
ಬೆಂಗಳೂರು(ಮಾ. 11): ನಟ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಗುರುವಾರ ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಒಂದೇ ದಿನ 1,596 ಚಿತ್ರಮಂದಿರಗಳಲ್ಲಿ 3889 ಪ್ರದರ್ಶನ ಕಾಣಲಿದೆ. ಈ ಮೂಲಕ ಲಾಕ್‌ಡೌನ್ ನಂತರ ದೊಡ್ಡಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ಪ್ರಮುಖ ಸಿನಿಮಾ ಎನಿಸಿಕೊಂಡಿದೆ.
ಕರ್ನಾಟಕದಲ್ಲಿ ಮೊದಲ ದಿನವೇ 656 ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ 2786 ಶೋಗಳ ಪ್ರದರ್ಶನ ಕಾಣುತ್ತಿದೆ. ಜತೆಗೆ 100ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್‌ಗಳಲ್ಲಿ ತೆರೆ ಕಾಣುತ್ತಿದೆ. ಆಂಧ್ರಪ್ರದೇಶದಲ್ಲಿ 433 ಹಾಗೂ ತೆಲಂಗಾಣದಲ್ಲಿ 407 ಚಿತ್ರಮಂದಿರಗಳಲ್ಲಿ ‘ರಾಬರ್ಟ್’ ಬಿಡುಗಡೆಯಾಗುತ್ತಿದೆ. ಈ ಮೂರು ರಾಜ್ಯಗಳಲ್ಲಿ ಮೊದಲ ದಿನವೇ 3,889 ಶೋಗಳ ಪ್ರದರ್ಶನಕ್ಕೆ ‘ರಾಬರ್ಟ್’ ಸಿನಿಮಾ ಸಾಕ್ಷಿಯಾಗುತ್ತಿದೆ. ತಮಿಳುನಾಡು, ಕೇರಳ, ಮಹಾರಾಷ್ಟ್ರ, ದೆಹಲಿ ಮುಂತಾದ ಕಡೆ ಕನ್ನಡ ಹಾಗೂ ತೆಲುಗು ಎರಡೂ ಭಾಷೆಯಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಮಾತ್ರ ಬಿಡುಗಡೆ ಆಗುತ್ತಿದೆ.
ಟಿಕೆಟ್ ಮೊದಲೇ ಸೇಲ್:
ಬೆಂಗಳೂರಿನ ಹಲವಾರು ಚಿತ್ರಮಂದಿರಗಳಲ್ಲಿ ಮೊದಲ ದಿನದ ನಾಲ್ಕೂ ಪ್ರದರ್ಶನಗಳ ಟಿಕೆಟ್‌ಗಳು ಮುಂಗಡವಾಗಿಯೇ ಸೋಲ್ಡ್ ಔಟ್ ಆಗಿವೆ. ಬೆಂಗಳೂರಿನ ಒರಾಯನ್ ಮಾಲ್‌ನ ಪಿವಿಆರ್, ಗೋಪಾಲನ್ ಸಿನಿಮಾಸ್, ನವರಂಗ್, ಹೊಂಗಸಂದ್ರದ ಬೃಂದಾ, ಸಂತೋಷ್, ಗೌಡನಪಾಳ್ಯದ ಶ್ರೀನಿವಾಸ, ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಮುಂತಾದ ಚಿತ್ರಮಂದಿರಗಳಲ್ಲಿ ಮೊದಲ ದಿನದ ನಾಲ್ಕು ಪ್ರದರ್ಶನಗಳ ಟಿಕೆಟ್ ಮುಂಗಡವಾಗಿ ಮಾರಾಟ ಆಗುವ ಮೂಲಕ ‘ರಾಬರ್ಟ್’ ಸಿನಿಮಾ ದಾಖಲೆ ನಿರ್ಮಿಸಿದೆ.
ನಾಗಣ್ಣ ನಿರ್ದೇಶನದ ‘ಕುರುಕ್ಷೇತ್ರ’ ಚಿತ್ರದ ನಂತರ ನಟ ದರ್ಶನ್ ಅವರು ‘ರಾಬರ್ಟ್’ ಚಿತ್ರದ ಮೂಲಕ ಟಾಲಿವುಡ್‌ಗೆ ಪ್ರವೇಶ ಪಡೆಯುತ್ತಿದ್ದಾರೆ. ತರುಣ್ ಸುಧೀರ್ ನಿರ್ದೇಶಿಸಿ, ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಿಸಿರುವ ಈ ಚಿತ್ರ ಈಗಾಗಲೇ ಹಾಡು, ಟ್ರೇಲರ್, ಟೀಸರ್ ಮೂಲಕವೇ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.