ನಮಿತಾ ರಾವ್ ನಿರ್ಮಾಣದಲ್ಲಿ ವಿಕ್ರಂ ಸೂರಿ ನಿರ್ದೇಶಿಸಿರುವ ‘ಚೌಕಾಬಾರ’ ಚಿತ್ರದ ಪೋಸ್ಟರ್ ಅನ್ನು ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡಿದರು.
ಈ ಸಂದರ್ಭ ಮಾತನಾಡಿದ ಪುನೀತ್, ‘ಸಿನಿಮಾ ನಮ್ಮ ಕಸುಬು. ನಾವು ಮಾಡುವ ಚಿತ್ರ ನಮಗೇ ಮೊದಲು ತೃಪ್ತಿ ಕೊಡಬೇಕು. ನಂತರ ಜನರಿಗೆ ಮನೋರಂಜನೆ ನೀಡುವಂತಿದೆಯಾ ಅಂತ ಚಿಂತಿಸಬೇಕು. ಉತ್ತಮ ಕಂಟೆಂಟ್ ಇರುವ ಚಿತ್ರಗಳನ್ನು ಜನ ಖಂಡಿತಾ ಸ್ವೀಕರಿಸುತ್ತಾರೆ’ ಎಂದರು.
ನಟ, ನಿರ್ದೇಶಕ ವಿಕ್ರಂ ಸೂರಿ ಮಾತನಾಡಿ, ‘ಇದು ಮಣಿ ಆರ್ ರಾವ್ ಅವರ ಭಾವನಾ ಎಂಬ ಕಾದಂಬರಿ ಆಧಾರಿತ ಚಿತ್ರ. ಪ್ರೀತಿ, ಸ್ನೇಹ ಮತ್ತು ಸಂಬಂಧದ ಹಿನ್ನೆಲೆಯ ಕತೆ ಇದೆ. ನಾಲ್ವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಚೌಕಾಬಾರ ಆಟದಂತೆ ನಾಲ್ಕೂ ಪಾತ್ರಗಳ ನಡೆ ಇದೆ. ಕೊರೋನಾ ಇಲ್ಲದಿದ್ದರೆ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು’ ಎಂದರು. ನಿರ್ಮಾಪಕಿ ಹಾಗೂ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ನಮಿತಾ ಮಾತನಾಡಿ, ‘ಹಿರಿಯ ಕವಿಗಳ ಹೆಚ್‌ಎಸ್ ವೆಂಕಟೇಶ್ ಮೂರ್ತಿ, ಬಿಆರ್‌ಎಲ್ ಹಾಡುಗಳಿವೆ. ಮಾಚ್‌ರ್ ವೇಳೆಗೆ ಆಡಿಯೋ ರಿಲೀಸ್ ಮಾಡಲಿದ್ದೇವೆ’ ಎಂದರು.
ರಘು ಭಟ್ ಅವರ ನವ ನಿರ್ಮಿತಿ ಬ್ಯಾನರ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಚಿತ್ರವಿದು. ರವಿರಾಜ್ ಹೊಂಬಳ ಛಾಯಾಗ್ರಹಣವಿದೆ. ವಿಹಾನ್ ಪ್ರಭಂಜನ್, ಕಾವ್ಯಾ ರಮೇಶ್, ಸಂಜಯ್ ಸೂರಿ, ಶಶಿಧರ ಕೋಟೆ, ಪ್ರಥಮಾ ಪ್ರಸಾದ್, ಕಿರಣ್ ವಟಿ ತಾರಾಗಣದಲ್ಲಿದ್ದಾರೆ.