
ಹೆಲ್ಸಿಂಕಿ/ಬೆಂಗಳೂರು (ಮಾ.27): ಒಂದು ಕಾಲದಲ್ಲಿ ವಿಶ್ವದ ಅತಿದೊಡ್ಡ ಮೊಬೈಲ್ ಫೋನ್ ತಯಾರಿಕಾ ಸಂಸ್ಥೆಯಾಗಿದ್ದ ಫಿನ್ಲೆಂಡ್ ಮೂಲದ ನೋಕಿಯಾ (Nokia), ತನ್ನ ಉದ್ಯೋಗಿಗಳಿಗೆ ಬಿಗ್ ಶಾಕ್ ನೀಡಲು ಸಜ್ಜಾಗಿದೆ. ಕಂಪನಿಯು ತನ್ನ ಒಟ್ಟು ಕಾರ್ಯಪಡೆಯನ್ನು ಶೇ. 20 ರಷ್ಟು ಕಡಿತಗೊಳಿಸಲು ನಿರ್ಧರಿಸಿದ್ದು, ಸುಮಾರು 14,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಸಿದ್ಧತೆ ನಡೆಸುತ್ತಿದೆ.
ಮನಿ ಕಂಟ್ರೋಲ್ ವರದಿಯ ಪ್ರಕಾರ, ನೋಕಿಯಾ ಪ್ರಸ್ತುತ ಜಾಗತಿಕವಾಗಿ 74,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಈ ಪೈಕಿ ಭಾರತವೊಂದರಲ್ಲೇ 17,000 ಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ. ಕಂಪನಿಯ ಪುನರ್ರಚನಾ ಯೋಜನೆಯ ಭಾಗವಾಗಿ ಭಾರತದ ವಿವಿಧ ವಿಭಾಗಗಳಲ್ಲಿ ಉದ್ಯೋಗ ಕಡಿತ ಅನಿವಾರ್ಯವಾಗಲಿದೆ ಎಂದು ಹೇಳಲಾಗಿದೆ.
ನೋಕಿಯಾದ ಭಾರತದ ವ್ಯವಹಾರದಲ್ಲಿ ಗಣನೀಯ ಕುಸಿತ ಕಂಡುಬಂದಿರುವುದು ಈ ಲೇ-ಆಫ್‌ಗೆ ಪ್ರಮುಖ ಕಾರಣ ಎನ್ನಲಾಗಿದೆ. 2025ರ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಮಾರಾಟವು ಶೇ. 15 ರಷ್ಟು ಕುಸಿದು 393 ಮಿಲಿಯನ್ ಯುರೋಗಳಿಗೆ (ಅಂದಾಜು 4,290 ಕೋಟಿ ರೂ.) ತಲುಪಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ 463 ಮಿಲಿಯನ್ ಯುರೋಗಳಷ್ಟು (ಅಂದಾಜು 5,000 ಕೋಟಿ ರೂ.) ಮಾರಾಟ ಕಂಡಿತ್ತು.
ಸಾಂಸ್ಥಿಕ ಬದಲಾವಣೆಗಳ ನಡುವೆ ಭಾರತದ ಮುಖ್ಯಸ್ಥರಾಗಿದ್ದ ತರುಣ್ ಛಾಬ್ರಾ ತಮ್ಮ ಸ್ಥಾನದಿಂದ ನಿರ್ಗಮಿಸಿದ್ದಾರೆ. ಏಪ್ರಿಲ್ 1, 2026 ರಿಂದ ಜಾರಿಗೆ ಬರುವಂತೆ ಸಮರ್ ಮಿತ್ತಲ್ ಅವರನ್ನು ಇಂಡಿಯಾ ಕಂಟ್ರಿ ಬ್ಯುಸಿನೆಸ್ ಲೀಡರ್ ಆಗಿ ಮತ್ತು ವಿಭಾ ಮೆಹ್ರಾ ಅವರನ್ನು ಇಂಡಿಯಾ ಕಂಟ್ರಿ ಮ್ಯಾನೇಜರ್ ಆಗಿ ನೇಮಿಸಲಾಗಿದೆ.
2023 ರಲ್ಲಿ ನೋಕಿಯಾದ ಕ್ಲೌಡ್ ಮತ್ತು ನೆಟ್‌ವರ್ಕ್ ಸೇವೆಗಳನ್ನು ಮೊಬೈಲ್ ನೆಟ್‌ವರ್ಕ್‌ಗಳೊಂದಿಗೆ ವಿಲೀನಗೊಳಿಸಲಾಗಿತ್ತು. ಇದು ಹಲವು ವಿಭಾಗಗಳಲ್ಲಿ ಒಂದೇ ರೀತಿಯ ಕೆಲಸ ಮಾಡುವ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಇದನ್ನು ಸರಿಪಡಿಸಲು ಲೇ-ಆಫ್ ಮಾಡಲಾಗುತ್ತಿದೆ. ಈಗಾಗಲೇ ಅಮೆಜಾನ್, ಮೈಕ್ರೋಸಾಫ್ಟ್ ಮತ್ತು ಗೂಗಲ್ ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡಿವೆ. ಮೆಟಾ ಕೂಡ 15,000 ಉದ್ಯೋಗಿಗಳನ್ನು ತೆಗೆದುಹಾಕುವ ವದಂತಿ ಇದೆ. ನೋಕಿಯಾದ ಪ್ರತಿಸ್ಪರ್ಧಿ ಎರಿಕ್ಸನ್ ಕೂಡ ಕಳೆದ ವರ್ಷ 5,000 ಉದ್ಯೋಗಿಗಳನ್ನು ವಜಾ ಮಾಡಿದ್ದು, ಮತ್ತಷ್ಟು ಕಡಿತಕ್ಕೆ ಯೋಜಿಸಿದೆ.
2018 ರಲ್ಲಿ ನೋಕಿಯಾ ಜಾಗತಿಕವಾಗಿ 1,03,000 ಉದ್ಯೋಗಿಗಳನ್ನು ಹೊಂದಿತ್ತು. ಈಗ ಈ ಸಂಖ್ಯೆ 74,100 ಕ್ಕೆ ಕುಸಿದಿದೆ. ಇದಲ್ಲದೆ, ಯುರೋಪ್‌ನ ಗ್ರೀಸ್, ಇಟಲಿ, ಜರ್ಮನಿ ಮತ್ತು ಫ್ರಾನ್ಸ್‌ನಲ್ಲಿ ಸುಮಾರು 1,400 ಉದ್ಯೋಗಗಳನ್ನು ಕಡಿತಗೊಳಿಸಲು ಕಂಪನಿ ಯೋಜಿಸಿದೆ.