ನಟಿ ಸುಮನ್ ನಗರ್‌ಕರ್ ಪ್ರತಿ ದಿನ 20 ಕಿಲೋಮೀಟರ್ ಓಡುತ್ತಿದ್ದಾರೆ! ಅವರ ಈ ಓಟಕ್ಕೆ ಕಾರಣ ಕೊರೋನಾ ಸಂಕಷ್ಟ. ಹಾಗಂತ ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಡಿ.
ಬೆಳದಿಂಗಳ ಬಾಲೆಯ ಈ ಓಟದ ಹಿಂದೆ ಸಾಮಾಜಿಕ ಕಾರ್ಯ ಅಡಗಿದೆ. 20 ದಿನಗಳ ಕಾಲ ಒಟ್ಟು 400 ಕಿಲೋಮೀಟರ್ ಓಡುವ ಮೂಲಕ ಕೊರೋನ ಚಾರಿಟಿಗೆ ನೆರವಾಗುತ್ತಿದ್ದಾರೆ. ಬೆಂಗಳೂರು ರನ್ನರ್ಸ್ ಆಯೋಜಿಸಿರುವ Run2020-Move2feed fund raise ಅಭಿಯಾನದಲ್ಲಿ ಸುಮನ್ ನಗರ್‌ಕರ್ ಅವರು ಪತಿ ಗುರು ಜೊತೆಗೆ ಭಾಗಿಯಾಗಿದ್ದಾರೆ. ಜುಲೈ1ರಿಂದ 20ರವರೆಗೆ ಪ್ರತಿ ದಿನ ಒಬ್ಬರಂತೆ ಇಪ್ಪತ್ತು ರನ್ನರ್ಸ್ ಪ್ರತಿದಿನ ಇಪ್ಪತ್ತು ಕಿಲೋಮೀಟರ್ ಓಡಿ ಈ ಮೂಲಕ ಹಣ ಸಂಗ್ರಹಣೆ ಮಾಡಲಾಗುತ್ತಿದೆ.
ಹೀಗೆ ಸಂಗ್ರಹವಾದ ಹಣವನ್ನು ಸಾಯಿ ವಿಶ್ವನಾಥ್ ಮೆಮೋರಿಯಲ್ ಟ್ರಸ್ಟ್ ಮೂಲಕ ಕಷ್ಟದಲ್ಲಿರುವವರಿಗೆ ದಿನಸಿಗಳನ್ನ ನೀಡಲು ವ್ಯಯಿಸಲಾಗುತ್ತದೆ. ಪತಿ ಜೊತೆಗೆ ಸುಮನ್ ಮುಖಕ್ಕೆ ಮಾಸ್ಕ್ ಧರಿಸಿ ಹೀಗೆ ರನ್ನಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದು, 400 ಕಿ ಮೀ ಓಡುವ ಮೂಲಕ ಚ್ಯಾರಿಟಿಗೆ ನೆರವಾಗುವುದು ಇವರ ಗುರಿ.
'ಬೆಳದಿಂಗಳ ಬಾಲೆ...' ಎಂದರೆ ನೆನಪಾಗೋ ನಟಿ ಇವರು..ತುಂಬಾ ವರ್ಷಗಳ ನಂತರ ತಮ್ಮದೇ ನಿರ್ಮಾಣದ ಬಬ್ರೂ ಹಾಗೂ ಬ್ರಾಹ್ಮಿ ಚಿತ್ರಗಳ ಮೂಲಕ ಕನ್ನಡಕ್ಕೆ ಮರಳಿದವರು ಸುಮನ್ ನಗರ್‌ಕರ್. ಲಾಕ್‌ಡೌನ್ ಸಂದರ್ಭದಲ್ಲಿ ಬೆಂಗಾಲಿ ನಿರ್ದೇಶಕ ಸಂಚಯನ್ ಚಕ್ರಬರ್ತಿ ಅವರ ‘ಲಾಕ್ಡೌನ್ ಡೈರೀಸ್’ ಹಿಂದಿ ಕಿರುಚಿತ್ರ, ಸಿಂಗಾಪುರ್‌ನಲ್ಲಿರುವ ಪ್ರಶಸ್ತಿ ವಿಜೇತ ನಿರ್ದೇಶಕಿ ಶಿಲ್ಪಾ ಕೃಷ್ಣನ್ ಶುಕ್ಲಾ ಅವರ ‘ಡಾಟ್ಸ್ ’ ಚಿತ್ರದಲ್ಲೂ ಅಭಿನಯಿಸಿದ್ದಾರೆ.