ಟಿಸಿಎಸ್‌ನಲ್ಲಿ ರಾಜೀನಾಮೆ ನೀಡಲು ಹೆಚ್‌ಆರ್‌ ಒತ್ತಡ, ಉದ್ಯೋಗಿಯ ನಿರಾಕರಣೆ, ರತನ್ ಟಾಟಾ ನಿಧನ ಬಳಿಕ ಎಲ್ಲವೂ ಬದಲೆಂದ ಟೆಕ್ಕಿ!

Published : Sep 15, 2025, 04:06 PM IST
TCS

ಸಾರಾಂಶ

ಟಿಸಿಎಸ್‌ನಲ್ಲಿ ಯುವ ಉದ್ಯೋಗಿಯೊಬ್ಬರು HR ತಂಡದ ರಾಜೀನಾಮೆ ಒತ್ತಡವನ್ನು ನಿರಾಕರಿಸಿದ್ದಾರೆ. ಬೆಂಚ್ ನೌಕರರನ್ನು ಗುರಿಯಾಗಿಸಿಕೊಂಡು ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಘಟನೆ ಐಟಿ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ.

ಬೆಂಗಳೂರು: ದೇಶದ ಅಗ್ರಮಾನ್ಯ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ‌ನ ಯುವ ಉದ್ಯೋಗಿಯೊಬ್ಬರು ತಮ್ಮ ಮಾನವ ಸಂಪನ್ಮೂಲ (HR) ತಂಡ ರಾಜೀನಾಮೆ ಕೊಡಲು ಒತ್ತಾಯಿಸಿದ್ದನ್ನು ನಿರಾಕರಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಘಟನೆಯ ಕುರಿತು ಅವರು ಬರೆದ ದೀರ್ಘ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು ಮಾತ್ರವಲ್ಲ ಐಟಿ ವಲಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ.

ರಾಜೀನಾಮೆ ಕೊಡದೆ ಉದ್ಯೋಗಿಯ ಧೈರ್ಯ

ಆ ಯುವ ತಾಂತ್ರಿಕ ವೃತ್ತಿಪರರು ತಮ್ಮ ಅನುಭವವನ್ನು ಮೊದಲಿಗೆ ರೆಡ್ಡಿಟ್‌ನ ‘r/DevelopersIndia’ ವೇದಿಕೆಯಲ್ಲಿ I Refused To Resign From TCS ಎಂಬ ಶೀರ್ಷಿಕೆಯಡಿ ಹಂಚಿಕೊಂಡಿದ್ದರು. ನಂತರ ಅದನ್ನು ‘r/IndianWorkplace’ ಫೋರಮ್‌ನಲ್ಲೂ ಮರುಪೋಸ್ಟ್ ಮಾಡಿದರು.

ಮೂರು ದಿನಗಳ ಹಿಂದೆ ಸಭಾ ಕೊಠಡಿಗೆ ಕರೆಯಿಸಿ HR ನನ್ನ ರಾಜೀನಾಮೆ ಕೇಳಿದರು. ನಾನು ನಿರಾಕರಿಸಿದೆ. ಅತ್ತಿದ್ದೆ, ಹೆದರಿದ್ದೆ, ಆದರೆ ಇದು ನನ್ನ ಮೊದಲ ಕಂಪನಿ. ನನಗೆ ಕಳೆದುಕೊಳ್ಳಲು ಏನೂ ಇರಲಿಲ್ಲ. ಅವರು ಕೆಟ್ಟ ವಿಮರ್ಶೆ ನೀಡುವುದಾಗಿ ಬೆದರಿಸಿದರು. ಆಗ ನಾನು ನಿಮಗೆ ಬೇಕಾದಂತೆ ಮಾಡಿ, ಆದರೆ ನಾನು ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿ ಕೊಠಡಿಯಿಂದ ಹೊರಬಂದೆ ಎಂದು ಅವರು ಬರೆದಿದ್ದಾರೆ.

ಬೆಂಚ್ ನೌಕರರೇ ಗುರಿ

ಅವರು HR ತಂಡದ ತಂತ್ರವನ್ನು ಟೀಕಿಸಿ ಹೀಗೆ ವಿವರಿಸಿದ್ದಾರೆ. “ನಾನು ಹಿರಿಯ ಉದ್ಯೋಗಿಯಲ್ಲ. ಆದರೂ HR ನನ್ನನ್ನು ಗುರಿ ಮಾಡಿಕೊಂಡರು. ಈಗ ಬೆಂಚ್‌ನಲ್ಲಿರುವ ನೌಕರರ ಮೇಲೆಯೇ ಹೆಚ್ಚು ಒತ್ತಡ ಇದೆ. ಪ್ರಾಜೆಕ್ಟ್‌ಗಳ ಹಂಚಿಕೆ ಆಗದಂತೆ ನಮ್ಮ ಪ್ರೊಫೈಲ್‌ಗಳನ್ನು ಬ್ಲಾಕ್ ಮಾಡಲಾಗುತ್ತಿದೆ. ನಮ್ಮ ಸಂಪರ್ಕಗಳ ಮೂಲಕ ಯೋಜನೆಗಳನ್ನು ಹುಡುಕಿದರೂ, RMG ಆ ಪ್ರಾಜೆಕ್ಟ್‌ಗೆ ಕರೆ ಮಾಡಿ ಹಂಚಿಕೆಯನ್ನು ರದ್ದುಗೊಳಿಸುತ್ತಿದೆ.

ಪ್ರತಿದಿನ HR ಒತ್ತಡ

ಉದ್ಯೋಗಿ ತಮ್ಮ ಅನಿಶ್ಚಿತತೆಯ ಬಗ್ಗೆ ಹೇಳಿಕೊಂಡು ಹೀಗೆ ಬರೆದಿದ್ದಾರೆ. ಮುಂದೆ ಏನು ಮಾಡಬೇಕೆಂದು ನನಗೆ ತಿಳಿದಿಲ್ಲ. ನನ್ನ ಶಾಖೆಯಲ್ಲಿ ಹಲವಾರು ಸಹೋದ್ಯೋಗಿಗಳು ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. HR ಪ್ರತಿದಿನ ಅವರನ್ನು ಸಭೆಗೆ ಕರೆಯುತ್ತದೆ. ಸಂಬಳವನ್ನು ಸ್ಥಗಿತಗೊಳಿಸುವುದು, ಕಪ್ಪುಪಟ್ಟಿಗೆ ಸೇರಿಸುವುದು, ಕೆಟ್ಟ ವಿಮರ್ಶೆ ನೀಡುವುದು, ಯಾರೂ ನೇಮಿಸಿಕೊಳ್ಳುವುದಿಲ್ಲ ಎಂಬಂತಹ ಬೆದರಿಕೆಗಳನ್ನು ಹಾಕುತ್ತಿದೆ. ಆದರೂ ಸಹೋದ್ಯೋಗಿಗಳು ಹೋರಾಟ ಮುಂದುವರಿಸುತ್ತಿದ್ದಾರೆ. ಈಗಾಗಲೇ 10 ದಿನಗಳಾಗಿವೆ, ಅವರು ಇನ್ನೂ TCS‌ನಲ್ಲಿದ್ದಾರೆ, ಆದರೆ ತೀವ್ರ ಒತ್ತಡ ಅನುಭವಿಸುತ್ತಿದ್ದಾರೆ.

ಇದು ಮಾನಸಿಕ ಕಿರುಕುಳ

ಕಂಪನಿಯ ಕೆಲಸದ ವಾತಾವರಣದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು ಹೀಗೆ ಟೀಕಿಸಿದ್ದಾರೆ. ಇದು ಮಾನಸಿಕ ಕಿರುಕುಳ ಮತ್ತು ಚಿತ್ರಹಿಂಸೆ, ಇದು ವಿಷಕಾರಿ ಸಂಸ್ಕೃತಿ. ಕಡಿಮೆ ಸಂಬಳದಲ್ಲಿಯೂ ಕೆಲಸದ ಭದ್ರತೆ ಸಿಗುತ್ತದೆ ಎಂದು ನಂಬಿ ನಾನು TCS ಸೇರಿದ್ದೆ. ಆದರೆ ಈಗ ನನಗೆ ಪಶ್ಚಾತ್ತಾಪವಾಗುತ್ತಿದೆ. ರತನ್ ಟಾಟಾ ನಂತರ ಈ ಕಂಪನಿಯ ಕೆಲಸದ ವಾತಾವರಣ ಸಂಪೂರ್ಣ ಬದಲಾಗಿದೆ.

ಇಂತಹ ಹಲವು ಮಂದಿಗೆ ಅನುಭವ

ಇಂತಹ ಅನುಭವಗಳನ್ನು ಹಂಚಿಕೊಂಡಿರುವುದು ಇದೇ ಮೊದಲಲ್ಲ. ಇತ್ತೀಚೆಗಷ್ಟೇ, ಪುಣೆ ಮೂಲದ ಟೆಕ್ ವೃತ್ತಿಪರರೊಬ್ಬರು ಇನ್ಫೋಸಿಸ್‌ನಲ್ಲಿ ಒತ್ತಡದ ವಾತಾವರಣದ ಕಾರಣದಿಂದ, ಇನ್ನೊಂದು ಆಫರ್ ಇಲ್ಲದಿದ್ದರೂ ರಾಜೀನಾಮೆ ನೀಡಿದ ಅನುಭವವನ್ನು ಹಂಚಿಕೊಂಡಿದ್ದರು. ಈ ವಿಚಾರದ ಬಗ್ಗೆ TCS ಅಧಿಕೃತ ಪ್ರತಿಕ್ರಿಯೆ ಈವರೆಗೆ ನೀಡಿಲ್ಲ.

PREV
Read more Articles on
click me!

Recommended Stories

ಬೆಂಗಳೂರಿನ ಅಮರ್‌ ಸುಬ್ರಹ್ಮಣ್ಯ ಆಪಲ್‌ ಎಐ ಟೀಮ್‌ಗೆ ಉಪಾಧ್ಯಕ್ಷ!
ಸರಾಸರಿ ಮಾಸಿಕ ವೇತನ: ದೇಶದಲ್ಲಿಯೇ 2ನೇ ಸ್ಥಾನದಲ್ಲಿ ಕರ್ನಾಟಕ, ಸಿಗೋ ಸ್ಯಾಲರಿ ಎಷ್ಟು?