
ಆರ್.ಕೇಶವಮೂರ್ತಿ
ಇದ್ದಕ್ಕಿದ್ದಂತೆ ಸುದೀಪ್ ಅವರ ಪಾತ್ರ ಹುಟ್ಟಿಕೊಂಡಿದ್ದು ಹೇಗೆ?
ಕತೆ ಬರೆಯುವಾಗಲೇ ಆ ಪಾತ್ರ ಇತ್ತು. ನನ್ನ ಚಿತ್ರದ ವಿಷುವಲ್ ನಾನೇ ನೋಡಿಕೊಂಡಾಗ ನಾನು ಮೊದಲೇ ಅಂದುಕೊಂಡಿದ್ದ ಭಾರ್ಗವ್ ಬಕ್ಷಿ ಪಾತ್ರಕ್ಕೆ ಪ್ಯಾನ್ ಇಂಡಿಯಾ ಸ್ಟಾರ್ ಬೇಕಿತ್ತು. ಯಾಕೆಂದರೆ ಈ ಪಾತ್ರಕ್ಕೆ ಘನತೆ ಮತ್ತು ಗಾಂಬೀರ್ಯ ಇದೆ. ಪಾತ್ರ ಏನಾದರು ಹೇಳಿದರೆ ಕೇಳಿ ಹೌದು ಎನ್ನಬೇಕು. ಅಂಥ ಪಾತ್ರಕ್ಕೆ ಸುದೀಪ್ ಅವರೇ ಸರಿ ಎನಿಸಿತು.
ಬಹುನಿರೀಕ್ಷಿತ ‘ಕಬ್ಜ’ ಚಿತ್ರತಂಡಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸೇರ್ಪಡೆಗೊಂಡಿದ್ದಾರೆ. ಸುದೀಪ್ ಅವರಿಗೆ ನಮ್ಮ ಚಿತ್ರತಂಡದಿಂದ ಆತ್ಮೀಯವಾದ ಸ್ವಾಗತ.- ಉಪೇಂದ್ರ, ನಟ
ಸುದೀಪ್ ಹೀರೋನಾ, ವಿಲನ್ನಾ?
ಪಾತ್ರದ ಹೆಸರು ಭಾರ್ಗವ್ ಬಕ್ಷಿ. ಈಗಾಗಲೇ ಪಾತ್ರದ ಲುಕ್ಕು ಬಿಡುಗಡೆ ಮಾಡಿದ್ದೇವೆ. ಹೀರೋನಾ, ವಿಲನ್ನಾ ಎಂಬುದನ್ನು ನೀವು ಸಿನಿಮಾ ನೋಡಿ ತಿಳಿಯಬೇಕು.
ಸುದೀಪ್ ಅವರೇ ಯಾಕೆ ಬೇಕಿತ್ತು?
ಹೀರೋ ಹೊರತಾಗಿಯೂ ಒಂದು ಸಿನಿಮಾದಲ್ಲಿ ಅದ್ಭುತವಾದ ಪಾತ್ರಗಳು ಇರುತ್ತವೆ. ಈ ಪಾತ್ರಗಳನ್ನು ಇಂಥವರೇ ಮಾಡಬೇಕು ಎಂದು ಕತೆಯೇ ಬೇಡುತ್ತದೆ
ಅಂದರೆ ಇದು ಪ್ಯಾನ್ ಇಂಡಿಯಾ ಮಾರುಕಟ್ಟೆಯ ತಂತ್ರವೇ?
ಉಪೇಂದ್ರ ಅವರು ಕೂಡ ಬಹುಭಾಷೆಗೆ ಗೊತ್ತಿರುವ ನಟ, ನಿರ್ದೇಶಕ. ಶಂಕರ್ ಅವರಂತಹ ನಿರ್ದೇಶಕರು ಉಪೇಂದ್ರ ಅವರನ್ನು ಮೆಚ್ಚುತ್ತಾರೆ. ನನಗೆ ಪ್ಯಾನ್ ಇಂಡಿಯಾ ತಂತ್ರ ಮಾಡಬೇಕು ಅನಿಸಿದರೆ ಉಪೇಂದ್ರ ಅವರೇ ಇದ್ದಾರೆ.
ಹಾಗಾದರೆ ಇದು ಮಲ್ಟಿಸ್ಟಾರ್ ಚಿತ್ರವಾ?
ಪ್ರಶಾಂತ್ ನೀಲ್ ಅವರ ‘ಕೆಜಿಎಫ್ 2’ ಚಿತ್ರದಲ್ಲಿ ಯಶ್ ಹಾಗೂ ಬಾಲಿವುಡ್‌ನ ಸಂಜಯ್ ದತ್, ರವೀನಾ ಟಂಡಾನ್ ಇದ್ದಾರೆ. ಇದನ್ನ ಮಲ್ಟಿಸ್ಟಾರ್ ಅನ್ನಲು ಸಾಧ್ಯನಾ? ಹಾಗೆ ನಮ್ಮ ಚಿತ್ರದಲ್ಲೂ ಕೂಡ ಉಪೇಂದ್ರ ಹಾಗೂ ಸುದೀಪ್ ಅವರ ಪಾತ್ರಗಳೇನು ಅನ್ನೋದು ಸಿನಿಮಾ ನೋಡಿ ತಿಳಿಯಿರಿ.
ಸುದೀಪ್ ಉಪ್ಪಿ ಮತ್ತೆ ಜೋಡಿ ಕಬ್ಜದಲ್ಲಿ ಒಂದಾದ ಮುಕುಂದ ಮುರಾರಿ
ಸುದೀಪ್ ಅವರು ಕತೆ ಕೇಳಿ ಹೇಳಿದ್ದೇನು?
ನಾನು ಇಲ್ಲಿವರೆಗೂ ಶೂಟ್ ಮಾಡಿರುವ ದೃಶ್ಯಗಳನ್ನು ನೋಡಿದರು. ನನ್ನ ಮೇಕಿಂಗ್ ಸ್ಟೈಲ್ ನೋಡಿದರು. ಆ ಮೇಲೆ ಕತೆ ಪೂರ್ತಿ ಕೇಳಿದರು. ನನ್ನ ನಿರ್ದೇಶಕರ ಕನಸುಗಳನ್ನು ಫುಲ್‌ಫೀಲ್ ಮಾಡಿದ ಹೀರೋ ಸುದೀಪ್. ಕತೆ ಕೇಳಿ ‘ತುಂಬಾ ಚೆನ್ನಾಗಿದೆ. ನಟಿಸುತ್ತೇನೆ’ ಎಂದರು.
ಭಾರ್ಗವ್ ಬಕ್ಷಿ ಪಾತ್ರದ ಗೆಟಪ್ ನೋಡಿದವರು ಏನನ್ನುತ್ತಿದ್ದಾರೆ?
ಬಿಡುಗಡೆಯಾದ ಎರಡು ಗಂಟೆಯಲ್ಲಿ ಯೂಟ್ಯೂಬ್‌ನಲ್ಲಿ ಟ್ರೆಂಡ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ವಿಷ್ ಮಾಡುತ್ತಿದ್ದಾರೆ. ನಾನು ಇಲ್ಲಿವರೆಗೂ ಕಂಟೆಂಟ್ ಆಧಾರಿತ ಚಿತ್ರಗಳನ್ನು ಮಾಡಿಕೊಂಡು ಬಂದಿದ್ದೆ. ‘ಕಬ್ಜ’ದಲ್ಲಿ ಕಂಟೆಂಟ್ ಜತೆಗೆ ಮನರಂಜನೆ, ಮೇಕಿಂಗ್ ಹೆಚ್ಚುವರಿಯಾಗಿ ಸೇರಿಕೊಂಡಿದೆ.
ಇಲ್ಲಿವರೆಗೂ ಎಷ್ಟುಶೂಟಿಂಗ್ ಆಗಿದೆ?
ಶೇ. 45 ರಿಂದ 50ರಷ್ಟು ಶೂಟಿಂಗ್ ಆಗಿದೆ. ಸುದೀಪ್ ಅವರ ಪಾತ್ರದ ಚಿತ್ರೀಕರಣ ‘ಫ್ಯಾಂಟಮ್’ ಮುಗಿದ ಮೇಲೆ ಶುರುವಾಗಲಿದೆ.
ನಿರ್ದೇಶಕರು ಕೆಲವು ನಟರನ್ನು ಗಮನದಲ್ಲಿಟ್ಟುಕೊಂಡು ತಮ್ಮ ಸಿನಿಮಾ, ಕತೆ ಐಡಿಯಾಗಳನ್ನು ರೂಪಿಸುತ್ತಾರೆ. ನಟರಾಗಿ ನಿರ್ದೇಶಕರ ಆ ಕನಸುಗಳಿಗೆ ಹೆಗಲು ಕೊಡಬೇಕು. ಹೀಗಾಗಿಯೇ ನಾನು ‘ಕಬ್ಜ’ ಚಿತ್ರದ ಭಾಗವಾಗುತ್ತಿರುವುದಕ್ಕೆ ಖುಷಿ ಇದೆ. ನಾನು ಮತ್ತು ಉಪೇಂದ್ರ ಅವರು ಮತ್ತೊಮ್ಮೆ ತೆರೆ ಹಂಚಿಕೊಳ್ಳುತ್ತಿರುವುದಕ್ಕೆ ಖುಷಿ ಆಗುತ್ತಿದೆ. - ಸುದೀಪ್, ನಟ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.