* ಹೊಸಕೋಟೆ ತಾಲೂಕಿನ ಯಲಚೇನಹಳ್ಳಿಯಲ್ಲಿರುವ ವೋಲ್ವೋ ಕಂಪನಿ
* 66 ಕುಟುಂಬಗಳಲ್ಲಿ 42 ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗದ ಭರವಸೆ
* ಭೂಮಿ ಕಳೆದುಕೊಂಡ 66 ಕುಟುಂಬದಲ್ಲಿ 33 ಕುಟುಂಬಗಳ 42 ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗ
ಬೆಂಗಳೂರು(ಫೆ.17): ವೋಲ್ವೋ ಕಂಪನಿಗೆ ಭೂಮಿ ನೀಡಿರುವ ಹೊಸಕೋಟೆ ತಾಲೂಕಿನ ಯಲಚೇನಹಳ್ಳಿಯಲ್ಲಿನ ರೈತ ಕುಟುಂಬಗಳಿಗೆ ಸೂಕ್ತ ಉದ್ಯೋಗ ನೀಡುವ ಸಂಬಂಧ ಕಂಪನಿಯೊಂದಿಗೆ ಸಚಿವರು ನಡೆಸಿದ ಸಂಧಾನ ಸಭೆಯು ಯಶಸ್ವಿಯಾಗಿದ್ದು, ಉದ್ಯೋಗ ಕಲ್ಪಿಸುವ ಕಂಪನಿಯು ಒಪ್ಪಿಗೆ ನೀಡಿದೆ.
ಬುಧವಾರ ವಿಧಾನಸೌಧದಲ್ಲಿ ಪೌರಾಡಳಿತ, ಸಣ್ಣ ಕೈಗಾರಿಕೆ ಸಚಿವ ಎಂ.ಟಿ.ಬಿ.ನಾಗರಾಜ್, ಬೃಹತ್ ಮತ್ತು ಮಧ್ಯಮ ಸಚಿವ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಮತ್ತು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರು ವೋಲ್ವೋ ಕಂಪನಿ ಪ್ರತಿನಿಧಿಗಳು ಮತ್ತು ಭೂಮಿ ನೀಡಿರುವ ರೈತ ಪ್ರತಿನಿಧಿಗಳ ಜತೆ ಸಭೆ ನಡೆಸಿದರು.
KIADBಯಿಂದ ರಾಜ್ಯದ 8 ಜಿಲ್ಲೆಗಳಲ್ಲಿ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ , ನಿರಾಣಿ ಘೋಷಣೆ
ಸಭೆಯಲ್ಲಿ ಮಾತನಾಡಿದ ವೋಲ್ವೋ ಕಂಪನಿಯ ಹಿರಿಯ ಅಧಿಕಾರಿಗಳು, ಭೂಮಿ ಕಳೆದುಕೊಂಡ 66 ಕುಟುಂಬದಲ್ಲಿ 33 ಕುಟುಂಬಗಳ 42 ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗ ನೀಡಿದ್ದೇವೆ. ಉಳಿದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯನ್ನು ಕಡಿತಗೊಳಿಸಿ ಉದ್ಯೋಗ ನೀಡುತ್ತೇವೆ ಎಂದು ಅಶ್ವಾಸನೆ ನೀಡಿದರು. ಪರಿಷ್ಕರಿಸಿದ ವೇತನ ನೀಡುವ ಪತ್ರಗಳನ್ನು ಐಟಿಐ ಆದ ಐದು ಅಭ್ಯರ್ಥಿಗಳಿಗೆ ನೀಡಿದ್ದರೂ ಅವರು ಒಪ್ಪದೆ ಡಿ.15ರಿಂದ ಧರಣಿ ನಡೆಸುತ್ತಿದ್ದಾರೆ. ಅವರಿಗೆ ಕ್ಷಮಾಪಣೆ ಪತ್ರ ಪಡೆದು ಉದ್ಯೋಗ ನೀಡಲು ಕಂಪನಿ ಸಿದ್ಧವಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಸಣ್ಣ ಕೈಗಾರಿಕೆ ಸಚಿವ ಎಂ.ಟಿ.ಬಿ.ನಾಗರಾಜ್, ಸ್ಥಳೀಯರಿಂದ ಭೂಮಿ ಪಡೆದಿರುವ ಕಂಪನಿ ಸ್ಥಳೀಯರಿಗೆ ಕಾಯಂ ಉದ್ಯೋಗ ನೀಡುವಲ್ಲಿ ಮತ್ತು ಸಿಎಸ್‌ಆರ್ ನಿಧಿ ಬಳಕೆ ಮಾಡುವಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿದೆ. ಅಧಿಕಾರಿಗಳು, ಕಾರ್ಮಿಕ ಕಾಯ್ದೆಯನ್ನು ಬಿಗಿಯಾಗಿ ಜಾರಿಗೊಳಿಸಿ ಕಾರ್ಮಿಕರ ಹಿತ ರಕ್ಷಿಸಬೇಕು. ಅಧಿಕಾರಿಗಳು ಕಾರ್ಮಿಕರ ಬಗ್ಗೆ ಕನಿಕರ ಇಟ್ಟು ಕೆಲಸ ಮಾಡಬೇಕು. ಹೊಸಕೋಟೆಯಲ್ಲಿನ ಇಂಡೋ ವಿಮಾ ಕಂಪನಿ ಉತ್ತಮ ಲಾಭ ಗಳಿಸುತ್ತಿದ್ದರೂ ಕಾರ್ಮಿಕ ಕಾಯ್ದೆಯನ್ನು ನಿರ್ಲಕ್ಷಿಸಿದೆ. ವೇತನ ಹೆಚ್ಚಳ ಮತ್ತು ಕ್ಯಾಂಟೀನ್ ಸೌಲಭ್ಯ ಸೇರಿ ಇತರೆ ಸೌಲಭ್ಯಗಳನ್ನು ನೀಡುವಲ್ಲಿ ನಿರ್ಲಕ್ಷ್ಯ ತೋರಿಸುತ್ತಿದೆ ಎಂದು ಹೇಳಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ಕಂಪನಿ ಮತ್ತು ಭೂಮಿ ನೀಡಿರುವ ರೈತರು ಹಳೆಯದನ್ನೆಲ್ಲಾ ಮರೆತು ಮುಂದುವರಿಯಬೇಕಿದೆ. ಧರಣಿ ನಿರತ ಕಾರ್ಮಿಕರು ಕ್ಷಮಾಪಣೆ ಪತ್ರ ನೀಡಿ ಕೆಲಸಕ್ಕೆ ಹಾಜರಾಗಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಮೈಸೂರು ಲ್ಯಾಂಫ್ಸ್ ಜಾಗ ಪರಭಾರೆ ಇಲ್ಲ: ನಿರಾಣಿ
ವಿಧಾನ ಪರಿಷತ್: ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಮೈಸೂರು ಲ್ಯಾಂಫ್ಸ್ ಕಾರ್ಖಾನೆಯ 21 ಎಕರೆ ಜಾಗವನ್ನು ಪರಭಾರೆ ಮಾಡುವ ಯಾವುದೇ ಉದ್ದೇಶವಿಲ್ಲ, ಬದಲಾಗಿ ಕರ್ನಾಟಕದ ಸಂಸ್ಕೃತಿ ಬಿಂಬಿಸುವ ‘ಎಕ್ಸಪೀರಿಯನ್ಸ್ ಬೆಂಗಳೂರು’ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಸ್ಪಷ್ಟಪಡಿಸಿದ್ದರು.
ಫೆ.14 ರಂದು ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ್ದ ಅವರು, ಯೋಜನೆ ಅನುಷ್ಠಾನ ಸಂಬಂಧ ಹಿರಿಯ ಐಎಎಸ್ ಅಧಿಕಾರಿಗಳು, ಸಾರ್ವಜನಿಕ ಗಣ್ಯರನ್ನು ಒಳಗೊಂಡ ಟ್ರಸ್ಟ್ ರಚಿಸಲಾಗಿದೆ. ಅಲ್ಲದೇ ಕಾರ್ಖಾನೆಯ ಜಾಗದಲ್ಲಿ ಇರುವ ಕಟ್ಟಡಗಳಲ್ಲಿ ಬೆಂಗಳೂರಿನ ಬೆಳವಣಿಗೆ ಬಗ್ಗೆ ವಿನೂತನ ಅನುಭವಗಳನ್ನು ಸಾರ್ವಜನಿಕರಿಗೆ ನೀಡಲು ವಿವಿಧ ಗ್ಯಾಲರಿಗಳನ್ನು ಅನುಷ್ಠಾನ ಮಾಡಲಾಗುವುದು ಎಂದು ವಿವರಿಸಿದ್ದರು.
Jobs 2365.99 ಕೋಟಿ ರೂ. ಬಂಡವಾಳ ಆಕರ್ಷಿಸಿದ ಕರ್ನಾಟಕ, 10904 ಉದ್ಯೋಗ ಸೃಷ್ಟಿ
ಇದಕ್ಕೂ ಮುನ್ನ ಮಾತನಾಡಿದ ಕೆ.ಟಿ. ಶ್ರೀಕಂಠೇಗೌಡ, ಸಾವಿರಾರು ಕೋಟಿ ರು. ಬೆಲೆ ಬಾಳುವ ಈ ಜಾಗವನ್ನು ಕಬಳಿಸುವ ಹುನ್ನಾರ ನಡೆಯುತ್ತಿದೆ. ಖಾಸಗಿ ವ್ಯಕ್ತಿಗಳು ಹಾಗೂ ಅಧಿಕಾರಿಗಳ ಹೆಸರಿನಲ್ಲಿ ಟ್ರಸ್ಟ್ ಮಾಡಲಾಗಿದೆ. ಮ್ಯೂಸಿಯಂ ಮಾಡುವ ಬದಲು ಉದ್ಯಾನವನ ಮಾಡಿ ಎಂದು ಸಲಹೆ ನೀಡಿದರು.
ಕಾರ್ಖಾನೆಯ ವಿವಾದ ಇನ್ನೂ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಶೇರುದಾರರು ಇದ್ದಾರೆ, ಹೀಗಿರುವಾಗ ಸರ್ಕಾರದ ಈ ನಿರ್ಧಾರ ಸರಿಯಲ್ಲ. ಈ ಬಗ್ಗೆ ಹೆಚ್ಚಿನ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಇನ್ನೂ ಕೆಲವರು ಸದಸ್ಯರು ಸಹಮತ ವ್ಯಕ್ತಪಡಿಸಿದಾಗ ಸಭಾಪತಿ ಬಸವರಾಜ ಹೊರಟ್ಟಿಪ್ರಸ್ತಾವನೆ ಸಲ್ಲಿಸಿದರೆ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದರು.