
ನವದೆಹಲಿ (ಜು.27) ಹಲವು ದಿಗ್ಗಜ ಕಂಪನಿಗಳು ಈಗಾಗಲೇ ಉದ್ಯೋಗ ಕಡಿತ ಮಾಡುತ್ತಿದೆ. ಗೂಗಲ್, ಮೈಕ್ರೋಸಾಫ್ಟ್ ಸೇರಿದಂತೆ ಹಲವು ಟೆಕ್ ಕಂಪನಿಗಳು ಮುಂಚೂಣಿಯಲ್ಲಿದೆ. ಇದೀಗ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಕಂಪನಿ ಉದ್ಯೋಗ ಕಡಿತ ಘೋಷಿಸಿದೆ. ಬರೋಬ್ಬರಿ 12,000 ಉದ್ಯೋಗ ಕಡಿತ ಮಾಡಲು ಟಿಸಿಎಸ್ ಮುಂದಾಗಿದೆ. ಈ ಕುರಿತು ಟಿಸಿಎಸ್ ಸಿಇಒ ಕೃತಿವಾಸನ್ ಹೇಳಿದ್ದಾರೆ. ಹಲವು ಟೆಕ್ ಕಂಪನಿಗಳು ಉದ್ಯೋಗ ಕಡಿತ ಘೋಷಣೆ ಮಾಡಿದಾಗ ಭಾರತದಲ್ಲಿ ಭಾರಿ ಮಟ್ಟದ ಉದ್ಯೋಗ ಕಡಿತ ಆರಂಭಗೊಂಡಿರಲಿಲ್ಲ. ಇದೀಗ ಭಾರತದಲ್ಲೂ ಮಾಸ್ ಲೇ ಆಫ್ ಆರಂಭಗೊಂಡಿದೆ.
ಯಾರ ಉದ್ಯೋಗಕ್ಕೆ ಬೀಳಲಿದೆ ಕತ್ತರಿ
ಟಿಸಿಎಸ್ ಈಗಾಗಲೇ ಉದ್ಯೋಗ ಕತ್ತರಿಗೆ ಮುಂದಾಗಿದೆ. ಕಂಪನಿಯ ಶೇಕಡಾ 2ರಷ್ಟು ಅಂದರೆ ಸರಿಸುಮಾರು 12,000 ಉದ್ಯೋಗ ಕಡಿತಕ್ಕೆ ಟಾಟಾ ಕನ್ಸಲ್ಟೆನ್ಸಿ ಮುಂದಾಗಿದೆ. ಮಿಡ್ಲ್ ಹಾಗೂ ಸೀನಿಯರ್ ಲೆವೆಲ್ ಉದ್ಯೋಗಿ ವಲಯದಲ್ಲಿ ಕಡಿತವಾಗಲಿದೆ ಎಂದು ಕೃತಿವಾಸನ್ ಮನಿಕಂಟ್ರೋಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
2026ರಿಂದ ಉದ್ಯೋಗ ಕಡಿತ ಆರಂಭ
ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಸಿಇಒ ಪ್ರಕಾರ 2026ರ ಆರಂಭದಿಂದ ಉದ್ಯೋಗ ಕಡಿತ ಆರಂಭವಾಗಲಿದೆ ಎಂದಿದ್ದಾರೆ. ಹಂತ ಹಂತವಾಗಿ ಉದ್ಯೋಗ ಕಡಿತ ಮಾಡಲು ಟಿಸಿಎಸ್ ಮುಂದಾಗಿದೆ. ಈ ಉದ್ಯೋಗ ಕಡಿತ ಭಾರತ ಮಾತ್ರವಲ್ಲ, ಟಿಸಿಎಸ್ ಒಟ್ಟು ಕಚೇರಿಗಳಿಂದ ಆಗಲಿರುವ ಉದ್ಯೋಗ ಕಡಿತವಾಗಿದೆ.
ಎಐ ಟೆಕ್‌ನಿಂದ ಟಿಸಿಎಸ್ ಕಂಪನಿಯಲ್ಲಿ ಉದ್ಯೋಗ ಕಡಿತ
ಟಿಸಿಎಸ್‌ನಲ್ಲಿ ಆರ್ಟಿಫೀಶಿಯಲ್ ಇಂಟಲಿಜೆನ್ಸಿ ಬಹುತೇಕ ಕ್ಷೇತ್ರದಲ್ಲಿ ಬಳಕೆ ಮಾಡುತ್ತಿದೆ. ಹಂತ ಹಂತವಾಗಿ ಎಐ ತಂತ್ರಜ್ಞಾನ ಟಿಸಿಎಸ್ ಕಂಪನಿ ಆವರಿಸಿಕೊಳ್ಳುತ್ತಿದೆ. 2026ರ ವೇಳೆಗೆ ಒಂದು ಹಂತದ ಎಐ ಟೆಕ್ ಬಳಕೆ ಪೂರ್ಣಗೊಳ್ಳಲಿದೆ. ಹೀಗಾಗಿ 2026ರ ಜನವರಿಯಿಂದಲೇ ಉದ್ಯೋಗ ಕಡಿತ ಆರಂಭಿಸುತ್ತಿದೆ. ಎಪ್ರಿಲ್ ನಿಂದ ಜೂನ್ ತಿಂಗಳಲ್ಲಿ ಟಿಸಿಎಸ್ ಕಂಪನಿ ಆರು ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಂಡಿದೆ. ಜೂನ್ 30, 2025ರ ವೇಳೆಗೆ ಟಿಸಿಎಸ್ ಉದ್ಯೋಗಿಗಳ ಒಟ್ಟು ಸಂಖ್ಯೆ 6,13,069.