ಧರ್ಮಕ್ಕಿಂತಲೂ ವಿಜ್ಞಾನದ ಅರಿವು ಹೆಚ್ಚಿಸಿಕೊಳ್ಳಬೇಕಿದೆ: ಡಾಲಿ ಮನ್‌ ಕಿ ಬಾತ್

By Kannadaprabha News  |  First Published Apr 29, 2020, 3:24 PM IST

ಕೊರೋನಾ ಸಂತ್ರಸ್ತರ ಮನೆಗಳಿಗೇ ತೆರಳಿ ತಿಂಗಳ ದಿನಸಿ ನೀಡಿ ಬಂದಿದ್ದಾರೆ ಡಾಲಿ ಧನಂಜಯ. ಇದು ಜಸ್ಟ್‌ ಶೋ ಆಫ್‌ ಅಲ್ಲ, ಇದರಿಂದ ನಮ್ಮ ಜೊತೆಗೇ ಬದುಕುತ್ತಿರುವ ನೂರಾರು ಜನ ಬದುಕಿನ ಭಿನ್ನ ನೋಟಗಳು ದಕ್ಕಿದವು ಅನ್ನುವುದು ಮಂಕಿ ಸೀನನ ಮನದಾಳದ ಮಾತು. ತಮ್ಮ ಕೊರೋನಾ ಅವಧಿಯ ಅನುಭವಗಳನ್ನು ಅವರಿಲ್ಲಿ ಬಿಚ್ಚಿಟ್ಟಿದ್ದಾರೆ.


ನನಗೆ ಹಸಿವಿನ ಅನುಭವವಿಲ್ಲ. ಆದರೆ ಹಸಿದವರ ನೋವು ಏನು ಅನ್ನುವುದರ ಅರಿವಿದೆ. ಬದುಕಿನ ಬಗ್ಗೆ ನಮ್ಮ ಅಪ್ರೋಚ್‌ ಇರುತ್ತಲ್ಲಾ ಅದರ ಬಗ್ಗೆ ಸ್ಪಷ್ಟತೆ ಇದೆ’ ಎನ್ನುತ್ತಾರೆ ಡಾಲಿ ಧನಂಜಯ.

ಉಳಿದೆಲ್ಲ ಸಿನಿಮಾ ನಟರು ಕೊರೋನಾ ಸಂತ್ರಸ್ತರಿಗೆ ಒಂದಿಷ್ಟುಹಣ ನೀಡಿ, ಮನೆಯಲ್ಲಿ ಹೆಂಡತಿ ಮಕ್ಕಳ ಜೊತೆಗೆ ಆರಾಮವಾಗಿ ದಿನಕಳೆಯುತ್ತಿದ್ದರೆ, ನೀವು ಮಾತ್ರ ಜನರ ಮನೆಗೇ ಹೋದಿರಲ್ಲ.. ನಿಮಗೆ ಹಸಿವಿನ ಅನುಭವವಿದೆಯಾ ಅಂತ ಕೇಳಿದ್ದಕ್ಕೆ ಡಾಲಿ ಕೊಟ್ಟಉತ್ತರ ಇದು.

Tap to resize

Latest Videos

ಲಾಕ್‌ ಡೌನ್‌ ಶುರುವಾಗಿ ಇಷ್ಟುದಿನಗಳಾದವು. ಎಷ್ಟೋ ನಿರಾಶ್ರಿತರು ಹೊತ್ತಿನ ಊಟಕ್ಕೂ ಗತಿಯಿಲ್ಲದೇ ಇದ್ದಾರೆ. ಧನಂಜಯ ಮತ್ತು ಅವರ ಗೆಳೆಯರು ಇಂಥಾ ಜನರನ್ನು ಭೇಟಿ ಮಾಡಿದರು. ಹಸಿವಿನಿಂದ ಒದ್ದಾಡಬಾರದು ಅಂತ ಒಂದಿಷ್ಟುದಿನಸಿ ಸಾಮಾನುಗಳನ್ನು ಪೂರೈಸಿದ್ದಾರೆ. ‘ಈಗ ನಮ್ಮಲ್ಲಿ ಕೊಡುವ ಕೈಗಳು ತುಂಬಾ ಇವೆ. ಆದರೆ ಹಾಗೆ ಕೊಟ್ಟಿದ್ದನ್ನು ಜನರಿಗೆ ತಲುಪಿಸುವ ಕೈಗಳು ಕಡಿಮೆ ಇವೆ. ಹಾಗಾಗಿ ಕೈಲಾದ್ದನ್ನು ಮಾಡೋಣ ಅಂತ ಹೊರಟೆ’ ಅಂತಾರೆ ಧನಂಜಯ. ಆ ಅನುಭವ ತೆರೆದಿಟ್ಟಿದ್ದಾರೆ.

ಕೊರೋನಾ ಸಂಕಷ್ಟ: ಜನರ ನೆರವಿಗೆ ಡಾಲಿ ಧನಂಜಯ್‌

ಅರ್ಹರಿಗೆ ರೇಷನ್‌ ತಲುಪಿಸೋದು ಸವಾಲಾಗಿತ್ತು!

‘ಜನರ ಬಳಿಗೇ ಹೋಗೋದರಿಂದ ಅವರ ಸ್ಥಿತಿ ಹೇಗಿದೆ, ಕಷ್ಟಎಷ್ಟಿದೆ, ನಮ್ಮ ಸಹಾಯದ ಅವಶ್ಯಕತೆ ಇದೆಯಾ ಅನ್ನುವುದು ಗೊತ್ತಾಗುತ್ತೆ. ನಮ್ಮ ಜೊತೆಗೇ ಜೀವನ ಸಾಗಿಸುವ ಕೆಲವು ಮಂದಿನ ಬದುಕಿನ ಚಿತ್ರಗಳೂ ಸಿಗುತ್ತವೆ. ಅನ್ನಪೂರ್ಣ ನಗರದಲ್ಲಿ 500- 600 ಕುಟುಂಬಗಳು ಕಷ್ಟದಲ್ಲಿದ್ದವು. ರಾಯಚೂರು, ಗುಲ್ಬರ್ಗಾ, ಬಿಜಾಪುರದಿಂದ ಹಿಡಿದು

ಉತ್ತರ ಪ್ರದೇಶ, ಪಶ್ಚಿಮ ಬಂಗಾಳದ ಜನರೂ ಈ ಭಾಗದಲ್ಲಿ ಇದ್ದರು. ಊರಿಗೆ ಹೋಗಲಾಗದೇ, ಇಲ್ಲೂ ದುಡಿಮೆ ಇಲ್ಲದೇ ಒದ್ದಾಡುತ್ತಿದ್ದರು. ಅಷ್ಟುದೂರದಿಂದ ಇಲ್ಲಿಗೆ ಬರುತ್ತಾರೆ ಅಂದರೆ ಅವರ ಕಷ್ಟಎಷ್ಟಿರಬಹುದು ಅಲ್ವಾ.. ಮಧ್ಯಾಹ್ನ ಹೊತ್ತು ಯಾರಾದ್ರೂ ಊಟ ಕೊಡ್ತಾರಾ ಅಂತ ಕಾಯುತ್ತಾ ನಿಲ್ಲೋರು. ಆದರೆ ಊಟ ಕೊಡೋದಕ್ಕಿಂತ ರೇಷನ್‌ ಕೊಟ್ಟರೆ ಅವರವರೇ ಅಡುಗೆ ಮಾಡ್ಕೊಂಡು ತಿನ್ನುತ್ತಾರಲ್ಲಾ ಅಂತ ನಾನು ರೇಷನ್‌ ಕೊಡಲು ನಿರ್ಧರಿಸಿದೆ.

ಪರಿಸ್ಥಿತಿ ನಾನಂದುಕೊಂಡ ಹಾಗೆ ಇರಲಿಲ್ಲ. ನಾವು ರೇಷನ್‌ ಕೊಡ್ತೀವಿ ಅಂದ ಕೂಡಲೇ ಜನ ಮುಗಿ ಬೀಳ್ತಿದ್ರು. ಅವರನ್ನು ಕ್ಯೂನಲ್ಲಿ ನಿಲ್ಲಿಸೋದೇ ಕಷ್ಟ, ಸೋಷಲ್‌ ಡಿಸ್ಟೆನ್ಸಿಂಗ್‌ ಎಲ್ಲ ಅರ್ಥ ಮಾಡಿಸೋದು ಚಾಲೆಂಜಿಂಗ್‌. ಒಂದು ಕುಟುಂಬದವರಿಗೆ ರೇಷನ್‌ ಕೊಟ್ಟರೆ ಮತ್ತೆ ಮತ್ತೆ ಬರುತ್ತಿದ್ದರು. ಜೊತೆಗೆ ಕೆಲವರು ಬಂದು ನಾವು ಮನೆ ಕೆಲಸಕ್ಕೆ ಹೋಗ್ತೀವಿ, ದುಡಿಮೆ ಇಲ್ಲ. ನಮಗೂ ಕೊಡಿ ಅಂತ ಕೇಳುತ್ತಿದ್ದರು. ಇದರಿಂದಾಗಿ ನಾವು ತಂದದ್ದು ಬಹಳ ಬೇಗ ಖಾಲಿ ಆಗಿ ಹೋಯ್ತು. ನಿಜಕ್ಕೂ ಕಷ್ಟಇದ್ದ ಒಂದಿಷ್ಟು ಜನ ರೇಷನ್‌ ಸಿಗದೇ ನಮಗೆ ಮುತ್ತಿಗೆ ಹಾಕಿದ್ರು. ಪಾಪ, ಪೊಲೀಸ್‌ನವರು ಈ ಸಂದರ್ಭ ನಮಗೆ ಸಾಕಷ್ಟುಸಹಾಯ ಮಾಡಿದರು.

ಚಕ್ರವರ್ತಿ VS ಡಾಲಿ; ಟ್ವೀಟ್ ಬೆಂಕಿಗೆ ಸೋಶಿಯಲ್ ಉಪ್ಪು-ಖಾರ!

ಇಂಥಾ ಟೈಮ್‌ ನಲ್ಲೂ ನಾವು ಅಕ್ಕಿ ತಿನ್ನಲ್ಲ, ಗೋಧಿ ಕೊಡಿ ಅಂತ ಕೆಲವರ ಬೇಡಿಕೆ.

ನಾನೇ ಹೋಗ್ತೀನಿ, ಇಲ್ಲಾಂದ್ರೆ ಗೆಳೆಯರಲ್ಲಿ ಕೊಟ್ಟು ಕಳಿಸ್ತೀನಿ

‘ಇದರ ನಡುವೆ ಒಂದು ಖುಷಿಯ ವಿಚಾರ ಅಂದರೆ ಈ ಕೆಲಸದಲ್ಲಿ ತುಂಬ ಜನ ನನ್ನ ಜೊತೆಗೆ ಕೈ ಜೋಡಿಸಿದ್ರು. ಬೇರೆ ಬೇರೆ ಟೀಮ್‌ಗಳು, ಫ್ರೆಂಡ್ಸ್‌ ಸಹಕಾರ ನೀಡಿದರು. ಕೋಣನಕುಂಟೆಯ ಒಂದಿಷ್ಟು ಜಾಗಗಳಲ್ಲಿ ನಾವೆಲ್ಲ ತೆರಳಿ ರೇಶನ್‌ ನೀಡಿ ಬಂದೆವು. ಬಚ್ಚನ್‌ ಮಗ ರೋಷನ್‌ ಕದಿರೇನಹಳ್ಳಿಯಲ್ಲಿ ಸಾಕಷ್ಟು ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಗಿರಿನಗರ, ಅನ್ನಪೂರ್ಣ ನಗರದಲ್ಲೆಲ್ಲ ಓಡಾಡಿದೆ, ನನಗೆ ಹೋಗೋದು ಸಾಧ್ಯವಾಗದಿದ್ದರೆ ಗೆಳೆಯರಿಗೆ ಕೊಟ್ಟು ಕಳಿಸಿದೆ. ನಿನ್ನೆ ಕದಿರೇನಹಳ್ಳಿಗೆ ಹೋಗಿದ್ವಿ. ಹಿಂದೆ ನಾಗರಬಾವಿ ಅನ್ನಪೂರ್ಣ ಲೇಔಟ್‌, ಬನಶಂಕರಿ, ಕೋಣನ ಕುಂಟೆ, ಸಿದ್ದಾಪುರ ಮೊದಲಾದ ಕಡೆ ಹೋಗಿ ಸಹಾಯ ಮಾಡಿದ್ವಿ. ಅದೇ ರೀತಿ ಮೈಸೂರಲ್ಲಿ ನನ್ನ ಅಭಿಮಾನಿ ಗೆಳೆಯರು ಅವರೇ ಅಡುಗೆ ಮಾಡಿ ಅಸಹಾಯಕರಿಗೆ ಕೊಟ್ಟು ಬಂದಿದ್ದರು.’

ಇದು ಚಿಂತಿಸಬೇಕಾದ ಹೊತ್ತೂ ಹೌದು

ಇದೆಲ್ಲದರ ನಡುವೆ ಈ ಮೌನ ನಾವು ಆತ್ಮಾವಲೋಕ ಮಾಡಿಕೊಳ್ಳಬೇಕಾದ ಟೈಮು. ಈ ಸಂದರ್ಭ ನನಗೆ ನೆನಪಾಗೋದು ತೇಜಸ್ವಿ ಅವರ ಮಾತು - ‘ಭೂಮಿ ನಮ್ಮ ಪಾಲಿಗೆ ಹಾಳಾಗುತ್ತೆ ಅಷ್ಟೇ, ಭೂಮಿ ಪಾಲಿಗಲ್ಲ. ತನ್ನನ್ನು ತಾನು ಸರಿ ಮಾಡ್ಕೊಳ್ಳೋದು ಅದಕ್ಕೆ ಗೊತ್ತು. ಈ ಮಾತಿನ ಹಿಂದಿನ ಮರ್ಮ ಈಗ ನಿಚ್ಚಳವಾಗಿ ಕಾಣುತ್ತಿದೆ. ಗಾಳಿ, ನೀರು ಶುದ್ಧವಾಗಿಟ್ಟು ಮುಂದಿನ ಪೀಳಿಗೆಗೂ ಉಳಿಸುವುದು ನಮ್ಮ ಹೊಣೆಗಾರಿಕೆ.

ಮೊದಲು ಮಾನವನಾಗು

ಇತ್ತೀಚೆಗೆ ಸೋಷಲ್‌ ಮೀಡಿಯಾದಲ್ಲಿ ಧನಂಜಯ್‌ ಅವರ ‘ಮೊದಲು ಮಾನವನಾಗು’ ಎಂಬ ಕೋಟ್‌ ವೈರಲ್‌ ಆಗಿತ್ತು. ಈ ಬಗ್ಗೆ ಕೇಳಿದರೆ, ‘ಅದೆಲ್ಲ ದಯವಿಟ್ಟು ಈಗ ಬೇಡ’ ಅಂದರು. ಆದರೆ, ‘ನಾವೀಗ ಧರ್ಮ, ರಾಜಕೀಯ, ಹೊಡೆದಾಟ ಎಲ್ಲ ಬಿಟ್ಟು ವಿಜ್ಞಾನದ ಬಗ್ಗೆ ಬಹಳ ಗಾಢವಾಗಿ ಚಿಂತಿಸಬೇಕಿದೆ. ನಮ್ಮನ್ನು ಇಂಥಾ ವೈರಸ್‌ಗಳಿಂದ ರಕ್ಷಿಸೋ ತಾಕತ್ತಿದ್ದರೆ ಅದು ವಿಜ್ಞಾನಕ್ಕೆ ಮಾತ್ರ. ನಮ್ಮ ಮಕ್ಕಳೂ ವೈಜ್ಞಾನಿಕವಾಗಿ ತೀವ್ರ ಆಲೋಚನೆಯಲ್ಲಿ ತೊಡಗುವ ಹಾಗೆ ಮಾಡಬೇಕು’ ಅಂದರು. ಜೊತೆಗೆ ‘ಹಿಂದೂ ಕ್ರೈಸ್ತ, ಮುಸಲ್ಮಾನ, ಚಾರ್ವಾಕನೇ ಆಗು, ಮೊದಲು ಮಾನವನಾಗು.. ಅನ್ನೋದನ್ನು ಸಿದ್ಧಯ್ಯ ಪುರಾಣಿಕರು ಹೇಳಿರೋದು ಎಲ್ಲರಿಗಾಗಿ. ಆ ಕುರಿತು ಯೋಚಿಸೋಣ’ ಅಂತ ಕಿವಿಮಾತು ಹೇಳಿದರು.

ಡಾಲಿ ಧನಂಜಯ್‌ಗೆ ಹೊಸ ಅವತಾರ ಕೊಟ್ಟ ಸುನಿಯಾ ಸೂರಿ...ಮಂಕಿ ಟೈಗರ್!

ಲಾಕ್‌ ಡೌನ್‌ ಟೈಮ್‌ ನಲ್ಲೂ ಮದ್ವೆ ಯೋಚನೆ ಬಂದಿಲ್ಲ!

‘ಬಹುಶಃ ಈವರೆಗೆ ಹೀಗೆ ಕೂತಿದ್ದಿಲ್ಲ. ರೂಮ್‌ನಲ್ಲಿ ನಾವು ನಾಲ್ಕು ಜನ ಫ್ರೆಂಡ್ಸ್‌ ಸಿಕ್ಕಾಕೊಂಡಿದ್ದೀವಿ. ನಮ್ಮದೇ ಅಡುಗೆ. ಸಿನಿಮಾ ನೋಡೋದು, ಲೂಡೊ ಆಡೋದು, ದುಡ್ಡು ಇಡದೇ ಕಾರ್ಡ್ಸ್ ಆಟ, ಬೇರೆ ಫ್ರೆಂಡ್ಸ್‌ ಜೊತೆಗೆ ವೀಡಿಯೋ ಕಾನ್ಫರೆನ್ಸು’ ಅನ್ನೋ ಡಾಲಿಗೆ ಈ ಟೈಮ್‌ನಲ್ಲಾದ್ರೂ ಅಡುಗೆ ಕಲಿ ಅಂತ ಬಹಳ ಜನ ಆಪ್ತರಿಂದ ಸಲಹೆ ಬಂದಿದೆ. ಆದರೆ ಇವರ ರೂಮ್‌ನಲ್ಲಿ ಫ್ರೆಂಡ್ಸೇ ಅಡುಗೆ ಮಾಡೋದು. ಇವರು ಸಹಾಯ ಮಾಡ್ತಾರಷ್ಟೇ.

ಹಾಗಾಗಿ ಅಡುಗೆಯಲ್ಲಿ ಹೊಸ ಪ್ರಯೋಗ ಮಾಡುವ ಟೈಮ್‌ ಇನ್ನೂ ಬಂದಿಲ್ಲ ಅಂತಾರೆ. ‘ಈ ಟೈಮ್‌ ನಲ್ಲೂ ಜಂಟಿಯಾಗಿರಬೇಕಿತ್ತು ಅಂತನಿಸಲ್ವಾ?’ ಅಂದರೆ ಊರು, ಫ್ಯಾಮಿಲಿ ತುಂಬ ನೆನಪಾಗ್ತಾರೆ ಅಂತ ಮಾತು ಹಾರಿಸ್ತಾರೆ. ‘ಕೇಳ್ತಿರೋದು ಮದ್ವೆ ಬಗ್ಗೆ..’ ಅಂದ್ರೆ ‘ಛೆ, ಛೇ, ನಾನಿನ್ನೂ ಆ ಬಗ್ಗೆ ಯೋಚ್ನೆ ಮಾಡ್ಲಿಲ್ಲ’ ಅಂತ ನಾಚ್ಕೊಂಡು ನಗ್ತಾರೆ ಮಂಕಿ ಸೀನ ಅಲಿಯಾಸ್‌ ಡಾಲಿ ಧನಂಜಯ.

ತೆಲುಗಿನ ಪುಷ್ಪ ಸಿನಿಮಾಕ್ಕೆ ಮಾತುಕತೆ ನಡೆದಿತ್ತು. ಇದರ ಡೈರೆಕ್ಟರ್‌ ಸುಕುಮಾರ್‌ ಒಬ್ಬ ಅದ್ಭುತ ನಿರ್ದೇಶಕ. ನಿರ್ಮಾಪಕರ ಜೊತೆ ಮಾತನಾಡುವಷ್ಟರಲ್ಲಿ ಲಾಕ್‌ ಡೌನ್‌ ಆಗಿದೆ. ಹಾಗಾಗಿ ಸಿನಿಮಾದಲ್ಲಿ ಕೆಲಸ ಮಾಡೋದು ಇನ್ನಷ್ಟೇ ಖಚಿತವಾಗಬೇಕಿದೆ. ಈ ಟೈಮ್‌ನಲ್ಲಿ ಸಲಗ ರಿಲೀಸ್‌ ಆಗ್ಬೇಕಿತ್ತು. ಭಡವ ರಾಸ್ಕಲ್‌ ಕ್ಲೈಮ್ಯಾಕ್ಸ್‌ ಶೂಟಿಂಗ್‌ ಬಾಕಿಯಿತ್ತು. ಜಯರಾಜ್‌ ಪ್ರಿಪರೇಶನ್‌ ನಡೀತಿತ್ತು. ಜೊತೆಗೆ ಪಾಪ್‌ ಕಾರ್ನ್‌ ಮಂಕೀ ಟೈಗರ್‌ ನ ಇಪ್ಪತ್ತೈದನೇ ದಿನದ ಶೋ ನಡೆಯಬೇಕಿತ್ತು. ಎಲ್ಲಾ ನಿಂತು ಹೋಗಿದೆ. ಹಾಗಂತ ಪುಷ್ಪ ಸಿನಿಮಾ ಮಾತುಕತೆ ಫೈನಲ್‌ ಆದರೆ ಡೇಟ್ಸ್‌ ಹೊಂದಿಸಿಕೊಳ್ತೀನಿ.

- ಪ್ರಿಯಾ ಕೇರ್ವಾಶೆ 

click me!