುರ ಸೇರಿ ಪಶ್ಚಿಮ ಘಟ್ಟಗಳ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ನಾಲ್ಕು ದಿನಗಳ ಕಾಲ ಈ ಹಾಡಿನ ಚಿತ್ರೀಕರಣ ಮಾಡಲಾಗಿದೆ.

click me!