ಕಡಲ ಕುಡಿಗಳ ಜೀವನಕ್ಕೆ ಪುನೀತ ಸ್ಪರ್ಶ

By Kannadaprabha NewsFirst Published Mar 3, 2024, 12:31 PM IST
Highlights

ಒಬ್ಬ ಸೂಪರ್‌ಸ್ಟಾರ್ ನೂರಾರು ಜನರ ಕುಟುಂಬಕ್ಕೆ ಅನ್ನದಾತ. ಆಟೋ ಡ್ರೈವ‌ರ್‌ನಿಂದ ಸಣ್ಣಪುಟ್ಟ ಅಂಗಡಿ ನಡೆಸುವ ಜನರೆಲ್ಲರ ಬದುಕನ್ನೇ ಬದಲಾಯಿಸಿದ ಕಲಾವಿದ. ರೀಲ್ ಹೀರೋ ರಿಯಲ್ ಹೀರೋ ಆಗಿ ಬದಲಾವಣೆಗೆ ನಾಂದಿ ಹಾಡಿದ ರೋಚಕ ಕತೆ ಇದು.

- ವಿನೋದ್ ಕುಮಾರ್ ನಾಯ್ಕ್

ಒಬ್ಬ ಸೂಪರ್‌ಸ್ಟಾರ್ ನೂರಾರು ಜನರ ಕುಟುಂಬಕ್ಕೆ ಅನ್ನದಾತ. ಆಟೋ ಡ್ರೈವ‌ರ್‌ನಿಂದ ಸಣ್ಣಪುಟ್ಟ ಅಂಗಡಿ ನಡೆಸುವ ಜನರೆಲ್ಲರ ಬದುಕನ್ನೇ ಬದಲಾಯಿಸಿದ ಕಲಾವಿದ. ರೀಲ್ ಹೀರೋ ರಿಯಲ್ ಹೀರೋ ಆಗಿ ಬದಲಾವಣೆಗೆ ನಾಂದಿ ಹಾಡಿದ ರೋಚಕ ಕತೆ ಇದು.

ಇದೆಲ್ಲವೂ ಯಾವುದೋ ಒಂದು ಸಿನಿಮಾದ ಕತೆ ಥರಾ ಅನ್ನಿಸಿದರೆ. ನಿಮ್ಮ ಗ್ರಹಿಕೆ ತಪ್ಪು. ಕನಸಿನಂತಿರುವ ಕತೆಯನ್ನು ನನಸು ಮಾಡಿದ್ದು, ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಅಪ್ಪು.

ನೇತ್ರಾಣಿ ಎನ್ನುವ ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರದ ಪುಟ್ಟ ಕಡಲ ತೀರ. ಕೇವಲ ನೌಕಾಪಡೆಯ ಪ್ರಯೋಗಶಾಲೆಯೋ ಮತ್ತೊಂದೋ ಕಾರಣಕ್ಕೆ ಜನರ ಕಿವಿಗೆ ಆಗೀಗ ಬೀಳುತ್ತಿತ್ತು. ಅದನ್ನು ಬಿಟ್ಟರೆ, ಯಾರೋ ಕೆಲ ಸಮುದ್ರ ಸಾಹಸಿಗಳಿಗೆ ಮಾತ್ರ ಈ ಜಾಗದ ಪರಿಚಯ ಇತ್ತು. ಕನ್ನಡದ ಸೂಕ್ಷ್ಮ ನಿರ್ದೇಶಕ. ಪರಿಸರದ ಕತೆಗಳನ್ನು ಬಹಳ ಅದ್ಭುತವಾಗಿ ಕಟ್ಟಿ ಕೊಡುವ ಅಮೋಘವರ್ಷ ಯಾವಾಗ ತಮ್ಮ ‘ಗಂಧದಗುಡಿ’ ಸಿನಿಮಾಕ್ಕೆ ಶೂಟಿಂಗ್ ಮಾಡಲು ನೇತ್ರಾಣಿ ದ್ವೀಪಕ್ಕೆ ಪುನೀತ್ ರಾಜ್‌ಕುಮಾ‌ರ್ ಅವರನ್ನು ಕರೆದುಕೊಂಡು ಹೋದರೋ, ನೇತ್ರಾಣಿಯ ಬಾಹ್ಯ ಸೌಂದರ್ಯಕ್ಕೆ ಮನಸೋತಿದ್ದ ಅಪ್ಪು, ಸಾಗರದಾಳಕ್ಕೆ ಡೈವ್ ಮಾಡಿ ಸಮುದ್ರ ಸುಂದರಿಯನ್ನೂ, ಸಾಗರದೊಳಗಿನ ಜೀವರಾಶಿಯನ್ನೂ ಮನತುಂಬಿಕೊಂಡು ಅದನ್ನು ಗಂಧದಗುಡಿ ಸಿನಿಮಾದಲ್ಲಿ ತೋರಿಸಿದರೋ, ಅಲ್ಲಿಂದ ಈ ಭಾಗದ ಜನರ ಜೀವನದ ಚಿತ್ರಣವೇ ಬದಲಾಗಿಬಿಟ್ಟಿತು.

'ನೀನೇ ರಾಜಕುಮಾರ..' ಅಪ್ಪು ಚಿತ್ರದಲ್ಲಿ ತೋರಿಸಿದ್ದನ್ನು ನಿಜವಾಗಿಸಿ ಪುನೀತನಾದ ಬೆಳಗಾವಿ ವ್ಯಕ್ತಿ!

ನಿರ್ದೇಶಕ ಅಮೋಘವರ್ಷ ಮತ್ತು ಪುನೀತ್ ರಾಜ್‌ಕುಮಾರ್ ನೇತ್ರಾಣಿಯ ಸಮುದ್ರದಲ್ಲಿ ಡೈವಿಂಗ್ ಮಾಡಿ ಅದನ್ನು ಜಗತ್ತಿಗೆ ತೋರಿಸಿ ದೃಶ್ಯಕಾವ್ಯಕ್ಕೆ ಈಗ ಮೂರು ವರ್ಷದ ಸಂಭ್ರಮ.

2021ರ ಫೆಬ್ರವರಿ 8ನೇ ತಾರೀಕು ಪುನೀತ್ ರಾಜ್‌ಕುಮಾರ್ ಮತ್ತು ಅಮೋಘವರ್ಷ ಇಬ್ಬರೂ ನೇತ್ರಾಣಿ ಗಣೇಶ್ ಮಾರ್ಗದರ್ಶನದಲ್ಲಿ ಸ್ಕೂಬಾ ಡೈವಿಂಗ್ ಮಾಡಿದ್ದು, ಪುನೀತ್ ಸರ್ ಇಲ್ಲಿ ಡೈವಿಂಗ್ ಮಾಡಿದ ಮೇಲೆ, ಅದನ್ನು ಅಮೋಘವರ್ಷ ಸರ್ ಅದ್ಭುತವಾಗಿ ‘ಗಂಧದಗುಡಿ’ ಸಿನಿಮಾದಲ್ಲಿ ತೋರಿಸಿದ ಮೇಲೆ ನೇತ್ರಾಣಿ ದ್ವೀಪದ ಚಿತ್ರಣವೇ ಬದಲಾಗಿ ಹೋಯಿತು ಎನ್ನುತ್ತಾರೆ ಇಲ್ಲಿ ಸ್ಕೂಬಾ ಡೈವಿಂಗ್ ನಡೆಸುವ ನೇತ್ರಾಣಿ ಗಣೇಶ್. ಮುಂಚೆ ಹೆಚ್ಚು ಪ್ರವಾಸಿಗರು ಇಲ್ಲಿಗೆ ಬರುತ್ತಿರಲಿಲ್ಲ. ಈಗ ಬರುವ ಪ್ರವಾಸಿಗರನ್ನು ನಮ್ಮ ಕೈಯಲ್ಲಿ ನಿಭಾಯಿಸೋಕೆ ಆಗುತ್ತಿಲ್ಲ. ನಿತ್ಯ ನೂರಾರು ಪ್ರವಾಸಿಗರು ಬರಲಾರಂಭಿಸಿದ್ದಾರೆ. ಅಪ್ಪು ಡೈವಿಂಗ್ ಮಾಡಿದ ಜಾಗ. ಅವರಿಗೆ ಇಲ್ಲಿ ಆದ ಅನುಭವದ ಬಗ್ಗೆ ಸ್ಥಳೀಯರಿಂದ ಕೇಳಿ ತಿಳಿದುಕೊಂಡು ಖುಷಿಪಡುತ್ತಾರೆ.

ನ್ಯೂಯಾರ್ಕ್​ ಟೈಂಸ್ಕ್ವೇರ್​ನಲ್ಲಿ ಅಪ್ಪು ಜೊತೆ ಅನು... ಹುಟ್ಟುಹಬ್ಬಕ್ಕೆ ಮರೆಯಲಾಗದ ಗಿಫ್ಟ್​: ನಟಿ ಹೇಳಿದ್ದೇನು?

ಸಮುದ್ರದಲ್ಲಿ ಡೈವಿಂಗ್ ಬಗ್ಗೆ ಕರ್ನಾಟಕದ ಜನರಲ್ಲಿ ಕ್ರೇಜ್ ಹುಟ್ಟಿಸಿದ್ದು ಪುನೀತ್ ಸರ್. ಅಷ್ಟೇ ಅಲ್ಲ, ಅವರು ಬಂದು ಹೋದ ಮೇಲೆ ಇಲ್ಲಿ ಅನೇಕ ಅಂಗಡಿಗಳು ಓಪನ್ ಆದವು. ಟ್ಯಾಕ್ಸಿ, ಆಟೋಗಳಿಗೆ ಭಾರಿ ಬೇಡಿಕೆ ಬಂದಿದೆ. ಯುವಕರಿಗೆ, ಮಹಿಳೆಯರಿಗೆ ಕೈ ತುಂಬಾ ಕೆಲಸ ಸಿಕ್ಕಿದೆ. ಹೋಟೆಲ್, ಲಾಡ್ಜ್ ಹೆಚ್ಚಾಗಿವೆ. ನೇತ್ರಾಣಿ ಸುತ್ತಮುತ್ತ ಹೊಸ ರೀತಿಯ ಆರ್ಥಿಕ ಚಟುವಟಿಕೆಗಳು ಶುರುವಾಗಿವೆ. ಸ್ಥಳೀಯ ಜನರ ಬದುಕುವ ಕನಸಿಗೆ ಬಲ ಸಿಕ್ಕಿದೆ.

ಈಗ ಇಲ್ಲೆಲ್ಲ ಜನ ಪುನೀತ್ ಸರ್ ಹೆಸರನ್ನು ಹೇಳಿಕೊಂಡು ನೆಮ್ಮದಿಯ ಜೀವನ ಮಾಡುತ್ತಿದ್ದಾರೆ. ಅನೇಕ ಜನರ ಹೊಟ್ಟೆ ತುಂಬಿಸುತ್ತಿರುವ ಪುಣ್ಯಾತ್ಮ ಪುನೀತ್ ಅಣ್ಣ ಎಂದು ನೆನೆಯುತ್ತಾರೆ. ಇಲ್ಲಿನ ಜನರ ಜೀವನವನ್ನೇ ಬದಲಾಯಿಸಿದ ಈ ಒಂದು ಸಣ್ಣ ಚಟುವಟಿಕೆಗೆ ನೇರ ಕಾರಣವಾದವರು ಅಮೋಘವರ್ಷ, ಪುನೀತ್ ರಾಜ್‌ಕುಮಾರ್ ಅವರಿಗೆ ಕರುನಾಡಿನ ಎಲ್ಲ ಜೀವವೈವಿಧ್ಯವನ್ನು, ಎಲ್ಲಾ ಬಗೆಯ ಕಾಡುಗಳನ್ನು ನದಿ ನೀರು ಸಾಗರಗಳನ್ನು ತೋರಿಸಬೇಕೆಂದು ಆಸೆ ಪಟ್ಟವರು ಅಮೋಘವರ್ಷ. ಆದ್ದರಿಂದಲೇ ಗಂಧದಗುಡಿ ಸಿನಿಮಾದಲ್ಲಿ ನಾಡಿನ ಎಲ್ಲ ಬಗೆಯ ಕಾಡುಗಳನ್ನೂ ತೋರಿಸುತ್ತಾ, ಪುನೀತ್

ಅವರನ್ನು ಎಲ್ಲಾ ಕಡೆ ಕರೆದುಕೊಂಡು ಓಡಾಡುವ ಅಮೋಘವರ್ಷ, ಸಾಗರದ ಒಡಲಾಳದ ಜೀವಲೋಕ ತೋರಿಸಲು ನೇತ್ರಾಣಿಗೆ ಕರೆದುಕೊಂಡು ಬಂದಿದ್ದು, ಇಲ್ಲಿ ಹೊಸ ಇತಿಹಾಸವನ್ನೇ ಬರೆಯಲು ಕಾರಣವಾಯಿತು. ಒಬ್ಬ ಸೂಪರ್‌ಸ್ಟಾರ್, ಒಂದು ಸಿನಿಮಾ, ಅದರ ಹಿಂದಿನ ಒಬ್ಬ ನಿರ್ದೇಶಕ... ಹೀಗೆ ಎಲ್ಲರ ಪ್ರಯತ್ನದ ಫಲವಾಗಿ ಒಂದು ಪ್ರದೇಶ ಫಲವತ್ತಾದ ಭೂಮಿಯಾಗಿ, ಜನರ ಬದುಕನ್ನು ಹಸನಾಗಿ ಪರಿವರ್ತಿಸಿದ ಸ್ಫೂರ್ತಿಯ ಕತೆ ಇದು.

click me!