BIFFES 2025: ಆಸ್ಕರ್‌ ಪಟ್ಟಿಯಲ್ಲಿರುವ ಸಿನಿಮಾ ಪ್ರದರ್ಶನಕ್ಕೆ ಕಿಕ್ಕಿರಿದ ಜನಸಂದಣಿ

Published : Mar 03, 2025, 11:29 AM ISTUpdated : Mar 03, 2025, 11:50 AM IST
BIFFES 2025: ಆಸ್ಕರ್‌ ಪಟ್ಟಿಯಲ್ಲಿರುವ ಸಿನಿಮಾ ಪ್ರದರ್ಶನಕ್ಕೆ ಕಿಕ್ಕಿರಿದ ಜನಸಂದಣಿ

ಸಾರಾಂಶ

ಸಿನಿಮೋತ್ಸವದಲ್ಲಿ ಮಲಯಾಳಂನ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಡಾ ಬಿಜು ಕುಮಾರ್ ದಾಮೋದರನ್‌, ಗೋವಾದ ನಿರ್ದೇಶಕ, ಸಿನಿಮಾ ತಜ್ಞ ಪಂಕಜ್‌ ಸಕ್ಸೇನಾ ಸೇರಿದಂತೆ ಹಲವು ಖ್ಯಾತ ನಿರ್ದೇಶಕರು, ಸಿನಿಮಾ ತಜ್ಞರು ಭಾಗಿಯಾಗಿದ್ದಾರೆ.

ಬೆಂಗಳೂರು 16ನೇ ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಾರು 3000ಕ್ಕೂ ಅಧಿಕ ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಭಾನುವಾರ ವೀಕೆಂಡ್ ಆಗಿರುವ ಕಾರಣ ಸಿನಿಮಾಸಕ್ತರ ಸಂಖ್ಯೆ ಹೆಚ್ಚಿತ್ತು. ಈ ವೇಳೆ ಆಸ್ಕರ್‌ ವಿಜೇತ ಸಿನಿಮಾಗಳಿಗೆ ಉದ್ದದ ಸರತಿ ಸಾಲಿತ್ತು.

‘ಫೋರ್ ಮದರ್ಸ್‌’, ‘ಅನೊರ’ದಂಥ ಸಿನಿಮಾಗಳನ್ನ ನೋಡಿದ ಪ್ರೇಕ್ಷಕರು ಈ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಜೊತೆಗೆ ಶನಿವಾರ ಉದ್ಘಾಟನಾ ಸಿನಿಮಾವಾಗಿ ಪ್ರದರ್ಶನಗೊಂಡಿದ್ದ ‘ಪೈರ್’ ಸಿನಿಮಾವನ್ನೂ ಸಾಲಲ್ಲಿ ನಿಂತು ನೋಡಿ ಮೆಚ್ಚಿಕೊಂಡಿದ್ದಾರೆ. ‘ಕ್ವೀನ್‌’, ‘ದಿ ಸ್ಟೋರಿ ಆಫ್‌ ಸುಲೈಮಾನ್‌’, ‘ಬ್ಲ್ಯಾಕ್‌ ಡಾಗ್‌’, ‘ಟು ಎ ಲ್ಯಾಂಡ್‌ ಆಫ್‌ ಅನ್‌ನೋನ್‌’, ‘ದ ಸೀಡ್‌ ಆಫ್‌ ದ ಸೆಕ್ರೆಡ್‌ ಫಿಗ್‌’, ‘ಡೋಂಟ್‌ ಯು ಲೆಟ್‌ ಮಿ ಗೋ’, ‘ಮೆಮೊರೀಸ್‌ ಆಫ್‌ ಬರ್ನಿಂಗ್‌ ಬಾಡಿ’, ‘ಮನಸ್‌’, ‘ಐ ಆ್ಯಮ್‌ ಸ್ಟಿಲ್‌ ಹಿಯರ್‌’ - ಜನಮೆಚ್ಚುಗೆಗೆ ಪಾತ್ರವಾದ ಇತರ ಚಿತ್ರಗಳು.

‘ಸಿನಿಮೋತ್ಸವದಲ್ಲಿ ಮಲಯಾಳಂನ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಡಾ ಬಿಜು ಕುಮಾರ್ ದಾಮೋದರನ್‌, ಗೋವಾದ ನಿರ್ದೇಶಕ, ಸಿನಿಮಾ ತಜ್ಞ ಪಂಕಜ್‌ ಸಕ್ಸೇನಾ ಸೇರಿದಂತೆ ಹಲವು ಖ್ಯಾತ ನಿರ್ದೇಶಕರು, ಸಿನಿಮಾ ತಜ್ಞರು ಭಾಗಿಯಾಗಿದ್ದಾರೆ. ಮುಖ್ಯವಾಗಿ ಏಷ್ಯನ್‌, ಇಂಡಿಯನ್ ಹಾಗೂ ಕನ್ನಡ ಸಿನಿಮಾ ವಿಭಾಗದ ಸ್ಪರ್ಧೆಗಳಲ್ಲಿರುವ ಚಿತ್ರತಂಡದವರು ಭಾಗಿಯಾಗಿ ಸಿನಿಮಾಸಕ್ತರ ಜೊತೆ ಚರ್ಚೆ ನಡೆಸಿದ್ದಾರೆ. ಮೊದಲ ದಿನ ಸಿನಿಮೋತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ವರ್ಲ್ಡ್‌ ಸಿನಿಮಾ, ಇಂಡಿಯನ್‌ ಸಿನಿಮಾಗಳಲ್ಲದೇ ವಿಶೇಷ ಪ್ರದರ್ಶನ ಕಾಣುತ್ತಿರುವ ರೆಟ್ರೋಸ್ಪೆಕ್ಟಿವ್‌ ಚಿತ್ರಗಳೂ ತುಂಬಿದ ಗೃಹದಲ್ಲಿ ಪ್ರದರ್ಶನ ಕಂಡಿವೆ. ಕ್ರಿಸ್ಟೋಫ್ ಕೀಸ್ಲೋಸ್ಕಿ ಸಿನಿಮಾಗಳ ಬಗ್ಗೆ ಜನರ ಕುತೂಹಲ ಹೆಚ್ಚಿತ್ತು’ ಎಂದು ಬಿಫ್ಸ್‌ನ ಕಲಾತ್ಮಕ ನಿರ್ದೇಶಕ ವಿದ್ಯಾಶಂಕರ್‌ ತಿಳಿಸಿದ್ದಾರೆ.

ಇವತ್ತು ಚಿತ್ರೋತ್ಸವದಲ್ಲಿ ಗಮನಿಸಬಹುದಾದ 6 ಸಿನಿಮಾಗಳು
1. ಬಿಲೈನ್‌

ಸುಪ್ರಿಯೋ ದತ್ತ ನಿರ್ದೇಶನದ ಬೆಂಗಾಲಿ ಸಿನಿಮಾ. ನಿವೃತ್ತ ವ್ಯಕ್ತಿಯೊಬ್ಬನ ಏಕಾಂತ ಹಾಗೂ ಇದಕ್ಕೆ ಕಿಟಕಿಯಾಗುವ ಒಂದು ಫೋನ್‌ಕಾಲ್‌ ಸುತ್ತ ಈ ಕಥನವಿದೆ. ಅವಧಿ : 88 ನಿಮಿಷ.

2. ವಾಟರ್‌ ಲಿಲ್ಲೀಸ್‌
ಸೌತ್‌ ಕೊರಿಯನ್ ಸಿನಿಮಾ. ಚಾನೋ ಲೀ ನಿರ್ದೇಶನವಿದೆ. ಸಿನಿಮಾ ನಟಿಯಾಗುವ ಕನಸು ಹೊತ್ತ ಸ್ಕೂಲ್‌ ಡ್ರಾಪ್‌ಔಟ್‌ ಹುಡುಗಿಯೊಬ್ಬಳ ಕನಸು ಹಾಗೂ ಬದುಕಿನ ಮುಖಾಮುಖಿಯನ್ನಿಲ್ಲಿ ಕಾಣಬಹುದು. ಅವಧಿ: 119 ನಿಮಿಷ.

3. ವೇವ್ಸ್‌
ಇದು ಫ್ರಾನ್ಸ್‌ ದಂಗೆಯ ಕಾಲಘಟ್ಟದ ಚಿತ್ರ. ದಂಗೆಯ ಸೂಚನೆ ಬಗ್ಗೆ ಚಿಂತಿತನಾಗುವ ರೇಡಿಯೋ ಕೇಂದ್ರದ ಕೆಲಸಗಾರ ತಾಮಸ್‌ ತನ್ನ ಕುಟುಂಬ ಹಾಗೂ ಸಾಮಾಜಿಕತೆಯ ನಡುವೆ ತೊಳಲಾಡುವ ಕಥೆ. ಅವಧಿ: 131 ನಿಮಿಷ

4. ದ ಸೆಕೆಂಡ್‌ ಆ್ಯಕ್ಟ್‌
ಫ್ರೆಂಚ್ ಕಾಮಿಡಿ ಚಲನಚಿತ್ರ. ಕ್ವೆಂಟಿನ್ ಡ್ಯುಪಿಯಕ್ಸ್ ನಿರ್ದೇಶನವಿದೆ. ಹುಡುಗಿಯೊಬ್ಬಳು ಪ್ರೀತಿಸುತ್ತಿರುವ ಹುಡುಗನನ್ನು ಕುಟುಂಬದವರಿಗೆ ಪರಿಚಯಿಸುವಾಗಿನ ಸನ್ನಿವೇಶವನ್ನು ವಿನೋದವಾಗಿ ಕಟ್ಟಿಕೊಟ್ಟಿದ್ದಾರೆ. ಅವಧಿ: 80 ನಿಮಿಷ

5. ದ ಗರ್ಲ್‌ ವಿತ್‌ ದ ನೀಡಲ್‌
ಮೊದಲ ಮಹಾಯುದ್ಧದ ನಂತರದ ಬಡತನ, ವಂಚನೆಗಳನ್ನು ತೀವ್ರವಾಗಿ ದಾಟಿಸುತ್ತದೆ. ಕಾರೋಲೈನ್ ಎಂಬ ಬಡ ಯುವತಿ ಅರಿವಿಲ್ಲದೇ ಭೂಗತ ಜಗತ್ತಿನ ಕಂಬಂಧ ಬಾಹುಗಳಲ್ಲಿ ಸಿಲುಕುವ ಕಥೆ.
ಅವಧಿ: 115 ನಿಮಿಷ

6. ಗ್ರ್ಯಾಂಡ್‌ ಟೂರ್
ಬರ್ಮಾದ ರಂಗೂನ್‌ನಲ್ಲಿ 1918ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಮದುವೆಯಿಂದ ಓಡಿಹೋಗುವ ಬ್ರಿಟಿಷ್ ಅಧಿಕಾರಿ ಮತ್ತು ಆತನ ಬೆನ್ನಟ್ಟಿ ಬರುವ ವಧುವಿನ ಚಿತ್ರಣ ಸಿನಿಮಾದಲ್ಲಿದೆ. ಪೋರ್ಚುಗಲ್‌ ಭಾಷೆಯಲ್ಲಿದೆ. ಅವಧಿ: 129 ನಿಮಿಷ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ