ಕೆಲಸದಿಂದ ವಜಾಗೊಳಿಸುತ್ತಿರುವ ಟಿಸಿಎಸ್‌ಗೆ ಬಿಗ್‌ ಶಾಕ್: ಉದ್ಯೋಗಿಗಳ ದೂರಿನನ್ವಯ ಕಾರ್ಮಿಕ ಇಲಾಖೆಯಿಂದ ಸಮನ್ಸ್

Published : Nov 17, 2025, 03:33 PM IST
TCS

ಸಾರಾಂಶ

ಐಟಿ ನೌಕರರ ಸಂಘಟನೆ NITES ನೀಡಿದ ದೂರಿನ ಅನ್ವಯ, ಪುಣೆಯ ಕಾರ್ಮಿಕ ಆಯುಕ್ತರ ಕಚೇರಿಯು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ಗೆ (TCS) ಸಮನ್ಸ್ ಜಾರಿ ಮಾಡಿದೆ. ಕಾನೂನುಬಾಹಿರ ಉದ್ಯೋಗಿ ವಜಾ ಮತ್ತು ಅನ್ಯಾಯದ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಪುಣೆ: ಐಟಿ ಕ್ಷೇತ್ರದ ನೌಕರರ ಹಿತಾಸಕ್ತಿಯನ್ನು ಪ್ರತಿನಿಧಿಸುವ ನಸೆಂಟ್ ಇನ್ಫರ್ಮೇಶನ್ ಟೆಕ್ನಾಲಜಿ ಎಂಪ್ಲಾಯೀಸ್ ಸೆನೆಟ್ (NITES) ಸಲ್ಲಿಸಿದ ದೂರುಗಳ ಹಿನ್ನೆಲೆ­ಯಲ್ಲಿ, ಪುಣೆಯ ಕಾರ್ಮಿಕ ಆಯುಕ್ತರ ಕಚೇರಿಯು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ (TCS) ಗೆ ಸಮನ್ಸ್‌ಗಳನ್ನು ಜಾರಿ ಮಾಡಿದೆ. NITES ಉಲ್ಲೇಖಿಸಿರುವ ದೂರಿನಲ್ಲಿ ಟಿಸಿಎಸ್ ಕಂಪನಿ ಕಾನೂನುಬಾಹಿರವಾಗಿ ನೌಕರರನ್ನು ವಜಾಗೊಳಿಸುತ್ತಿದೆ ಹಾಗೂ ಅನ್ಯಾಯ ಮಾಡುತ್ತಿದೆ ಎಂಬ ಗಂಭೀರ ಆರೋಪಗಳನ್ನು ಮಾಡಿದೆ

ಈ ಕುರಿತು NITES ತನ್ನ ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್ ನಲ್ಲಿ(ಹಿಂದಿನ ಟ್ವಿಟರ್‌) ಅಧಿಕೃತ ಪ್ರಕಟಣೆ ಹೊರಡಿಸಿದೆ. ಜುಲೈ ತಿಂಗಳಲ್ಲಿ ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆ ಹಾಗೂ ಕೃತಕ ಬುದ್ಧಿಮತ್ತೆಯ ಅಲೆಗಳಿಂದ ಉಂಟಾದ ವ್ಯವಹಾರಿಕ ಬದಲಾವಣೆಗಳ ಹಿನ್ನೆಲೆಯಲ್ಲಿ, ಸಂಸ್ಥೆಯು ತನ್ನ ಜಾಗತಿಕ ಕಾರ್ಯಪಡೆಯ 2% ರಷ್ಟು ಅಂದರೆ ಸುಮಾರು 12,000 ಉದ್ಯೋಗಿಗಳನ್ನು ಒಂದು ವರ್ಷದಲ್ಲಿ ಕಡಿತಗೊಳಿಸುವ ಯೋಜನೆಯನ್ನು ಪ್ರಕಟಿಸಿತ್ತು.

ಎಲ್ಲಾ ದಾಖಲೆಗಳ ಪರಿಶೀಲನೆ ಬಳಿಕ ಸಮನ್ಸ್: NITES ಪ್ರತಿಕ್ರಿಯೆ

ಸಮನ್ಸ್ ನೀಡಿರುವ ಬಗ್ಗೆ ಪ್ರಕಟಣೆ ಹೊರಡಿಸಿರುವ NITES, ಕಳೆದ ಕೆಲವು ತಿಂಗಳುಗಳಿಂದ ಭಾರತದೆಲ್ಲೆಡೆ ವಿವಿಧ ಶಾಖೆಗಳಲ್ಲಿ ಕೆಲಸ ಮಾಡುತ್ತಿರುವ ಟಿಸಿಎಸ್ ನೌಕರರಿಂದ ದಿಡೀರ್ ವಜಾಗೊಳಿಸುವಿಕೆ, ಬಲವಂತದ ರಾಜೀನಾಮೆ, ಶಾಸನಬದ್ಧ ಬಾಕಿ ಪಾವತಿಗಳ ನಿರಾಕರಣೆ ಮತ್ತು ಅನ್ಯಾಯಕರ ಕೆಲಸದ ಒತ್ತಡದ ಸಂಬಂಧ ಅನೇಕ ದೂರುಗಳು ನಮ್ಮ ಬಳಿ ಬಂದಿವೆ. ಎಲ್ಲ ಕುಂದು ಕೊರತೆಗಳನ್ನು ಹಾಗೂ ಸಂಬಂಧಿಸಿದ ದಾಖಲೆಗಳನ್ನೂ ಪರಿಶೀಲಿಸಿದ ಬಳಿಕ, NITES ಪೀಡಿತ ಉದ್ಯೋಗಿಗಳಿಗೆ ಕಾರ್ಮಿಕ ಆಯುಕ್ತರ ಮುಂದೆ ಔಪಚಾರಿಕ ದೂರುಗಳನ್ನು ಸಲ್ಲಿಸಲು ನೆರವಾಯಿತು.

ಈ ವಿಚಾರದಲ್ಲಿ ಕಾರ್ಮಿಕ ಆಯುಕ್ತರ ವಿಚಾರಣೆ ಆರಂಭವಾಗಿದೆ. ಕಾನೂನುಬಾಹಿರವಾಗಿ ನೌಕರರನ್ನು ವಜಾಗೊಳಿಸಲು ಯಾವ ಕಂಪನಿಯೂ ಅಧಿಕಾರ ಪಡೆದಿಲ್ಲ ಎಂಬ ಸಂದೇಶವನ್ನು ಮತ್ತೊಮ್ಮೆ ಬಲವಾಗಿ ಒತ್ತಿ ಹೇಳುತ್ತದೆ. ಕಾನೂನಿನ ಪ್ರಕಾರ ಸರಿಯಾದ ಪ್ರಕ್ರಿಯೆ ಅನುಸರಿಸುವುದು ಪ್ರತಿಯೊಬ್ಬ ಉದ್ಯೋಗದಾತನ ಕರ್ತವ್ಯ ಎಂದು NITES ಹೇಳಿದೆ. ಇನ್ನು ಸಮನ್ಸ್‌ಗೆ ಸಂಬಂಧಿಸಿದ ವಿಚಾರಣೆ ನವೆಂಬರ್ 18, 2025ಕ್ಕೆ ನಿಗದಿಯಾಗಿದೆ.

ವಜಾಗೊಂಡಿರುವ ನೌಕರರಿಗೆ NITES ಮನವಿ

ಸ್ವಯಂಪ್ರೇರಿತವಾಗಿರಲಿ ಅಥವಾ ಅನೈಚ್ಛಿಕವಾಗಿರಲಿ. ತಪ್ಪು ವಜಾ, ಬಲವಂತದ ರಾಜೀನಾಮೆ, ಬಾಕಿ ಪಾವತಿಗಳ ವಿಳಂಬ ಅಥವಾ ನಿರಾಕರಣೆ, ಕೆಲಸದ ಜಾಗದಲ್ಲಿನ ಒತ್ತಡ ಅಥವಾ ಅನ್ಯಾಯದ ಚಿಕಿತ್ಸೆ ಎದುರಿಸಿದ ಪ್ರತಿಯೊಬ್ಬ ಉದ್ಯೋಗಿಯೂ ತಮ್ಮ ಹಕ್ಕುಗಳನ್ನು ಕಾಯ್ದುಕೊಳ್ಳುವಂತೆ NITES ಮನವಿ ಮಾಡಿದೆ.

“ನಿಮಗೆ ಲಭ್ಯವಿರುವ ಕಾನೂನು ರಕ್ಷಣೆಗಳನ್ನು ಅರ್ಥಮಾಡಿಕೊಳ್ಳಲು, ದೂರುಗಳನ್ನು ಸಿದ್ಧಪಡಿಸಲು ಮತ್ತು ಸಂಬಂಧಿತ ಪ್ರಾಧಿಕಾರಗಳಿಗೆ ಸಲ್ಲಿಸಲು ಅಗತ್ಯವಾದ ಸಹಾಯವನ್ನು NITES ನೀಡುತ್ತದೆ. ಇದೇ ರೀತಿಯ ಅನ್ಯಾಯವನ್ನು ಅನುಭವಿಸಿದವರು ಮುಂದೆ ಬಂದು ತಮ್ಮ ಹಕ್ಕುಗಳನ್ನು ಪ್ರತಿಪಾದಿಸಬೇಕು,” ಎಂದು ಸಂಸ್ಥೆ ಹೇಳಿದೆ.

'ನೌಕರರನ್ನು ಬಹಳ ಎಚ್ಚರಿಕೆಯಿಂದ ಬಿಡುಗಡೆ ಮಾಡುತ್ತಿದ್ದೇವೆ' — ಟಿಸಿಎಸ್

ಇದೇ ವೇಳೆ, ಕಂಪನಿಯ ಇತ್ತೀಚಿನ ಗಳಿಕೆ ಸಭೆಯಲ್ಲಿ, ಟಿಸಿಎಸ್ ಮಾನವ ಸಂಪನ್ಮೂಲ ಮುಖ್ಯಸ್ಥ ಸುದೀಪ್ ಕುನ್ನುಮಾಲ್ ಸಂಸ್ಥೆಯ ಸಿಬ್ಬಂದಿಗಳ ಲೇ ಆಫ್ ಬಗ್ಗೆ ಸ್ಪಷ್ಟನೆ ನೀಡಿ, ನಾವು ಯಾವುದೇ ಗುರಿಯನ್ನು ನಿಗದಿಪಡಿಸಿಲ್ಲ. ಸ್ವಯಂಪ್ರೇರಿತ ಹಾಗೂ ಅನೈಚ್ಛಿಕ ವಜಾಗಳನ್ನು ಒಟ್ಟುಗೂಡಿಸಿದಾಗ ಸುಮಾರು 20,000 ನಿವ್ವಳ ಸಿಬ್ಬಂದಿ ಇಳಿಕೆಯಾಗಿದೆ. ಆದರೆ, ನಾವು ಎಲ್ಲರನ್ನೂ ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡುತ್ತಿದ್ದೇವೆ. ಕಲಿಕೆ ಮತ್ತು ಅಭಿವೃದ್ಧಿಗೆ ಮಾಡಿರುವ ನಮ್ಮ ಹೂಡಿಕೆಗಳನ್ನು ಗಮನಿಸಿದರೆ, ಪ್ರತಿಯೊಬ್ಬರಿಗೂ ನ್ಯಾಯಸಮ್ಮತ ಅವಕಾಶ ನೀಡಲಾಗುತ್ತದೆ. ಮಧ್ಯಮ ಮತ್ತು ಹಿರಿಯ ಹಂತದ ಕೆಲವರಿಗೆ ಅವರ ಕೌಶಲ್ಯಗಳಿಗೆ ತಕ್ಕ ಹುದ್ದೆಗಳು ಲಭ್ಯವಿರದ ಪರಿಸ್ಥಿತಿಯಲ್ಲಿ, ಅವರನ್ನು ಬಹಳ ಕಾಳಜಿಯೊಂದಿಗೆ, ಮಾನವೀಯವಾಗಿ ಬಿಡುಗಡೆ ಮಾಡಲಾಗುತ್ತದೆ ಎಂದು ಕುನ್ನುಮಾಲ್ ಹೇಳಿದರು.

ಟಿಸಿಎಸ್: ಸಿಬ್ಬಂದಿ ಸಂಖ್ಯೆ ಮತ್ತು ತ್ರೈಮಾಸಿಕ ಮಾಹಿತಿ

ಕಳೆದ ತ್ರೈಮಾಸಿಕದಲ್ಲಿ ಟಿಸಿಎಸ್‌ನ ನಿವ್ವಳ ಸಿಬ್ಬಂದಿ ಸಂಖ್ಯೆ ಸುಮಾರು 20,000 ರಷ್ಟು ಇಳಿಕೆಯಾಗಿದೆ. 2025 ನೇ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕಂಪನಿಯ ಉದ್ಯೋಗಿಗಳ ಕಡಿತ ದರ 13.3%, ಇದು ಕಳೆದ ವರ್ಷದ 12.3%ಕ್ಕಿಂತ ಹೆಚ್ಚಾದರೂ, ಮೊದಲ ತ್ರೈಮಾಸಿಕದ 13.8% ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಸಂಸ್ಥೆಯ ಒಟ್ಟು ಸಿಬ್ಬಂದಿ ಸಂಖ್ಯೆ 5,93,314 ಇತ್ತು.

ಟಿಸಿಎಸ್ ವಿರುದ್ಧದ NITES ದೂರುಗಳ ವಿಚಾರಣೆ, ಐಟಿ ಕ್ಷೇತ್ರದಲ್ಲಿ ಉದ್ಯೋಗ ಭದ್ರತೆ ಮತ್ತು ಕಂಪನಿಗಳಲ್ಲಿನ ಮಾನವ ಸಂಪನ್ಮೂಲ ಪದ್ಧತಿಗಳ ಬಗ್ಗೆ ಮರುಚರ್ಚೆಗೆ ಕಾರಣವಾಗಿದೆ. ಜಾಗತಿಕ ತಂತ್ರಜ್ಞಾನ ಬದಲಾವಣೆಗಳೊಂದಿಗೆ, ನೌಕರರ ಹಕ್ಕುಗಳು ಮತ್ತು ಕಂಪನಿ ನೀತಿಗಳ ನಡುವಿನ ಸಮತೋಲನವನ್ನು ಕಾಯ್ದುಕೊಳ್ಳುವ ಅಗತ್ಯ ಮತ್ತೊಮ್ಮೆ ಪ್ರಕಟವಾಗಿದೆ.

PREV
Read more Articles on
click me!

Recommended Stories

ಬೆಂಗಳೂರಿನ ಅಮರ್‌ ಸುಬ್ರಹ್ಮಣ್ಯ ಆಪಲ್‌ ಎಐ ಟೀಮ್‌ಗೆ ಉಪಾಧ್ಯಕ್ಷ!
ಸರಾಸರಿ ಮಾಸಿಕ ವೇತನ: ದೇಶದಲ್ಲಿಯೇ 2ನೇ ಸ್ಥಾನದಲ್ಲಿ ಕರ್ನಾಟಕ, ಸಿಗೋ ಸ್ಯಾಲರಿ ಎಷ್ಟು?