
ಕನ್ನಡದ ಹಿರಿಯ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಇತ್ತೀಚೆಗೆ ತಮಿಳು ಚಿತ್ರರಂಗದ ಜನಪ್ರಿಯ ನಟ ಶಿವಕಾರ್ತಿಕೇಯನ್ ಮತ್ತು ನಿರ್ದೇಶಕ, ರಾಜಕಾರಣಿ ಸೀಮಾನ್ ಅವರನ್ನು ಭೇಟಿಯಾಗಿದ್ದಾರೆ. ಈ ಅಪರೂಪದ ಭೇಟಿಯ ಸುಂದರ ಕ್ಷಣಗಳನ್ನು ಜಗ್ಗೇಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕನ್ನಡ ಮತ್ತು ತಮಿಳು ಚಿತ್ರರಂಗದ ಅಭಿಮಾನಿಗಳ ಗಮನ ಸೆಳೆದಿದೆ.
ಮ್ಯಾರಿಯಟ್ ಹೋಟೆಲ್‌ನಲ್ಲಿ ಈ ಅನಿರೀಕ್ಷಿತ ಭೇಟಿಯಾಗಿದ್ದು, ಸಂಸದೀಯ ಸಮಿತಿಯ ಸಭೆಯಲ್ಲಿ ಪಾಲ್ಗೊಳ್ಳಲು ಜಗ್ಗೇಶ್ ಅಲ್ಲಿಗೆ ತೆರಳಿದ್ದರು. ಇದೇ ವೇಳೆ ಕಮಲ್ ಹಾಸನ್ ಅವರ ನಿರ್ಮಾಣ ಸಂಸ್ಥೆಯ ಬ್ಯಾನರ್‌ನಡಿ ಮೂಡಿಬರುತ್ತಿರುವ ಸಿನಿಮಾದ ಕೆಲಸಕ್ಕಾಗಿ ಶಿವಕಾರ್ತಿಕೇಯನ್ ಕೂಡ ಹೋಟೆಲ್‌ನಲ್ಲಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಮೂವರೂ ಮುಖಾಮುಖಿಯಾಗಿ ಭೇಟಿಯಾಗಿ ಕೆಲಕಾಲ ಆತ್ಮೀಯವಾಗಿ ಮಾತುಕತೆ ನಡೆಸಿದ್ದಾರೆ.
ಈ ಭೇಟಿಯ ಕುರಿತು ಕನ್ನಡದಲ್ಲೇ ಬರೆದುಕೊಂಡಿರುವ ಜಗ್ಗೇಶ್, ಮೂವರೂ ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡು ಸಿನಿಮಾ, ಚಿತ್ರರಂಗದ ಅನುಭವಗಳು ಹಾಗೂ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾಗಿ ತಿಳಿಸಿದ್ದಾರೆ. ಅದರಲ್ಲೂ ಕನ್ನಡದ ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರೊಂದಿಗಿನ ಆತ್ಮೀಯ ಒಡನಾಟದ ಬಗ್ಗೆ ಜಗ್ಗೇಶ್ ಮತ್ತು ಶಿವಕಾರ್ತಿಕೇಯನ್ ಮಾತನಾಡಿಕೊಂಡಿದ್ದಾರೆ. ಪುನೀತ್ ಅವರೊಂದಿಗಿನ ಒಡನಾಟದ ನೆನಪುಗಳು ಇಬ್ಬರನ್ನೂ ಭಾವುಕರನ್ನಾಗಿಸಿದ್ದು, ಭಾಷೆಯ ಗಡಿಗಳನ್ನೂ ಮೀರಿದ ಸ್ನೇಹಕ್ಕೆ ಈ ಭೇಟಿ ಸಾಕ್ಷಿಯಾಗಿದೆ.
ಇನ್ನು ಈ ಭೇಟಿಯಲ್ಲಿ ಜಗ್ಗೇಶ್ ಅವರ ಸಂಖ್ಯಾಶಾಸ್ತ್ರದ ಆಸಕ್ತಿಯೂ ವಿಶೇಷ ಆಕರ್ಷಣೆಯಾಗಿತ್ತು. ಯಾವುದೇ ತಿಂಗಳ 17ನೇ ತಾರೀಖಿನಂದು ಜನಿಸಿದವರ ವ್ಯಕ್ತಿತ್ವ ಮತ್ತು ಗುಣಲಕ್ಷಣಗಳ ಬಗ್ಗೆ ಜಗ್ಗೇಶ್ ವಿವರಿಸಿದಾಗ ಶಿವಕಾರ್ತಿಕೇಯನ್ ಅಚ್ಚರಿಗೊಂಡಿದ್ದಾರಂತೆ. ವಿಶೇಷವೆಂದರೆ, ಜಗ್ಗೇಶ್ ಮತ್ತು ಶಿವಕಾರ್ತಿಕೇಯನ್ ಇಬ್ಬರ ಜನ್ಮದಿನವೂ 17ನೇ ತಾರೀಖಿನಂದೇ ಬರುತ್ತದೆ. ಜಗ್ಗೇಶ್ ಮಾರ್ಚ್ 17ರಂದು ಜನಿಸಿದ್ದರೆ, ಶಿವಕಾರ್ತಿಕೇಯನ್ ಫೆಬ್ರವರಿ 17ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ಈ ಕಾಕತಾಳೀಯ ಸಂಗತಿ ಮೂವರ ನಡುವಿನ ಮಾತುಕತೆಗೆ ಮತ್ತಷ್ಟು ಕುತೂಹಲ ಮೂಡಿಸಿದೆ.
ಕೊನೆಗೆ ಮೂವರೂ ಒಟ್ಟಿಗೆ ನಿಂತು ನಗುನಗುತ್ತಾ ಫೋಟೋಗೆ ಪೋಸ್ ನೀಡಿ, ಆತ್ಮೀಯವಾಗಿ ಬೀಳ್ಕೊಂಡಿದ್ದಾರೆ. ತಮ್ಮ ಇಬ್ಬರು ಸಹೋದರರ ಪ್ರೀತಿ ಮತ್ತು ಆತ್ಮೀಯತೆಗೆ ಧನ್ಯವಾದ ತಿಳಿಸಿರುವ ಜಗ್ಗೇಶ್ ಅವರ ಈ ಪೋಸ್ಟ್ ಇದೀಗ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಕನ್ನಡ ಮತ್ತು ತಮಿಳು ಚಿತ್ರರಂಗದ ಕಲಾವಿದರ ನಡುವಿನ ಸ್ನೇಹ, ಪ್ರೀತಿ ಹಾಗೂ ಪರಸ್ಪರ ಗೌರವಕ್ಕೆ ಈ ಅಪರೂಪದ ಭೇಟಿ ಮತ್ತೊಂದು ಸುಂದರ ಉದಾಹರಣೆಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.