ತನ್ನ ನಾಲ್ಕು ತಿಂಗಳ ಕಂದಮ್ಮನಿಗೆ ಹೊರಗಿನ ಆಹಾರ ಯಾವಾಗ ಕೊಡಲಿ ಅಂತ ಕೇಳ್ತಿದ್ದಾರೆ ನಟಿ ಅಕ್ಷತಾ ಪಾಂಡವಪುರ.
ಬಿಗ್ ಬಾಸ್ ನಟಿ ಅಕ್ಷತಾ ಪಾಂಡವಪುರ ತಾಯಿಯಾಗಿದ್ದಾರೆ. ಆಗಾಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮಗುವಿನ ಕುರಿತಾಗಿ ಇಂಟೆರೆಸ್ಟಿಂಗ್ ವಿಚಾರ ಹಂಚಿಕೊಳ್ಳುತ್ತಾರೆ. ಇದೀಗ ಎಲ್ಲ ಅಮ್ಮಂದಿರಿಗೂ ಕಾಡುವ ಸಮಸ್ಯೆ ಅವರನ್ನು ಕಾಡುತ್ತಿದೆ. ಪಾಪುಗೆ ಯಾವಾಗ ಹೊರಗಿನ ಆಹಾರ ಕೊಡಲಿ ಅನ್ನುವ ಪ್ರಶ್ನೆ ಅವರದು. ಒಂದು ಕಡೆ ಆಧುನಿಕ ವೈದ್ಯ ಪದ್ಧತಿ, ಇನ್ನೊಂದು ಕಡೆ ಮನೆಯ ಹಿರಿಯರು ಹೇಳುವ ಆಚರಣೆಗಳು. ಮಗುವಿಗೆ ಬಿಸಿನೀರು ಕುಡಿಸೋದಕ್ಕೆ, ಕಂದನ ನಾಲಿಗೆಯನ್ನು ಆಗಾಗ ಗಿಡ ಮೂಲಿಕೆಗಳಿಂದ ಕ್ಲೀನ್ ಮಾಡೋದಕ್ಕೆ, ಜೊತೆಗೆ ಕೂಸಿಗೆ ಹೊಟ್ಟೆಗೆ ನಾಟಿ ಮದ್ದು ನೀಡಲಿಕ್ಕೆ ಹಿರಿಯರು ಸಲಹೆ ಕೊಡುತ್ತಾರೆ. ಅದು ಪಾರಂಪರಿಕವಾಗಿ ಬಂದದ್ದು. ತಾತ ಮುತ್ತಾತನ ಕಾಲದಿಂದ ರೂಢಿಯಲ್ಲಿರೋದು. ಆದರೆ ಈಗಿನ ವೈದ್ಯ ಪದ್ಧತಿ ಹೇಳೋದೇ ಬೇರೆ. ಸಣ್ಣ ಪಾಪುಗೆ ಆರು ತಿಂಗಳು ತುಂಬುವವರೆಗೂ ಹೊರಗಿನ ಆಹಾರ ನಿಷಿದ್ಧ. ಅಮ್ಮನ ಹಾಲು ಬಿಟ್ಟು ಒಂದು ಹನಿ ನೀರೂ ಕುಡಿಯೋ ಹಾಗಿಲ್ಲ ಅನ್ನುತ್ತಾರೆ ಆಧುನಿಕ ವೈದ್ಯರು. ತಾಯಿಯ ಹಾಲಿನಲ್ಲಿ ಮಗುವಿಗೆ ಬೇಕಾದ ಎಲ್ಲಾ ಪೋಷಕಾಂಶಗಳೂ ಇರುತ್ತವೆ. ಹೊರಗಿನ ಆಹಾರ ನೀಡಿದ ತಕ್ಷಣ ಮಗುವಿಗೆ ಇನ್‌ಫೆಕ್ಷನ್‌ಮತ್ತಿತರ ಸಮಸ್ಯೆ ಬರಬಹುದು ಅಂತಾರೆ ವೈದ್ಯರು.
ಹಾಗಿದ್ರೆ ತಾನು ಯಾವ ಪದ್ಧತಿಯನ್ನು ಫಾಲೋ ಮಾಡಬೇಕು ಅನ್ನೋ ಸಂದಿಗ್ಧ ಈ ಕಾಲದ ತಾಯಂದಿರದು. ನಟಿ ಅಕ್ಷತಾ ಪಾಂಡವಪುರ ಅವರಿಗೂ ಇದೇ ಸಮಸ್ಯೆಯಾಗಿ ಕಾಡಿದೆ. ಮಗುವಿಗೆ ಈಗ ಮೂರು ತಿಂಗಳು ತುಂಬಿದಾಗಲೇ ರಾಗಿ ಸರಿ ತಿನ್ನಿಸೋದಕ್ಕೆ ಶುರು ಮಾಡಬಹುದು ಅಂತಿದ್ರಂತೆ ಹಿರಿಯರು. ಮೂರು ತಿಂಗಳ ನಂತರ ರಾಗಿ ಸರಿ, ಆಮೇಲೆ ಹೊರಗಿನ ಆಹಾರ, ತಾಯಿ ಹಾಲಲ್ಲದೇ ಹಸು ಹಾಲು ಎಲ್ಲ ಕೊಡ್ತಾ ಇದ್ರೆ ಮಗುವಿನ ಬೆಳವಣಿಗೆ ಚೆನ್ನಾಗಿರುತ್ತೆ ಅನ್ನೋದು ಹಿರಿಯರ ಮಾತು. ಇದರ ಜೊತೆಗೆ ಅಂಬೆಗಾಲು, ತೊದಲು ಮಾತು, ಪುಟ್ಟ ಪುಟ್ಟ ಹೆಜ್ಜೆ .. ಅಷ್ಟರಲ್ಲಿ ಒಂದು ವರ್ಷ ಕಳೆದೇ ಬಿಡುತ್ತೆ ಅಂತಾರಂತೆ ಅಕ್ಷತಾ ಮನೆಯ ಹಿರಿಯರು.
ಆದರೆ ಮಗೂಗೆ ಆರು ತಿಂಗಳವರೆಗೆ ಅಮ್ಮನ ಹಾಲು ಬಿಟ್ಟು ಬೇರೇನನ್ನೂ ಕೊಡೋ ಹಾಗಿಲ್ಲ ಎಂಬ ಪೀಡಿಯಾಟ್ರಿಶನ್ ಮಾತನ್ನು ಸದ್ಯಕ್ಕೆ ಅಕ್ಷತಾ ಪಾಲಿಸುತ್ತಿದ್ದಾರಂತೆ. ಹೀಗಾಗಿ ರಾಗಿ ಸರಿ ಸೇರಿದಂತೆ ಹೊರಗಿನ ಆಹಾರ ಕೊಡುತ್ತಿಲ್ಲ. ' ಒಟ್ನಲ್ಲಿ ಈ ಮಕ್ಕಳ ಮತ್ತು ಬಾಣಂತನದ ವಿಷಯದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳೋದಕ್ಕೆ ಹೆದರೋದಂತೂ ಸತ್ಯ' ಅನ್ನೋದು ಅಕ್ಷತಾ ಅವರ ಫೈನಲ್ ಮಾತು.
ಅಕ್ಷತಾ ಮಂಡ್ಯ ಸಮೀಪದ ಪಾಂಡವಪುರದವರು. ಅವರ ಪತಿ ರಂಗಭೂಮಿ ನಿರ್ದೇಶಕ ಪ್ರಸನ್ನ ಶಿವಮೊಗ್ಗ ಜಿಲ್ಲೆಯ ಸಾಗರದವರು. ರಂಗಭೂಮಿ ಮೂಲಕವೇ ಪರಿಚಿತರಾಗಿ ಪ್ರೇಮಿಗಳಾಗಿದ್ದ ಈ ಜೋಡಿ ಕೆಲವು ವರ್ಷಗಳ ಹಿಂದೆಯೇ ದಾಂಪತ್ಯ ಜೀವನಕ್ಕೆ ಅಡಿ ಇಟ್ಟಿದ್ದರು. ಗರ್ಭಿಣಿಯಾಗಿದ್ದಾಗಿನ ಅಕ್ಷತಾ ಅವರ ಫೋಟೋಶೂಟ್ ಸಾಕಷ್ಟು ವೈರಲ್ ಆಗಿತ್ತು. ಇದೀಗ ಅವರ ಮಗುವಿನ ಬಗೆಗಿನ ವಿಚಾರಗಳು, ಸಂದೇಹಗಳ ಬಗೆಗಿನ ಬರಹಗಳನ್ನೂ ಮೆಚ್ಚಿ ಪ್ರತಿಕ್ರಿಯೆ ನೀಡುವವರು ಬಹಳ ಮಂದಿ ಇದ್ದಾರೆ.
ಅಕ್ಷತಾ ಅವರ ಈ ಪೋಸ್ಟ್‌ಗೂ ಸಾಕಷ್ಟು ಮಂದಿ ಪ್ರತಿಕ್ರಿಯ ನೀಡಿದ್ದಾರೆ. ಅವರಲ್ಲಿ ಹೆಚ್ಚಿನವರು ಆರು ತಿಂಗಳು ಮಗುವಿಗೆ ತಾಯಿ ಹಾಲನ್ನಷ್ಟೇ ನೀಡುವುದು ಸುರಕ್ಷಿತ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಹಿರಿಯರ ಕಾಲದಲ್ಲಿ ಪರಿಸರ ಸ್ವಚ್ಛವಿತ್ತು, ಹೊರಗಿನ ನೀರು, ಆಹಾರ ಪರಿಶುದ್ಧವಾಗಿತ್ತು. ಹೀಗಾಗಿ ಭಯ ಇರಲಿಲ್ಲ. ಆದರೆ ಈಗ ಜಗತ್ತೇ ಕಲುಷಿತಗೊಂದಿದೆ. ಇಂಥಾ ಟೈಮ್‌ನಲ್ಲಿ ತಾಯಿ ಹಾಲೊಂದೇ ಮಗುವಿಗೆ ಸುರಕ್ಷಿತ ಎಂಬ ಸಲಹೆಗಳು ಬಂದಿವೆ.