
ನಟ ದರ್ಶನ್ ಅಭಿನಯದ 'ಡೆವಿಲ್' ಸಿನಿಮಾ ಹಲವು ಅಡೆತಡೆಗಳನ್ನು ದಾಟಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ತೆರೆಗೆ ಬಂದಿತ್ತು. ಬಿಡುಗಡೆಯ ಮುನ್ನವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಈ ಚಿತ್ರ, ಬಾಕ್ಸ್ ಆಫೀಸ್‌ನಲ್ಲಿ ಮಾತ್ರ ನಿರೀಕ್ಷಿಸಿದ ಮಟ್ಟದ ಯಶಸ್ಸು ದಾಖಲಿಸಲಿಲ್ಲ. ಚಿತ್ರಮಂದಿರದ ಪ್ರದರ್ಶನದ ಬಳಿಕ ಒಟಿಟಿ ಬಿಡುಗಡೆಯ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಈಗ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ.
ಸುಮಾರು ಏಳು ತಿಂಗಳ ಬಳಿಕ 'ಡೆವಿಲ್' ಸಿನಿಮಾ ಡಿಜಿಟಲ್ ವೇದಿಕೆಗೆ ಕಾಲಿಡುತ್ತಿದೆ. ಜುಲೈ 17ರಿಂದ ಜೀ5 (ZEE5)ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದ್ದು, ಈ ಕುರಿತು ಜೀ5 ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಘೋಷಣೆ ಮಾಡಿದೆ. ಸಿನಿಮಾದ ವಿಡಿಯೋ ತುಣುಕಿನೊಂದಿಗೆ ಪೋಸ್ಟ್ ಹಂಚಿಕೊಂಡಿರುವ ಜೀ5, 'ನಿಯಮಗಳನ್ನ ಬರೆದವನಲ್ಲ ಮುರಿದವನು, Mass ಅನ್ನೋ ಪದಕ್ಕೆ ಇವರೇ ಅಂಬಾಸಿಡರ್! Rule ಮಾಡೋಕೆ ಬರ್ತಾ ಇದ್ದಾನೆ 'ದಿ ಡೆವಿಲ್'.
ಜುಲೈ 17ರಿಂದ ZEE5 ಕನ್ನಡದಲ್ಲಿ ಸ್ಟ್ರೀಮ್ ಆಗುತ್ತಿದೆ" ಎಂದು ಬರೆದುಕೊಂಡಿದೆ. ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ, 'ಡೆವಿಲ್' ಆರಂಭದಲ್ಲಿ ಕನ್ನಡ ಭಾಷೆಯಲ್ಲಿ ಮಾತ್ರ ಸ್ಟ್ರೀಮಿಂಗ್ ಆಗುವ ಸಾಧ್ಯತೆ ಇದೆ. ಇತರೆ ಭಾಷೆಗಳ ಡಬ್ಬಿಂಗ್ ಆವೃತ್ತಿಗಳ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಪ್ರಕಟವಾಗಿಲ್ಲ. ಇದೇ ವೇಳೆ ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನೂ ಜೀ ಸಂಸ್ಥೆ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಚಿತ್ರದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಪ್ರಸಾರವಾಗುವ ನಿರೀಕ್ಷೆಯಿದೆ.
'ಡೆವಿಲ್' ಸಿನಿಮಾ ಆರಂಭದಿಂದಲೇ ಹಲವು ಕಾರಣಗಳಿಂದ ಸುದ್ದಿಯಲ್ಲಿತ್ತು. 2023ರಲ್ಲಿ ಚಿತ್ರ ಘೋಷಣೆಯಾದ ಬಳಿಕ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲೇ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಕಾರಣ, ಸಿನಿಮಾ ಕೆಲಸ ಕೆಲಕಾಲ ಸ್ಥಗಿತಗೊಂಡಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆಯಾದ ದರ್ಶನ್, ಉಳಿದ ಚಿತ್ರೀಕರಣ ಮತ್ತು ಡಬ್ಬಿಂಗ್ ಪೂರ್ಣಗೊಳಿಸಿ ಚಿತ್ರವನ್ನು ಮುಗಿಸಿಕೊಟ್ಟರು.
ಬಳಿಕ ಕಾನೂನು ಬೆಳವಣಿಗೆಗಳ ನಡುವೆಯೇ ಸಿನಿಮಾ ಬಿಡುಗಡೆಯಾಗಿ, ನಿರೀಕ್ಷಿತ ಮಟ್ಟದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಾಣಲಿಲ್ಲ. ಇದೀಗ ಚಿತ್ರಮಂದಿರ ಬಿಡುಗಡೆಯ ಸುಮಾರು ಏಳು ತಿಂಗಳ ಬಳಿಕ 'ಡೆವಿಲ್' ಒಟಿಟಿಗೆ ಬರುತ್ತಿದ್ದು, ಈ ಬಾರಿ ಡಿಜಿಟಲ್ ಪ್ರೇಕ್ಷಕರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬ ಕುತೂಹಲ ಮೂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.