ಉದ್ಯೋಗಾಕಾಂಕ್ಷಿಗಳಿಗೆ ಉಪಯೋಗ ಆಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 66 ಸಾವಿರ ರೂಪಾಯಿ ಸಂಬಳದ ಜೊತೆ ತರಬೇತಿ ನೀಡುವ ಯೋಜನೆಗೆ ಚಾಲನೆ ನೀಡಿದೆ. ಒಂದು ಕೋಟಿ ಮಂದಿ ಪ್ರಯೋಜನ ಪಡೆಯಬಹುದಾದ ಇದರ ಡಿಟೇಲ್ಸ್ ಇಲ್ಲಿದೆ...
ಯಾವುದೇ ಪದವಿ, ಐಐಟಿ, ಡಿಪ್ಲೋಮಾ ಸೇರಿದಂತೆ ಯಾವುದೇ ಶಿಕ್ಷಣ ಅರ್ಹತೆ ಇದ್ದರೂ, ಅವರ ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗವನ್ನು ನೀಡುವ ಸಲುವಾಗಿ ಕೇಂದ್ರ ಸರ್ಕಾರ ಇದಾಗಲೇ ಪ್ರಧಾನ ಮಂತ್ರಿ ಇಂಟರ್ನ್‌ಷಿಪ್ ಯೋಜನೆಗೆ ಚಾಲನೆ ನೀಡಿದೆ. ಇದರ ಅಡಿಯಲ್ಲಿ ಒಂದು ಕೋಟಿ ನಿರುದ್ಯೋಗಿ ಯುವಕರಿಗೆ ಸಂಬಳ ನೀಡುವ ಜೊತೆಗೆ ತರಬೇತಿ ನೀಡಿ, ಅವರಿಗೆ ಭವಿಷ್ಯದಲ್ಲಿ ಬೇರೆ ಬೇರೆ ಕಂಪೆನಿಗಳಲ್ಲಿ ಕೆಲಸ ಮಾಡಲು ಸಹಕಾರಿಯಾಗುವಂತೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ 9 ಸಾವಿರ ಮಂದಿ ಇದರ ಲಾಭವನ್ನು ಪಡೆಯಬಹುದಾಗಿದೆ. ಯುವ ಸಮುದಾಯದ ನಿರುದ್ಯೋಗವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಸುಮಾರು 800 ಕೋಟಿ ರೂಪಾಯಿಗಳನ್ನು ಕಳೆದ ಬಜೆಟ್ನಲ್ಲಿ ಮೀಸಲು ಇರಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿ ಯುವಕರಿಗೆ ತರಬೇತಿ ನೀಡುವ ಯೋಜನೆ ಇದಾಗಿದೆ.
ಇದೀಗ ನಿನ್ನೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದರ ಆ್ಯಪ್ ಬಿಡುಗಡೆ ಮಾಡಿದ್ದಾರೆ. ಪಿಎಂಐಎಸ್ ಆ್ಯಪ್ (PMIC- Prime Minister Internship Scheme App) ಇದಾಗಿದೆ. ಇದನ್ನು ಪ್ಲೇಸ್ಟೋರ್ನಿಂದ ಡೌನ್ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಮಾರ್ಚ್ 31 ಕೊನೆಯ ದಿನವಾಗಿರುತ್ತದೆ. ಇದರಲ್ಲಿ ಮುಂದಿನ ಐದು ವರ್ಷಗಳವರೆಗೆ ಒಂದು ಕೋಟಿ ಯುವಕರಿಗೆ ಮಾಸಿಕ ತಲಾ ಐದು ಸಾವಿರ ರೂಪಾಯಿಗಳಂತೆ, ವರ್ಷಕ್ಕೆ 60 ಸಾವಿರ ರೂಪಾಯಿ ಶುಲ್ಕ ನೀಡಲಾಗುವುದು. ವರ್ಷಾಂತ್ಯದಲ್ಲಿ 6 ಸಾವಿರ ರೂಪಾಯಿ ಹೆಚ್ಚುವರಿ ನೀಡಲಾಗುವುದು. ಇದರಿಂದ ತರಬೇತಿಯ ಜೊತೆಗೆ ವರ್ಷಕ್ಕೆ ಯುವಕರು 66 ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳಬಹುದಾಗಿದೆ. ಇದರ ಜೊತೆಗೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ ಮೂಲಕ ವಿಮಾ ರಕ್ಷಣೆ ದೊರೆಯಲಿದೆ.
1.50 ಲಕ್ಷ ಐಟಿ ಉದ್ಯೋಗಿಗಳ ಕೆಲಸಕ್ಕೆ ಕತ್ತರಿ, ಬೆಂಗಳೂರಲ್ಲೇ 50 ಸಾವಿರ! ಯಾವ ಕಂಪೆನಿ ಎಷ್ಟು? ಡಿಟೇಲ್ಸ್ ಇಲ್ಲಿದೆ
ರಿಯನೆಲ್ಸ್, ಇನ್ಫೋಸಿಸ್ ಸೇರಿದಂತೆ ಭಾರತದ ಅತಿ ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ತರಬೇತಿ ನೀಡಲಾಗುವುದು. ಇದಾಗಲೇ 24 ವಿವಿಧ ಕ್ಷೇತ್ರಗಳಲ್ಲಿ ತರಬೇತಿ ನೀಡಲು 500 ದೊಡ್ಡ ದೊಡ್ಡ ಕಂಪೆನಿಗಳು ಮುಂದೆ ಬಂದಿವೆ. ಖಾಸಗಿ ಕಂಪೆನಿ ಸಹಭಾಗಿತ್ವದಲ್ಲಿ ಕೇಂದ್ರ ಸರ್ಕಾರ ಈ ಯೋಜನೆ ರೂಪಿಸಿದೆ. ಸಂಬಳದಲ್ಲಿ 4.5 ಸಾವಿರ ರೂಪಾಯಿಗಳನ್ನು ಕೇಂದ್ರ ಸರ್ಕಾರ ನೀಡಲಿದ್ದು 500 ರೂಪಾಯಿಗಳನ್ನು ಆಯಾ ಕಂಪೆನಿಗಳು ನೀಡಲಿವೆ. ಇಲ್ಲಿ ಯುವಕರು ಒಂದು ವರ್ಷ ತರಬೇತಿ ಪಡೆಯಲಿದ್ದಾರೆ. ಬಳಿಕ ಅವರ ಕೆಲಸದ ಕ್ರಮ, ಚಾಕಚಕ್ಯತೆ ಇತ್ಯಾದಿಗಳನ್ನು ಪರಿಗಣಿಸಿ ವಿವಿಧ ಕಂಪೆನಿಗಳಲ್ಲಿ ಅವರು ಉದ್ಯೋಗ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
ಅರ್ಹತೆ ಪಡೆಯಲು, ಅರ್ಜಿದಾರರು 21 ರಿಂದ 24 ವರ್ಷ ವಯಸ್ಸಿನವರಾಗಿರಬೇಕು, 10 ಮತ್ತು 12 ನೇ ತರಗತಿಗಳನ್ನು ಪೂರ್ಣಗೊಳಿಸಿರಬೇಕು ಮತ್ತು ಪದವಿಪೂರ್ವ ಪದವಿ, ಐಟಿಐ ಡಿಪ್ಲೊಮಾ ಅಥವಾ ಇತರ ತಾಂತ್ರಿಕ ಅರ್ಹತೆ ಸೇರಿದಂತೆ ಯಾವುದೇ ಶೈಕ್ಷಣಿಕ ಅರ್ಹತೆ ಇದ್ದರೂ ಸರಿ. ತರಬೇತಿ ಸಮಯದಲ್ಲಿ ಉತ್ತಮ ಸಾಧನೆ ತೋರಿದರೆ ಮುಂದೆ ಅವರಿಗೆ ವಿವಿಧ ಕಂಪೆನಿಗಳಲ್ಲಿ ಅವಕಾಶ ಸಿಗಲಿದೆ. 10 ಮತ್ತು 12ನೇ ತರಗತಿ ಉತ್ತೀರ್ಣರಾದವರಿಗೂ ಉದ್ಯೋಗ ಕಲ್ಪಿಸುವ ಈ ಯೋಜನೆಯ ಲಾಭವನ್ನು ವಾರ್ಷಿಕ ಎಂಟು ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಇರುವ ಯುವಸಮೂಹ ಪಡೆದುಕೊಳ್ಳಬಹುದಾಗಿದೆ. ಐಐಟಿ ಅಥವಾ ಐಐಎಂಗಳಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿದವರನ್ನು ಹೊರಗಿಡಲಾಗಿದೆ, ಆದರೆ ಕೈಗಾರಿಕಾ ತರಬೇತಿ ಸಂಸ್ಥೆಗಳು ITI ಮತ್ತು ಕೌಶಲ ಕೇಂದ್ರಗಳ ಯುವಕರು ಭಾಗವಹಿಸಬಹುದು. https://www.pminternship.mca.gov.in ಇಲ್ಲಿ ಇಲ್ಲವೇ ಮೊಬೈಲ್ ಆ್ಯಪ್ ಮೂಲಕ ಅರ್ಜಿ ಸಲ್ಲಿಸಬಹುದು. ಆ್ಯಪ್ ಡೌನ್ಲೋಡ್ ಮಾಡಿಕೊಂಡರೆ ಅದರಲ್ಲಿ ನಿಮ್ಮ ಶೈಕ್ಷಣಿಕ ಅರ್ಹತೆ ಇತ್ಯಾದಿಗಳ ಬಗ್ಗೆ ನೋಡಿ, ನಿಮ್ಮ ಅರ್ಹತೆಗೆ ತಕ್ಕಂತೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.
ಫಾರಿನ್ ಕೆಲಸದ ಕನಸಿದ್ಯಾ? ಹಾಗಿದ್ರೆ ವಿದೇಶದ ನೆಲದಲ್ಲಿ ಮೋಸದ ಸುಳಿಗೆ ಸಿಕ್ಕ ಸಹಸ್ರಾರು ಈ ಯುವಕರ ಕಥೆ ಕೇಳಿ...