ಯಕ್ಷಗಾನ ಕಲೆ ವಿಶ್ವಪ್ರಸಿದ್ಧಿಯಾದರೂ ಅದಕ್ಕೆ ಬೇಕಾದ ಪಾರಂಪರಿಕ ಕೈ ಮಗ್ಗದ ಉಡುಗೆ ತಯಾರಿಸುವವರು ಬೆರಳೆಣಿಕೆಯ ಮಂದಿ. ಬಲು ಅಪರೂಪದ ಯಕ್ಷಗಾನದ ಕೈಮಗ್ಗ ಸೀರೆಗಳನ್ನು ನೇಯುತ್ತಾ ಅದರಲ್ಲೇ ಬದುಕು ಕಟ್ಟಿಕೊಂಡವರು ಉಡುಪಿಯ 72 ವರ್ಷ ವಯಸ್ಸಿನ ಲಕ್ಷ್ಮಣ ಶೆಟ್ಟಿಗಾರ್ ಮತ್ತು ಅವರ ಪತ್ನಿ. ಈಗ ಉಡುಪಿಯ ಭಾರೀ ಪ್ರವಾಹಕ್ಕೆ ಅವರ ಮನೆ ಮುಳುಗಿದೆ. ನೇಯ್ಗೆ ಯಂತ್ರಗಳು ಕೈಕೊಟ್ಟಿವೆ. ಇಂಥಾ ಟೈಮ್‌ನಲ್ಲಿ ಅವರ ನೆರವಿಗೆ ನಾನಿದ್ದೇನೆ ಅನ್ನುತ್ತಿದ್ದಾರೆ ನಟಿ ಪ್ರಣೀತಾ ಸುಭಾಷ್.
ಪ್ರಿಯಾ ಕೆರ್ವಾಶೆ
ಸಮಾಜಸೇವೆಯ ಹುರುಪು ಎಂದಿನಿಂದ?
ಬಾಲ್ಯದಿಂದಲೂ ಇದೆ. ನನ್ನ ತಂದೆ ತಾಯಿ ಇಬ್ಬರೂ ವೈದ್ಯರು. ನಮ್ಮ ಹಾಸ್ಪಿಟಲ್‌ನಲ್ಲಿ ಕಳೆದ 20 ವರ್ಷಗಳಿಂದ ರಕ್ತದಾನ ಶಿಬಿರಗಳಾಗುತ್ತಿವೆ. ಅದರಲ್ಲಿ ಭಾಗವಹಿಸುತ್ತೇನೆ. ಬಹುಶಃ ಸಮಾಜದಲ್ಲಿ ನೊಂದವರಿಗೆ ಕೈಲಾದ ಸಹಾಯ ನೀಡಬೇಕು ಅನ್ನುವ ನನ್ನ ಮನಸ್ಥಿತಿಗೆ ಇದೂ ಒಂದು ಕಾರಣ ಇರಬಹುದು.
ಕುದುರೆ ಕ್ವೀನ್ ಆದ್ರು ಮಿಲ್ಕಿ ಬ್ಯೂಟಿ ಪ್ರಣೀತಾ!
ಉಡುಪಿ ನೇಕಾರ ಕುಟುಂಬಕ್ಕೆ ಏನು ಸಹಾಯ ಮಾಡುತ್ತೀರಿ?
ಉಡುಪಿಯ ಪಾರಂಪರಿಕ ಯಕ್ಷಗಾನ ಉಡುಗೆ ನೇಯುತ್ತಿದ್ದ ನೇಕಾರರ ಕುಟುಂಬ ಸಂಕಷ್ಟದಲ್ಲಿದೆ. ಎಂದೂ ಕಾಣದ ಪ್ರವಾಹ ಅವರ ಸೂರನ್ನು ಕಿತ್ತುಕೊಂಡಿದೆ. ಇಂಥಾ ಸಂದರ್ಭ ಅವರಿಗೆ ತಕ್ಷಣಕ್ಕೆ ಬೇಕಾಗುವುದು ಆರ್ಥಿಕ ಸಹಾಯ. ಹೀಗಾಗಿ ಆ ಕುಟುಂಬದವರ ಖಾತೆಗೆ ನೇರ ಹಣ ಸಂದಾಯ ಮಾಡುತ್ತೇನೆ. ಈ ಕುಟುಂಬವೂ ಸೇರಿದಂತೆ ನೆರೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಹೆಚ್ಚಿನ ನೆರವು ನೀಡಿ ಅಂತ ಎಲ್ಲರಲ್ಲೂ ಮನವಿ ಮಾಡುತ್ತೇನೆ. ಕೋವಿಡ್ ಸಂತ್ರಸ್ತರಿಗೂ ಆರಂಭದಲ್ಲಿ ಹೀಗೇ ಧನ ಸಹಾಯ ಮಾಡಿದ್ದೆ. ಮುಂದೆ ಈ ನೇಕಾರ ಕುಟುಂಬವೂ ಸೇರಿದಂತೆ, ಇನ್ನೂ ಹೆಚ್ಚಿನ ನೇಕಾರರಿಗೆ ಬೇರೆ ಬಗೆಯಲ್ಲಿ ಸಹಾಯ ಮಾಡುವ ಪ್ಲ್ಯಾನ್ ಇದೆ.
ಯಾವ ರೀತಿ?
ನಾನು ನಟಿಯಾಗಿರುವ ಕಾರಣ ಅವರು ತಯಾರಿಸಿದ ಉಡುಗೆಗಳನ್ನು ಧರಿಸಿ ಸೋಷಿಯಲ್ ಮೀಡಿಯಾದಲ್ಲಿ ನಮ್ಮ ಪೇಜ್ ಮೂಲಕ ಪ್ರಮೋಟ್ ಮಾಡುವ ಐಡಿಯಾ ಇದೆ. ಜೊತೆಗೆ ಅವರ ಉತ್ಪನ್ನಗಳಿಗೆ ಆನ್‌ಲೈನ್ ಮಾರುಕಟ್ಟೆಸೃಷ್ಟಿಸಬಹುದು. ಆ ಮೂಲಕ ಅವರ ಉತ್ಪನ್ನಗಳು ಹೆಚ್ಚೆಚ್ಚು ಜನರನ್ನು ತಲುಪುವ ಹಾಗೆ, ಅವರಿಗೂ ಆರ್ಥಿಕ ಸಹಾಯವಾಗುವ ಹಾಗೆ ಮಾಡಬಹುದು.
ಟ್ರಸ್ಟ್ ಏನಾದ್ರೂ ಇದೆಯಾ?
ಹೌದು, ‘ಪ್ರಣೀತಾ ಫೌಂಡೇಶನ್’ ಮೂಲಕ ಈ ರೀತಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಇದನ್ನು ಆರಂಭಿಸಿ ಎರಡು ವರ್ಷಗಳಾದವು. ನಾವು ಈ ಟ್ರಸ್ಟ್ ಮೂಲಕ ಕ್ರೌಡ್ ಫಂಡಿಂಗ್ ಮಾಡಿ ಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದೇವೆ.